ಸೋಮವಾರ, ಡಿಸೆಂಬರ್ 9, 2019
21 °C

ಮಕ್ಕಳು ಮತ್ತು ಮಾಸ್ತರು-ನಡುವೆ ಒಂದಿಷ್ಟು ಜಾಗ

Published:
Updated:
ಮಕ್ಕಳು ಮತ್ತು ಮಾಸ್ತರು-ನಡುವೆ ಒಂದಿಷ್ಟು ಜಾಗ

ಶಾಲೆಯಲ್ಲಿ ಒಂದು ಸಮಸ್ಯೆ ಹುಟ್ಟಿತು. ನಮ್ಮ ಶಾಲೆಯ ಅಧ್ಯಾಪಕನೊಬ್ಬ ತಾರತಮ್ಯ ಮಾಡುತ್ತಾನೆ. ಅದರಲ್ಲೂ ಆಯ್ದ ಕೆಲವು ಹುಡುಗಿಯರಿಗೆ ರಿಯಾಯಿತಿ, ಆದರಗಳು ದೊರೆಯುತ್ತಿವೆ; ಜೊತೆಗೆ ಪರೀಕ್ಷೆಯಲ್ಲೂ ಹೆಚ್ಚು ಅಂಕ ಗಳಿಸಲು ನೆರವಾಗುತ್ತಿದ್ದಾನೆ ಎಂಬ ದೂರುಗಳು ಬಂದವು. ಈ ದೂರನ್ನು ತಂದವರು ಹುಡುಗರಲ್ಲ, ಹದಿಹರೆಯದ ಹುಡುಗಿಯರು.

ಬಡ ಕುಟುಂಬಗಳಿಂದ ಶಾಲೆಗೆ ಬರುವ ಅನೇಕ ಮಕ್ಕಳು ಕುಡುಕ ಅಥವಾ ಮುಂಗೋಪಿ ಪೋಷಕರಿಂದ, ಬಂಧುಬಳಗದಿಂದ ಕ್ರೌರ್ಯಕ್ಕೆ ಒಳಗಾಗಿ ನೋವಿನಿಂದ ಕುಗ್ಗಿಹೋಗುತ್ತಾರೆ. ಇದು ಕೀಳರಿಮೆಗೆ ಅಥವಾ ನಿಯಂತ್ರಣವಿಲ್ಲದ ಭಾವನೆಗಳ ಏರುಪೇರಿಗೆ ಕಾರಣವಾಗುತ್ತದೆ. ನಮ್ಮ ಈ ಅಧ್ಯಾಪಕ ಮಕ್ಕಳ ಕಷ್ಟ–ಸುಖ ವಿಚಾರಿಸಿ ಆಪ್ತಸಮಾಲೋಚನೆ ಮಾಡಿ ನೆರವು ನೀಡುತ್ತಿದ್ದುದು ನಿಜ. ಆದರೆ ವಿಪರೀತ ತಾರತಮ್ಯ ಮಾಡುತ್ತಾರೆ ಎಂಬ ದೂರುಗಳು ಬಂದಾಗ ನಾವು ಅವರನ್ನು ವಿಚಾರಿಸಲು ಪ್ರಯತ್ನಿಸಿದೆವು. ಇಬ್ಬರು ಹುಡುಗಿಯರು ನೇರವಾಗಿ ಈ ಅಧ್ಯಾಪಕ ಹೇಗೆ ತಾರತಮ್ಯ ಮಾಡುತ್ತಾರೆ ಎಂಬುದನ್ನು ಸಾಕ್ಷಿಸಮೇತ ವಿವರಿಸಿದರು. ಆದರೆ ಈ ಅಧ್ಯಾಪಕನಿಗೆ ಸೈಕಾಲಜಿ ತಿಳಿದಿದೆಯೆಂದೂ ‘ದೃಷ್ಟಿಮಾತ್ರದಿಂದಲೇ ಸಕಲವನ್ನೂ ಅರಿಯುವ ಶಕ್ತಿ ಇವರಿಗಿದೆಯೆಂದೂ’ ತಿಳಿದು ಅವರನ್ನು ಗೌರವಿಸುತ್ತಿದ್ದ ಮತ್ತೊಬ್ಬ ಹುಡುಗಿ ಈ ಆಪಾದನೆಗಳೆಲ್ಲ ಸುಳ್ಳು ಎಂದು ಮಾಸ್ತರ ಪರವಾಗಿ ವಾದಿಸತೊಡಗಿದಳು. ತನ್ನ ವಾದದ ಸಮರ್ಥನೆಗೆ, ಚಾಡಿ ಹೇಳಿದ ಹುಡುಗಿಯರು ಹೇಳಿದ್ದೆಲ್ಲ ಸುಳ್ಳು ಎಂದು ಸಾಬೀತು ಮಾಡುತ್ತ ಸರಣಿ ಸುಳ್ಳುಗಳನ್ನು ಸೃಷ್ಟಿಸುತ್ತಿದ್ದಳು. ಜೊತೆಗೆ ಗುಟ್ಟಾಗಿ ಮಾಸ್ತರ್ ಅವರನ್ನು ಸಂಧಿಸಿ - ಈ ‘ಕೆಟ್ಟ ಹುಡುಗಿಯರು’ ಹೇಳುತ್ತಿರುವ ಚಾಡಿಗಳನ್ನು, ಮುಂದಾಗಬಹುದಾದ ಪರಿಣಾಮಗಳನ್ನು ಮಾಸ್ತರಿಗೆ ಹೇಳಿಬಿಟ್ಟಳು. ಮತ್ತಷ್ಟು ಹುಡುಗಿಯರು ಈ ಹಗರಣದಲ್ಲಿ ಸೇರಿ ಪರ-ವಿರೋಧಿ ವಿದ್ಯಾರ್ಥಿನಿಯರ ಬಣ ಸೃಷ್ಟಿಯಾಯಿತು. ಈ ಸಂದರ್ಭದಲ್ಲಿ ಅಧ್ಯಾಪಕನನ್ನು ಮುಖ್ಯೋಪಾಧ್ಯಯರ ಸಮ್ಮುಖದಲ್ಲಿ ಕರೆದು ಮಾತನಾಡಿದೆವು. ಈ ಅಧ್ಯಾಪಕ ಸ್ವರಕ್ಷಣೆಯ ಗುರಾಣಿಯನ್ನು ಮುಂದೆ ಇಟ್ಟುಕೊಂಡೇ ಮಾತನಾಡಿದ.

ಅಧ್ಯಾಪಕರ ಮತ್ತು ಮಕ್ಕಳ ಸಂಬಂಧ: ಅಧ್ಯಾಪಕರಾದವರು ಮಕ್ಕಳು ತಮ್ಮನ್ನು ಸರಳವಾಗಿ ಸಂಪರ್ಕಿಸಲು ಮುಕ್ತವಾದ ಒಂದು ಅವಕಾಶವನ್ನು ತೆರೆದಿಡಬೇಕು. ಅಂದರೆ ಒಂದಿಷ್ಟು ತೆರೆದಿಟ್ಟ ‘ಜಾಗ’ ಅಥವಾ ವಲಯ ಇರಬೇಕು. ಮಕ್ಕಳು ಮತ್ತು ಅಧ್ಯಾಪಕರು ಎಷ್ಟೇ ಪರಸ್ಪರ ತೆರೆದುಕೊಂಡಿದ್ದಾರೆ ಎಂದು ಭಾವಿಸಿದರೂ ಮುಚ್ಚಿಟ್ಟುಕೊಂಡಿರುವ ಅನೇಕ ಸಂಗತಿಗಳಿರುತ್ತವೆ. ಮುಖ್ಯವಾಗಿ ಮಕ್ಕಳು ಇವುಗಳನ್ನು ಇತ್ಯರ್ಥ ಮಾಡಿಕೊಂಡರೆ ಮಾತ್ರ ಅವರ ವ್ಯಕ್ತಿತ್ವ ವಿಕಾಸ ಸಹಜವಾಗಿ ಆಗುತ್ತದೆ. ಬೆಳವಣಿಗೆಯ ಹಂತದಲ್ಲಿ ಇತ್ಯರ್ಥವಾಗದ ಕಗ್ಗಂಟುಗಳು ಒಳಗೇ ಉಳಿದಷ್ಟೂ ಅಪಾಯಕಾರಿ ರೂಪಗಳನ್ನು ತಾಳುತ್ತಾ ಹೋಗುತ್ತವೆ. ಹಾಗಾಗಿ ಇಬ್ಬರ ನಡುವಿನ ಜಾಗ ಹೇಗಿರಬೇಕು ಎಂದು ಚರ್ಚೆ ನಡೆಯಿತು. ತಾರತಮ್ಯದ ಸಮಸ್ಯೆ ಹುಟ್ಟಿದ್ದು ಹೇಗೆ ಎಂದು ಅರ್ಥಮಾಡಿಕೊಳ್ಳಲು ಈ ಚಿತ್ರ ಸಹಾಯ ಮಾಡುತ್ತದೆ. ಈ ಅಧ್ಯಾಪಕ ಮಕ್ಕಳಿಗಾಗಿ ಒಂದಿಷ್ಟು ಜಾಗವನ್ನು ಮೀಸಲಾಗಿಟ್ಟಿದ್ದೇನೋ ಸರಿ; ಅದರ ಸ್ವರೂಪ ಏನು, ಪರಿಣಾಮ ಏನು ಇತ್ಯಾದಿಗಳನ್ನು ಚರ್ಚಿಸಲು ಈ ಚಿತ್ರಗಳ ಸಹಾಯ ಪಡೆಯೋಣ.

ಈ ಚಿತ್ರದಲ್ಲಿ ಅಧ್ಯಾಪಕ ತನ್ನ ಆಪ್ತವಲಯದೊಳಗೆ ಕೇವಲ ಮೂವರು ವಿದ್ಯಾರ್ಥಿನಿಯರು ಇದ್ದಾರೆ. ಇವರಲ್ಲಿ ಯಾರಾದರೂ ಒಬ್ಬರೊಡನೆ ಚರ್ಚಿಸುವಾಗ ಹೊರವಲಯದಲ್ಲಿರುವ ಯಾವುದೇ ವಿದ್ಯಾರ್ಥಿ/ ವಿದ್ಯಾರ್ಥಿನಿ ಸಂಪರ್ಕಿಸಲು ಪ್ರಯತ್ನಿಸಿದರೆ - ‘ನಾನೀಗ ಏನೋ ಮಾತನಾಡುತ್ತಿದ್ದೇನೆ, ನೀನು ಆಮೇಲೆ ಬಾ’ ಎಂದು ಹೇಳಿ ಕಳುಹಿಸಿಬಿಡುತ್ತಿದ್ದರು. ಇದಕ್ಕೆ ವಿವರಣೆ ಏನೇ ಇರಬಹುದು, ಆದರೆ ಮಕ್ಕಳಿಗೆ ಇದು ತಾರತಮ್ಯವಾಗಿ ಕಾಣುತ್ತಿತ್ತು.

ಮೂವರು ಹುಡುಗಿಯರು ಮಾತ್ರ ಒಳ ವಲಯದಲ್ಲಿರುವುದನ್ನು ವಿದ್ಯಾರ್ಥಿನಿಯರ ಆಪಾದನೆಯ ಆಧಾರದ ಮೇಲೆ ಊಹೆಮಾಡಿದೆವು. ಇದರೊಳಗೆ ಅನೇಕ ಒಳಸುಳಿಗಳಿರಬಹುದು. ಆದರೆ ಸಮಸ್ಯೆಯನ್ನು ಅರ್ಥಮಾಡಿಕೊಳ್ಳುವ ಸಲುವಾಗಿ ಹೆಚ್ಚು ಕಡಿಮೆ ಕಪ್ಪು–ಬಿಳುಪುಗಳಾಗಿ ವಿಂಗಡಿಸಿ ಚರ್ಚೆಮಾಡಲಾಯಿತು.

ಒಳ ವಲಯದ ಈ ಮೂರು ಹುಡುಗಿಯರು ತಾನಾಗೇ ದೊರೆತ ಈ ವಿಶೇಷ ಸಂಬಂಧದ ಪ್ರಯೋಜನವನ್ನು ಬೇರಾರಿಗೂ ತಿಳಿಯದಂತೆ ತಾವಷ್ಟೇ ಪಡೆಯುತ್ತಿರುವುದನ್ನು ಊಹಿಸಬಹುದು. ಇನ್ನೂ ಮೂವರು ಹುಡುಗಿಯರು ಈ ಆಪ್ತವಲಯಕ್ಕೆ ಅರ್ಧಭಾಗ ಮಾತ್ರ ಪ್ರವೇಶಿಸಲು ಸಾಧ್ಯವಾಗಿದೆ ಎಂದು ಊಹಿಸಬಹುದು. ಆದರೆ ಅದರೊಳಗೆ ಪೂರ್ಣ ಪ್ರವೇಶ ಮಾಡಿಲ್ಲ. ಇದಕ್ಕೆ ಅನೇಕ ಕಾರಣಗಳಿರಬಹುದು.

ಉಳಿದ ಬಹುಸಂಖ್ಯಾತ ಮಕ್ಕಳು ಹೊರಗೇ ಇದ್ದಾರೆ. ಅವರಲ್ಲಿ ಅನೇಕರಿಗೆ ಇಂತಹ ಆಪ್ತವಲಯ ಇರುವ ಕುರಿತಾಗಿ ತಿಳಿದಿದ್ದರೂ ಅವರ ಬಗ್ಗೆ ತಲೆಕೆಡಿಸಿಕೊಳ್ಳದೆ ತಮ್ಮ ಪಾಡಿಗೆ ತಾವು ತಮ್ಮ ಕೆಲಸದಲ್ಲಿ ಗಮನ ಇಟ್ಟು ತಟಸ್ಥವಾಗಿರುತ್ತಾರೆ. ಇದೇ ಶಾಲೆಯಲ್ಲಿ ಓದಿ ಈಗ ಕಾಲೇಜಿನಲ್ಲಿರುವ ಕೆಲಹುಡುಗಿಯರು ಈ ಪ್ರಕರಣದ ಚರ್ಚೆ ಬಿಸಿ ಏರಿದಾಗ ಬಂದು ತಮ್ಮ ಅನುಭವ ಹಂಚಿಕೊಂಡರು ‘ಹೌದು ಈ ಅಧ್ಯಾಪಕ ಹೀಗೆ ತಾರತಮ್ಯ ಮಾಡುತ್ತಾರೆ; ನಮ್ಮ ಕಾಲದಲ್ಲೂ ಹೀಗೇ ಮಾಡುತ್ತಿದ್ದರು, ಏಳನೇ ತರಗತಿಯ ರಂ.....ಳ ಜೊತೆ ಆತ್ಮೀಯತೆಯಿಂದ ಮಾತನಾಡುತ್ತ ನಿಮ್ಮ ತಂದೆ ನಾನು ಬಾಲ್ಯ ಸ್ನೇಹಿತರು, ನಾವು ಜೊತೆಗೇ ಆಟವಾಡುತ್ತಿದ್ದೆವು ಎನ್ನುತ್ತಿದ್ದರು, ಇದೇ ಕಥೆಯನ್ನು ಆರನೇ ತರಗತಿಯ ಪ......ಳಿಗೂ ಹೇಳುತ್ತಿದ್ದರು, ಅಷ್ಟೇ ಅಲ್ಲದೇ ಇದೇ ಕಥೆ ವರ್ಷ ವರ್ಷವೂ ಪುನರಾವರ್ತನೆಯಾಗುತ್ತಿದೆ; ಆರನೇ ತರಗತಿಯ ಹುಡುಗಿಗೂ ಅದೇ ಕಥೆ, ಏಳನೆ ತರಗತಿ ಹುಡುಗಿಗೂ ಅದೇ ಕಥೆ, ನಾವಿದ್ದಾಗಲೂ ಅದೇ ಕಥೆ, ಈಗಲೂ ಅದೇ ಕಥೆ ಇದು ಹೇಗೆ ಸತ್ಯ ಆಗೋಕ್ ಸಾಧ್ಯ’ ಎನ್ನುವುದು ಈ ಹುಡುಗಿಯರ ತರ್ಕ. ಶಾಲೆಬಿಟ್ಟು ಹೊರಹೋದ ಮಕ್ಕಳ ಈ ವಿವರಣೆಯನ್ನು ನಾವು ನಿರಾಕರಿಸಲಾಗಲಿಲ್ಲ. ಇವರಾರೂ ತಾವು ಶಾಲೆಯಲ್ಲಿದ್ದಾಗ ಈ ಅಧ್ಯಾಪಕ ತಾರತಮ್ಯ ಮಾಡುತ್ತಾನೆ ಎಂದು ದೂರಿದವರಲ್ಲ. ಆದರೆ ಈ ಅಧ್ಯಾಪಕ ಮಕ್ಕಳಿಗೆ ಹತ್ತಿರವಾಗುವ ಭರದಲ್ಲಿ ಅಸತ್ಯಗಳ ಮೇಲೆ ಸಂಬಂಧಗಳನ್ನು ಬಲಪಡಿಸಿ, ಅವರ ವಿಶ್ವಾಸ ಗಳಿಸಲು ಪ್ರಯತ್ನಿಸುತ್ತಿದ್ದ. ತಾನು ಪ್ರಜ್ಞಾವಂತಿಕೆಯನ್ನು ಬೆಳೆಸಿಕೊಂಡು ಮಕ್ಕಳಿಗೆ ಸಹಾಯ ಮಾಡುವ ಬದಲು ತಾನೇ ಮಕ್ಕಳ ವಿಶೇಷ ಗಮನಕ್ಕೆ ಪಾತ್ರನಾಗುವ ಹಪಾಹಪಿಯಲ್ಲಿದ್ದ. ಕೊಡುವ ಶಕ್ತಿಗಿಂತ ಈತನಿಗೆ ಪಡೆಯುವ ದೌರ್ಬಲ್ಯವೇ ಪ್ರಧಾನವಾಗಿತ್ತು. ಮಕ್ಕಳು ಅಧ್ಯಾಪಕರ ದೌರ್ಬಲ್ಯವನ್ನು ಗಮನಿಸುತ್ತಾರೆ, ಅಭಿಪ್ರಾಯ ತಳೆಯುತ್ತಾರೆ, ಆದರೆ ಅದನ್ನು ನೇರವಾಗಿ ಹೇಳುವುದಿಲ್ಲ. ಮಕ್ಕಳು ವಿಧೇಯರಾಗಿದ್ದಾರೆ ಎಂದಾಕ್ಷಣ ನಮ್ಮನ್ನು ವಿಮರ್ಶೆ ಮಾಡುವುದಿಲ್ಲ ಎಂದೇನು ಅಲ್ಲ. ಈ ಘಟನೆ ಮಕ್ಕಳು ಅಧ್ಯಾಪಕರನ್ನು ಹೇಗೆ ಗಮನಿಸುತ್ತಾರೆ ಎಂಬುದಕ್ಕೆ ಒಂದು ಕನ್ನಡಿಯಂತಿದೆ.

ಈ ಅಧ್ಯಾಪಕ ತನ್ನ ಸುತ್ತ ಒಂದು ಆಪ್ತ ವಲಯವನ್ನೇನೊ ಸೃಷ್ಟಿಮಾಡಿಕೊಂಡಿದ್ದ. ಆದರೆ ಇದು ಸಂಕುಚಿತ ವಲಯ. ಇದನ್ನು ನಾವು ‘ಅವಕಾಶ I’ ಎಂದು ಕರೆದಿದ್ದೇವೆ. ಇಂತಹ ವಲಯದೊಳಗೆ ಕುದುರುವ ಅಧ್ಯಾಪಕ ಮಕ್ಕಳ ಸಂಬಂಧಗಳು, ಅವುಗಳ ಏರಿಳಿತಗಳು, ಹೇಗಿರಲು ಸಾಧ್ಯ? ಊಹಿಸುವುದು ಸುಲಭ. ಇಂತಹ ‘ಅವಕಾಶ’ದಲ್ಲಿ ದೌರ್ಬಲ್ಯಗಳು ಸಂಬಂಧಗಳನ್ನು ರೂಪಿಸುವ ಪ್ರಧಾನ ಅಂಶವಾಗುತ್ತದೆ. ’ನಿನ್ನ ದೌರ್ಬಲ್ಯಕ್ಕೆ ನಾನು ಆಸರೆ; ನನ್ನ ದೌರ್ಬಲ್ಯಕ್ಕೆ ನೀನು ಆಸರೆ’ ಎಂಬಂತಹ ಸಮೀಕರಣ ಇಲ್ಲಿ ಕೆಲಸ ಮಾಡಲು ಪ್ರಾರಂಭಿಸುತ್ತದೆ. ಇಲ್ಲಿ ಅಧ್ಯಾಪಕ ಭಾವಿಸುತ್ತಾನೆ ತಾನು ಈ ಅಂತರಂಗದ, ಮೆಚ್ಚಿನ ವಿದ್ಯಾರ್ಥಿನಿಯರನ್ನು ಅವರ ವಿಶೇಷ ಪ್ರೀತಿ ಗಳಿಸುವ ಮೂಲಕ ಅವರನ್ನು ನಿಯಂತ್ರಿಸುತ್ತಿದ್ದೇನೆ. ಈ ವಿದ್ಯಾರ್ಥಿನಿಯರು ಭಾವಿಸುತ್ತಾರೆ ನಾವು ಅಧ್ಯಾಪಕನ ವಿಶೇಷ ಪ್ರೀತಿಗೆ ಪಾತ್ರವಾಗುತ್ತ, ಅಧ್ಯಾಪಕನಿಗೆ ತಮ್ಮನ್ನು ವಿಶೇಷವಾಗಿ ಪ್ರೀತಿಸುವ ಒಂದು ಅವಕಾಶ ನೀಡುವ ಮೂಲಕ ಅಧ್ಯಾಪಕನಿಗೆ ಮೂಗುದಾರ ಹಾಕಿ ಅವನನ್ನು ಹಿಡಿತದಲ್ಲಿಟ್ಟುಕೊಂಡಿದ್ದೇವೆ! ಈ ಪೈಪೋಟಿಯಲ್ಲಿ ಕಟ್ಟ ಕಡೆಗೆ ಯಾರು ಯಾರನ್ನು ಹಿಡಿತದಲ್ಲಿಟ್ಟು

ಕೊಂಡಿದ್ದಾರೆ ಎಂದು ನಿರ್ಣಾಯಕವಾಗಿ ಹೇಳಲು ಸಾಧ್ಯವಾಗದೇ ಇರಬಹುದು. ಅಧ್ಯಾಪಕನ ಈ ಆಪ್ತವಲಯದೊಳಗೆ ಅರ್ಧ ಪ್ರವೇಶ ಮಾಡಿರುವ ವಿದ್ಯಾರ್ಥಿನಿಯರೂ ತಮ್ಮದೇ ರೀತಿಯಲ್ಲಿ ಅಧ್ಯಾಪಕರನ್ನು ನಿಯಂತ್ರಿಸಲು ಪ್ರಯತ್ನಪಡುತ್ತಾ ಇರುತ್ತಾರೆ ಅಥವಾ ಅಸೂಯೆ ಕೆರಳಿ ಸಂಪೂರ್ಣ ಹೊರಬರಬಹುದು. ಒಟ್ಟಿನಲ್ಲಿ ಅಧ್ಯಾಪಕನ ಪ್ರಜ್ಞಾವಂತಿಕೆಗಿಂತ ದೌರ್ಬಲ್ಯಗಳೇ ಈ ಸಂಬಂಧಗಳನ್ನಾಳುವ ಸಮೀಕರಣವಾಗಿದೆ. ಈ ಸಂಕುಚಿತ ಆಪ್ತ ವಲಯದೊಳಕ್ಕೆ ಪ್ರಜ್ಞಾವಂತಿಕೆಯ ಪ್ರವೇಶ ಸಾಧ್ಯವೆ? ಪ್ರಜ್ಞಾವಂತ ವ್ಯಕ್ತಿಯನ್ನೂ ಪ್ರವೇಶ ಮಾಡಲು ಈ ಅಧ್ಯಾಪಕ ಬಿಡುವುದಿಲ್ಲ. ಏಕೆಂದರೆ ಇದೊಂದು ಮುಚ್ಚಿದ ಕತ್ತಲೆ ವಲಯ. ಪ್ರಜ್ಞಾವಂತ ವ್ಯಕ್ತಿ ಈ ವಲಯ ಪ್ರವೇಶಿಸಿದರೆ ಅವನೊಡನೆ ಬೆಳಕೂ ಬರುವುದು. ಕತ್ತಲಲ್ಲಿ ಮಾತ್ರ ಸಾಧ್ಯವಾಗುವ ಸಂಬಂಧಗಳ ನಿರಂತರತೆಗಾಗಿ ಬೆಳಕಿನ ಪ್ರವೇಶವನ್ನು ಪ್ರತಿ ಬಂಧಿಸುವುದು ಅನಿವಾರ್ಯ. ಹಾಗಾಗಿ ಶಾಲೆಯ ಇತರೆ ಅಧ್ಯಾಪಕರಾಗಲಿ ಅಥವಾ ಆಡಳಿತ ಸಿಬ್ಬಂದಿಗಳಾಗಲಿ ಈ ಕತ್ತಲ ವಲಯಕ್ಕೆ ಪ್ರವೇಶಿಸಲಾರರು.

– (ಮುಂದುವರಿಯುವುದು)

ಪ್ರತಿಕ್ರಿಯಿಸಿ (+)