4

ಬಿಸಿಲಲ್ಲಿ ನೆರಳು ನೀಡುತ್ತಿವೆ ಮರಗಳು

Published:
Updated:

ಲಕ್ಷ್ಮೇಶ್ವರ: ವರ್ಷದಿಂದ ವರ್ಷಕ್ಕೆ ಬಿಸಿಲಿನ ಪ್ರಮಾಣ ಹೆಚ್ಚುತ್ತಲಿದ್ದು ಸೆಕೆಯ ತಾಪಕ್ಕೆ ಬಸವಳಿದ ಜನರು ವಿವಿಧ ರೋಗಗಳಿಂದ ನರಳುವ ಪರಿಸ್ಥಿತಿ ಬಂದೊದಗಿದೆ.

ಪ್ರತಿವರ್ಷ ಸಾಮಾಜಿಕ ಮತ್ತು ಪ್ರಾದೇಶಿಕ ಅರಣ್ಯ ಇಲಾಖೆಗಳು ಲಕ್ಷಾಂತರ ಸಸಿಗಳನ್ನು ಹಚ್ಚುತ್ತಿದ್ದು ಸಾಕಷ್ಟು ಅಡೆತಡೆಗಳನ್ನು ಎದುರಿಸಿ ನೆಟ್ಟ ಗಿಡಗಳು ಮರಗಳಾಗಿ ಬೆಳೆದರೆ ಅದು ಇಲಾಖೆಗಳ ಸಾರ್ಥಕ ಕೆಲಸವಾದಂತೆ. ಆದರೆ ಗಿಡ ಮರಗಳು ಬೆಳೆಯುತ್ತಲೇ ಜನರು ಅವುಗಳನ್ನು ಕಡಿಯಲು ಹಾತೊರೆಯುತ್ತಾರೆ.

ಕಾರಣ ಅರಣ್ಯ ನಾಶ ನಿರಂತರ ಸಾಗಿದ ಪರಿಣಾಮ ಇಂದು ಸಮಯಕ್ಕೆ ಸರಿಯಾಗಿ ಮಳೆ ಆಗದೆ ನಾವು ಇನ್ನಿಲ್ಲದ ತೊಂದರೆಗೆ ಸಿಲಿಕಿದ್ದೇವೆ. ಆದರೂ ಸಹ ಎರಡೂ ಅರಣ್ಯ ತಮ್ಮ ಪ್ರಯತ್ನವನ್ನು ಮಾತ್ರ ನಿಲ್ಲಿಸಿಲ್ಲ. ತಾಲ್ಲೂಕಿನಾದ್ಯಂತ ಕಳೆದ ಒಂದೂವರೆ ದಶಕಗಳ ಹಿಂದೆ ಹಚ್ಚಿದ್ದ ಸಸಿಗಳು ಗಿಡಗಳಾಗಿ ದೊಡ್ಡ ದೊಡ್ಡ ಮರಗಳಾಗಿ ಬೆಳೆದು ನಿಂತು ಜನರಿಗೆ ತಂಪಾದ ನೆರಳು ನೀಡುತ್ತಿದ್ದು ಇಲಾಖೆಯ ಕೆಲಸವನ್ನು ಸಾರ್ಥಕ ಮಾಡಿವೆ.

ಸಮೀಪದ ಲಕ್ಷ್ಮೇಶ್ವರ–ಗೊಜನೂರ ರಸ್ತೆ, ದೊಡ್ಡೂರು–ಲಕ್ಷ್ಮೇಶ್ವರ ಹಾಗೂ ಲಕ್ಷ್ಮೇಶ್ವರ–ಶಿಗ್ಲಿ ರಸ್ತೆಗಳು ಸೇರಿದಂತೆ ತಾಲ್ಲೂಕಿನಲ್ಲಿ ಅಲ್ಲಲ್ಲಿ ಗಿಡಗಳು ಬೆಳೆದು ನಿಂತಿವೆ. ಅದರಲ್ಲೂ ದೊಡ್ಡೂರು ಮತ್ತು ಗೊಜನೂರು ರಸ್ತೆಗಳ ಇಕ್ಕಲೆಗಳಲ್ಲಿನ ಸಾವಿರಾರು ಬೇವು, ಆಲ, ಅರಳೆ, ಹುಲಗಲ, ತಪಸಿ ಮರಗಳು ಇಪ್ಪತ್ತು ಅಡಿ ಎತ್ತರಕ್ಕೆ ಬೆಳೆದು ಸಾರ್ವಜನಿಕರಿಗೆ ನೆರಳು ನೀಡುವಲ್ಲಿ ತಮ್ಮ ಸೇವೆ ಸಲ್ಲಿಸುತ್ತಿವೆ.

ಅಲ್ಲದೆ ಈ ಭಾಗದಲ್ಲಿ ಮಳೆಗಾಲದಲ್ಲಿ ಸ್ವಲ್ಪ ಹೆಚ್ಚಿನ ಪ್ರಮಾಣದ ಮಳೆಯೂ ಬೀಳುವುದು ಸಾಬೀತಾಗಿದ್ದು ಬಿಸಿಲಿನ ತಾಪದಿಂದ ಪಾರಾಗಲು ಮಧ್ಯಾಹ್ನ ಜನರು ಈ ಮರಗಳ ನೆರಳನ್ನು ಆಶ್ರಯಿಸುತ್ತಿದ್ದಾರೆ.

‘ಶಿರಹಟ್ಟಿ ಮತ್ತು ಲಕ್ಷ್ಮೇಶ್ವರ ತಾಲ್ಲೂಕುಗಳ ರಸ್ತೆಗಳ ಎದುರು ಬದುರು ಇಂದು ಸಾವಿರಾರು ಮರಗಳು ಬೆಳೆದಿವೆ. ಅವು ಹಾಗೆಯೇ ಉಳಿಯಬೇಕಾದರೆ ಜನರ ಸಹಕಾರ ಬಹಳ ಮುಖ್ಯ. ಗಿಡಗಳನ್ನು ಹಚ್ಚಿ ಮೂರು ವರ್ಷಗಳವರೆಗೆ ಬೆಳೆಸುವುದು ಸಾಮಾಜಿಕ ಅರಣ್ಯ ಇಲಾಖೆ ಜವಾಬ್ದಾರಿ. ನಂತರ ಆ ಜವಾಬ್ದಾರಿ ಪ್ರಾದೇಶಿಕ ಅರಣ್ಯ ಇಲಾಖೆ ಒಳಪಡುತ್ತದೆ’ ಎಂದು ವಲಯ ಅರಣ್ಯಾಧಿಕಾರಿ (ಪ್ರಾದೇಶಿಕ) ವೀರೇಶ ಹೇಳುತ್ತಾರೆ.

‘ಸಣ್ಣ ಸಣ್ಣ ಸಸಿಗಳನ್ನು ಗಿಡಗಳನ್ನಾಗಿ ಬೆಳೆಸಿ ಅವುಗಳನ್ನು ರಸ್ತೆಯ ಎರಡೂ ಬದಿಯಲ್ಲಿ ಹಚ್ಚಿ ಬೆಳೆಸುವುದು ಬಲು ಕಷ್ಟದ ಕೆಲಸ. ಹಚ್ಚಿದ ಗಿಡಗಳನ್ನು ಜನರು ಹಾಳು ಮಾಡುತ್ತಾರೆ. ಅವರ ಸಹಕಾರ ಇದ್ದರೆ ಇನ್ನೂ ಹೆಚ್ಚಿನ ಗಿಡ ಮರಗಳನ್ನು ಬೆಳೆಸಲು ಸಾಧ್ಯ. ತಾಲ್ಲೂಕಿನ ಬಹಳಷ್ಟು ಕಡೆ ಈಗ ನಮ್ಮ ಇಲಾಖೆ ಬೆಳೆಸಿರುವ ಮರಗಳು ನೆರಳು ನೀಡುತ್ತಿರುವುದು ಸಂತೋಷದ ವಿಷಯ’ ಎಂದು ವಲಯ ಅರಣ್ಯಾಧಿಕಾರಿ (ಸಾಮಾಜಿಕ) ವಿನಾಯಕ ಹಣಗಿ ಹೇಳುತ್ತಾರೆ.

‘ನಮ್ಮೂರಿನ ರಸ್ತೆಗುಂಟ ಭಾಳಷ್ಟು ಗಿಡ ಬೆಳದಾವು. ಸುಡ ಸುಡ ಬಿಸಲಾಗ ನೆರಳಿಗೆ ಕುಂತರ ದೇಹ ತಂಪ ಅಕ್ಕೈತ್ರಿ’ ಎಂದು ದೊಡ್ಡೂರು ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ನಾನಪ್ಪ ಲಮಾಣಿ ಖುಷಿಯಿಂದ ಹೇಳುತ್ತಾರೆ.

**

ಈವತ್ತಿಂದ ನಾವು ಗಿಡ ಮರ ಕಡ್ಯದನ್ನು ಬಿಡಬೇಕು. ಅಂದ್ರ ಮಳಿ ಬೆಳಿ ಚಲೋ ಅಕ್ಕಾವು. ಇಲ್ಲಾಂದ್ರ ಮುಂದ ನಾವು ಭಾಳ ಕಷ್ಟಕ್ಕ ಈಡಾಗ್ತೇವಿ’ – ಬಸವರಾಜ ಬೆಂಡಿಗೇರಿ, ಸಾವಯವ ಕೃಷಿಕ.

**

ನಾಗರಾಜ ಎಸ್‌. ಹಣಗಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry