ಶುಕ್ರವಾರ, ಡಿಸೆಂಬರ್ 6, 2019
26 °C

ಪಾಕ್‌ ವರ್ತನೆಗೆ ಭಾರತದ ಪ್ರತಿಭಟನೆ

ಪಿಟಿಐ Updated:

ಅಕ್ಷರ ಗಾತ್ರ : | |

ಪಾಕ್‌ ವರ್ತನೆಗೆ ಭಾರತದ ಪ್ರತಿಭಟನೆ

ನವದೆಹಲಿ: ಪಾಕಿಸ್ತಾನದಲ್ಲಿರುವ ಗುರುದ್ವಾರಗಳಿಗೆ ಯಾತ್ರೆ ಕೈಗೊಂಡ ಸಿಖ್‌ ಯಾತ್ರಿಕರಿಗೆ ಅಲ್ಲಿರುವ ಭಾರತೀಯ ರಾಜತಾಂತ್ರಿಕ ಅಧಿಕಾರಿಗಳ ಭೇಟಿಗೆ ಅವಕಾಶ ನೀಡದ ಪಾಕ್‌ ವರ್ತನೆಗೆ ಭಾರತ ಆಕ್ಷೇಪ ವ್ಯಕ್ತಪಡಿಸಿದೆ.

ಈ ಕುರಿತು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಪಾಕಿಸ್ತಾನದ ಎದುರು ಭಾನುವಾರ ತನ್ನ ಪ್ರತಿಭಟನೆ ದಾಖಲಿಸಿದೆ. ಅಷ್ಟೇ ಅಲ್ಲದೆ, ಪಾಕಿಸ್ತಾನದ ವರ್ತನೆಯನ್ನು ‘ಸಕಾರಣವಿಲ್ಲದ ರಾಜತಾಂತ್ರಿಕ ಅಸಭ್ಯ ನಡವಳಿಕೆ’ ಎಂದು ಜರೆದಿದೆ.

ಪರಸ್ಪರರ ರಾಜತಾಂತ್ರಿಕ ಅಧಿಕಾರಿಗಳನ್ನು ಸರಿಯಾಗಿ ನಡೆಸಿಕೊಳ್ಳುವ ಕುರಿತು ಭಾರತ ಮತ್ತು ಪಾಕಿಸ್ತಾನ ಒಪ್ಪಿಗೆ ಸೂಚಿಸಿ ವಾರ ಕಳೆಯುವ ಮುನ್ನವೇ ಇದು ನಡೆದಿದೆ.

ಧಾರ್ಮಿಕ ಕೇಂದ್ರಗಳ ಭೇಟಿಗೆ ಸಂಬಂಧಿಸಿದಂತೆ 1974ರಲ್ಲಿ ಮಾಡಿಕೊಂಡ ದ್ವಿಪಕ್ಷೀಯ ಒಪ್ಪಂದ ಅನ್ವಯ 1,800 ಸಿಖ್‌ ಯಾತ್ರಿಕರ ತಂಡ ಏಪ್ರಿಲ್‌ 12ರಿಂದ ಪಾಕಿಸ್ತಾನದ ಗುರುದ್ವಾರಗಳಿಗೆ ಯಾತ್ರೆ ಕೈಗೊಂಡಿದೆ.

ಭಾರತೀಯ ಹೈಕಮಿಷನರ್‌ ಮತ್ತು ರಾಜತಾಂತ್ರಿಕ ಅಧಿಕಾರಿಗಳನ್ನು ಭೇಟಿಯಾಗಲು ತೆರಳಿದ ಈ ತಂಡಕ್ಕೆ ಪಾಕಿಸ್ತಾನ ಅವಕಾಶ ನಿರಾಕರಿಸಿದೆ.

ಪೂರ್ವ ನಿಗದಿತ ಕಾರ್ಯಕ್ರಮ ಮತ್ತು ಆಮಂತ್ರಣದ ಮೇರೆಗೆ ಈ ತಂಡಕ್ಕೆ ಬೈಸಾಕಿ ಹಬ್ಬದ ಶುಭಾಶಯ ಕೋರಲು ಗುರುದ್ವಾರ ಪಂಜಾ ಸಾಹಿಬ್‌ಗೆ ತೆರಳಿದ್ದ ಭಾರತೀಯ ಹೈಕಮಿಷನರ್‌ ಅವರನ್ನು ಮಾರ್ಗಮಧ್ಯದಲ್ಲಿಯೇ  ತಡೆದು, ಮರಳಿ ಕಳುಹಿಸಲಾಗಿದೆ ಎಂದು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಆರೋಪಿಸಿದೆ.

ಭಾರತೀಯ ಹೈಕಮಿಷನರ್‌ ಅವರಿಗೆ ಸಮರ್ಪಕವಾಗಿ ತಮ್ಮ ಕರ್ತವ್ಯ ನಿರ್ವಹಿಸಲು ಪಾಕಿಸ್ತಾನ ಬಿಡುತ್ತಿಲ್ಲ. ಆ ಮೂಲಕ ರಾಜತಾಂತ್ರಿಕ ಸಂಬಂಧಗಳ ಬಗೆಗಿನ 1961ರ ವಿಯೆನ್ನಾ ಒಪ್ಪಂದವನ್ನು ಉಲ್ಲಂಘಿಸಿದೆ ಎಂದು ದೂರಿದೆ.

ವಾಡಿಕೆಗೆ ಪಾಕ್‌ ಅಡ್ಡಿ: ಪಾಕಿಸ್ತಾನಕ್ಕೆ ಭೇಟಿ ನೀಡುವ ಭಾರತದ ಯಾತ್ರಿಕರ ತಂಡಕ್ಕೆ ಅಗತ್ಯ ರಾಜತಾಂತ್ರಿಕ ನೆರವು ನೀಡಲು ಭಾರತೀಯ ಹೈಕಮಿಷನರ್‌ ಕಚೇರಿಯ ತಂಡ ಜತೆಗಿರುವುದು ವಾಡಿಕೆ. ಆದರೆ, ಈ ಬಾರಿ ಆ ಸಂಪ್ರದಾಯವನ್ನು ಮುರಿಯಲಾಗಿದೆ ಎಂದು ಭಾರತ ಆರೋಪಿಸಿದೆ.

ಏಪ್ರಿಲ್‌ 12ರಂದು ಭಾರತದಿಂದ ಹೊರಟ ತಂಡವನ್ನು ವಾಘಾ ಗಡಿಯಲ್ಲಿ ಬರ ಮಾಡಿಕೊಳ್ಳಲು ಪಾಕಿಸ್ತಾನದಲ್ಲಿರುವ ಭಾರತೀಯ ಹೈಕಮಿಷನರ್‌ ಕಚೇರಿಯ  ತಂಡಕ್ಕೆ ಅವಕಾಶ ನಿರಾಕರಿಸಲಾಗಿದೆ. ಭಾರತದ ಯಾತ್ರಿಕರನ್ನು ಭಾರತದ ಹೈಕಮಿಷನರ್‌ ಅವರು ಪಂಜಾ ಸಾಹಿಬ್‌ ಗುರುದ್ವಾರದಲ್ಲಿ ಶನಿವಾರ ಭೇಟಿ ಆಗಬೇಕಿತ್ತು. ಆದರೆ ಭದ್ರತೆಯ ನೆಪ ಒಡ್ಡಿ ಈ ಕಾರ್ಯಕ್ರಮಕ್ಕೆ ಪಾಕಿಸ್ತಾನ ಅವಕಾಶ ನೀಡಿಲ್ಲ.

ಪಾಕ್‌ನಲ್ಲಿದೆ ಸಿಖ್ಖರ ಪವಿತ್ರ ಗುರುದ್ವಾರ

ಇಸ್ಲಾಮಾಬಾದ್‌ನಿಂದ ಅಂದಾಜು 50 ಕಿ.ಮೀ ದೂರದಲ್ಲಿರುವ ಹಸನ್‌ ಅಬ್ದಲ್‌ ಎಂಬಲ್ಲಿರುವ ‘ಗುರುದ್ವಾರ ಪಂಜಾ ಸಾಹಿಬ್‌’ ಸಿಖ್‌ ಧರ್ಮೀಯರ ಎರಡನೇ ಪವಿತ್ರ ಕ್ಷೇತ್ರವಾಗಿದೆ.

ನಂಕಾನ್ ಸಾಹಿಬ್‌ ಗುರುದ್ವಾರ ಕೂಡ ಪಾಕಿಸ್ತಾನದಲ್ಲಿರುವ ಮತ್ತೊಂದು ಪ್ರಸಿದ್ಧ ಧಾರ್ಮಿಕ ಕ್ಷೇತ್ರ. ಪ್ರತಿವರ್ಷ ಏಪ್ರಿಲ್‌ನಲ್ಲಿ ಬೈಸಾಕಿ ಹಬ್ಬದಂದು ಭಾರತ ಮತ್ತು ಇತರೆಡೆಯಿಂದ ಸಾವಿರಾರು ಸಿಖ್‌ ಧರ್ಮೀಯರು ಇಲ್ಲಿಗೆ ಬರುವುದು ವಾಡಿಕೆ.

**

* ಅಜ್ಮೀರ್‌ನ ಪ್ರಸಿದ್ಧ ಸೂಫಿ ಸಂತ ಮೊಯಿನುದ್ದೀನ್‌ ಚಿಸ್ತಿ ದರ್ಗಾಕ್ಕೆ ಭೇಟಿ ನೀಡಲು ಬಯಸಿದ್ದ ಪಾಕಿಸ್ತಾನದ 500 ಪ್ರಜೆಗಳಿಗೆ ವೀಸಾ ನಿರಾಕರಿಸಿದ್ದ ಭಾರತ

* ಪಾಕಿಸ್ತಾನದ ಗುರುದ್ವಾರಗಳಿಗೆ ಎರಡು ಸಾವಿರಕ್ಕೂ ಹೆಚ್ಚು ಭಾರತೀಯ ಸಿಖ್ಖರು ಪ್ರತಿ ವರ್ಷ ಭೇಟಿ ನೀಡುತ್ತಾರೆ

ಪ್ರತಿಕ್ರಿಯಿಸಿ (+)