ಬೇಸಿಗೆಗೆ ಉಣ್ಣೆ ತಂಪು

7

ಬೇಸಿಗೆಗೆ ಉಣ್ಣೆ ತಂಪು

Published:
Updated:
ಬೇಸಿಗೆಗೆ ಉಣ್ಣೆ ತಂಪು

ಬೇಸಿಗೆ ಬೇಗೆ ಜಾಸ್ತಿಯಾಗಿದೆ. ಈ ಕಾಲಕ್ಕೆ ಹತ್ತಿ ಉಡುಗೆಗಳನ್ನೇ ಎಲ್ಲರೂ ಧರಿಸಲು ಇಷ್ಟಪಡುತ್ತಾರೆ. ಆದರೆ ಬೇಸಿಗೆಗೆ ಉಣ್ಣೆಯ ಬಟ್ಟೆಗಳೂ ಉತ್ತಮ ಆಯ್ಕೆ. ಆ ಬಟ್ಟೆಗಳು ಸಹ ದೇಹವನ್ನು ತಂಪಾಗಿಡುತ್ತದೆ. ಹೀಗಾಗಿ ಬೇಸಿಗೆಗೆ ಹತ್ತಿ ಬಟ್ಟೆಗಳಂತೆಯೇ ಉಣ್ಣೆ ಬಟ್ಟೆಗಳನ್ನೂ ಆರಾಮವಾಗಿ ಧರಿಸಬಹುದು.

ದಪ್ಪಗಿರುವ ಉಣ್ಣೆ ಬಟ್ಟೆಗಳು ಚಳಿಗಾಲಕ್ಕಷ್ಟೇ ಸರಿ. ಬೇಸಿಗೆಯಲ್ಲಿ ಸೆಖೆ ಹೆಚ್ಚಿಸುತ್ತವೆ ಎಂದು ಭಾವಿಸುವವರೇ ಹೆಚ್ಚು. ಆದರೆ ಉಣ್ಣೆ ಬಟ್ಟೆ ಸಮಶೀತೋಷ್ಣ ವಸ್ತ್ರವಾಗಿ ಕೆಲಸ ನಿರ್ವಹಿಸುವ ಗುಣ ಹೊಂದಿದೆ. ಇದು ಬೆವರನ್ನು ಹೀರಿಕೊಂಡು ದೇಹವನ್ನು ತಂಪಾಗಿಡುತ್ತದೆ. ದೇಹದ ತಾಪವನ್ನು ಅದು ಹೆಚ್ಚಿಸುವುದಿಲ್ಲ. ದೇಹಕ್ಕೆ ಕಿರಿಕಿರಿಯ ಅನುಭವ ನೀಡುವುದಿಲ್ಲ ಎನ್ನುತ್ತಾರೆ ಮೆರಿನೊ ವೂಲ್‌ ವಸ್ತ್ರವಿನ್ಯಾಸಕ ಧ್ರುವ ಕಪೂರ್‌.

ಉಣ್ಣೆ ಬಟ್ಟೆಯ ವೈಜ್ಞಾನಿಕ ಗುಣಲಕ್ಷಣಗಳು ಬೇಸಿಗೆಯಲ್ಲಿ ತೊಡಲು ಸೂಕ್ತವಾಗಿದೆ ಎನ್ನುತ್ತಾರೆ ಫ್ಯಾಷನ್‌ ವಿನ್ಯಾಸಕರು. ಇದು ಉಷ್ಣ ನಿಯಂತ್ರಿಸುವಿಕೆಯ ಗುಣ ಹೊಂದಿದೆ. ಬಿಸಿಲು, ಸೆಕೆಗೆ ದೇಹದಲ್ಲಿನ ತಾಪಮಾನ ಬದಲಾಗುತ್ತಿದ್ದರೆ, ಅದಕ್ಕೆ ತಕ್ಕಂತೆ ದೇಹ ಪ್ರತಿಕ್ರಿಯಿಸುವಂತಹ ವಿಶೇಷ ಗುಣ ಉಣ್ಣೆ ಬಟ್ಟೆಯದು. ಹೀಗಾಗಿ ಚಳಿಗಾಲದಲ್ಲಿ ಉಣ್ಣೆ ಬಟ್ಟೆಗಳು ದೇಹವನ್ನು ಬೆಚ್ಚಗಿಟ್ಟರೆ, ಬೇಸಿಗೆಯಲ್ಲಿ ದೇಹವನ್ನು ತಂಪಾಗಿಡುತ್ತದೆಯಂತೆ.

ಈ ಉಣ್ಣೆ ಬಟ್ಟೆಗಳು ತೊಡಲು ಆರಾಮದಾಯಕ, ಈ ಬಟ್ಟೆಗಳಲ್ಲಿ ಗಾಳಿಯಾಡಬಲ್ಲದು. ಹಾಗೆಯೇ ಬೆವರಿನ ವಾಸನೆಯನ್ನು ತಡೆಯುತ್ತದೆ. ಈ ಬಟ್ಟೆಯ ಪ್ರಮುಖ ವೈಶಿಷ್ಟ್ಯವೆಂದರೆ ಸೂರ್ಯನ ನೇರಳಾತೀತ ಕಿರಣಗಳಿಂದ ರಕ್ಷಣೆ ನೀಡುವುದು. ಟ್ರೌಸ್ಸರ್ಸ್‌, ಟೀಶರ್ಟ್‌, ಬ್ಲೇಜರ್‌, ಜಾಕೆಟ್‌ ಉಣ್ಣೆಬಟ್ಟೆಗಳಲ್ಲಿ ಲಭ್ಯ. ಈಗ ಯುವತಿಯರಿಗೆ ಸ್ಕರ್ಟ್‌, ಟೀ–ಶರ್ಟ್‌, ಫ್ರಾಕ್‌ಗಳಲ್ಲಿ ಲಭ್ಯ. ಈ ಬಟ್ಟೆಗಳಲ್ಲಿಯೂ ಹಲವು ವಿನ್ಯಾಸಗಳು, ವೈವಿಧ್ಯತೆಗಳು ಇವೆ. ಉಣ್ಣೆಯ ಲೈಟ್‌ ವೇಟ್‌ ಜಾಕೆಟ್‌ ಹಾಗೂ ಜೀನ್ಸ್‌ಗಳು ಯುವತಿಯರಿಗೆ ಚಂದ ಕಾಣುತ್ತದೆ. ಹಾಗೇ ಹುಡುಗರು ಟೀ– ಶರ್ಟ್‌ಗಳ ಮೇಲೆ ಉಣ್ಣೆ ಬ್ಲೇಜರ್‌ ತೊಟ್ಟರೆ ಆಕರ್ಷಕವಾಗಿರುತ್ತದೆ ಎಂದು ಮಾಹಿತಿ ನೀಡುತ್ತಾರೆ ಧ್ರುವ.

‘ಜನರು ಯಾವಾಗಲೂ ಹೊಸ ಹೊಸ ಆಯ್ಕೆಗಳನ್ನು ಇಷ್ಟಪಡುತ್ತಾರೆ. ಮೆರಿನೊ ವೂಲ್‌ ಸಂಸ್ಕೃತಿ ಮತ್ತು ಸಂಪ್ರದಾಯಗಳ ಮಿಶ್ರಣ. ಈಗಿನ ಟ್ರೆಂಡ್‌ಗಳನ್ನು ಗಮನದಲ್ಲಿರಿಸಿಕೊಂಡು ಉಣ್ಣೆಯಲ್ಲಿಯೂ ಹಲವು ವೈವಿಧ್ಯಗಳು ಬಂದಿವೆ. ನಾವು ಯುವಜನರನ್ನೇ ಗಮನದಲ್ಲಿಟ್ಟುಕೊಂಡು ವಿನ್ಯಾಸ ಮಾಡುತ್ತೇವೆ. ಈ  ಉಡುಗೆಗಳು ಸ್ಟೈಲ್ ಮತ್ತು ಫ್ಯಾಷನ್ ಲೋಕದ ಆಕರ್ಷಣೆ ಎನಿಸಿಕೊಳ್ಳುತ್ತಿವೆ. ಅತ್ಯುತ್ತಮ ಗುಣಮಟ್ಟದ ಮೆರಿನೋ ವೂಲ್‍ನಿಂದ ವಿನ್ಯಾಸಗೊಳಿಸಿ ಸಿದ್ಧಪಡಿಸಲಾಗುವ ನಮ್ಮ ಉಡುಪುಗಳಿಗೆ ಹರಳು ಹಾಗೂ ಕಸೂತಿ ಬಳಸುತ್ತೇವೆ. ಇವು ಎಲ್ಲರಿಗೂ ಇಷ್ಟವಾಗುವಂತಿವೆ’ ಎನ್ನುತ್ತಾರೆ ಅವರು.

ಮೆರಿನೊ ಉಣ್ಣೆ ಉಡುಗೆಗಳು ಸಹಜವಾಗಿ ಹಗುರವಾಗಿ (ಲೈಟ್‌ ವೇಟ್) ಇರುತ್ತವೆ. ಸಿಂಥೆಟಿಕ್‌ ಅಥವಾ ಇತರ ಯಾವುದೇ ಬಗೆಯ ಫ್ಯಾಬ್ರಿಕ್‌ನಲ್ಲಿ ಇಲ್ಲದ ಆ್ಯಂಟಿ ಬ್ಯಾಕ್ಟೀರಿಯ ಗುಣ ಈ ಬಟ್ಟೆಗಳಲ್ಲಿರುತ್ತದೆ. ಇದು ಚರ್ಮದ ಆರೋಗ್ಯಕ್ಕೆ ಉತ್ತಮ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry