ಮಂಗಳವಾರ, ಡಿಸೆಂಬರ್ 10, 2019
24 °C

ಹೀಗಿರಲಿ ನಿಮ್ಮ ನಡುವಿನ ಮಾನಸಿಕ ಅಂತರ!

Published:
Updated:
ಹೀಗಿರಲಿ ನಿಮ್ಮ ನಡುವಿನ ಮಾನಸಿಕ ಅಂತರ!

ಸುನೀತಾ ಮಲ್ಲಿಕಾರ್ಜುನಸ್ವಾಮಿ

ಯಾವುದೇ ವ್ಯಕ್ತಿಯ ಬಾಲ್ಯವು ಅವನ ಜೀವನವನ್ನು ಪ್ರಭಾವಿಸುತ್ತದೆ. ಬಾಲ್ಯದಲ್ಲಿ ತಂದೆ-ತಾಯಿಯೊಂದಿಗೆ ಉಂಟಾಗುವ ಭಾವನಾತ್ಮಕ ಸಾಮೀಪ್ಯ ಪ್ರೌಢಜೀವನದಲ್ಲಿ ವ್ಯಕ್ತಿ ಬೆಳೆಸಿಕೊಳ್ಳುವ ಸಂಬಂಧಗಳನ್ನು ನಿರ್ಧರಿಸುತ್ತದೆ. ಪೋಷಕರ ದೈಹಿಕ ಮತ್ತು ಮಾನಸಿಕ ಸಾಮೀಪ್ಯದಲ್ಲಿ ಬೆಳೆದ ಮಕ್ಕಳು ಸ್ನೇಹಮಯಿಗಳು, ಆತ್ಮವಿಶ್ವಾಸವುಳ್ಳವರು, ಸಹಕಾರ ಮನೋಭಾವವುಳ್ಳವರು ಮತ್ತು ಸಾಮಾಜಿಕ ಜವಾಬ್ದಾರಿವುಳ್ಳವರಾಗಿ ಬೆಳೆಯುತ್ತಾರೆ ಎಂಬುದು ಸ್ಥಾಪಿತವಾಗಿದೆ.

ನಾವು ಇಂದಿನ ಒತ್ತಡದ ಬದುಕಿನಲ್ಲಿ ಮುಳುಗಿಹೋಗಿದ್ದೇವೆ. ವ್ಯಕ್ತಿಗತ ಐಷಾರಾಮಗಳ ಪ್ರಾಧಾನ್ಯ, ಬದಲಾಗುತ್ತಿರುವ ಮೌಲ್ಯಗಳು, ಕೌಟುಂಬಿಕ ವ್ಯವಸ್ಥೆಯಲ್ಲಿನ ಬದಲಾವಣೆ ನಮ್ಮನ್ನು ದುಡಿಮೆ ಅಥವಾ ಹಣವೇ ಜೀವನ ಅನ್ನಿಸುವಂತೆ ಮಾಡಿಬಿಟ್ಟಿವೆ. ಹಿಂದೆ ಅವಿಭಕ್ತ ಕುಟುಂಬಗಳಲ್ಲಿ ಮಕ್ಕಳ ಬದುಕು ಹಿರಿಯರು, ತಂದೆ-ತಾಯಿಗಳು ಮತ್ತು ಇತರೆ ವಾತ್ಸಲ್ಯಮಯ ಸಂಬಂಧಗಳಿಂದ ರೂಪಿತವಾಗುತ್ತಿತ್ತು ಮತ್ತು ಅವರಿಂದ ನಿಯಂತ್ರಿಸಲ್ಪಡುತ್ತಿತ್ತು. ತಂದೆ-ತಾಯಿಯರ ಪಾಲನೆಯಲ್ಲಿ ಯಾವುದೇ ವ್ಯತ್ಯಾಸಗಳಿದ್ದರೂ ಆ ಕೊರತೆಯನ್ನು ಮನೆಯಲ್ಲಿನ ಇತರರು ನೀಗಿಸುತ್ತಿದ್ದರು. ಈ ವ್ಯವಸ್ಥೆಯಲ್ಲಿ ದೋಷಗಳೇ ಇರಲಿಲ್ಲ ಎಂದಲ್ಲ, ಆದರೆ ಸಕಾರಾತ್ಮಕ ಅಂಶಗಳು ತುಂಬಾ ಇದ್ದವು. ಕೂಡು ಕುಟುಂಬದಲ್ಲಿದ್ದ ಆ ಸೌಲಭ್ಯ ಇಂದಿನ ನ್ಯೂಕ್ಲಿಯರ್ ಕುಟುಂಬ ವ್ಯವಸ್ಥೆಯಲ್ಲಿ ಸಾಧ್ಯವಾಗುತ್ತಿಲ್ಲ. ಇದು ಒಂದಾದರೆ, ‘ಒಂದೇ ಮಗು ಪೋಷಕರಿಬ್ಬರೂ ದುಡಿಯುವವರು’ ಮಾದರಿ ಇನ್ನೊಂದು. ಅಂದರೆ, ಒಂದೆಡೆ ಕುಟುಂಬದ ಇತರರಿಂದ ಮಗುವಿಗೆ ದೊರೆಯುತ್ತಿದ್ದ ರಕ್ಷಣೆ, ಶಿಕ್ಷಣ, ಬೆಂಬಲ ಇಂದು ಸಿಗುತ್ತಿಲ್ಲ ಮತ್ತು ಇನ್ನೊಂದೆಡೆ ಮಗುವಿನೊಂದಿಗೆ ಹೆಚ್ಚು ಹೊತ್ತು ಕಳೆಯುವ ಅವಕಾಶ ಪೋಷಕರಿಗೆ ದೊರೆಯುತ್ತಿಲ್ಲ. ಇದು ನವಯುಗದ ತಲ್ಲಣಗಳು. ಇವೇ ಪೋಷಕರು ಮತ್ತು ಮಕ್ಕಳ ನಡುವೆ ಮಾನಸಿಕ ಅಂತರವನ್ನು ಸೃಷ್ಟಿ ಮಾಡುತ್ತಿರುವ ಪ್ರಮುಖ ಕಾರಣಗಳು. ಆದರೆ, ಈ ಅಂತರವನ್ನು ಉಂಟಾಗಲಾಗಲಿ, ಹೆಚ್ಚಾಗಲಾಗಲಿ ಬಿಡಲು ಸಾಧ್ಯವಿಲ್ಲ! ಈ ಕೊರತೆಗಳನ್ನೂ ಪೋಷಕರೇ ನಿಭಾಯಿಸಬೇಕು. ಮಗುವಿನ ಪಾಲನೆ–ಪೋಷಣೆ ಮತ್ತು ಉತ್ತಮ ನಾಗರಿಕನನ್ನಾಗಿ ಮಾಡುವ ಕಾರ್ಯವು ತಂದೆ-ತಾಯಿಯರಿಗೆ ಹರ್ಷದಾಯಕವಾಗಿರುತ್ತದೆ ಎಂಬುದು ನಿಜವಾದರೂ ಸಮಯದ ಅಭಾವದಿಂದ ಯುಕ್ತ ಪಾಲನೆ ಸಾಧ್ಯವಾಗುತ್ತಿಲ್ಲ ಎಂಬುದು ವಾಸ್ತವದ ಸಂಗತಿ.

ಇಂದು ತಂದೆಯಂತೆ ತಾಯಿಯೂ ಹೊರಗೆ ದುಡಿಯುತ್ತಿರುವುದರಿಂದ ಇವರ ಪ್ರೀತಿ–ವಾತ್ಸಲ್ಯದಿಂದ ವಂಚಿತರಾದ ಮಕ್ಕಳು ದಾದಿಯರ ಆಶ್ರಯದಲ್ಲಿ, ಬೋರ್ಡಿಂಗ್ ಸ್ಕೂಲ್‍ಗಳಲ್ಲಿ, ಡೇಕೇರ್ ಸೆಂಟರ್‌ಗಳಲ್ಲಿ ಬೆಳೆಯುವಂತಾಗಿದೆ. ಎರಡೆರಡು ಮಕ್ಕಳಿರುವ ಮನೆಯಲ್ಲಿ ಇಬ್ಬರು ಮಕ್ಕಳನ್ನು ನಿಭಾಯಿಸುವುದು ಕಷ್ಟ, ಮನೆಯಲ್ಲಿದ್ದರೆ ಜಗಳವಾಡುತ್ತಾರೆ ಎಂಬ ಕಾರಣಕ್ಕೆ ಬೆಳಿಗ್ಗೆ ಮತ್ತು ಸಂಜೆ ಎರಡೂ ಹೊತ್ತಿನ ಟ್ಯೂಷನ್‍ಗೆ ಸೇರಿಸಿರುವ ಪಾಲಕರಿದ್ದಾರೆ. ವಿಪರ್ಯಾಸವೆಂದರೆ ಉದ್ಯೋಗಕ್ಕೆ ಹೋಗದಿರುವ ಗೃಹಿಣಿಯರಿರುವ ಮನೆಯಲ್ಲಿಯೂ ಮಕ್ಕಳನ್ನು ನಿಭಾಯಿಸುವುದು ಕಷ್ಟವೆಂದು ಕೇವಲ ಎರಡು ವರ್ಷದ ಮಕ್ಕಳನ್ನು ಡೇ–ಕೇರ್‌ಗೆ ಸೇರಿಸುತ್ತಿದ್ದಾರೆ. ಪ್ರತಿಷ್ಠಿತ ಶಾಲೆಗೂ ಟ್ಯೂಷನ್‍ಗೂ ಕಳುಹಿಸಿಕೊಟ್ಟು ಮಕ್ಕಳಿಗೆ ಬೇಕಾದ ವಸ್ತುಗಳನ್ನೆಲ್ಲಾ ಪೂರೈಸಿಬಿಟ್ಟರೆ ಸಾಕು ನಮ್ಮ ಕೆಲಸ ಮುಗಿಯಿತೆಂದು ಪಾಲಕರು ಭಾವಿಸುತ್ತಿದ್ದಾರೆ. ಮಕ್ಕಳ ಬದುಕಿನಲ್ಲಿ ತಂದೆ-ತಾಯಿಗಳ ಜಾಗವನ್ನು ಟಿ.ವಿ. ರಿಮೋಟ್ ಹಾಗೂ ಮೊಬೈಲ್‍ಗಳು ಆಕ್ರಮಿಸಿಬಿಟ್ಟಿವೆ.

ನಾವು ಪಟ್ಟ ಕಷ್ಟವನ್ನು ನಮ್ಮ ಮಕ್ಕಳು ಪಡಬಾರದೆಂದು, ನಾವು ದುಡಿದು ಸಂಪಾದಿಸುತ್ತಿರುವುದೆಲ್ಲಾ ನಮ್ಮ ಮಕ್ಕಳಿಗಾಗಿಯೇ ಎನ್ನುವ ಪೋಷಕರು, ಮಕ್ಕಳು ಕೇಳಿದ ವಸ್ತುಗಳನ್ನೆಲ್ಲ ಪೂರೈಸುವುದೇ ತಮ್ಮ ಜವಾಬ್ದಾರಿ ಎಂದು ನಂಬಿದ್ದಾರೆ. ಪೋಷಕರಲ್ಲಿನ ಈ ಭಾವ ಮಕ್ಕಳಲ್ಲಿ ತಂದೆ-ತಾಯಿಗಳಿರುವುದೇ ನಮ್ಮ ಬಯಕೆಗಳನ್ನು ಈಡೇರಿಸಲು ಎಂಬ ಅಭಿಪ್ರಾಯ ಮೂಡಿಸಿಬಿಟ್ಟಿದೆ. ಕೇವಲ ವಸ್ತುಗಳನ್ನು ಕೊಡಿಸುವುದರಿಂದಲೇ ಮಕ್ಕಳಿಗೆ ಮಾನಸಿಕವಾಗಿ ಹತ್ತಿರವಾಗಲು ಸಾಧ್ಯವಿಲ್ಲ ಎಂಬುದನ್ನು ಪೋಷಕರು ಅರಿಯಬೇಕಾಗಿದೆ.

ಮಕ್ಕಳನ್ನು ಬೆಳೆಸುವ ವಿಧಾನಕ್ಕೂ ಮಕ್ಕಳ ಮಾನಸಿಕ ತೊಂದರೆಗಳಿಗೂ ಸಂಬಂಧವಿದೆ. ಮನೋವಿಜ್ಞಾನಿಗಳು ಚಿಕಿತ್ಸಾಕ್ರಮದಲ್ಲಿ ವ್ಯಕ್ತಿಯ ಜೀವನಶೈಲಿಯನ್ನು ಅರ್ಥ ಮಾಡಿಕೊಳ್ಳಲು ಅವನ ಚಿಕ್ಕಂದಿನ ನೆನಪುಗಳನ್ನು ಬಳಸುತ್ತಾರೆ. ಸಾಮಾನ್ಯವಾಗಿ ಮಕ್ಕಳಲ್ಲಿ ಕಂಡುಬರುವ ವರ್ತನಾ ಸಮಸ್ಯೆಗಳು (ಅವಿಧೇಯತೆ, ಆಕ್ರಮಣಕಾರಿ ವರ್ತನೆ, ಸುಳ್ಳು ಹೇಳುವುದು, ಹಗೆತನ, ವಿನಾಶಕಾರಕ ವರ್ತನೆ, ಜಗಳಗಂಟತನ, ಹಟ), ಅತಿಯಾದ ಸಂವೇದನಾಶೀಲತೆ, ನಿದ್ರಾಭಂಗ, ಅಂತರ್ಮುಖಿ, ಆತಂಕ, ಭಯ, ಬಾಲಖಿನ್ನತೆ, ಅನಿಯಂತ್ರಿತ ಮೂತ್ರವಿಸರ್ಜನೆ, ಲೈಂಗಿಕ ಸಮಸ್ಯೆಗಳು, ಕೀಳರಿಮೆ, ಮನೆಬಿಟ್ಟು ಹೋಗುವುದು – ಇತ್ಯಾದಿ ಸಮಸ್ಯೆಗಳಿಗೆ ಪೋಷಕರು ಮತ್ತು ಮಕ್ಕಳ ನಡುವಿನ ಮಾನಸಿಕ ಮತ್ತು ದೈಹಿಕ ಸಾಮಿಪ್ಯದ ಕೊರತೆಯು ಸಹ ಒಂದು ಪ್ರಮುಖ ಕಾರಣವಾಗಿದೆ.

ಹಾರ್ಲೋ ಎಂಬ ಮನೋವಿಜ್ಞಾನಿ ಮರಿಕೋತಿಗಳನ್ನು ತಾಯಿಯ ದೈಹಿಕ ಸಾಮಿಪ್ಯದಿಂದ ಬೇರ್ಪಡಿಸಿದಾಗ ಅವುಗಳ ಸಾಮಾಜಿಕ ಬೆಳವಣಿಗೆಯಲ್ಲಿ ಏರುಪೇರಾಗುವುದನ್ನು ದಾಖಲಿಸಿದ.

ವೃತ್ತಿನಿರತ ಪೋಷಕರ ಮಕ್ಕಳು ಶಾಲೆ ಮುಗಿದ ನಂತರ ಮನೆಯಲ್ಲಿ ಒಂಟಿಯಾಗಿ ಉಳಿದುಬಿಡುವುದರಿಂದ ಟಿ.ವಿ. ಮತ್ತು ಮೊಬೈಲ್‍ ಅನ್ನು ಹೆಚ್ಚಾಗಿ ಅವಲಂಬಿಸುತ್ತಾರೆ. ಅವುಗಳಲ್ಲಿ ಬರುವ ಎಷ್ಟೋ ಪೂರ್ವಗ್ರಹಪೀಡಿತ ವಿಷಯಗಳನ್ನು ಮಕ್ಕಳು ವಿವೇಚನೆಯಿಲ್ಲದೆ ಒಪ್ಪಿಕೊಳ್ಳುತ್ತಾರೆ. ಜನನಪ್ರಕ್ರಿಯೆಯಂತೆ ಮಕ್ಕಳ ಪಾಲನೆಯು ಸ್ವಾಭಾವಿಕವಾಗಿ ರೂಢಿಗತವಾಗುತ್ತದೆ ಎಂಬುದು ಕೆಲವರ ಆಂಬೋಣ. ಆದರೆ ಅದು ಹಾಗಲ್ಲ. ಮಕ್ಕಳನ್ನು ಬೆಳೆಸುವುದೊಂದು ತಪಸ್ಸು. ಬೆಳೆಯುತ್ತಿರುವ ಮಕ್ಕಳ ಮೇಲೆ ತಂದೆ-ತಾಯಿಯರ ಸ್ವಭಾವ ನೇರವಾಗಿ ಪರಿಣಾಮ ಬೀರುತ್ತಿರುತ್ತದೆ.

ಇಂದಿನ ಅಂರ್ತಜಾಲವೂ ಸೇರಿದಂತೆ ಮಾಧ್ಯಮಗಳು, ಶಿಕ್ಷಣ, ಸಾಮಾನ್ಯವಾಗಿ ಜೀವನದ ಅನೇಕ ವಿಷಯಗಳನ್ನು ಮಕ್ಕಳಿಗೆ ತಿಳಿಸಿಕೊಟ್ಟಿರುತ್ತವೆ. ಪೋಷಕರು ಮಕ್ಕಳ ಮಾನಸಿಕ ಸಂಘರ್ಷಗಳನ್ನು ಅರ್ಥಮಾಡಿಕೊಳ್ಳುವಲ್ಲಿ ವಿಫಲರಾಗುತ್ತಿದ್ದಾರೆ.

ಮಕ್ಕಳನ್ನು ಬೆಳೆಸುವಲ್ಲಿ, ಅವರೊಂದಿಗೆ ಹೆಚ್ಚಿನ ಸಮಯ ಕಳೆಯುವಲ್ಲಿ ತಾಯಿಯೊಂದಿಗೆ ಸಮಾನ ಜವಾಬ್ದಾರಿ ತಂದೆಗೂ ಉಂಟು ಹಾಗೂ ಮಕ್ಕಳನ್ನು ಬೆಳೆಸುವ ಕ್ರಮದ ಕುರಿತಾಗಿ ತಂದೆ-ತಾಯಿಯರಲ್ಲಿ ಒಮ್ಮತವಿರಬೇಕು.

ವೃತ್ತಿನಿರತ ಪೋಷಕರು ಮಕ್ಕಳ ಜೊತೆ ಕಾಲ ಕಳೆಯಲು ಸಮಯದ ಅಭಾವದೊಂದಿಗೆ ಹಲವು ಸಮಸ್ಯೆಗಳಿರುವುದು ನಿಜ. ಆದರೆ, ತಂದೆ-ತಾಯಿಗಳ ಪ್ರೀತಿ, ವಾತ್ಸಲ್ಯ, ಪೋಷಣೆ ಈ ಎಲ್ಲ ಹಿತಕರ ಅನುಭವಗಳಿಂದ ಮಕ್ಕಳು ತಮ್ಮ ಮನಸ್ಸಿನಲ್ಲಿ ಅವರ ಬಗ್ಗೆ ತಮ್ಮದೇ ಆದ ಪರಿಕಲ್ಪನೆಯನ್ನು ಬೆಳೆಸಿಕೊಳ್ಳುತ್ತಾರೆ.

ಆದ್ದರಿಂದ ಕೊರತೆಗಳನ್ನು ನೀಗಲು ಹೀಗೆ ಮಾಡಿ:

* ಮಗುವಿಗೆ ತನ್ನ ತಂದೆ-ತಾಯಿಗಳಿಂದ ಅಪಾರ ರಕ್ಷಣೆಯಿದೆ ಎಂಬ ಭಾವ ಮೂಡಿಸಿ.

* ಮಕ್ಕಳಿಂದ ಪ್ರತಿದಿನದ ಅವರ ಶಾಲಾನುಭಗಳನ್ನು, ಅಲ್ಲಿ ನಡೆದ ಘಟನೆಗಳನ್ನು ಕೇಳಿ ತಿಳಿಯಿರಿ.

* ಮಕ್ಕಳಿಗೆ ಪ್ರತಿ ಹಂತದಲ್ಲೂ ಮನ್ನಣೆ ನೀಡಿ. ನೀವು ನೀಡುವ ಮನ್ನಣೆ ಮಗುವನ್ನು ಅಭಿಪ್ರೇರಣೆಗೊಳಿಸುತ್ತದೆ.

* ಮಕ್ಕಳು ಹೆಚ್ಚಿನ ಕಾಲ ಪೋಷಕರ ದೈಹಿಕ ಸಾಮೀಪ್ಯದಲ್ಲಿರಬೇಕು. ಅದಕ್ಕಾಗಿ ಪ್ರತಿದಿನ ಒಂದೆರಡು ಗಂಟೆಗಳನ್ನಾದರೂ ವಿನಿಯೋಗಿಸಿ.

* ಮಕ್ಕಳು ಏನ್ನನ್ನು ಅನುಕರಣೆ ಮಾಡುತ್ತಿದ್ದಾರೆ ಎಂಬುದನ್ನು ಗಮನಿಸುತ್ತಿರಿ. ಗೆಳೆಯರಂತೆ ಮಾರ್ಗದರ್ಶನ ಮಾಡಿರಿ.

* ಮಕ್ಕಳು ಆಟವಾಡುವಾಗ/ಹೋಂವರ್ಕ್ ಮಾಡುವಾಗ ಸಾಧ್ಯವಾದಷ್ಟು ಹಾಜರಿದ್ದು ವೀಕ್ಷಿಸಿ, ಭಾಗವಹಿಸಿ, ಆನಂದಿಸಿ.

* ಮಕ್ಕಳ ಅಸಹನೆಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ.

* ಮಕ್ಕಳ ಆತ್ಮಗೌರವ ಗುರುತಿಸಿ ಗೌರವಿಸಿ; ಅವರ ಮನೋಧೈರ್ಯವನ್ನು ಹೆಚ್ಚಿಸಿ.

* ಮಕ್ಕಳಿಗೆ ಪರಸ್ಪರ ವಿಚಾರ ವಿನಿಮಯ, ಚರ್ಚೆಗಳ ಮೂಲಕ ತಿಳಿವಳಿಕೆ ನೀಡಿ.

* ಮಗುವಿನ ಸ್ನೇಹಿತರು ಹಾಗೂ ಶಿಕ್ಷಕರ ಜೊತೆ ಸಂಪರ್ಕವಿರಲಿ.

* ಮಕ್ಕಳ ಶಾಲಾ ಚಟುವಟಿಕೆಗಳು ಮತ್ತು ಪೋಷಕರ ಸಭೆಗಳಲ್ಲಿ ಸಕ್ರಿಯವಾಗಿ ಭಾಗಿಯಾಗಿ.

* ಮಕ್ಕಳ ವೈಶಿಷ್ಟ್ಯಗಳನ್ನು ಗುರುತಿಸಿ ಮತ್ತು ಪ್ರೋತ್ಸಾಹಿಸಿ.

* ಮಕ್ಕಳ ಬೌದ್ಧಿಕಮಟ್ಟಕ್ಕೆ ಸರಿದೂಗುವ ಕಲಿಕೆಗಳಲ್ಲಿ ಭಾಗಿಯಾಗುವಂತೆ ಮಾಡಿ.

* ಒಳ್ಳೆಯ ಹವ್ಯಾಸಗಳನ್ನು ಬೆಳೆಸಿಕೊಳ್ಳಲು ಮಾರ್ಗದರ್ಶಕರಾಗಿ.

* ನೀವು ಓದಿರುವುದನ್ನು ವಿವರಿಸುವ ಮೂಲಕ ಮಕ್ಕಳಲ್ಲಿಯೂ ಓದುವ ಹವ್ಯಾಸವನ್ನು ಬೆಳೆಸಿ.

* ಮಗುವಿನ ಯಶಸ್ಸಿಗೆ ಅಡ್ಡಿಯಾಗುವ ದೌರ್ಬಲ್ಯಗಳನ್ನು ಗುರುತಿಸಲು, ಅವುಗಳನ್ನು ನಿವಾರಿಸಲು ಸಹಕರಿಸಿ.

* ಉಪಾಧ್ಯಾಯರೊಂದಿಗೆ ಚರ್ಚಿಸಿ ಮಕ್ಕಳಿಗೆ ಸೂಕ್ತ ಲೈಂಗಿಕಶಿಕ್ಷಣ ನೀಡಿ.

* ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಿ.

* ಆಧ್ಯಾತ್ಮಿಕ ತಳಹದಿಯ ಮೂಲಕ ಸರಿತಪ್ಪುಗಳ ಕಲ್ಪನೆ ಮೂಡಿಸಿ.

* ಚಿಕ್ಕ ಪುಟ್ಟ ಜವಾಬ್ದಾರಿಗಳನ್ನು ನೀಡುವ ಮೂಲಕ ಮಕ್ಕಳನ್ನು ಸ್ವಾವಲಂಬಿಗಳನ್ನಾಗಿ ಮಾಡಿ.

* ಹಣದ ಮೌಲ್ಯವನ್ನು ತಿಳಿಸಿ, ಹಣದ ವಿನಿಯೋಗದ ಬಗ್ಗೆ ಸಲಹೆ ನೀಡಿ.

* ದಿನೆ ದಿನೇ ಬೆಳೆಯುತ್ತಿರುವ ಮಕ್ಕಳಿಗೆ ನಿಮ್ಮ ಮಾತುಗಳು ಆಜ್ಞೆಗಳಿಂತಿರದೆ ಸಲಹೆ ಸೂಚನೆಗಳಂತಿರಲಿ.

* ಬೇಸಿಗೆ ರಜೆಯಲ್ಲಿ ಮಕ್ಕಳೊಂದಿಗೆ ಸಾಕಷ್ಟು ಸಮಯ ಕಳೆಯಲು ಪ್ರಯತ್ನಿಸಿ.

* ಮಕ್ಕಳು ಶಾಲೆಗೆ ಹೋಗಲು ಆರಂಭಿಸಿದಾಗ ಅವರ ಸಾಮಾಜಿಕ ಸಂಬಂಧಗಳು ವಿಸ್ತರಿಸುತ್ತವೆ. ಮಕ್ಕಳು ಶಾಲೆಯಿಂದ ಮನೆಗೆ ಕಾಲಿಟ್ಟ ತಕ್ಷಣ ಹುಡುಕುವುದು ತಂದೆ-ತಾಯಿಗಳನ್ನೇ, ಅವರ ಜೀವನದ ನಾಯಕ–ನಾಯಕಿಯರು ನೀವೇ ಎಂಬುದು ನೆನಪಿರಲಿ.

* ಮುಖ್ಯವಾಗಿ ನೀವು ನಿಮ್ಮ ವೃದ್ಧಾಪ್ಯದಲ್ಲಿ ಮಕ್ಕಳಿಂದ ಯಾವ ವರ್ತನೆ/ಗುಣಗಳನ್ನು ಬಯಸುವಿರೊ ಅದೇ ವರ್ತನೆ/ಗುಣಗಳಿಂದ ಈಗ ನೀವು ವ್ಯವಹರಿಸಿ.

ಪ್ರತಿಕ್ರಿಯಿಸಿ (+)