ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿನೇಶ್‌ ಗುಂಡೂರಾವ್‌ ಅಮಾನತಿಗೆ ಬಿಜೆಪಿ ಪಟ್ಟು

Last Updated 15 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಕರ್ನಾಟಕಕ್ಕೆ ಬಂದರೆ ಚಪ್ಪಲಿಯಿಂದ ಹೊಡೆಯಿರಿ’ ಎಂದು ಹೇಳಿಕೆ ನೀಡಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‌ ಗುಂಡೂರಾವ್‌ ಅವರನ್ನು ಪಕ್ಷದಿಂದ ಅಮಾನತು ಮಾಡಬೇಕು ಎಂದು ಬಿಜೆಪಿ ಪಟ್ಟು ಹಿಡಿದಿದೆ.

ಜಮ್ಮು ಮತ್ತು ಕಾಶ್ಮೀರ, ಉತ್ತರ ಪ್ರದೇಶದಲ್ಲಿ ನಡೆದ ಅತ್ಯಾಚಾರ ಘಟನೆ
ಗಳನ್ನು ಖಂಡಿಸಿ ಕಾಂಗ್ರೆಸ್‌ ವತಿಯಿಂದ ನಗರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಆದಿತ್ಯನಾಥ ಅವರ ವಿರುದ್ಧ ದಿನೇಶ್‌ ಕಿಡಿಕಾರಿದ್ದರು.

ಈ ಹೇಳಿಕೆ ಖಂಡಿಸಿ ಸಂಸದರಾದ ಶೋಭಾ ಕರಂದ್ಲಾಜೆ, ಪಿ.ಸಿ. ಮೋಹನ್‌ ನೇತೃತ್ವದಲ್ಲಿ ಭಾನುವಾರ ಪ್ರತಿಭಟನೆ ನಡೆಯಿತು. ಸಪ್ತಗಿರಿ ಗೌಡ, ಹರ್ಷವರ್ಧನ ಗೌಡ ನೇತೃತ್ವದಲ್ಲಿ ಯುವ ಮೋರ್ಚಾ ಕಾರ್ಯಕರ್ತರು ಪ್ರತ್ಯೇಕವಾಗಿ ಪ್ರತಿಭಟನೆ ನಡೆಸಿದರು. ಟೂತ್‌ ಪೇಸ್ಟ್, ಬ್ರಷ್‌ ಮತ್ತಿತರ ಸಲಕರಣೆಗಳನ್ನು ಕೊರಿಯರ್‌ ಮೂಲಕ ದಿನೇಶ್‌ ಅವರಿಗೆ ರವಾನಿಸಿದರು. ದಿನೇಶ್‌ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಚುನಾವಣಾ ಆಯೋಗಕ್ಕೆ ಪಕ್ಷದ ಮುಖಂಡರು ದೂರು ನೀಡಿದರು.

‘ಮುಖ್ಯಮಂತ್ರಿ ಹಾಗೂ ನಾಥ ಪಂಥದ ಸಂತರಿಗೆ ನೀಡುವ ಮರ್ಯಾದೆ ಇದಲ್ಲ. ಇದರಿಂದ ಕರ್ನಾಟಕದಲ್ಲಿರುವ ನಾಥ ಪಂಥದ ಲಕ್ಷಾಂತರ ಅನುಯಾಯಿಗಳಿಗೆ ತೀವ್ರ ಅವಮಾನವಾಗಿದೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಹೇಳಿಕೆಯಲ್ಲಿ ಕಿಡಿಕಾರಿದ್ದಾರೆ.

‘ನಾಥ ಪಂಥ ಅನುಸರಿಸುತ್ತಿರುವ ಗೋರಖ್‌ಪುರ ಮಠಕ್ಕೂ, ಆದಿಚುಂಚನಗಿರಿ ಮಠಕ್ಕೂ ಸಂಬಂಧವಿದೆ. ನಾಥ ಪಂಥಕ್ಕೆ ದಿನೇಶ್‌ ಅವಮಾನ ಮಾಡಿದ್ದಾರೆ’ ಎಂದು ಶೋಭಾ ಕರಂದ್ಲಾಜೆ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ದಿನೇಶ್‌ ಅವರನ್ನು ಚುನಾವಣಾ ಕಣದಿಂದ ಅನರ್ಹಗೊಳಿಸಬೇಕು’‌ ಎಂದು ಒತ್ತಾಯಿಸಿ ರಾಜ್ಯ ಒಕ್ಕಲಿಗರ ಒಕ್ಕೂಟವು ಚುನಾವಣಾ ಆಯೋಗಕ್ಕೆ ದೂರು ನೀಡಿದೆ.

ಖಂಡನೆ (ಮಂಗಳೂರು ವರದಿ): ಧಾರ್ಮಿಕ ನೇತಾರರನ್ನು ಈ ಪರಿ ನಿಂದಿಸಿರುವುದು ಅನಾಗರಿಕ ವರ್ತನೆ. ನಿಂದನೆ ಧಾಟಿ ಅಧಿಕಾರದ ದರ್ಪವನ್ನೂ, ಅಧಿಕಾರ ಕಳೆದುಕೊಳ್ಳುವ ಹತಾಶೆಯನ್ನೂ ಪ್ರತಿಬಿಂಬಿಸುತ್ತಿದೆ ಎಂದು ನಗರದ ಕರ್ನಾಟಕ ಜೋಗಿ ಸಮಾಜ ಸುಧಾರಕ ಸಂಘ ಹೇಳಿಕೆಯಲ್ಲಿ ತಿಳಿಸಿದೆ.

‘ಯೋಗಿ ಆದಿತ್ಯನಾಥರಿಗೆ ಚಪ್ಪಲಿಯಲ್ಲಿ ಹೊಡಿಬೇಕು ಅಂದಿದ್ದೀರಲ್ಲ ದಿನೇಶ್ ಗುಂಡೂರಾವ್, ಇದೇ ಮಾತನ್ನು ಯೋಗಿ ಬದಲು ಒಬ್ಬ ಮುಲ್ಲಾನೋ, ಮೌಲ್ವಿ ಬಗ್ಗೆನೋ ಆಡಿದ್ರೆ, ನಿಮ್ಮ ಹೆಂಡತಿ ಬೇಗಂ ತಬು ಅವರೇ ಆ ಕೆಲಸ ನಿಮಗೆ ಮಾಡಿರುತ್ತಿದ್ದರು, ನಾಲಗೆ ಮೇಲೆ ನಿಗಾ ಇರಲಿ.’

–ಪ್ರತಾಪ ಸಿಂಹ, ಮೈಸೂರು ಸಂಸದ

‘ಸಿದ್ದರಾಮಯ್ಯ ಅಧಿಕಾರದ ಅವಧಿಯಲ್ಲಿ ರಾಜ್ಯದಲ್ಲಿ 3,852 ಅತ್ಯಾಚಾರಗಳು ಆಗಿವೆ. ನಿಮ್ಮ ಹೇಳಿಕೆಯ ತರ್ಕವನ್ನು ರಾಜ್ಯಕ್ಕೂ ಅನ್ವಯಿಸಿದರೆ ಸಿದ್ದರಾಮಯ್ಯ ಅವರಿಗೂ ಚಪ್ಪಲಿಯಿಂದ ಹೊಡೆಯಬೇಕಾಗುತ್ತದೆ. ದಿಕ್ಕೆಟ್ಟ ಗುಲಾಮ.’

–ಬಿಜೆಪಿ ಕರ್ನಾಟಕ

ಹೇಳಿಕೆಗೆ ದಿನೇಶ್‌ ವಿಷಾದ

ಹೇಳಿಕೆಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‌ ಗುಂಡೂರಾವ್‌ ವಿಷಾದ ವ್ಯಕ್ತಪಡಿಸಿದ್ದಾರೆ.

‘ಅತ್ಯಾಚಾರಕ್ಕೊಳಗಾದ ವ್ಯಕ್ತಿಯ ಕುಟುಂಬದ ದುರವಸ್ಥೆ ಹಾಗೂ ಯೋಗಿ ಆದಿತ್ಯನಾಥ ನೇತೃತ್ವದ ಸರ್ಕಾರದ ನಿಷ್ಕ್ರಿಯತೆಯನ್ನು ಭಾವನಾತ್ಮಕ
ವಾಗಿ ವಿವರಿಸುವ ಭರದಲ್ಲಿ ಈ ಮಾತು ಹೊರಹೊಮ್ಮಿದೆ. ಇದು ತಪ್ಪಾಗಿದ್ದರೆ ವಿಷಾದಿಸುತ್ತೇನೆ. ಆದರೆ, ಉತ್ತರ ಪ್ರದೇಶದಲ್ಲಿ ಕಾನೂನಿನ ದುರುಪಯೋಗ ಗಂಭೀರ ವಿಚಾರ’ ಎಂದು ಅವರು ಟ್ವೀಟ್‌ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT