ಸೋಮವಾರ, ಡಿಸೆಂಬರ್ 16, 2019
25 °C

ಎಚ್‌ಡಿಕೆಗೆ ಕಾಂಗ್ರೆಸ್‌ ಬಾವುಟ ಪ್ರದರ್ಶನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಎಚ್‌ಡಿಕೆಗೆ ಕಾಂಗ್ರೆಸ್‌ ಬಾವುಟ ಪ್ರದರ್ಶನ

ಮೈಸೂರು: ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರು ಭಾನುವಾರ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ರೋಡ್ ಷೋ ನಡೆಸುವ ಸಂದರ್ಭ ಕೆಲವರು ಕಾಂಗ್ರೆಸ್ ಬಾವುಟ ಪ್ರದರ್ಶಿಸಿದರು.

ಕುಮಾರಸ್ವಾಮಿ ಅವರು ಕ್ಷೇತ್ರದಲ್ಲಿ ಜೆಡಿಎಸ್‌ ಅಭ್ಯರ್ಥಿ ಜಿ.ಟಿ.ದೇವೇಗೌಡ ಅವರ ಪರ ಪ್ರಚಾರ ನಡೆಸುತ್ತಿದ್ದಾರೆ. ಪ್ರಚಾರದ ಬಸ್ ಮಾರ್ಬಳ್ಳಿಹುಂಡಿ ಗ್ರಾಮಕ್ಕೆ ಬಂದಾಗ ಜೆಡಿಎಸ್ ಕಾರ್ಯಕರ್ತರು ಸ್ವಾಗತ ನೀಡಿದರು. ಇದೇ ವೇಳೆ, ಅಲ್ಲಿದ್ದ ಸುಮಾರು 15ರಿಂದ 20ರಷ್ಟು ಯುವಕರು ಏಕಾಏಕಿ ಕಾಂಗ್ರೆಸ್ ಬಾವುಟ ಪ್ರದರ್ಶಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಪರ ಘೋಷಣೆ ಕೂಗಿದ ಯುವಕರನ್ನು ಪೊಲೀಸರು ತಡೆಯಲು ಮುಂದಾದಾಗ ವಾಗ್ವಾದ ನಡೆಯಿತು. ಸ್ಥಳದಲ್ಲಿ ಕೆಲಕಾಲ ಗೊಂದಲ ಉಂಟಾಯಿತು. ಜೆಡಿಎಸ್– ಕಾಂಗ್ರೆಸ್ ಕಾರ್ಯಕರ್ತರು ಪರಸ್ಪರ ಕೈಮಿಲಾಯಿಸದಂತೆ ಪೊಲೀಸರು ತಡೆದರು.

ಈ ಬೆಳವಣಿಗೆಯಿಂದ ಜೆಡಿಎಸ್ ಮುಖಂಡರು ಮುಜುಗರ ಅನುಭವಿಸಿದರೂ ತೋರಿಸಿಕೊಳ್ಳಲಿಲ್ಲ. ಕುಮಾರಸ್ವಾಮಿ ಅವರು, ‘ಏಯ್‌ ಬಿಡ್ರೀ... ಕಾಂಗ್ರೆಸ್‌

ಬಾವುಟ ತೋರಿಸಲಿ. ಅವರನ್ನು ತಡೆಯಬೇಡಿ’ ಎಂದು ಪೊಲೀಸರಿಗೆ ಹೇಳಿದರು.

‘ನಾಲ್ಕೈದು ಮಂದಿ ಧಿಕ್ಕಾರ ಕೂಗಿದರೆ ನನ್ನ ಮಾನ ಮರ್ಯಾದೆ ಏನೂ ಹೋಗಲ್ಲ. ನೀವು ಹೀಗೆ ಬಾವುಟ ಹಿಡಿದರೆ ಜೆಡಿಎಸ್‌ಗೆ ಏನೂ ಆಗದು. ನಿಮ್ಮ ಆಟ ಇನ್ನು ಕೆಲವು ದಿನ ಮಾತ್ರ ನಡೆಯಲಿದೆ’ ಎಂದು ಆಕ್ರೋಶದಿಂದ ಹೇಳಿದರು.

‘ನಾನು ಜಾತಿ ಹೆಸರಿನಲ್ಲಿ ರಾಜಕಾರಣ ಮಾಡಿಲ್ಲ. ಸಣ್ಣತನದಿಂದ ನಡೆದುಕೊಳ್ಳುವ, ಕೀಳು ಅಭಿರುಚಿ ಹೊಂದಿರುವ ವ್ಯಕ್ತಿ ನಾನಲ್ಲ ಎಂಬುದನ್ನು ಕುರುಬ ಸಮಾಜದ ಬಂಧುಗಳು ಅರ್ಥ ಮಾಡಿಕೊಳ್ಳಬೇಕು’ ಎಂದರು.

ಜಿ.ಟಿ.ದೇವೇಗೌಡ ಅವರೂ ಏರು ಧ್ವನಿಯಲ್ಲಿ ಮಾತನಾಡಿದರು. ‘ಅವರು ಕಾಂಗ್ರೆಸ್ ಬಾವುಟ ತೋರಿಸಲಿ. ಸಿದ್ದರಾಮಯ್ಯ ಬಂದಾಗ ನೀವು ಜೆಡಿಎಸ್‌ ಬಾವುಟ ತೋರಿಸಿ’ ಎಂದು ಬೆಂಬಲಿಗರಿಗೆ ಹೇಳಿದರು.

ಮುಂದುವರಿದ ಪ್ರಚಾರ

ಕುಮಾರಸ್ವಾಮಿ ಅವರು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸತತ ಎರಡನೇ ದಿನ ಪ್ರಚಾರ ಕೈಗೊಂಡರು. ಶನಿವಾರ 20ಕ್ಕೂ ಅಧಿಕ ಗ್ರಾಮಗಳಿಗೆ ಭೇಟಿ ನೀಡಿದ್ದ ಅವರು, ಭಾನುವಾರ ಸುಮಾರು 30 ಗ್ರಾಮಗಳಲ್ಲಿ ರೋಡ್ ಷೋ ನಡೆಸಿದರು. ಸೋಮವಾರವೂ ಪ್ರಚಾರ ಮುಂದುವರಿಯಲಿದ್ದು, 33 ಗ್ರಾಮಗಳಿಗೆ ಭೇಟಿ ನೀಡಲಿದ್ದಾರೆ.

ಪ್ರತಿಕ್ರಿಯಿಸಿ (+)