ಗುರುವಾರ , ಆಗಸ್ಟ್ 13, 2020
21 °C
ವಿಶ್ವ ಬ್ಯಾಡ್ಮಿಂಟನ್ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನಕ್ಕೇರಿದ ಶ್ರೀಕಾಂತ್

ಛಲಗಾರನ ಜಗ ಮೆಚ್ಚುವ ಸಾಧನೆ

ಕೆ.ಓಂಕಾರ ಮೂರ್ತಿ Updated:

ಅಕ್ಷರ ಗಾತ್ರ : | |

ಛಲಗಾರನ ಜಗ ಮೆಚ್ಚುವ ಸಾಧನೆ

ಕೆಲವು ದಿನಗಳ ಹಿಂದಿನ ಮಾತು. ಚೀನಾ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಗೆ ತಾಲೀಮು ನಡೆಸುತ್ತಿದ್ದ ಕೆ.ಶ್ರೀಕಾಂತ್‌ ಅವರು ಹೈದರಾಬಾದ್‌ನ ಗೋಪಿಚಂದ್‌ ಬ್ಯಾಡ್ಮಿಂಟನ್‌ ಅಕಾಡೆಮಿಯ ಶೌಚಾಲಯದಲ್ಲಿ ಪ್ರಜ್ಞೆ ತಪ್ಪಿ ಬಿದ್ದಿದ್ದರು. ಆಸ್ಪತ್ರೆಗೆ ದಾಖಲಿಸಿದ ಪೋಷಕರಿಗೆ ಮತ್ತೊಂದು ಆಘಾತ ಕಾದಿತ್ತು. ಮಿದುಳು ಜ್ವರದಿಂದ ಪುತ್ರ ಬಳಲುತ್ತಿರುವ ವಿಚಾರ ಗೊತ್ತಾಯಿತು. ಕೃತಕ ಉಸಿರಾಟದ ವ್ಯವಸ್ಥೆ ಮಾಡಿ ವೈದ್ಯರು ಚಿಕಿತ್ಸೆ ನೀಡಿದ್ದರು. ಪುತ್ರನ ಕ್ರೀಡಾ ಜೀವನದ ಬಗ್ಗೆ ಅಪಾರ ಭರವಸೆ ಇಟ್ಟುಕೊಂಡಿದ್ದ ಕೆ.ವಿ.ಎಸ್‌.ಕೃಷ್ಣ ಹಾಗೂ ರಾಧಾ ದಂಪತಿ ತುಂಬಾ ನಿರಾಸೆಗೆ ಒಳಗಾಗಿದ್ದರು.

ಅದಾಗಿ ಕೆಲವೇ ತಿಂಗಳಲ್ಲಿ ಶ್ರೀಕಾಂತ್‌ ಅವರು ಒಲಿಂಪಿಕ್ಸ್‌ ಚಾಂಪಿಯನ್‌ ಚೀನಾದ ಲಿನ್‌ ಡಾನ್‌ಗೆ ಆಘಾತ ನೀಡಿ ವಿಶ್ವ ಬ್ಯಾಡ್ಮಿಂಟನ್‌ನಲ್ಲಿ ಸಂಚಲನ ಉಂಟು ಮಾಡಿದರು. ಅಷ್ಟೇ ಅಲ್ಲ; ಬ್ಯಾಡ್ಮಿಂಟನ್‌ ಭದ್ರಕೋಟೆ ಎನಿಸಿರುವ ಚೀನಾದ ನೆಲದಲ್ಲೇ ವಿಜಯ ವೇದಿಕೆ ಮೇಲೆ ನಿಂತು ಚಿನ್ನದ ಪದಕಕ್ಕೆ ಮುತ್ತಿಟ್ಟರು. ಪುತ್ರನ ಸಾಧನೆ ಕಂಡು ಪೋಷಕರು ಭಾವುಕರಾಗಿದ್ದರು.

ಆಂಧ್ರಪ್ರದೇಶದ ಗುಂಟೂರಿನ ಕಿದಂಬಿ ಶ್ರೀಕಾಂತ್‌ ಹಾಗೂ ಅವರ ಸಹೋದರ ಕಿದಂಬಿ ನಂದಕಿಶೋರ್‌ಗೆ ಎಳವೆಯಿಂದಲೇ ಬ್ಯಾಡ್ಮಿಂಟನ್‌ ಕ್ರೀಡೆ ಮೇಲೆ ವಿಶೇಷ ಪ್ರೀತಿ. ಗೋಪಿಚಂದ್‌ ಬ್ಯಾಡ್ಮಿಂಟನ್‌ ಅಕಾಡೆಮಿಗೆ ತರಬೇತಿ ಪಡೆಯಲು ಸಹೋದರರಲ್ಲೇ ಪೈಪೋಟಿ ಏರ್ಪಟ್ಟಿತ್ತು. ಮೊದಲು ಅವಕಾಶ ಲಭಿಸಿದ್ದು ಅಣ್ಣ ನಂದಕಿಶೋರ್‌ಗೆ. ಅಪೂರ್ವ ಅವಕಾಶ ಪಡೆಯಲು ವಿಫಲವಾಗಿದ್ದಕ್ಕೆ ಶ್ರೀಕಾಂತ್‌ ಬೇಸರಗೊಂಡಿದ್ದರು. ಸ್ಥಾನ ಪಡೆಯಲೇಬೇಕೆಂಬ ಛಲ ಶ್ರೀಕಾಂತ್‌ ಬದುಕಿಗೆ ದೊಡ್ಡ ತಿರುವು ನೀಡಿತು. ಅಕಾಡೆಮಿಯಲ್ಲಿ ಸ್ಥಾನ ಗಿಟ್ಟಿಸಿದ್ದು ಮಾತ್ರವಲ್ಲ; ಅವರೀಗ ವಿಶ್ವ ಬ್ಯಾಡ್ಮಿಂಟನ್‌ ಕ್ಷೇತ್ರದಲ್ಲಿ ದೊಡ್ಡ ಹೆಸರು ಮಾಡಿದ್ದಾರೆ. ವಿಶ್ವ ಬ್ಯಾಡ್ಮಿಂಟನ್‌ ಫೆಡರೇಷನ್‌ ಪ್ರಕಟಿಸಿರುವ ನೂತನ ರ‍್ಯಾಂಕಿಂಗ್‌ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ್ದಾರೆ.

ಶ್ರೀಕಾಂತ್‌ ಆರಂಭಿಕ ದಿನಗಳಲ್ಲಿ ಡಬಲ್ಸ್‌ ವಿಭಾಗದಲ್ಲಿ ಸ್ಪರ್ಧಿಸುತ್ತಿದ್ದರು. ಮೊದಲ ಪದಕ ಜಯಿಸಿದ್ದೇ ಡಬಲ್ಸ್‌ ಹಾಗೂ ಮಿಶ್ರ ಡಬಲ್ಸ್‌ನಲ್ಲಿ. 2011ರಲ್ಲಿ ಅವರ ಪ್ರತಿಭೆಯನ್ನು ಗುರುತಿಸಿದ ರಾಷ್ಟ್ರೀಯ ತಂಡದ ಕೋಚ್‌ ಪಿ.ಗೋಪಿಚಂದ್‌ ಅವರು ಸಿಂಗಲ್ಸ್‌ನತ್ತ ಚಿತ್ತ ಹರಿಸಲು ಸಲಹೆ ನೀಡಿದರು. ಅಲ್ಲಿಂದ ಅವರ ಕ್ರೀಡಾ ಜೀವನದ ಗ್ರಾಫ್ ಏರುತ್ತಲೇ ಹೋಯಿತು. 2014ರಲ್ಲಿ ಚೀನಾ ಓಪನ್‌ ಸೂಪರ್‌ ಸರಣಿ ಪ್ರೀಮಿಯರ್‌ ಟೂರ್ನಿ ಫೈನಲ್‌ನಲ್ಲಿ ಲಿನ್‌ ಡಾನ್‌ ಅವರನ್ನು ಮಣಿಸಿ ಚಾಂಪಿಯನ್‌ ಆದಾಗಲೇ ಶ್ರೀಕಾಂತ್‌ ಅವರತ್ತ ಬ್ಯಾಡ್ಮಿಂಟನ್‌ ಲೋಕದ ದೃಷ್ಟಿ ನೆಟ್ಟಿತು. ವಿದೇಶಿ ಕೋಚ್‌ಗಳು ಕುತೂಹಲದಿಂದ ಈ ಆಟಗಾರನ ಬಗ್ಗೆ ವಿಚಾರಿಸತೊಡಗಿದರು.

ಶ್ರೀಕಾಂತ್‌ ಅವರ ಮೇಲೆ 2016ರ ರಿಯೊ ಒಲಿಂಪಿಕ್ಸ್‌ನಲ್ಲೇ ಭರವಸೆ ಇಡಲಾಗಿತ್ತು. ಅವರಿಗದು ಚೊಚ್ಚಲ ಒಲಿಂಪಿಕ್ಸ್‌. ಮೊದಲ ಯತ್ನದಲ್ಲಿಯೇ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದು ವಿಶೇಷ. ವಿಶ್ವ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ನಲ್ಲೂ ಕ್ವಾರ್ಟರ್‌ ಫೈನಲ್‌ ತಲುಪಿದ್ದರು. ಕೆಲ ತಿಂಗಳ ಹಿಂದೆ ಫ್ರೆಂಚ್ ಓಪನ್ ಸೂಪರ್ ಸರಣಿ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದು ಬಂದಿದ್ದಾರೆ. ಅಮೋಘ ಸಾಮರ್ಥ್ಯ ತೋರುತ್ತಿರುವ ಅವರು ಒಂದೇ ಋತುವಿನಲ್ಲಿ ನಾಲ್ಕು ಸೂಪರ್‌ ಸರಣಿ ಪ್ರಶಸ್ತಿ ಗೆದ್ದಿದ್ದಾರೆ. ಇಂಡೊನೇಷ್ಯಾ ಮಾಸ್ಟರ್ಸ್‌, ಆಸ್ಟ್ರೇಲಿಯಾ ಓಪನ್, ಡೆನ್ಮಾರ್ಕ್ ಓಪನ್ ಹಾಗೂ ಫ್ರೆಂಚ್‌ ಓಪನ್ ಬ್ಯಾಡ್ಮಿಂಟನ್ ಟೂರ್ನಿಗಳಲ್ಲಿ ಈ ಸಾಧನೆ ಮಾಡಿದ್ದಾರೆ. ವಿಶ್ವದ ನಾಲ್ವರು ಆಟಗಾರರು ಮಾತ್ರ ಒಂದೇ ವರ್ಷದಲ್ಲಿ ನಾಲ್ಕು ಸೂಪರ್ ಸರಣಿ ಗೆದ್ದುಕೊಂಡಿದ್ದಾರೆ. ಈ ಯಶಸ್ಸಿನಿಂದ ವಿಶ್ವ ಬ್ಯಾಡ್ಮಿಂಟನ್‌ ರ‍್ಯಾಂಕಿಂಗ್‌ನಲ್ಲಿ ಮೊದಲ ಸ್ಥಾನಕ್ಕೇರಿದ್ದಾರೆ. 2012ರಲ್ಲಿ 240ನೇ ರ‍್ಯಾಂಕ್ ಹೊಂದಿದ್ದರು. ಕೇವಲ ಆರು ವರ್ಷಗಳಲ್ಲಿ ಕ್ರೀಡಾ ಜೀವನದ ಉತ್ತುಂಗಕ್ಕೇರಿದ್ದಾರೆ.‘ಬಹಳ ವರ್ಷಗಳಿಂದ ವಿಶ್ವ ಬ್ಯಾಡ್ಮಿಂಟನ್‌ನಲ್ಲಿ ಮಲೇಷ್ಯಾದ ಲೀ ಚಾಂಗ್ ವೀ ಹಾಗೂ ಚೀನಾದ ಲಿನ್‌ ಡಾನ್‌ ಪಾರಮ್ಯ ಸಾಧಿಸಿದ್ದಾರೆ. ಅಂಥವರ ವಿರುದ್ಧ ಗೆಲುವು ಸಾಧಿಸಿರುವುದು ಸಹಜವಾಗಿಯೇ ವಿಶ್ವಾಸ ಹೆಚ್ಚಿದೆ. ಶೇ 100ರಷ್ಟು ಶ್ರಮ ಹಾಕಿ ಆಡುವುದು ನನ್ನ ಗುರಿ. ರ‍್ಯಾಂಕಿಂಗ್‌ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ. ಗಾಯವಾಗದಂತೆ ಎಚ್ಚರಿಕೆ ವಹಿಸುವುದೇ ನನ್ನ ಮುಂದಿರುವ ದೊಡ್ಡ ಸವಾಲು’ ಎನ್ನುತ್ತಾರೆ ಆರು ಅಡಿ ಎತ್ತರದ ಶ್ರೀಕಾಂತ್‌.

ಲಂಡನ್‌ ಒಲಿಂಪಿಕ್ಸ್‌ನಲ್ಲಿ ಸೈನಾ ನೆಹ್ವಾಲ್‌ ಕಂಚಿನ ಪದಕ ಜಯಿಸಿದಾಗಲೇ ವಿಶ್ವ ಬ್ಯಾಡ್ಮಿಂಟನ್ ರಂಗದಲ್ಲಿ ಭಾರತ ಹೊಸ ಶಕ್ತಿಯಾಗಿ ಹೊರಹೊಮ್ಮಿತ್ತು. ಚೀನಾ, ಮಲೇಷ್ಯಾ, ಇಂಡೊನೇಷ್ಯಾ, ಡೆನ್ಮಾರ್ಕ್‌ನ ಆಟಗಾರರ ಭದ್ರ ಕೋಟೆಯೊಳಗೆ ನುಗ್ಗಬಹುದು ಎಂಬುದನ್ನು ಸಾಬೀತುಪಡಿಸಿದ್ದಾರೆ. ಆ ಬಳಿಕ ಹಲವು ಅದ್ಭುತ ಸಾಧನೆಗಳು ಮೂಡಿಬಂದಿವೆ. ಹಲವು ಬದಲಾವಣೆಗಳಾಗಿವೆ. ಪಿ.ವಿ.ಸಿಂಧು ಅವರು ಗೆಲುವಿನ ನಾಗಾಲೋಟ ಮುಂದುವರಿಸಿದ್ದಾರೆ. ಆ ಸಾಲಿಗೆ ಈಗ ಶ್ರೀಕಾಂತ್‌ ಸೇರಿದ್ದಾರೆ. ಭಾರತದವರೇ ಆದ ಅಜಯ್‌ ಜಯರಾಮ್‌, ಸಾಯಿ ಪ್ರಣೀತ್‌, ಸಮೀರ್‌ ವರ್ಮ ಪೈಪೋಟಿ ನೀಡುತ್ತಿದ್ದಾರೆ.

‘ಪ್ರತಿ ಗೆಲುವು ವಿಶೇಷ ಅನುಭವ ನೀಡುತ್ತದೆ. ಗಾಯದ ಸಮಸ್ಯೆ, ಕಠಿಣ ತಾಲೀಮು, ಪ್ರಯಾಣದ ಪ್ರಯಾಸವನ್ನು ಮರೆಸಿಬಿಡುತ್ತವೆ. ಮಾರನೇ ದಿನ ಮತ್ತೆ ಅಭ್ಯಾಸ ನಡೆಸಲು ಕಣಕ್ಕಿಳಿಯಬೇಕು ಎಂಬುದು ವಾಸ್ತವ. ಆದರೆ, ಆ ಹಾದಿಯಲ್ಲಿ ಎದುರಾಗುವ ಒತ್ತಡವನ್ನು ಗೆಲುವುಗಳು ಕಡಿಮೆ ಮಾಡುತ್ತವೆ. ಹೊರಗೆ ಎಷ್ಟೇ ತಂತ್ರ ರೂಪಿಸಿದರೂ ಕ್ರೀಡಾಂಗಣದಲ್ಲಿ ಪರಿಸ್ಥಿತಿಯನ್ನು ಯಾವ ರೀತಿ ನಿಭಾಯಿಸುತ್ತೇವೆ ಎನ್ನುವುದು ಮುಖ್ಯ. ಕೋಚ್‌ ಗೋಪಿಚಂದ್‌ ಅವರ ಪಾತ್ರವನ್ನು ಮರೆಯುವಂತಿಲ್ಲ’ ಎಂದು ಹೇಳುತ್ತಾರೆ ಶ್ರೀಕಾಂತ್‌.

ಇದುವರೆಗೆ ಒಟ್ಟು ಆರು ಸೂಪರ್‌ ಸರಣಿಗಳಲ್ಲಿ ಚಾಂಪಿಯನ್ ಆಗಿದ್ದಾರೆ. ಮೂರು ಗ್ರ್ಯಾಂಡ್‌ ಪ್ರಿಗಳಲ್ಲಿ ಚಿನ್ನದ ಪದಕ ಜಯಿಸಿದ್ದಾರೆ. 2015ರಲ್ಲಿ ಅರ್ಜುನ ಪುರಸ್ಕಾರ ಒಲಿಯಿತು. 2016ರಲ್ಲಿ ಗಾಯದ ಕಾರಣ ಬಹುತೇಕ ಸಮಯವನ್ನು ವಿಶ್ರಾಂತಿಯಲ್ಲಿಯೇ ಕಳೆದರು.

ಭಾರತದ ಬ್ಯಾಡ್ಮಿಂಟನ್‌ನ ಶ್ರೇಷ್ಠ ಆಟಗಾರರು ಎನಿಸಿರುವ ಪ್ರಕಾಶ್‌ ಪಡುಕೋಣೆ ಹಾಗೂ ಪಿ.ಗೋಪಿಚಂದ್ ಜೊತೆ ಶ್ರೀಕಾಂತ್‌ ಆಟವನ್ನು ಹೋಲಿಸಲಾಗುತ್ತಿದೆ. ವಿಶ್ವ ಬ್ಯಾಡ್ಮಿಂಟನ್‌ನ ದಿಗ್ಗಜ ಆಟಗಾರರಾದ ಲಿನ್‌ ಡಾನ್‌, ಲೀ ಚೊಂಗ್ ವೀ, ಚೆನ್ ಲಾಂಗ್ ಎದುರು ಗೆಲುವಿನ ರುಚಿ ಕಂಡಿರುವ ಅವರು 2020ರ ಟೋಕಿಯೊ ಒಲಿಂಪಿಕ್ಸ್‌ನತ್ತ ಚಿತ್ತ ಹರಿಸುತ್ತಿದ್ದಾರೆ. ಇದೇ ಫಾರ್ಮ್‌ನಲ್ಲಿ ಮುಂದುವರಿದರೆ ಪುರುಷರ ವಿಭಾಗದಿಂದಲೂ ಒಲಿಂಪಿಕ್ಸ್‌ನಲ್ಲಿ ಒಂದು ಪದಕದ ನಿರೀಕ್ಷೆ ಇಟ್ಟುಕೊಳ್ಳಬಹುದು. ಮಹಿಳೆಯರ ವಿಭಾಗದಲ್ಲಿ ಈಗಾಗಲೇ ಸೈನಾ (ಕಂಚು) ಹಾಗೂ ಸಿಂಧು (ಬೆಳ್ಳಿ) ಪದಕ ಜಯಿಸಿದ್ದಾರೆ. ಇದೇ ಫಾರ್ಮ್‌ ಉಳಿಸಿಕೊಂಡು ಮುನ್ನಡೆಯುವುದು ಶ್ರೀಕಾಂತ್‌ ಮುಂದಿರುವ ದೊಡ್ಡ ಸವಾಲು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.