ತಿಪ್ಪೇಸ್ವಾಮಿ ಪ್ರಚೋದನಾತ್ಮಕ ಹೇಳಿಕೆಗೆ ಬಿಜೆಪಿ ಆಕ್ಷೇಪ

7

ತಿಪ್ಪೇಸ್ವಾಮಿ ಪ್ರಚೋದನಾತ್ಮಕ ಹೇಳಿಕೆಗೆ ಬಿಜೆಪಿ ಆಕ್ಷೇಪ

Published:
Updated:

ಚಿತ್ರದುರ್ಗ: ‘ಮೊಳಕಾಲ್ಮುರು ಶಾಸಕ ತಿಪ್ಪೇಸ್ವಾಮಿ ಅವರು ಶ್ರೀರಾಮುಲು ಅವರ ವಿರುದ್ಧ ಪ್ರಚೋದನಾತ್ಮಕ ಹೇಳಿಕೆ ನೀಡಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಬೇಕಾದ ಶಾಸಕರೇ ಈ ರೀತಿ ಹೇಳಿರುವುದು ಖಂಡನೀಯ’ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎನ್. ನವೀನ್ ಹೇಳಿದ್ದಾರೆ.

‘ಸಂಸದ ಶ್ರೀರಾಮುಲು ಅಲ್ಲೆಲ್ಲೋ ಗೌರಸಮುದ್ರಕ್ಕೆ ಬರುತ್ತಾರಂತೆ, ಹೋಗಿ ದಾಳಿ ನಡೆಸಿ. ಒಂದ್ನಾಲ್ಕು ಕಲ್ಲು ಹಾಕಿದರೆ ಸಾಕು. ಇಲ್ಲ ಸುಮ್ಮನಿದ್ದರೂ ಪರವಾಗಿಲ್ಲ...’ ಹೀಗೆ ತಿಪ್ಪೇಸ್ವಾಮಿ ಹೇಳಿದ್ದಾರೆ ಎನ್ನಲಾದ ವಿಡಿಯೊ ಕುರಿತು ಅವರು ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಪ್ರತಿಕ್ರಿಯೆ ನೀಡಿದರು.

ಶಾಸಕರು ಈ ರೀತಿ ನಡೆದುಕೊಳ್ಳುತ್ತಾರೆ ಎಂದು ನಾವು ಎಣಿಸಿರಲಿಲ್ಲ, ಇದು ಅವರ ಘನತೆಗೆ ಶೋಭೆ ತರುವಂಥದ್ದಲ್ಲ ಎಂದರು.

ಮೊಳಕಾಲ್ಮುರು ವಿಧಾನಸಭಾ ಕ್ಷೇತ್ರದ ಟಿಕೆಟ್ ಹಂಚಿಕೆ ವಿಚಾರವಾಗಿ ಎರಡು ಮೂರು ದಿನಗಳಿಂದ ಮೊಳಕಾಲ್ಮುರು ಹಾಗೂ ನಾಯಕನಹಟ್ಟಿಯಲ್ಲಿ ಶ್ರೀರಾಮುಲು ಅವರ ಮೇಲೆ ನಡೆದ ಕಲ್ಲು ತೂರಾಟ, ಪೊರಕೆ ಪ್ರದರ್ಶನ ಹಾಗೂ ದಾಳಿಯನ್ನು ಬಿಜೆಪಿ ಕಾರ್ಯಕರ್ತರು ಮಾಡಿಲ್ಲ. ಇದು ಕಿಡಿಗೇಡಿಗಳ ಕೃತ್ಯ ಎಂದು ಅವರು ದೂರಿದರು.

ದಾಳಿಯ ನಂತರ ಶ್ರೀರಾಮುಲು ಅವರೇ, ಸ್ಥಳದಲ್ಲಿದ್ದ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಡಿವೈಎಸ್‌ಪಿ ಅವರ ಬಳಿ ‘ಯಾವುದೇ ಪ್ರಕರಣ ದಾಖಲಿಸಬೇಡಿ’ ಎಂದು ಮನವಿ ಮಾಡಿದ್ದರು. ಆದರೆ, ಕಾನೂನು ಸುವ್ಯವಸ್ಥೆ ಕಾಪಾಡುವ ಹಿನ್ನೆಲೆಯಲ್ಲಿ ಪೊಲೀಸರು ಸ್ವಪ್ರೇರಣೆಯಿಂದ ಸರ್ಕಾರದ ಪರವಾಗಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ವಿಚಾರಣೆಯ ನಂತರ ದುಷ್ಕೃತ್ಯ ಯಾರು ಮಾಡಿಸಿದ್ದಾರೆ ಎಂಬ ಸತ್ಯ ಬಹಿರಂಗವಾಗಲಿದೆ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry