4
ಎರಡು ಬಾರಿ ಮಹಿಳೆಯನ್ನು ಗೆಲ್ಲಿಸಿದ ರಾಣೆಬೆನ್ನೂರು ಕ್ಷೇತ್ರದ ಮತದಾರರು

10ನೇ ಬಾರಿ ಕಣಕ್ಕಿಳಿಯಲಿರುವ ಕೋಳಿವಾಡ

Published:
Updated:
10ನೇ ಬಾರಿ ಕಣಕ್ಕಿಳಿಯಲಿರುವ ಕೋಳಿವಾಡ

ಹಾವೇರಿ: ಸದ್ಯ ಜಿಲ್ಲೆಯಲ್ಲಿ ಸಕ್ರಿಯ ರಾಜಕಾರಣದಲ್ಲಿರುವ ಮುಖಂಡರ ಪೈಕಿ, ವಿಧಾನಸಭೆಗೆ ಮೊದಲು ಪ್ರವೇಶಿಸಿದವರು ವಿಧಾನ ಸಭಾಧ್ಯಕ್ಷ ಕೆ.ಬಿ. ಕೋಳಿವಾಡರು. ಅವರು, 1972ರಲ್ಲಿ (46 ವರ್ಷಗಳ ಹಿಂದೆ) ಕಾಂಗ್ರೆಸ್‌ನಿಂದ ಆಯ್ಕೆಯಾಗಿದ್ದರು.ಅಂದಿನಿಂದ ಇಂದಿನ ತನಕ ಒಟ್ಟು ಐದು ಬಾರಿ ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ. ಹೀಗಾಗಿ, ತುಂಗಭದ್ರಾ ತೀರದಲ್ಲಿರುವ ಜಿಲ್ಲೆಯ ವಾಣಿಜ್ಯ ನಗರಿ ರಾಣೆಬೆನ್ನೂರು ವಿಧಾನ ಸಭಾ ಕ್ಷೇತ್ರದಲ್ಲಿ ಸುಮಾರು ಅರ್ಧ ಶತಮಾನದಿಂದ ‘ಕೋಳಿವಾಡ ಪರ–ವಿರೋಧ ರಾಜಕಾರಣ’ವೇ ಸದ್ದು ಮಾಡುತ್ತಿದೆ.

ವಿಧಾನ ಸಭೆಗೆ ಸತತ ಎರಡು ಬಾರಿ ಮಹಿಳೆಯನ್ನು ಗೆಲ್ಲಿಸಿ ಕಳುಹಿಸಿದ ಗೌರವವು ಈ ಕ್ಷೇತ್ರದ ಮತದಾರರಿಗೆ ಸಲ್ಲಬೇಕು. 1957ರಲ್ಲಿ ರಾಣೆಬೆನ್ನೂರು ದ್ವಿ ಸದಸ್ಯ ಕ್ಷೇತ್ರವಾಗಿತ್ತು. ಆಗ, ಕೆ.ಎಫ್. ಪಾಟೀಲ್ ಮತ್ತು ಯಲ್ಲವ್ವ ಸಾಂಬ್ರಾಣಿ (ಪ.ಜಾತಿ) ಅವರನ್ನು ಜನತೆ ಆರಿಸಿದ್ದರು. 1962ರಲ್ಲಿ ಕ್ಷೇತ್ರವು ಪರಿಶಿಷ್ಟ ಜಾತಿಗೆ ಮೀಸಲಾಗಿದ್ದು, ಮತ್ತೆ ಯಲ್ಲವ್ವ ಸಾಂಬ್ರಾಣಿ ಅವರನ್ನು ಗೆಲ್ಲಿಸಿದ್ದರು.

ಕ್ಷೇತ್ರವು 13 ಚುನಾವಣೆಗಳನ್ನು ಕಂಡಿದ್ದು, 14 ಮಂದಿ (ಒಂದು ಬಾರಿ ದ್ವಿಸದಸ್ಯ ಕ್ಷೇತ್ರ) ಪ್ರತಿನಿಧಿಸಿದ್ದಾರೆ. ಈ ಪೈಕಿ ಐದು ಬಾರಿ ಕೆ.ಬಿ. ಕೋಳಿವಾಡರೇ ಗೆಲುವು ಸಾಧಿಸಿದ್ದಾರೆ. ಒಟ್ಟಾರೆಯಾಗಿ ಜನತೆ 9 ಬಾರಿ ಕಾಂಗ್ರೆಸ್‌ಗೆ ಆಶೀರ್ವದಿಸಿದ್ದರೆ, 2004ರಲ್ಲಿ ಜಿ. ಶಿವಣ್ಣ ಅವರು ಮೊದಲ ಬಾರಿಗೆ ಬಿಜೆಪಿ ಖಾತೆ ತೆರೆದಿದ್ದರು.

ಅದೂ, ಸೇರಿದಂತೆ  2 ಬಾರಿ ಬಿಜೆಪಿ ಗೆಲುವಿನ ನಗೆ ಬೀರಿತ್ತು. ಇಲ್ಲಿನ ಚುನಾವಣೆಗಳಲ್ಲಿ ಹೆಚ್ಚಾಗಿ ಪಕ್ಷೇತರರೇ ಅಬ್ಬರಿಸಿದ್ದಾರೆ. ಆದರೆ, ಗೆಲುವಿನ ದಡ ತಲುಪಲು ಈ ತನಕ ಸಾಧ್ಯವಾಗಿಲ್ಲ. ಉಳಿದಂತೆ ಪಿ.ಎಸ್.ಪಿ, ಜೆ.ಎನ್‌.ಪಿ ಹಾಗೂ ಜನತಾ ಪಕ್ಷಗಳು ಒಂದೊಂದು ಬಾರಿ ಖಾತೆ ತೆರೆದಿವೆ. ತಮ್ಮ ಮೊದಲ ಚುನಾವಣೆಯಲ್ಲೇ (1972) ಶೇ 61 ಮತ ಪಡೆದಿದ್ದ ಕೆ.ಬಿ. ಕೋಳಿವಾಡ ಅವರಿಗೆ ಕಾಂಗ್ರೆಸ್ ಆಂತರಿಕ ಬೆಳವಣಿಗೆಯು 1978 ಮತ್ತು 1983ರಲ್ಲಿ ಹಿನ್ನಡೆ ಉಂಟು ಮಾಡಿತ್ತು.

ಸಾಂಪ್ರದಾಯಿಕ ಚುನಾವಣಾ ರಾಜಕೀಯಕ್ಕೆ ಒಗ್ಗಿಕೊಂಡಿದ್ದ ರಾಣೆಬೆನ್ನೂರು ಕ್ಷೇತ್ರದಲ್ಲಿ ಪ್ರಚಾರದ ಭರಾಟೆಯು 2013ರಲ್ಲಿ ಹೊಸ ಸ್ವರೂಪ ಪಡೆದುಕೊಂಡಿತು. ಆರ್. ಶಂಕರ್‌ ಸ್ಪರ್ಧೆ ಹಾಗೂ ಕೆಜೆಪಿ– ಬಿಜೆಪಿ ಇಬ್ಭಾಗವೇ ಇದಕ್ಕೆ ಕಾರಣ ಎಂದು ಜನತೆ ವಿಶ್ಲೇಷಿಸುತ್ತಾರೆ.

ಈ ಬಾರಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರ ಪುತ್ರ ಬಿ.ವೈ. ರಾಘವೇಂದ್ರ ಇಲ್ಲವೇ, ಶಾಸಕ ಬಸವರಾಜ ಬೊಮ್ಮಾಯಿ ಸ್ಪರ್ಧಿಸುತ್ತಾರೆ ಎಂಬ ಸುದ್ದಿ ಹಬ್ಬಿತ್ತು. ಈ ನಡುವೆಯೇ ಕೆ.ಬಿ. ಕೋಳಿವಾಡ ಅವರ ಪುತ್ರ ಕೆ.ಪಿ.ಸಿ.ಸಿ. ಪ್ರಧಾನ ಕಾರ್ಯದರ್ಶಿ ಪ್ರಕಾಶ ಕೋಳಿವಾಡ ಕಣಕ್ಕಿಳಿಯುತ್ತಾರೆ ಎನ್ನಲಾಗಿತ್ತು. ಇಂತಹ ಚರ್ಚೆಗಳಿಗೆ ಈಗ ತೆರೆ ಬಿದ್ದಿದೆ.

ಈ ಬಾರಿ: ಕಾಂಗ್ರೆಸ್‌ನಿಂದ ಕೆ.ಬಿ. ಕೋಳಿವಾಡ ಕಣಕ್ಕಿಳಿಯುವುದು ದೃಢವಾಗಿದೆ. ಹತ್ತನೇ ಬಾರಿ ತಮ್ಮ ಅದೃಷ್ಟ ಪರೀಕ್ಷಿಸಲು ಸಿದ್ಧರಾಗಿದ್ದಾರೆ. ಇತ್ತ ಕೆಪಿಜೆಪಿಯಿಂದ ಸ್ಪರ್ಧಿಸಲು ಆರ್. ಶಂಕರ್ ಸಿದ್ಧತೆ ಮಾಡಿಕೊಂಡಿದ್ದಾರೆ. ಬಿಜೆಪಿಯಲ್ಲಿ 16ಕ್ಕೂ ಹೆಚ್ಚು ಆಕಾಂಕ್ಷಿಗಳಿದ್ದು, ಅಂತಿಮ ಹೆಸರು ಹೊರಬಿದ್ದಿಲ್ಲ.

1972ರ ಬಳಿಕ ಜನಿಸಿದ ಹಲವು ಯುವ ನಾಯಕರೂ ಅವರ ವಿರುದ್ಧ ಸ್ಪರ್ಧಿಸಲು ಸಿದ್ಧತೆ ನಡೆಸುತ್ತಿರುವುದು ಕ್ಷೇತ್ರದ ವಿಶೇಷವಾಗಿದೆ.

‘ಹಣ ಮುಖ್ಯವಲ್ಲ ಎಂದು ತೋರಿಸಿದರು’

2013ರಲ್ಲಿ ಕ್ಷೇತ್ರದ ಜನತೆ ಆಶೀರ್ವದಿಸಿದ್ದರು. ಆದರೆ, ಹೊರಗಿನಿಂದ ಬಂದ ವ್ಯಕ್ತಿಯೊಬ್ಬ ಅನಗತ್ಯ ಒತ್ತಡ ಸೃಷ್ಟಿಸಿದ್ದನು. ಆದರೆ, ಜನತೆ ನಮ್ಮ ಕೈ ಹಿಡಿದರು. ಹಣದಿಂದ ಚುನಾವಣೆ ಗೆಲ್ಲಲು ಸಾಧ್ಯವಿಲ್ಲ ಎಂದು ತೋರಿಸಿಕೊಟ್ಟರು. ಐದು ವರ್ಷದಲ್ಲಿ ಸಾಕಷ್ಟು ಕೆಲಸ ಆಗಿವೆ. ಮೂಲಸೌಕರ್ಯ, ನೀರಾವರಿ ಮತ್ತಿತರ ವಿಷಯಗಳಿಗೆ ಆದ್ಯತೆನೀಡಿದ್ದೇವೆ. ಜನಸಂಖ್ಯೆ ಹೆಚ್ಚಿದಂತೆ ಬೇಡಿಕೆಯೂ ಹೆಚ್ಚಾಗುತ್ತಿದೆ. ಪ್ರತಿ ಅವಧಿಯಲ್ಲೂ ಜನರ ಬೇಡಿಕೆಗೆ ತಕ್ಕಂತೆ ಅಭಿವೃದ್ಧಿ ಕಾರ್ಯ ಮಾಡಬೇಕಾಗುತ್ತದೆ. ಅದಕ್ಕಾಗಿ ಜನತೆಯ ಆಶೀರ್ವಾದ ಬಹುಮುಖ್ಯ –  ಕೆ.ಬಿ. ಕೋಳಿವಾಡ,ವಿಧಾನ ಸಭಾಧ್ಯಕ್ಷ.

2013ರಲ್ಲಿ ನನಗೆ ಆಟೊ ರಿಕ್ಷಾ ಚಿಹ್ನೆ ಸಿಕ್ಕಿರಲಿಲ್ಲ. ಅಲ್ಲದೇ, ಕೊನೆ ಕ್ಷಣದಲ್ಲಿ ಕೆಜೆಪಿ ಮತ್ತು ಬಿಜೆಪಿ ಮುಖಂಡರು ಕೋಳಿವಾಡರ ಜೊತೆ ಅಪವಿತ್ರ ಮೈತ್ರಿ ಮಾಡಿಕೊಂಡಿದ್ದರು. ಇದು ನನ್ನ ಸೋಲಿಗೆ ಕಾರಣವಾಗಿತ್ತು. ಮರಳು ಅಕ್ರಮ, ಕುಡಿಯುವ ನೀರಿನ ಅವ್ಯವಸ್ಥೆ, ಅಭಿವೃದ್ಧಿ ಹಿನ್ನಡೆಯ ಕಾರಣ ಈಗ ಜನತೆ ಶಪಿಸುತ್ತಿದ್ದಾರೆ. ಇವರ ಕುಟುಂಬಕ್ಕೆ ಅಧಿಕಾರ ಬೇಕು. ಅಭಿವೃದ್ಧಿ ಬೇಕಾಗಿಲ್ಲ. ಆದರೆ, ನಾನು ಕ್ಷೇತ್ರಕ್ಕೆ ಬಂದ ಬಳಿಕ ಜನರ ಮತಕ್ಕೆ ಮೌಲ್ಯ ಬಂದಿದೆ. ನಾನು ಸೋತರೆ ಕ್ಷೇತ್ರ ಬಿಟ್ಟು ಹೋಗುತ್ತೇನೆ ಎಂದು ದೂರಿದರು. ಆದರೆ, ಗೆದ್ದ ಬಳಿಕ ಅವರೇ ಜನರಿಗೆ ದೂರವಾದರು. ನಾನು ಮಾತ್ರ ಕ್ಷೇತ್ರದಲ್ಲಿಯೇ ನೆಲೆ ನಿಂತು, ಮನೆ ಮಾಡಿದ್ದೇನೆ‌ – ಆರ್. ಶಂಕರ್, ಕೆಪಿಜೆಪಿ ಅಭ್ಯರ್ಥಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry