ಭಾನುವಾರ, ಡಿಸೆಂಬರ್ 15, 2019
20 °C

ಎಡಕಲ್ಲು ಗುಡ್ಡದಲ್ಲಿ ಹೊಸ ಚಿಗುರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಎಡಕಲ್ಲು ಗುಡ್ಡದಲ್ಲಿ ಹೊಸ ಚಿಗುರು

1973ರಲ್ಲಿ ಬಿಡುಗಡೆಯಾದ ಪುಟ್ಟಣ್ಣ ಕಣಗಾಲ್ ನಿರ್ದೇಸಿದ್ದ ‘ಎಡಕಲ್ಲು ಗುಡ್ಡದ ಮೇಲೆ’ ಚಿತ್ರ ಇಂದಿಗೂ ಸಹೃದಯರ ಮನಸ್ಸಿನಲ್ಲಿ ಸ್ಥಿರವಾಗಿದೆ. ಇದೇ ಶೀರ್ಷಿಕೆಯನ್ನಿಟ್ಟುಕೊಂಡು ಈಗ ಇನ್ನೊಂದು ಹೊಸ ಸಿನಿಮಾ ತೆರೆಗೆ ಬರಲು ಸಜ್ಜಾಗುತ್ತಿದೆ. ಈ ಎಡಕಲ್ಲಿನ ಸೂತ್ರಧಾರ ವಿವಿನ್ ಸೂರ್ಯ ಎಂಬ ತರುಣ ನಿರ್ದೇಶಕ.

ಹಲವು ಸಿನಿಮಾಗಳಲ್ಲಿ ಖಳನಟನಾಗಿ ನಟಿಸಿರುವ ವಿವಿನ್‌ ಸೂರ್ಯ ಇದೇ ಮೊದಲ ಬಾರಿಗೆ ಕ್ಯಾಮೆರಾ ಹಿಂದೆ ನಿಂತು ಆ್ಯಕ್ಷನ್ ಕಟ್‌ ಹೇಳುತ್ತಿದ್ದಾರೆ. ಇತ್ತೀಚೆಗೆ ಚಿತ್ರದ ಟ್ರೈಲರ್ ಮತ್ತು ಧ್ವನಿಸುರಳಿಯನ್ನು ಬಿಡುಗಡೆ ಮಾಡಿದ ಚಿತ್ರತಂಡ ವಿವರಗಳನ್ನು ಹಂಚಿಕೊಂಡಿತು.

‘ಇಂದು ತಂದೆ– ತಾಯಿ ತಮ್ಮ ಕೆಲಸಗಳಲ್ಲಿ ಬ್ಯುಸಿಯಾಗಿ ಮಕ್ಕಳ ಬಗ್ಗೆ, ಕೌಟುಂಬಿಕ ಬಾಂಧವ್ಯದ ಬಗ್ಗೆ ಆಸಕ್ತಿಯನ್ನು ತೋರುತ್ತಿಲ್ಲ. ಇದರ ಪರಿಣಾಮ ಎಳೆಯ ಪೀಳಿಗೆಯ ಮೇಲಾಗುತ್ತಿದೆ. ಇಂಥದ್ದೇ ಅಂಶವನ್ನು ಇಟ್ಟುಕೊಂಡು ನಾನು ಈ ಚಿತ್ರದ ಕಥೆ ಹೆಣೆದಿದ್ದೇನೆ. ನಾನು ನನ್ನ ಶಾಲಾದಿನಗಳಲ್ಲಿ ಕಂಡ ಸತ್ಯಘಟನೆಗಳು, ಈಗಿನ ಕಾಲದಲ್ಲಿ ನಡೆಯುತ್ತಿರುವ ಘಟನೆಗಳು ಮತ್ತು ಮುಂದೆ ಇವು ಎಲ್ಲಿಗೆ ತಲುಪಬಹುದು ಎಂಬ ಕಲ್ಪನೆ ಈ ಮೂರನ್ನೂ ಇಟ್ಟುಕೊಂಡು ಈ ಚಿತ್ರದ ಕಥೆ ಕಟ್ಟಿದ್ದೇನೆ. ಸಮಾಜಕ್ಕೆ ಒಂದು ಒಳ್ಳೆಯ ಸಂದೇಶ ಕೊಡುವುದು ನಮ್ಮ ಉದ್ದೇಶ’ ಎಂದು ನಿರ್ದೇಶಕರು ಚಿತ್ರದ ಬಗ್ಗೆ ವಿವರಿಸಿದರು.

ಹಿರಿಕಿರಿಯ ನಟರ ದೊಡ್ಡ ದಂಡೇ ಈ ಚಿತ್ರದಲ್ಲಿದೆ. ಚಿತ್ರ ಪೂರ್ತಿಗೊಳ್ಳಲು ಸಹಕರಿಸಿದ ಆ ಎಲ್ಲರನ್ನೂ ನಿರ್ದೇಶಕರು ಸ್ಮರಿಸಿಕೊಂಡರು.  ಹಾಗೆಯೇ ‘ಹಳೆಯ ಎಡಕಲ್ಲು ಗುಡ್ಡದ ಮೇಲೆ ಸಿನಿಮಾಗೂ ಈ ಚಿತ್ರಕ್ಕೂ ಕಥೆಯ ದೃಷ್ಟಿಯಿಂದ ಯಾವುದೇ ಸಂಬಂಧವೂ ಇಲ್ಲ. ನಮ್ಮ ಕಥೆಗೆ ಸೂಕ್ತ ಅನ್ನುವ ಕಾರಣಕ್ಕೆ ಈ ಶೀರ್ಷಿಕೆ ಇಟ್ಟುಕೊಂಡಿದ್ದೇವೆ. ಹಾಗೆಯೇ ಆ ಚಿತ್ರದ ಕುರಿತು ಜನರಲ್ಲಿ ಇರುವ ಮೆಚ್ಚುಗೆಯಿಂದ ನಮಗೂ ಸಹಾಯವಾಗಲಿದೆ’ ಎಂದು ಒಪ್ಪಿಕೊಂಡರು.

ಹಿರಿಯ ನಟ ದತ್ತಣ್ಣ ಮಾತನಾಡಿ ‘ಇದು ಮಕ್ಕಳ ಮೇಲೆ ಕೇಂದ್ರೀಕರಿಸಿರುವ ಚಿತ್ರ. ಎಳೆಯರು ತಪ್ಪು ಮಾಡಿದಾಗ ಅವರಿಗೆ ದಂಡಿಸದೆ, ಯಾವುದು ಯಾಕೆ ತಪ್ಪು ಎನ್ನುವುದನ್ನು ತಿಳಿಹೇಳಿ ತಿದ್ದುವ ಪಾತ್ರದಲ್ಲಿ ನಾನು ನಟಿಸಿದ್ದೇನೆ. ನಿರ್ದೇಶಕರಿಗೆ ಸಾಕಷ್ಟು ಸ್ಪಷ್ಟತೆ ಇದೆ’ ಎಂದರು ದತ್ತಣ್ಣ.

ಜೆ.ಪಿ. ಪ್ರಕಾಶ್ ಈ ಚಿತ್ರಕ್ಕೆ ಹಣ ಹೂಡಿದ್ದಾರೆ. ‘ಸಿನಿಮಾ ಚೆನ್ನಾಗಿದೆ. ಸಾಮಾಜಿಕವಾಗಿ ಒಂದು ಒಳ್ಳೆಯ ಸಂದೇಶ ನೀಡುತ್ತದೆ’ ಎಂದಷ್ಟೇ ಹೇಳಿ ಅವರು ಮಾತು ಮುಗಿಸಿದರು. ಕಿರುತೆರೆ ನಟಿಯಾಗಿದ್ದ ಸ್ವಾತಿ ಶರ್ಮ ಈ ಚಿತ್ರದ ಮೂಲಕ ನಾಯಕಿಯಾಗಿ ಬೆಳ್ಳಿತೆರೆಗೆ ಅಡಿಯಿಡುತ್ತಿದ್ದಾರೆ. ಅವರ ಜತೆ ತೆರೆಯನ್ನು ಹಂಚಿಕೊಳ್ಳುತ್ತಿರುವ ಮೈಸೂರಿನ ಹುಡುಗ ನಕುಲ್‌ಗೂ ಇದು ಮೊದಲ ಸಿನಿಮಾ.

ಆಶಿಕ್ ಅರುಣ್ ಈ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ. ಅವರ ಸಂಯೋಜನೆಯ ‘ಮುಗುಳುನಗೆ’ ಹಾಡು ಗಮನಸೆಳೆಯುವಂತಿದೆ. ಶಂಕರ್ ಛಾಯಾಗ್ರಹಣ ಮಾಡಿದ್ದಾರೆ. ಮೈಸೂರು, ಬೆಂಗಳೂರು, ಚಿಕ್ಕಮಗಳೂರು ಬಳಿ ಚಿತ್ರೀಕರಣ ಮಾಡಲಾಗಿದೆ. ಭಾರತಿ ವಿಷ್ಣುವರ್ಧನ್, ಎಡಕಲ್ಲು ಚಂದ್ರಶೇಖರ್, ಶ್ರೀನಾಥ್, ವೀಣಾ ಸುಂದರ್, ಮನ್‌ದೀಪ್ ರಾಯ್. ಮೂಗು ಸುರೇಶ್, ಸಿಹಿಕಹಿ ಚಂದ್ರು, ರವಿ ಭಟ್, ಉಷಾ ಭಂಡಾರಿ, ಧರ್ಮೇಂದ್ರ ಮುಂತಾದ ಹಿರಿಯ ನಟರ ದಂಡೇ ಈ ಚಿತ್ರದಲ್ಲಿದೆ. ಹಾಗೆಯೇ ಪ್ರಗತಿ, ಮೇಘನಾ, ಖುಷಿ ಸೌಮ್ಯಾ ಮುಂತಾದ ಎಳೆಯ ಪ್ರತಿಭೆಗಳೂ ಇವೆ.

ಮುಂದಿನ ತಿಂಗಳು 11ರಂದು ಚಿತ್ರ ಬಿಡುಗಡೆ ಮಾಡುವ ಉದ್ದೇಶ ಚಿತ್ರತಂಡಕ್ಕಿದೆ.

ಪ್ರತಿಕ್ರಿಯಿಸಿ (+)