ಭಾನುವಾರ, ಡಿಸೆಂಬರ್ 15, 2019
20 °C

ಹನ್ಸಿಕಾ: 15 ನಿಮಿಷಗಳ ತಣ್ಣನೆಯ ಸಂಕಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹನ್ಸಿಕಾ: 15 ನಿಮಿಷಗಳ ತಣ್ಣನೆಯ ಸಂಕಟ

ಅದೊಂದು ಕಿರುಚಿತ್ರ. ಅದನ್ನು ನಿರ್ದೇಶಿಸಿದವರು ಡಾ. ಪ್ರಶಾಂತ್ ಜಿ. ಮಾಲೂರ್. ಆ ಸಾಕ್ಷ್ಯಚಿತ್ರದಲ್ಲಿ ಇರುವುದು ಎರಡೇ ಪಾತ್ರಗಳು. ಚಿತ್ರೀಕರಣ ನಡೆದಿರುವುದು ಒಂದೇ ಸ್ಥಳದಲ್ಲಿ. ಆ ಸ್ಥಳದಲ್ಲಿ ಕಾಣಿಸುವುದು ಒಂದು ಸೋಫಾ ಸೆಟ್, ಒಂದು ಫ್ರಿಡ್ಜ್‌, ಒಂದೆರಡು ಗ್ಲಾಸು–ಬಾಟಲಿಗಳು ಮಾತ್ರ. ಹೀಗಿದ್ದರೂ ಹದಿನೈದು ನಿಮಿಷಗಳ ಅವಧಿಯ ಈ ಕಿರುಚಿತ್ರ ವೀಕ್ಷಕನ ಮನಸ್ಸಿನಲ್ಲಿ ಸಣ್ಣ ಸಂಕಟವೊಂದನ್ನು, ಸಹಾನುಭೂತಿಯನ್ನು ಸೃಷ್ಟಿಸುತ್ತದೆ.

ಅಂದಹಾಗೆ, ಈ ಕಿರುಚಿತ್ರದ ಹೆಸರು ‘ಹನ್ಸಿಕಾ’. ಈ ಚಿತ್ರದ ಕಥಾವಸ್ತು ವೇಶ್ಯೆಯರು. ತಾವು ಸಿದ್ಧಪಡಿಸಿದ ಕಿರುಚಿತ್ರವನ್ನು ತೋರಿಸಲು ಪ್ರಶಾಂತ್‌ ಅವರು ಮಾಧ್ಯಮ ಪ್ರತಿನಿಧಿಗಳನ್ನು ಆಹ್ವಾನಿಸಿದ್ದರು.

ಒಬ್ಬ ಸಿನಿಮಾ ನಿರ್ದೇಶಕ, ಒಬ್ಬಳು ವೇಶ್ಯೆ... ಈ ಚಿತ್ರದಲ್ಲಿ ಬರುವ ಪಾತ್ರಗಳು ಇವೆರಡೇ. ಇಡೀ ಚಿತ್ರ ಸಂಭಾಷಣೆಯ ರೂಪದಲ್ಲಿ ಇದೆ. ನಿರ್ದೇಶಕ ಒಂದು ಸಿನಿಮಾ ಮಾಡುವ ಬಗ್ಗೆ ಮಾತುಕತೆಗೆ ವೇಶ್ಯೆಯನ್ನು ತನ್ನ ಮನೆಗೆ ಕರೆಸಿಕೊಳ್ಳುತ್ತಾನೆ. ತಾನು ಬಂದಿರುವುದು ‘ಎಂದಿನಂತೆ ಸೇವೆ ಒದಗಿಸಲು’ ಎಂದು ವೇಶ್ಯೆ ಭಾವಿಸಿರುತ್ತಾಳೆ. ಆದರೆ, ತನ್ನನ್ನು ಮನೆಗೆ ಕರೆಸಿಕೊಂಡ ನಿರ್ದೇಶಕನ ಮನಸ್ಸಿನಲ್ಲಿ ಇರುವುದು ‘ಸೇವೆ ಪಡೆಯುವ ಇಚ್ಛೆ ಅಲ್ಲ’ ಎಂಬುದನ್ನು ಅರಿತ ನಂತರ, ತನ್ನ ಬದುಕಿನ ಬಗ್ಗೆ ಹೇಳಿಕೊಳ್ಳುತ್ತಾಳೆ ಆಕೆ.

ಮನೆಗೆ ಕರೆಸಿಕೊಂಡ ನಂತರ ವೇಶ್ಯೆಗೆ ನಿರ್ದೇಶಕ ಕುಡಿಯಲು ಮದ್ಯ ಕೊಡುತ್ತಾನೆ. ನಿರ್ದೇಶಕನ ಈ ನಡೆಯನ್ನು ಸಂಭಾಷಣೆಯ ನಡುವೆ ಪ್ರಶ್ನಿಸುವ ವೇಶ್ಯೆ, ‘ನಮಗೆ ವಿಸ್ಕಿ ಕೊಡುತ್ತಾರೆ. ಆದರೆ ಊಟ ಕೊಡಬೇಕು ಎಂದು ಯಾರಿಗೂ ಅನಿಸುವುದಿಲ್ಲ’ ಎಂದು ಭಾವುಕಳಾಗಿ ಹೇಳುತ್ತಾಳೆ.

ಬೇರೆಬೇರೆ ಸ್ಥಳಗಳಲ್ಲಿ ಚಿತ್ರೀಕರಣ ನಡೆಸಿ, ಬಗೆಬಗೆಯ ದೃಶ್ಯಗಳನ್ನು ಪೋಣಿಸಿ, ಹಿನ್ನೆಲೆ ಸಂಗೀತ ಕೊಟ್ಟು ಮಾಡಿರುವ ಚಿತ್ರ ಇದಲ್ಲ. ಆದರೆ, ನಿರ್ದೇಶಕ ಮತ್ತು ವೇಶ್ಯೆಯ ನಡುವಣ ಹದಿನೈದು ನಿಮಿಷಗಳ ಮಾತುಕತೆಗಳೇ ವೀಕ್ಷಕರ ಮನಸ್ಸನ್ನು ಮೀಟುತ್ತದೆ. ನೆನಪಿನಲ್ಲಿ ಉಳಿದುಕೊಳ್ಳುತ್ತವೆ.

ನಾಲ್ಕು ವರ್ಷಗಳ ಹಿಂದೆ...

ಇಂಥದ್ದೊಂದು ಸಿನಿಮಾ ಮಾಡಬೇಕು ಎಂದು ಪ್ರಶಾಂತ್ ಅವರಿಗೆ ಆಲೋಚನೆ ಬಂದಿದ್ದು ನಾಲ್ಕು ವರ್ಷಗಳ ಹಿಂದೆ. ‘ರಸ್ತೆ ಒಬ್ಬ ಗಂಡಸು, ವೇಶ್ಯೆಯೊಬ್ಬಳನ್ನು ಹೊಡೆಯುತ್ತಿದ್ದ. ಆಕೆ ಆತನಿಗೆ ಸಹಕಾರ ಕೊಡದಿದ್ದುದು ಅದಕ್ಕೆ ಕಾರಣವಾಗಿತ್ತು’ ಎಂದು ಹೇಳುತ್ತಾರೆ ಪ್ರಶಾಂತ್.

ಸಿನಿಮಾ ಮಾಡುವ ಮೊದಲಿನ ಕೆಲವು ಅನುಭವಗಳನ್ನು ಹಂಚಿಕೊಂಡ ಪ್ರಶಾಂತ್, ‘ಈ ಸಿನಿಮಾ ಮಾಡಲು ನಾನು ವೇಶ್ಯಾವೃತ್ತಿಯಲ್ಲಿ ಇರುವ ನಲವತ್ತು ಜನರನ್ನು ಭೇಟಿ ಮಾಡಿ, ಮಾಹಿತಿ ಸಂಗ್ರಹಿಸಿದ್ದೇನೆ. ಒಂದು ಊಟ ಕೊಟ್ಟರೆ, ಊಟ ಕೊಟ್ಟವರನ್ನು ತಬ್ಬಿ ಕಣ್ಣೀರು ಸುರಿಸುವ ವೇಶ್ಯೆಯರೂ ಇದ್ದಾರೆ’ ಎಂದರು.

‘ಹನ್ಸಿಕಾ’ ಸಿನಿಮಾಕ್ಕೆ ನಟಿ ಬೇಕಾದಾಗ, ಎಂಬತ್ತು ಯುವತಿಯರ ಆಡಿಷನ್ ನಡೆಸಿದ್ದಾರೆ ಪ್ರಶಾಂತ್. ಆದರೆ ಅವರಲ್ಲಿ ಯಾರೂ ಇದರಲ್ಲಿ ಅಭಿನಯಿಸಲು ಒಪ್ಪಲಿಲ್ಲ. ಕೊನೆಗೆ ನಟಿ ಸೀಮಾ ಮಂಜಪ್ಪ ಇದಕ್ಕೆ ಒಪ್ಪಿಕೊಂಡರಂತೆ. ‘ಸೀಮಾ ಅವರು ಈ ಪಾತ್ರಕ್ಕೆ ಸೂಕ್ತರಾಗುತ್ತಾರಾ ಎಂಬುದನ್ನು ಪರಿಶೀಲಿಸುವ ಉದ್ದೇಶದಿಂದ ನಾನು ಆರು ತಿಂಗಳ ಕಾಲ ಅವರ ಫೇಸ್‌ಬುಕ್‌ ಪೋಸ್ಟ್‌ಗಳನ್ನು ಸೂಕ್ಷ್ಮವಾಗಿ ಗಮನಿಸುತ್ತ ಬಂದೆ’ ಎಂದರು ಪ್ರಶಾಂತ್.

ಚಿತ್ರದಲ್ಲಿ ಏನಿರುತ್ತದೆ ಎಂಬುದನ್ನು ಪ್ರಶಾಂತ್ ಅವರಿಂದ ಕೇಳಿಸಿಕೊಂಡ ನಂತರ ಸೀಮಾ ಅವರು ಕೆಲ ಹೊತ್ತು ಭಾವುಕರಾಗಿದ್ದರಂತೆ. ಕಥೆ ಕೇಳಿದ ನಂತರ ‘ಈ ಪಾತ್ರವನ್ನು ನಾನು ಮಾಡಲೇಬೇಕು’ ಎಂದು ನಿರ್ಧರಿಸಿಕೊಂಡರಂತೆ.

ಪ್ರತಿಕ್ರಿಯಿಸಿ (+)