ಗಂಡಸಾದರೆ ಶ್ರೀರಾಮುಲು ಗೆದ್ದು ತೋರಿಸಲಿ

7
ನಾಯಕನಹಟ್ಟಿ: ಬೆಂಬಲಿಗರೊಂದಿಗಿನ ಸಭೆಯಲ್ಲಿ ಶಾಸಕ ತಿಪ್ಪೇಸ್ವಾಮಿ ಸವಾಲು

ಗಂಡಸಾದರೆ ಶ್ರೀರಾಮುಲು ಗೆದ್ದು ತೋರಿಸಲಿ

Published:
Updated:

ನಾಯಕನಹಟ್ಟಿ: ‘ಮ್ಯಾಸ ನಾಯಕ ಸಂಸ್ಕೃತಿ, ಮ್ಯಾಸನಾಯಕರ ಕಟ್ಟೆಮನೆಗಳು ಬಗ್ಗೆ ತಿಳಿಯದ ಸಂಸದ ಶ್ರೀರಾಮುಲು, ನಾಯಕ ಸಮುದಾಯ ರಾಜ್ಯನಾಯಕನಾಗಲು ಸಾಧ್ಯವಿಲ್ಲ. ಅವರ ಕಟ್ಟೆಮನೆ ಯಾವುದೆಂದು ಮೊದಲು ತಿಳಿಸಲಿ. ಗಂಡಸಾದರೆ ಮ್ಯಾಸನಾಯಕರ ಮುಂದೆ ಅವರು ಚುನಾವಣೆಯಲ್ಲಿ ಗೆದ್ದ ತೋರಿಸಲಿ’ ಎಂದು ಶಾಸಕ ಎಸ್.ತಿಪ್ಪೇಸ್ವಾಮಿ ಸವಾಲು ಹಾಕಿದರು.

ಹೋಬಳಿಯ ನೇರಲಗುಂಟೆ ಗ್ರಾಮದ ತಮ್ಮ ನಿವಾಸದಲ್ಲಿ ಶನಿವಾರ ಕಾರ್ಯಕರ್ತರೊಂದಿಗಿನ ಸಭೆಯಲ್ಲಿ ಡಾ. ಬಿ.ಆರ್‌. ಅಂಬೇಡ್ಕರ್‌ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಅವರು ಮಾತನಾಡಿದರು.

‘ಸಾವಿರಾರು ಸಂಖ್ಯೆಯಲ್ಲಿ ಬಂದ ಅಭಿಮಾನಿಗಳಿಗೆ ಅನಂತ ವಂದನೆಗಳು. ನಿಮ್ಮ ಸಲಹೆ–ಸೂಚನೆಯನ್ನು ಸ್ವೀಕರಿಸುತ್ತೇನೆ. ಶ್ರೀರಾಮುಲು ಬರೀ ನನಗೆ ಮೋಸ ಮಾಡಿಲ್ಲ; ಇಡೀ ಕ್ಷೇತ್ರದ ನಿಷ್ಠಾವಂತ ಕಾರ್ಯಕರ್ತರಿಗೆ ಮೋಸ ಮಾಡಿದ್ದಾರೆ. ನಾಯಕ ಸಮುದಾಯಕ್ಕೆ ನಂಬಿಕೆ ದ್ರೋಹ ಮಾಡಿದ್ದಾರೆ. ಕೊಟ್ಟ ಮಾತು ತಪ್ಪಿದ್ದಾರೆ. ಇದು ನಾಯಕ ಸಮುದಾಯಕ್ಕೆ ಶೋಭೆ ತರುವ ಕೆಲಸವಲ್ಲ’ ಎಂದು ವಾಗ್ದಾಳಿ ನಡೆಸಿದರು.

‘ಹಲವು ಸಮಸ್ಯೆಗಳ ನಡುವೆಯೂ ಕ್ಷೇತ್ರದಲ್ಲಿ ಬಿಜೆಪಿಯನ್ನು ಕಟ್ಟಿ ಬೆಳೆಸಿದ್ದೇವೆ. ಈಗ ಸುಲಭವಾಗಿ ಗೆಲ್ಲಬಹುದು ಎಂಬ ಕುತಂತ್ರದಿಂದ ಶ್ರೀರಾಮುಲು ಇಲ್ಲಿಗೆ ಬಂದಿದ್ದಾರೆ. ಅವರ ಕುತಂತ್ರವನ್ನು ಸಾಕಾರಗೊಳಿಸಲು ನಾನು ಬಿಡುವುದಿಲ್ಲ. ನನ್ನಿಂದ ಲಾಭ ಪಡೆದು ನನ್ನ ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡಿದ ಕೆಲ ಮುಖಂಡರು ಶ್ರೀರಾಮುಲು ಬೆಂಬಲಕ್ಕೆ ನಿಂತಿದ್ದಾರೆ. ಅಂಥವರು ಮಂಗಳಮುಖಿಯರಿಗೆ ಸಮಾನರು. ಅವರಿಂದ ಶ್ರೀರಾಮುಲುಗೆ ಎಷ್ಟು ಮತಗಳು ಲಭಿಸಲಿವೆ ಎಂದು ನಾನೂ ನೋಡುತ್ತೇನೆ. ಕ್ಷೇತ್ರದ ಜನರ ಆಸೆಯಂತೆ ಯಾವುದಾದರೂ ಪಕ್ಷದಿಂದ ಅಥವಾ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಶ್ರೀರಾಮುಲು ಅವರನ್ನು ಕ್ಷೇತ್ರದಿಂದ ಓಡಿಸುತ್ತೇನೆ. ಇದು ನನ್ನ ಕ್ಷೇತ್ರದ ಮ್ಯಾಸನಾಯಕರ ಮೇಲಾಣೆ’ ಎಂದು ಘೋಷಿಸಿದರು.

ಕ್ಷೇತ್ರದಿಂದ ಓಡಿಸಿ: ‘ಸಾಮಾನ್ಯ ಜನರ ಶಾಸಕ ಎಂದು ಹೆಸರು ಗಳಿಸಿರುವ ತಿಪ್ಪೇಸ್ವಾಮಿ ಅವರಿಗೆ ಟಿಕೆಟ್ ವಂಚಿಸಿ ಮೋಸ ಮಾಡಿದ ಶ್ರೀರಾಮುಲು ವಿರುದ್ಧ ನೀವು ಸ್ಪರ್ಧಿಸಲೇ ಬೇಕು. ಚುನಾವಣೆಯಲ್ಲಿ ಸೋಲಿಸಿ ಕ್ಷೇತ್ರದಿಂದ ಅವರನ್ನು ಓಡಿಸಬೇಕು’ ಎಂದು ನೂರಾರು ಕಾರ್ಯಕರ್ತರು ತಿಪ್ಪೇಸ್ವಾಮಿ ಅವರನ್ನು ಸಭೆಯಲ್ಲಿ ಒತ್ತಾಯಿಸಿದರು.

ಹಿರೇಹಳ್ಳಿ ಕ್ಷೇತ್ರದ ಜಿಲ್ಲಾಪಂಚಾಯ್ತಿ ಸದಸ್ಯ ಒ. ಮಂಜುನಾಥ ಮಾತನಾಡಿ, ‘ಐದು ವರ್ಷ ಜನರೊಂದಿಗೆ ಸಂಪರ್ಕ ಸಾಧಿಸಿ ಜನಸೇವೆ ಮಾಡಿದ್ದಾರೆ. ಎಂದೂ ಅಧಿಕಾರದ ದರ್ಪವನ್ನು ತೋರಿಸದೇ ಅಭಿವೃದ್ಧಿಗೆ ಆದ್ಯತೆ ನೀಡಿದ್ದರು. ಅಂಥ ವ್ಯಕ್ತಿಗೆ ಟಿಕೆಟ್‌ ವಂಚಿಸಿದ ಬಿಜೆಪಿಯನ್ನು ಚುನಾವಣೆಯಲ್ಲಿ ಸೋಲಿಸಬೇಕು. ಅದಕ್ಕಾಗಿ ತಿಪ್ಪೇಸ್ವಾಮಿ ಅವರ ಕೈ ಬಲಪಡಿಸಬೇಕು. ಕಾರ್ಯಕರ್ತರು ಒಗ್ಗಟ್ಟಿನಿಂದ ಕೆಲಸ ಮಾಡಿ, ಅವರನ್ನು ಗೆಲ್ಲಿಸಬೇಕು’ ಎಂದು ಮನವಿ ಮಾಡಿದರು.

ಮುಖಂಡ ಸೈಯದ್‌ ಅನ್ವರ್ ಮಾತನಾಡಿ, ‘ತಿಪ್ಪೇಸ್ವಾಮಿ ಅವರು ಕ್ಷೇತ್ರದ ಎಲ್ಲಾ ಸಮುದಾಯದ ಜನರನ್ನು ಪ್ರೀತಿ ವಿಶ್ವಾಸದಿಂದ ಕಾಣುತ್ತಿದ್ದರು. ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಟಿಕೆಟ್‌ ವಂಚನೆಗೆ ಒಳಗಾದ ನೀವು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಶ್ರೀರಾಮುಲುಗೆ ಸೋಲಿನ ರುಚಿ ತೋರಿಸಬೇಕು’ ಎಂದು ಹೇಳಿದರು.

ತಾಲ್ಲೂಕು ಪಂಚಾಯ್ತಿ ಸದಸ್ಯ ಕಾಲುವೆಹಳ್ಳಿ ಶ್ರೀನಿವಾಸ್ ಮಾತನಾಡಿ, ‘ಅವಕಾಶವಾದಿ ರಾಜಕಾರಣಿಯಾದ ಶ್ರೀರಾಮುಲು ಬಿಎಸ್‌ಆರ್ ಪಕ್ಷವನ್ನು ಸ್ಥಾಪಿಸಿದಾಗ ನಾವೆಲ್ಲರೂ ಬೆಂಬಲ ಸೂಚಿಸಿ ಅವರನ್ನು ಗೆಲ್ಲಿಸಿದೆವು. ಅವರ ಸ್ವಾಭಿಮಾನವನ್ನು ರಕ್ಷಿಸಿದ್ದೆವು. ಬಳ್ಳಾರಿಯಲ್ಲಿ ಅವರ ವಿರುದ್ಧ

ವಿರೋಧಿ ಅಲೆ ಇರುವುದರಿಂದ ಭಯಗೊಂಡು ಮೊಳಕಾಲ್ಮುರು ಕ್ಷೇತ್ರದಲ್ಲಿ ಸ್ಪರ್ಧಿಸಲು ಬಂದಿದ್ದಾರೆ. ಸ್ವಾಭಿಮಾನಿಗಳಾದ ಮೊಳಕಾಲ್ಮುರು ಕ್ಷೇತ್ರದ ಮತದಾರರು ಅವರ ಕುತಂತ್ರ ರಾಜಕಾರಣಕ್ಕೆ ತಕ್ಕ ಪಾಠ ಕಲಿಸಬೇಕು’ ಎಂದರು.

ಮೊಳಕಾಲ್ಮುರು ಕ್ಷೇತ್ರ ವ್ಯಾಪ್ತಿಯ ಜಿಲ್ಲಾ ಪಂಚಾಯ್ತಿ, ತಾಲ್ಲೂಕು ಪಂಚಾಯ್ತಿ, ಪಟ್ಟಣ ಪಂಚಾಯ್ತಿ, ಗ್ರಾಮ ಪಂಚಾಯ್ತಿ ಸದಸ್ಯರು, ಅಭಿಮಾನಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

‘ಶ್ರೀರಾಮುಲು ಕ್ಷಮೆಯಾಚಿಲಿ’

ನಾಯಕನಹಟ್ಟಿ: ಪಟ್ಟಣದ ಗುರು ತಿಪ್ಪೇರುದ್ರಸ್ವಾಮಿ ದೇವಾಲಯದ ಆವರಣದಲ್ಲಿ ಶುಕ್ರವಾರ ನಡೆದ ಕಲ್ಲು ತೂರಾಟ ಗಲಭೆಗೆ ಕಾಂಗ್ರೆಸ್ ಪಕ್ಷವೇ ಕಾರಣ ಎಂದು ಆರೋಪಿಸಿರುವ ಸಂಸದ ಶ್ರೀರಾಮುಲು ಅವರು ಬಹಿರಂಗವಾಗಿ ಕ್ಷಮೆಯಾಚಿಸಬೇಕು ಇಲ್ಲವಾದರೆ ಅವರ ವಿರುದ್ಧ ಪ್ರತಿಭಟನೆ ನಡೆಸಲಾಗುವುದು ಎಂದು ಕಾಂಗ್ರೆಸ್ ಮುಖಂಡರಾದ ಪಟೇಲ್ ಜಿ. ತಿಪ್ಪೇಸ್ವಾಮಿ, ಜಿ.ಎಸ್. ಪ್ರಭುಸ್ವಾಮಿ, ಟಿ.ವಸೀಂಅಹಮ್ಮದ್ ಹೇಳಿದರು.

ನಾಯಕನಹಟ್ಟಿ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ನಡೆದ ಸುದ್ಧಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ಶುಕ್ರವಾರ ನಡೆದ ಅಹಿತಕರ ಘಟನೆಗೆ ಕಾಂಗ್ರೆಸ್ ಕಾರಣ. ಕಾಂಗ್ರೆಸ್ ಸೂಚನೆಯಂತೆ ದಾಳಿ ನಡೆಸಲಾಗಿದೆ ಎಂದು ಶ್ರೀರಾಮುಲು ಆರೋಪಿಸಿದ್ದಾರೆ. ಇದರಿಂದ ಇಲ್ಲಿನ ಕಾಂಗ್ರೆಸ್ ಪಕ್ಷದ ಮುಖಂಡರಿಗೆ, ಅಭಿಮಾನಿಗಳಿಗೆ ನೋವುಂಟಾಗಿದೆ. ಗದ್ದಲ, ಗಲಭೆ, ದಾಳಿ ನಡೆಸುವುದು ಬಿಜೆಪಿ ಪಕ್ಷದ ಸಂಸ್ಕೃತಿಯೇ ಹೊರತು ಕಾಂಗ್ರೆಸ್ ಪಕ್ಷದ್ದಲ್ಲ. ಮೊಳಕಾಲ್ಮುರು ಕ್ಷೇತ್ರದಲ್ಲಿ ಪಕ್ಷಕ್ಕೆ ಅಂತಹ ದುಃಸ್ಥಿತಿ ಬಂದಿಲ್ಲ. ಹಾಗಾಗಿ ಶ್ರೀರಾಮುಲು ಹೇಳಿಕೆ ಹಿಂಪಡೆಯ ಬೇಕು. ಕಾಂಗ್ರೆಸ್ ಪಕ್ಷದ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.

ಕಾಂಗ್ರೆಸ್ ಮುಖಂಡರಾದ ಬಿ. ಸೂರನಾಯಕ, ಬಂಡೆಕಪಿಲೆ ಓಬಣ್ಣ, ಇ. ಚಿತ್ತಪ್ಪ, ಬಿ.ಟಿ. ಬಂಗಾರಪ್ಪ, ಧನಂಜಯ, ಮಲ್ಲೂರಹಟ್ಟಿ ತಿಪ್ಪೇಸ್ವಾಮಿ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry