ಆಕರ್ಷಣೆಯಿಂದ ಹೊರಬರಲು ಸಲಹೆ

7
ಕ್ರೀಡಾ ಚಟುವಟಿಕೆ ಸಮಾರೋಪ ಸಮಾರಂಭದಲ್ಲಿ ಪ್ರಾಧ್ಯಾಪಕ ಶ್ರೀನಿವಾಸ್‌ ಅಭಿಮತ

ಆಕರ್ಷಣೆಯಿಂದ ಹೊರಬರಲು ಸಲಹೆ

Published:
Updated:

ಹಾಸನ: ವಿದ್ಯಾರ್ಥಿಗಳು ದೇವರಿಗೆ ಮುಡಿಸುವ ಹೂವಿನಂತಿರಬೇಕೇ ಹೊರತು ರಸ್ತೆಯಲ್ಲಿ ಜನರ ಕಾಲಿಗೆ ಸಿಲುಕುವ ಹೂವಾಗಬಾರದು ಎಂದು ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಸಹ ಪ್ರಾಧ್ಯಾಪಕ ಶ್ರೀನಿವಾಸ್ ಹೇಳಿದರು.

ನಗರದ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ (ಹೊಸದು) 2017–18ನೇ ಸಾಲಿನ ಸಾಂಸ್ಕೃತಿಕ ವೇದಿಕೆ, ರೆಡ್ ಕ್ರಾಸ್, ಸ್ಕೌಟ್ಸ್ ಮತ್ತು ಗೈಡ್ಸ್, ಎನ್.ಎಸ್.ಎಸ್. ಎನ್.ಸಿ.ಸಿ. ಮತ್ತು ಕ್ರೀಡಾ ಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ಹೆಣ್ಣು ಸಂಸ್ಕೃತಿಯ ಸಂಕೇತ. ರಾಮಾಯಣ-ಮಹಾಭಾರತ ನಡೆದಿದ್ದೆ ಹೆಣ್ಣಿನಿಂದ. ಹೆಣ್ಣು ಕಠೋರತೆ ಹಾಗೂ ಮೃದುತ್ವದ ಸಂಕೇತ. ಮಹಿಳೆ ದೇಶದ ರಕ್ಷಣಾ ವ್ಯವಸ್ಥೆಯಂತಹ ಸೂಕ್ಷ್ಮ ವ್ಯವಸ್ಥೆಯನ್ನೇ ನಿಭಾಯಿಸುತ್ತಿದ್ದಾಳೆ. ಮಹಿಳೆಗೆ ಗೌರವ ನೀಡುವುದನ್ನು ಮೊದಲು ಕಲಿಯಬೇಕು. ಇಂದಿನ ವಿದ್ಯಾರ್ಥಿಗಳು ಆಕರ್ಷಣೆಗೆ ಒಳಗಾಗುತ್ತಿದ್ದಾರೆ. ಅವುಗಳಿಂದ ಹೊರಬರಬೇಕು. ಇಲ್ಲವಾದಲ್ಲಿ ಜೀವನ ಸಂಕಷ್ಟಕ್ಕೆ ಸಿಲುಕುವುದು ಎಂದು ಹೇಳಿದರು.

ಸರ್ಕಾರಿ ಕಲಾ ಕಾಲೇಜಿನ ಪ್ರಾಂಶುಪಾಲ ಡಿ.ಜಿ. ಕೃಷ್ಣೇಗೌಡ ಮಾತನಾಡಿ, ಕಾಲೇಜುಗಳ ಶೈಕ್ಷಣಿಕ ಅಭಿವೃದ್ಧಿಗೆ ಪ್ರಾಂಶುಪಾಲರ ಪಾತ್ರ ಪ್ರಮುಖವಾಗಿರುತ್ತದೆ. ಯಾವುದೇ ವ್ಯವಸ್ಥೆ ಚೆನ್ನಾಗಿರಬೇಕು ಎಂದಾದರೆ ಒಳ್ಳೆಯ ಮನಸ್ಸುಗಳಿರಬೇಕು. ಸಕಾರಾತ್ಮಕ ಆಲೋಚನೆ ಮನುಷ್ಯನನ್ನು ಗಟ್ಟಿಗೊಳಿಸುತ್ತದೆ. ‘ನಾನು’ ಎನ್ನುವ ವಿಚಾರ ಬಂದರೆ ವ್ಯಕ್ತಿ ಕುಬ್ಜ ಆಗುತ್ತಾನೆ. ‘ನಾನು’ ಎಂಬ ಪದ ಮನುಷ್ಯನಿಂದ ದೂರವಾದರೆ ಮನಸ್ಸು ಪ್ರಶಾಂತವಾಗಿರುತ್ತದೆ ಎಂದು ಹೇಳಿದರು.

ಸಾಧ್ಯವಾದರೆ ಒಂದಿಷ್ಟು ಒಳ್ಳೆಯ ಕೆಲಸ ಮಾಡಬೇಕು. ಯಾರಿಗೂ ತೊಂದರೆಯಾಗದಂತೆ ಬದುಕಬೇಕು. ಬದುಕು ಮತ್ತು ಜೀವನಕ್ರಮದಲ್ಲಿ ತಮ್ಮ ಸಂತೋಷಕ್ಕೆ ಅನುಗುಣವಾಗಿ ಕ್ರಿಯೆಯಲ್ಲಿ ತೊಡಗಿಸಿಕೊಳ್ಳಬೇಕು. ಕಾಯಾ, ವಾಚಾ, ಮನಸಾ ಕೆಲಸ ಮಾಡುವ ಮೂಲಕ ಮನ್ನಣೆ ಪಡೆಯಬೇಕು ಎಂದು ತಿಳಿಸಿದರು.

ಪ್ರಾಂಶುಪಾಲರಾದ ಪ್ರೊ. ಎಚ್.ಆರ್. ಸುಲೋಚನಾ ಮಾತನಾಡಿ, ವಿದ್ಯಾರ್ಥಿಗಳು ವಿದ್ಯಾರ್ಜನೆಗೆ ಮಾತ್ರ ಗಮನಹರಿಸಬೇಕೆ ಹೊರತು ಯಾವುದೇ ಆಕರ್ಷಣೆಗಳಿಗಲ್ಲ. ವಿದ್ಯಾರ್ಥಿ ಜೀವನ ಎಂದರೆ ತಪಸ್ಸಿದ್ದಂತೆ. ವಿದ್ಯಾರ್ಥಿ ಗೌರವಾನ್ವಿತ ತಪಸ್ವಿ ಎಂಬ ಮಾತನ್ನು ವಿದ್ಯಾರ್ಥಿಗಳು ಅರ್ಥ ಮಾಡಿಕೊಂಡು ಉತ್ತಮ ಮಾರ್ಗದಲ್ಲಿ ಸಾಗಬೇಕು ಎಂದು ಸಲಹೆ ನೀಡಿದರು.

ಸಾಂಸ್ಕೃ ತಿಕ ವೇದಿಕೆ ವತಿಯಿಂದ ಆಯೋಜಿಸಲಾಗಿದ್ದ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ವಿದ್ಯಾರ್ಥಿನಿಯರು ಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶಿಸಿ ರಂಜಿಸಿದರು. ಅಧೀಕ್ಷಕ ಎಚ್.ಎಂ. ಕಿರಣ್, ಪ್ರಾಧ್ಯಾಪಕರು, ಉಪನ್ಯಾಸಕರು ಹಾಗೂ ಸಿಬ್ಬಂದಿ ಇದ್ದರು. ವಿದ್ಯಾರ್ಥಿನಿಯರಾದ ನಂದಿನಿ, ಜಲಜಾಕ್ಷಿ ನಿರೂಪಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry