ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿಗೆ ಕಾಯಕಲ್ಪ ನೀಡಿದ ಕ್ಷೇತ್ರ

ಸಕಲೇಶಪುರ: ಕರ್ಮಭೂಮಿಯಲ್ಲಿ ಎರಡು ಬಾರಿ ಗೆಲುವು ಸಾಧಿಸಿದ ಶಿವಪ್ಪ
Last Updated 15 ಏಪ್ರಿಲ್ 2018, 8:50 IST
ಅಕ್ಷರ ಗಾತ್ರ

ಹಾಸನ: ಮಲೆನಾಡಿಗೆ ಹೊಂದಿಕೊಂಡಿರುವ ಸಕಲೇಶಪುರ–ಆಲೂರು ವಿಧಾನಸಭಾ ಕ್ಷೇತ್ರ 1952 ರಿಂದಲೂ ಬೇಲೂರು ಕ್ಷೇತ್ರ ಭಾಗವಾಗಿತ್ತು. 1962ರಲ್ಲಿ ಕ್ಷೇತ್ರ ಪುನರ್ವಿಂಗಡಣೆ ಬಳಿಕ ಸಕಲೇಶಪುರ ಪ್ರತ್ಯೇಕ ಕ್ಷೇತ್ರವಾಯಿತು.

12 ಚುನಾವಣೆಯಲ್ಲಿ ಒಬ್ಬರೇ ಮಹಿಳೆ ಸ್ಪರ್ಧೆ ಮಾಡದಿರುವುದು ವಿಶೇಷ. 1962ರಿಂದ 2008ರಲ್ಲಿ ಕ್ಷೇತ್ರ ಪುನರ್ವಿಂಗಡಣೆ ಆಗುವವರೆಗೂ ಮೂರು ಬಾರಿ ಹೊರತುಪಡಿಸಿದರೆ ಉಳಿದೆಲ್ಲ ಅವಧಿಯಲ್ಲಿಯೂ ವೀರಶೈವ ಲಿಂಗಾಯತ ಸಮುದಾಯದವರೇ ಶಾಸಕರಾಗಿ ಆಯ್ಕೆಯಾಗಿದ್ದಾರೆ. 2008ರಿಂದ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರವಾಗಿದೆ.

ಎರಡು ಬಾರಿ ಬಿಜೆಪಿಯಿಂದ ಆಯ್ಕೆಯಾಗಿದ್ದ ಬಿ.ಬಿ.ಶಿವಪ್ಪ ಅವರ ಕರ್ಮಭೂಮಿಯೂ ಇದೇ ಕ್ಷೇತ್ರ. ಮೊದಲ ಗೆಲುವು ಕಾಣುವ ಮೊದಲು ರಾಜ್ಯದ ವಿವಿಧ ಕಡೆ ಐದು ಬಾರಿ ಸೋಲಬೇಕಾಯಿತು.

ಕಾಫಿ, ಏಲಕ್ಕಿ, ಕಾಳು ಮೆಣಸು ಬೆಳೆಗಾರರು ಸಕಲೇಶಪುರ–ಆಲೂರು ತಾಲ್ಲೂಕಿನ ವ್ಯಾಪ್ತಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಆರಂಭದಲ್ಲಿ ಬೆಳೆಗಾರರು ಮತ್ತು ಕೂಲಿ ಕಾರ್ಮಿಕರ ಮತಗಳೇ ಆರಂಭದಲ್ಲಿ ನಿರ್ಣಾಯಕವಾಗಿದ್ದವು. ಬೇರೆ ಉದ್ಯಮ ಬೆಳೆದಂತೆ ಇತರರೆ ವರ್ಗಗಳು ಫಲಿತಾಂಶ ನಿರ್ಧರಿಸುವ ಮಟ್ಟಿಗೆ ಶಕ್ತವಾದವು.

ನಾಲ್ಕು ಬಾರಿ ಬಿ.ಬಿ.ಶಿವಪ್ಪ ಸ್ಪರ್ಧಿಸಿ, ಎರಡು ಬಾರಿ ಗೆಲುವು ಸಾಧಿಸಿದರು. ಕ್ಷೇತ್ರ ಪುನರ್ವಿಂಗಡಣೆ ಬಳಿಕ ಸಕಲೇಶಪುರದಿಂದ ಸ್ಪರ್ಧಿಸಿದ ಜೆಡಿಎಸ್‌ನ ಎಚ್‌.ಕೆ.ಕುಮಾರಸ್ವಾಮಿ ಸತತ ಎರಡು ಬಾರಿ ಆಯ್ಕೆಯಾಗಿದ್ದಾರೆ. ಈವರೆಗೂ ಯಾರೂ ಹ್ಯಾಟ್ರಿಕ್‌ ಗೆಲುವು ಕಂಡಿಲ್ಲ.

1962ರಲ್ಲಿ ಕ್ಷೇತ್ರದಲ್ಲಿ ಪ್ರಥಮವಾಗಿ ಗೆಲುವಿನ ಖಾತೆ ತೆರೆದಿದ್ದು ಕೋಮಟಿಗ ಶೆಟ್ಟರ ಸಮುದಾಯಕ್ಕೆ ಸೇರಿದ ಕಾಂಗ್ರೆಸ್‌ನ ಎಸ್‌.ಎ.ವಾಸಣ್ಣಶೆಟ್ಟಿ. ಇವರ ಪ್ರತಿಸ್ಪರ್ಧಿ ಜೆಎಸ್‌ನ ಅಭ್ಯರ್ಥಿ ಎನ್‌.ಬಿ.ಶೆಟ್ಟಿ. ಎರಡನೇ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿ ಆಲೂರು ತಾಲ್ಲೂಕಿನ ಚಿಕ್ಕಕಣಗಾಲ್‌ನ ಕೆ.ಪಿ.ಚಿಕ್ಕೆಗೌಡರಿಗೆ ಮತದಾರರು ಮಣೆ ಹಾಕಿದರು.

ವೀರಶೈವ ಲಿಂಗಾಯತ ಸಮುದಾಯದ ಪ್ರಾಬಲ್ಯದ ಕ್ಷೇತ್ರದಲ್ಲಿ 2004ರವರೆಗೆ ಆಯ್ಕೆಯಾದ ಏಕೈಕ ಒಕ್ಕಲಿಗ ಸಮುದಾಯದ ಶಾಸಕ ಎನ್ನುವುದು ವಿಶೇಷ.

1983ರಲ್ಲಿ ಕಾಂಗ್ರೆಸ್ ಪಕ್ಷದ ವಿರುದ್ಧವಾದ ಜನಾಭಿಪ್ರಾಯವಿದ್ದರೂ ಕ್ಷೇತ್ರದ ಮತದಾರರು ಶಾಸಕ ಜೆ.ಡಿ.ಸೋಮಪ್ಪ ಅವರನ್ನೇ ಮತ್ತೊಂದು ಅವಧಿಗೆ ಆಯ್ಕೆ ಮಾಡಿದರು.

1985ರಲ್ಲಿ ಜನತಾ ಪಕ್ಷದಿಂದ ಕಾಫಿ ಬೆಳೆಗಾರ ಕುಟುಂಬದ ಬಿ.ಡಿ.ಬಸವರಾಜು ಆಯ್ಕೆಯಾದ ವರ್ಷವೇ ಜನತಾ ಪಾರ್ಟಿ ಬಹುಮತದೊಂದಿಗೆ ರಾಜ್ಯದ ಅಧಿಕಾರ ಗದ್ದುಗೆ ಹಿಡಿಯಿತು. ಪಕ್ಷದೊಳಗೆ ದೇವೇಗೌಡ ಮತ್ತು ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರ ನಡುವಿನ ಒಳಜಗಳ ತಾರಕಕ್ಕೇರಿದ ವೇಳೆಯೇ ಬಸವರಾಜು ಅವರಿಗೆ ಕೆಲವೇ ದಿನಗಳ ಸಚಿವ ಪಟ್ಟವೂ ದೊರೆಯಿತು. ಹೆಗಡೆ ಸಂಪುಟದಲ್ಲಿ ಶಿಕ್ಷಣ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿ ಮೂರು ದಿನ ಕಳೆಯುವಷ್ಟರಲ್ಲಿ ಸರ್ಕಾರ ಪತನಗೊಂಡಿತು.

ಎರಡು ನಾಯಕರ ನಡುವಿನ ಸಂಘರ್ಷದಲ್ಲಿ ಯಾರ ಬಣದಲ್ಲಿರಬೇಕು ಎನ್ನುವ ವಿಷಯಯಲ್ಲಿ ಬಸವರಾಜು ತೆಗೆದುಕೊಂಡ ತೀರ್ಮಾನ ತಪ್ಪಾಗಿ ಮುಂದೆ ರಾಜಕೀಯದಲ್ಲಿ ಪ್ರವರ್ಧಮಾನಕ್ಕೆ ಬರಲು ಆಗಲಿಲ್ಲ.

1989ರಲ್ಲಿ ಬಾಳ್ಳುಪೇಟೆಯವರೇ ಆದ ಕಾಫಿ ಬೆಳೆಗಾರ ಬಿ.ಆರ್‌.ಗುರುದೇವ್ ಎದುರು ಬಸವರಾಜು ಪರಭಾವಗೊಂಡರು. ಇದು ಅವರ ರಾಜಕೀಯ ಜೀವನ ಅಂತ್ಯಗೊಳಿಸಿತು.

ಸತತ ಸೋಲುಗಳನ್ನೇ ಕಂಡಿದ್ದ ಬಿ.ಬಿ.ಶಿವಪ್ಪ ಅವರು ಸಕಲೇಶಪುರದಿಂದ ಸ್ಪರ್ಧಿಸಲು ಆರಂಭಿಸಿದ ಮೇಲೆ ಗೆಲುವು ಕಂಡರು. ಬಿಜೆಪಿ ಪಕ್ಷಕ್ಕಾಗಿ ಸ್ವಂತ ಖರ್ಚಿನಲ್ಲಿ ಹಗಲಿರುಳು ಶ್ರಮಿಸಿದ್ದ ಅವರಿಗೆ ಕೊಡಗು ಹಾಗೂ ಬೆಂಗಳೂರು ಜಿಲ್ಲೆಗಳಲ್ಲಿ ಚುನಾವಣೆ ಎದುರಿಸಿದರೂ ವಿಧಾನಸಭೆ ಪ್ರವೇಶಿಸುವ ಕನಸು ನನಸಾಗಿರಲಿಲ್ಲ. 1994ರಲ್ಲಿ ಮೊದಲ ಬಾರಿಗೆ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದರು. ಕಾಂಗ್ರೆಸ್‌ನ ಜೆ.ಡಿ.ಸೋಮಪ್ಪ ಎರಡನೇ ಸ್ಥಾನಕ್ಕೆ ತೃಪ್ತಿ ಪಟ್ಟರು. 1999ರಲ್ಲಿ ಕಾಂಗ್ರೆಸ್‌ ಬಿ.ಆರ್.ಗುರುದೇವ್‌ ವಿರುದ್ಧ ಎರಡನೇ ಬಾರಿಗೆ ಶಿವಪ್ಪ ಜಯ ಸಾಧಿಸಿದರು.

ಸಾಮಾನ್ಯ ಕ್ಷೇತ್ರವಾಗಿ ಕಡೆಯ ಚುನಾವಣೆ 2004ರಲ್ಲಿ ನಡೆಯಿತು. ರೈತ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಎಚ್‌.ಎಂ.ವಿಶ್ವನಾಥ್‌ ಶಾಸಕನಾಗಿ ಆಯ್ಕೆಯಾದರು. ಬಿಜೆಪಿಯೊಳಗಿನ ಕಡೆಗಣನೆ, ಅಮಾನತಿನಿಂದ ಬೇಸತ್ತಿದ್ದ ಶಿವಪ್ಪ ಅವರು ಎಸ್‌.ಎಂ.ಕೃಷ್ಣ ಸಮ್ಮುಖದಲ್ಲಿ ಕಾಂಗ್ರೆಸ್‌ಗೆ ಸೇರ್ಪಡೆಯಾಗಿ ಆ ಪಕ್ಷದಿಂದಲೇ ಸ್ಪರ್ಧಿಸಿದ್ದರು. ಸತತ ಎರಡು ಜಯ ಸಾಧಿಸಿದ್ದ ಅವರು, ತಮ್ಮ ಜೀವನದ ಕಡೆ ಚುನಾವಣೆಯಲ್ಲಿ ಪರಾಭವಗೊಂಡರು.

ಕ್ಷೇತ್ರದಲ್ಲಿ ದಲಿತ ಮತದಾರರೇ ನಿರ್ಣಾಯಕರಾಗಿದ್ದರೂ, ಲಿಂಗಾಯತ ಮತ್ತು ಒಕ್ಕಲಿಗ ಸಮಾಜದ ಮತದಾರರು ಫಲಿತಾಂಶ ನಿರ್ಧರಿಸುವಷ್ಟು ಸಂಖ್ಯೆಯಲ್ಲಿದ್ದಾರೆ.

ಲಿಂಗಾಯತ ಪ್ರಾಬಲ್ಯದ ಕ್ಷೇತ್ರಕ್ಕೆ ಕಟ್ಟಾಯ ಹೋಬಳಿ ಸೇರ್ಪಡೆಯಾದ ನಂತರ ಒಕ್ಕಲಿಗರ ಮತಗಳು ನಿರ್ಣಾಯಕವಾಗಲಿವೆ. ಒಕ್ಕಲಿಗರು ಜೆಡಿಎಸ್‌ನ ಸಾಂಪ್ರದಾಯಿಕ ಮತಬ್ಯಾಂಕ್‌ ಆಗಿದ್ದರೂ ದಲಿತರು, ಲಿಂಗಾಯತರ ಮತಗಳನ್ನು ಸಾಕಷ್ಟು ಪ್ರಮಾಣದಲ್ಲಿ ದಕ್ಕಿಸಿಕೊಳ್ಳುವ ಮೂಲಕ ಪ್ರಾಬಲ್ಯ ಉಳಿಸಿಕೊಂಡಿತ್ತು.

ಮೀಸಲು ಕ್ಷೇತ್ರದಲ್ಲಿ ಅಧಿಪತ್ಯ

ಬೇಲೂರು ಮೀಸಲು ಕ್ಷೇತ್ರದಲ್ಲಿ ಮೂರು ಬಾರಿ ಆಯ್ಕೆಯಾಗುವ ಮೂಲಕ ದಲಿತ ಸಮುದಾಯದ ವರ್ಚಸ್ಸು ಗಳಿಸಿಕೊಂಡಿದ್ದ ಮಾಜಿ ಸಚಿವ ಎಚ್‌.ಕೆ.ಕುಮಾರಸ್ವಾಮಿ ಅವರು ಸಕಲೇಶಪುರ ಮೀಸಲು ಕ್ಷೇತ್ರಕ್ಕೆ ವಲಸೆ ಬಂದರು. 2008ರಲ್ಲಿ ಮಾಜಿ ಶಾಸಕ ಎಚ್‌.ಎಂ.ವಿಶ್ವನಾಥ್‌ ಅವರ ಬೆಂಬಲ ದೊರಕಿದ್ದರಿಂದ ಕುಮಾರಸ್ವಾಮಿ ಗೆಲುವಿಗೆ ಸಹಕಾರಿಯಾಯಿತು. ಬಿಜೆಪಿ ಅಭ್ಯರ್ಥಿ ನಿರ್ವಾಣಯ್ಯ ಎದುರು ಜಯ ಸಾಧಿಸಿದರು.

2013ರ ಚುನಾವಣೆ ವೇಳೆಗೆ ಕುಮಾರಸ್ವಾಮಿ ಕ್ಷೇತ್ರದಲ್ಲಿ ತಮ್ಮ ನೆಲೆ ಭದ್ರಪಡಿಸಿಕೊಂಡರು. 33069 ಮತಗಳ ಭಾರಿ ಅಂತರದ ಜಯ ದಾಖಲಿಸಿದರು. ಬೇಲೂರು ಕ್ಷೇತ್ರದಿಂದ ವಲಸೆ ಬಂದ ಮಾಜಿ ಶಾಸಕ ಡಿ.ಮಲ್ಲೇಶ್‌ ಇವರ ವಿರುದ್ಧ ಸೋತರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT