ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಳೆ ಬಿಸಿಲಲ್ಲಿ ಎಳೆಯರ ಆಟ

Last Updated 15 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಸಾಕುಪ್ರಾಣಿ ಪ್ರಿಯ ಪೇಟೆಮಂದಿ ಜಾತಿಯ ಶ್ವಾನ (ನಾಯಿ ಎಂದರೆ ಅವರಿಗೆ ಕೋಪ) ಹುಲುಸಾದ ರೋಮಭರಿತ ಬೆಕ್ಕನ್ನು ಸಾಕಲು ಮಕ್ಕಳಿಗಿಂತ ಮಿಗಿಲಾದ ಕಾಳಜಿ. ಈ ಸಾಕುಪ್ರಾಣಿಗಳನ್ನು ಮುದ್ದುಮಾಡಿ ಸಂತಸ ಪಡುವುದು ಇದ್ದದ್ದೇ. ಆದರೆ, ನಗರದ ಅಂಚಿನ ಗ್ರಾಮಾಂತರ ಪ್ರದೇಶಗಳಲ್ಲಿ ಪ್ರಾಣಿಗಳು ಹೇಗೆ  ಜನರ ನಿತ್ಯದ ಬದುಕಿನೊಂದಿಗೆ ಸಂಬಂಧ ಬೆಸೆದಿವೆ ಎನ್ನುವುದಕ್ಕೆ ಪುರಾವೆ ಈ ಸುಂದರ ದೃಶ್ಯ. 

30–40 ವರ್ಷಗಳ ಹಿಂದೆ ನಗರದ ಸಮೀಪವಷ್ಟೇ ಅಲ್ಲ. ನಗರದ ಮಧ್ಯ ಭಾಗಗಳಲ್ಲೇ ರೈತಾಪಿ ಜನರ ಜೀವನ, ತರಕಾರಿ, ಹೂವು-ಹಣ್ಣು ಬೆಳೆಗಾರರ ಜೀವನವೂ ಅಲ್ಲಲ್ಲೇ ಸಾಗುತ್ತಿತ್ತು. ಬೆಳೆದ ಸರಕಿಗೆ ಪಕ್ಕದಲ್ಲೇ ಮಾರುಕಟ್ಟೆಯೂ ಸಿಕ್ಕಿ ಬಿಡುತ್ತಿತ್ತು. ಬಂತು ನೋಡಿ ಮಹಾನಗರಾಭಿವೃದ್ಧಿಯ ಭರಾಟೆ, ಜೊತೆಯಲ್ಲೇ ರಿಯಲ್ ಎಸ್ಟೇಟ್. ಆಗ ಈ ಬೆಳೆಗಾರರಿಗೆ ಗೇಟ್‌ಪಾಸ್ ಕೊಟ್ಟಾಯಿತು.

ಮಾಗಡಿ ಊರಿನ ಮುಖ್ಯರಸ್ತೆಯಿಂದ ಕೆಲವು ಕಿಲೋಮೀಟರ್ ದೂರದ ತಾವರಕೆರೆಯ ಬಳಿ ರೈತಾಪಿ ಜನರು ರಾಗಿ, ತರಕಾರಿ ಬೆಳೆಯುತ್ತಿದ್ದಾರೆ. ಹೆಂಗಳೆಯರು ಕುರಿ-ಮೇಕೆ ಸಾಕಿ ಜೀವನವನ್ನು ಹಗುರವಾಗಿಸಿ ಕೊಂಡಿದ್ದಾರೆ. ಪುಟ್ಟ ಬಾಲಕಿಯೊಬ್ಬಳು ಮೇಕೆ ಮರಿಯೊಂದಿಗೆ ಆಡುತ್ತಿರುವ ಈ ದೃಶ್ಯವನ್ನು  ಸಹಜ ಪರಿಸರದಲ್ಲಿ ಸಂಜೆಯ ಬೆಳಕಿನಲ್ಲಿ ಕ್ಯಾಮೆರಾದಲ್ಲಿ ಸೆರೆಹಿಡಿದವರು ಚಲನಚಿತ್ರ ನಿರ್ದೇಶಕ ಕೆ. ಶಿವರುದ್ರಯ್ಯ. ಅವರಿಗೆ ಹಿಂದಿನಿಂದಲೂ ಛಾಯಾಗ್ರಹಣ ಎಂಬುದು ಹವ್ಯಾಸ. ಕೇವಲ ದಾಖಲೆಗಷ್ಟೇ ಅದನ್ನು ಸೀಮಿತಗೊಳಿಸದೇ ಕಲಾತ್ಮಕ ನೆಲೆಯಲ್ಲೂ ಬಳಸಿಕೊಂಡು ಅವರು ಸಾಧನೆಗೈದಿದ್ದಾರೆ.

ಅವರು ಬಳಸಿರುವ ಕ್ಯಾಮೆರಾ ನಿಕಾನ್ D 300S ಜೊತೆಗೆ, ಸಿಗ್ಮಾ 70-200 ಎಂ.ಎಂ. ಜೂಮ್ ಲೆನ್ಸ್. ಅಪರ್ಚರ್ F 7.1, ಶಟರ್ ವೇಗ  1/ 200 ಸೆಕೆಂಡ್, ಐ.ಎಸ್.ಒ. 400

ಈ ಚಿತ್ರದೊಂದಿಗೆ ತಾಂತ್ರಿಕ–ಕಲಾತ್ಮಕ ಅನುಸಂಧಾನದ ಕೆಲವು ಅಂಶಗಳು ಇಂತಿವೆ:

*ಉತ್ತಮವಾದ ಕ್ಯಾಮೆರಾ ಮತ್ತು ಜೂಮ್‌ ಲೆನ್ಸ್ ಹಾಗೂ ಇಳಿ ಬೆಳಕಿಗೆ ಪೂರಕವಾಗಿ ಎಕ್ಸ್‌ಪೋಷರ್ ಅಳವಡಿಕೆ. ಇಲ್ಲಿ ಯಾವುದೇ ನ್ಯೂನತೆ ಕಾಣಿಸದೇ ಚಿತ್ರ ಸಮರ್ಪಕವಾಗಿ, ಸುಂದರವಾಗಿ  ಮತ್ತು ಭಾವಪೂರ್ಣವಾಗಿ ಮೂಡಿಬಂದಿದೆ.

*ಹಿನ್ನೆಲೆಯ ಮರಗಿಡಗಳ ಪರಿಸರ ಸಾಕಷ್ಟು ಕಾಣಿಸುವಲ್ಲಿ ಐ.ಎಸ್.ಒ.400 ಸಹಕಾರಿಯಾಗಿದೆ. ಅದರ ಬದಲು ದಿನದ ಬೆಳಕಲ್ಲಿ ಸಹಜವಾಗಿ ಅಳವಡಿಸುವ ಐ.ಎಸ್.ಒ. 100 ಅಥವಾ 200 ಆಗಿಬಿಟ್ಟಿದ್ದರೆ ಎಕ್ಸ್‌ಪೋಷರ್‌ನ ಗುಣಮಟ್ಟವನ್ನು ಒಟ್ಟಾರೆ ಅಂತೆಯೇ ಕಾಯ್ದಿರಿಸುವುದು ಅನಿವಾರ್ಯವಾಗಿ ಇತರ ಮುಖ್ಯ ತಾಂತ್ರಿಕ ಅಂಶಗಳಾದ ಅಪರ್ಚರ್ ಹೆಚ್ಚಾಗಿ ತೆರೆದು ಅಥವಾ ಶಟರ್ ವೇಗ ಕಡಿಮೆ ಇರುವಂತಾಗುವ ಬದಲಾವಣೆ ಅಗತ್ಯವಾಗಿ ಬಿಡುತ್ತಿತ್ತು. ಆಗ ಚಿತ್ರದ ಮುಖ್ಯ ವಸ್ತುಗಳು ಈಗಿನಷ್ಟು ಕ್ರಿಸ್ಪ್ ಆಗಿ ಕಾಣಿಸದೇ, ಹಿನ್ನೆಲೆ, ಆಚೆ–ಈಚೆಯೂ ಮತ್ತಷ್ಟು ಮಂದವಾಗಿ, ಆ ಜೀವಿಗಳ ಸಂತಸದ ಮಹತ್ವವನ್ನೇ ಮರೆಮಾಚಿ ಬಿಡಬಹುದಿತ್ತು.

*ಚಿತ್ರ ಸಂಯೋಜನೆ ಮತ್ತು ಕಾಂತಿ ವೈರುಧ್ಯದ ಹಿಡಿತದಲ್ಲಿ ಇದು ಕೇವಲ ಫೋಟೊ ಮಾತ್ರವಾಗಿರದೇ ಒಂದು ಸುಂದರ ಚಿತ್ರದ ಕ್ಯಾನ್ವಾಸ್ ತರಹ ಭಾವಸ್ಪಂದನೆ ಮೂಡಿಸಿದೆ.

*ಕಲಾರಸಿಕರು ಗಮನಿಸುವ, ಗೋಲ್ಡನ್ ಕ್ರಾಸ್ ರೂಲ್‌ನ ಅಂಶಗಳು ಬೆಳಕಿನ ರೇಖೆಯಲ್ಲಿ ಸ್ಫುಟವಾಗಿ ಚೌಕಟ್ಟಿನಲ್ಲಿ ಕಾಣಿಸುವ ಮುಖ್ಯಭಾಗ ಗಳು, ಒಂದು ಮೂರಂಶದ ಇಂಟರ್ ಸೆಕ್ಷನ್ ಬಿಂದುವಿನಲ್ಲೇ ನಾಟಿವೆ. ಚೌಕಟ್ಟಿನಲ್ಲಿ ಕಾಣಿಸುವ ಇತರ ವಸ್ತುಗಳು ಅಂದರೆ ಎಡಗಡೆ ಕಲ್ಲುಗೋಡೆಯ ಇರುವಿಕೆ, ಬಲ ಭಾಗದಲ್ಲಿರುವ ಎಳೆ ಬೆಳಕಲ್ಲಿ ಮಿಂದ ಪುಟ್ಟ ಗಿಡ-ಪೊದೆ ಚಿತ್ರಕ್ಕೆ ಸಮತೋಲನ ನೀಡುತ್ತಿವೆ.

*ಹಿನ್ನೆಲೆಯ ದೃಶ್ಯದ ತೆಳುವಾದ ಹಸಿರು ಪರಿಸರ ಸಂಯೋಜನೆಯ ಛಾಯಾಗ್ರಾಹಕರ ಪರಿಣತಿ ಮತ್ತು ಕೌಶಲಕ್ಕೆ ಮಾದರಿಯಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT