ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನಕ್ಸ್‌ಲೈಟ್’ ಹೇಳಿಕೆ; ಕಾನೂನು ಹೋರಾಟ: ನಟ ಚೇತನ್

Last Updated 15 ಏಪ್ರಿಲ್ 2018, 8:54 IST
ಅಕ್ಷರ ಗಾತ್ರ

ಕಲಬುರ್ಗಿ: ‘ಮಡಿಕೇರಿಯ ದಿಡ್ಡಳ್ಳಿ ಬುಡಕಟ್ಟು ಜನಾಂಗದವರ ಬಗ್ಗೆ ಹೋರಾಟ ಮಾಡಿದ್ದಕ್ಕೆ ಬಿಜೆಪಿ ಚಾರ್ಜ್‌ಶೀಟ್‌ನಲ್ಲಿ ನನ್ನ ಹೆಸರು ಪ್ರಕಟಿಸಿದೆ. ಇದರ ವಿರುದ್ಧ ಕಾನೂನು ಹೋರಾಟ ಮಾಡಲಾಗುವುದು’ ಎಂದು ಚಲನಚಿತ್ರ ನಟ ಚೇತನ್ ಹೇಳಿದರು.

‘ದಿಡ್ಡಳ್ಳಿಯಲ್ಲಿರುವ ಬುಡಕಟ್ಟು ಜನಾಂಗದವರು ನಕ್ಸಲೀಯರು ಎಂದು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಹೇಳಿಕೆ ನೀಡಿದ್ದಾರೆ. ಇದಕ್ಕೆ ಇಂಬು ನೀಡುವಂತೆ ಮಡಿಕೇರಿ ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್.ಸೀತಾರಾಂ ಅವರು ಬುಡಕಟ್ಟು ಜನರ ಹೋರಾಟವನ್ನು ಹತ್ತಿಕ್ಕುವ ಯತ್ನ ಮಾಡಿದ್ದಾರೆ. ನಾವು ಕೈಗೊಂಡ ಕಾಂಗ್ರೆಸ್ ವಿರುದ್ಧದ ಹೋರಾಟದಲ್ಲಿ ಬಿಜೆಪಿ ನಮ್ಮ ಜತೆ ಕೈಜೋಡಿಸಬೇಕಿತ್ತು. ಆದರೆ ಚಾರ್ಜ್‌ಶೀಟ್‌ನಲ್ಲಿ ನನ್ನ ಹೆಸರು ಉಲ್ಲೇಖಿಸಿರುವುದು ಖಂಡನೀಯ’ ಎಂದು ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ದೂರಿದರು.

ಅಭಿವೃದ್ಧಿ ಪರ ಮತ ಹಾಕಿ
‘ದಲಿತರು, ಕಾರ್ಮಿಕರು ಮತ್ತು ರೈತರ ಪರವಾಗಿ ಮಾತನಾಡುವವರು ಬಿಜೆಪಿ ಕಣ್ಣಲ್ಲಿ ಶತ್ರುಗಳು. ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಮೂರೂ ಪಕ್ಷಗಳು ಬಂಡವಾಳಶಾಹಿಗಳ, ಭೂಮಾಲೀಕರ ಪರ ಇವೆ. ದುಡ್ಡಿದ್ದವರಿಗೆ ಟಿಕೆಟ್ ಕೊಡುತ್ತಿವೆ. ಆದ್ದರಿಂದ ಈ ಚುನಾವಣೆಯಲ್ಲಿ ಅಭಿವೃದ್ಧಿ ಪರವಾಗಿರುವ ಅಭ್ಯರ್ಥಿಗೆ ಮತ ಹಾಕಬೇಕು’ ಎಂದು ಮನವಿ ಮಾಡಿದರು.

‘ಬುದ್ಧ, ಬಸವ, ಅಂಬೇಡ್ಕರ್ ವಿಚಾರಧಾರೆಗಳ ಮೂಲಕ ನಾನು ಸಾಮಾಜಿಕ ಹೋರಾಟದಲ್ಲಿ ತೊಡಗಿಸಿಕೊಂಡಿದ್ದೇನೆ. ಯಾವ ಪಕ್ಷವೂ ಒಳ್ಳೆಯದು, ಕೆಟ್ಟದ್ದು ಎಂದು ಹೇಳುವುದಿಲ್ಲ. ಸಾಮಾಜಿಕ ಕಳಕಳಿ ಇರುವ ಪಕ್ಷ ಮತ್ತು ಕೆಲಸ ಮಾಡಿದವರಿಗೆ ಮತ ಹಾಕಿ ಎಂದು ಕೇಳಿಕೊಳ್ಳುತ್ತೇನೆ’ ಎಂದು ಪುನರುಚ್ಚರಿಸಿದರು.

‘ಪ್ರತ್ಯೇಕ ಲಿಂಗಾಯತ ಧರ್ಮ ಮಾನ್ಯತೆಗೆ ರಾಜ್ಯ ಕಾಂಗ್ರೆಸ್ ಸರ್ಕಾರ ಕೇಂದ್ರಕ್ಕೆ ಶಿಫಾರಸು ಮಾಡಿರುವುದು ಸ್ವಾಗತಾರ್ಹ. ಕೇಂದ್ರ ಸರ್ಕಾರ ಕೂಡಲೇ ಇದನ್ನು ಪರಾಮರ್ಶಿಸಿ ಮಾನ್ಯತೆ ಕೊಡಬೇಕು. ರಾಜ್ಯ ಸರ್ಕಾರ ಕೂಡ ಕೇಂದ್ರದ ಮೇಲೆ ಒತ್ತಡ ಹೇರಬೇಕು. ಲಿಂಗಾಯತ ಧರ್ಮ ಮಾನ್ಯತೆಗೆ ಸಂಬಂಧಿಸಿದಂತೆ ತಜ್ಞರ ವರದಿ ತರಿಸಿಕೊಳ್ಳುವಲ್ಲಿ ಕಾಂಗ್ರೆಸ್ ರಾಜಕೀಯ ನಡೆ ಅನುಸರಿಸಿದ್ದು, ಇದು ಸರಿಯಾದ ಬೆಳವಣಿಗೆಯಲ್ಲ’ ಎಂದು ತಿಳಿಸಿದರು.

‘ಮುಂಬರುವ ದಿನಗಳಲ್ಲಿ ದೇವದಾಸಿ ಪದ್ಧತಿ, ಚಿಂಚೋಳಿಯಲ್ಲಿನ ಮಕ್ಕಳ ಮಾರಾಟ ಸೇರಿ ಅನೇಕ ಸಾಮಾಜಿಕ ಸಮಸ್ಯೆಗಳ ಬಗ್ಗೆ ರಾಜ್ಯದಾದ್ಯಂತ ಹೋರಾಟ ರೂಪಿಸುವ ಗುರಿ ಇದೆ. ದೇವನೂರು ಮಹಾದೇವ, ಎಸ್.ಆರ್.ಹಿರೇಮಠ ಅವರ ನಿಲುವನ್ನು ಸ್ವಾಗತಿಸುತ್ತೇನೆ. ಆದರೆ ಯಾವುದೇ ಕಾರಣಕ್ಕೂ ಮಹಾಮೈತ್ರಿಗೆ ಬೆಂಬಲ ನೀಡುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT