ಗುರುವಾರ , ಡಿಸೆಂಬರ್ 12, 2019
20 °C
ಬೈಲೂರು ನಿಷ್ಕಲ ಮಂಟಪದ ನಿಜಗುಣಾನಂದ ಸ್ವಾಮೀಜಿ ಅಭಿಪ್ರಾಯ

‘ಗೋವಿನ ವೈಭವೀಕರಣ ಅತಿಯಾಯ್ತು’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಗೋವಿನ ವೈಭವೀಕರಣ ಅತಿಯಾಯ್ತು’

ಬೆಂಗಳೂರು: ‘ಗೋವಿಗಷ್ಟೇ ಸಿಗುತ್ತಿರುವ ಪ್ರಾಮುಖ್ಯ ಉಳಿದ ಪ್ರಾಣಿಗಳಿಗೂ ದೊರೆಯಬೇಕು’ ಎಂದು ಬೈಲೂರು ನಿಷ್ಕಲ ಮಂಟಪದ ನಿಜಗುಣಾನಂದ ಸ್ವಾಮೀಜಿ ಅಭಿಪ್ರಾಯಪಟ್ಟರು.

ಸಪ್ನ ಬುಕ್‌ ಹೌಸ್‌ ನಗರದಲ್ಲಿ ಹಮ್ಮಿಕೊಂಡಿದ್ದ ಲೇಖಕ ಕುಂ.ವೀರಭದ್ರಪ್ಪ ಅವರ ‘ಕತ್ತೆಗೊಂದು ಕಾಲ’ ಕಾದಂಬರಿ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಆಕಳನ್ನು ಹೊರತುಪಡಿಸಿ ಬೇರೆ ಪ್ರಾಣಿಗಳಿಗೆ ಈ ಸಮಾಜದಲ್ಲಿ ಬೆಲೆ ಇಲ್ಲವೇನೋ. ಪ್ರಾಣಿಗಳಲ್ಲಿ ಇಲ್ಲದಿರುವ ಭಿನ್ನಾಭಿಪ್ರಾಯವನ್ನು ‌ಮನುಷ್ಯ ಹುಟ್ಟಿ ಹಾಕುತ್ತಿದ್ದಾನೆ ಎಂದರು.

ಶರಣರು ವಚನಗಳಲ್ಲಿ  ಹೇಳಿರುವ ‘ಗೋತ್ರದ ಗುಣವ ಕಾಗೆ ಬಲ್ಲದು’ ಎಂಬುದು ಮಠಾಧೀಶರಿಗೆ ಅರ್ಥವಾಗಬೇಕಾದ ಅಗತ್ಯವಿದೆ ಎಂದರು.

ಧರ್ಮ ಎನ್ನುವುದು ಅಧಿಕಾರದ ಆಜ್ಞೆಯಲ್ಲ. ಬೆಳಕಿನಡೆಗೆ ಕರೆತರುವ ಸ್ವಚ್ಛ ವ್ಯವಸ್ಥೆ. ನಿಸರ್ಗ ನಿರ್ಮಿತ ಧರ್ಮವನ್ನು ಅಲಕ್ಷಿಸಿ, ಮನುಷ್ಯ ನಿರ್ಮಿಸಿದ ಮೂಢ ನಂಬಿಕೆಯ ಧರ್ಮದಲ್ಲಿ ಇಂದಿನ ಜನ ಹೆಚ್ಚು ಆಸಕ್ತಿ ವಹಿಸಿದ್ದಾರೆ ಎಂದು ತಿಳಿಸಿದರು.

ಲೇಖಕ ಕುಂ.ವೀರಭದ್ರಪ್ಪ, ‘ಗೋವಿನ ಜೊತೆ ನಿಜದ ನಂಟು ಇಲ್ಲದವರು, ಅದನ್ನು ವೈಭವೀಕರಿಸುತ್ತಿದ್ದಾರೆ. ಗೋರಕ್ಷಣೆಯ ಹೆಸರಿನಲ್ಲಿ ಗೋವಿನ ವ್ಯವಸ್ಥಿತ ಮಾರುಕಟ್ಟೆ ಸೃಷ್ಟಿಸುತ್ತಿದ್ದಾರೆ. ಇದಕ್ಕೆ ಸರ್ಕಾರ, ರಾಜಕಾರಣಿಗಳ ಬೆಂಬಲವೂ ಇದೆ’ ಎಂದರು.

‘ಗೋಮೂತ್ರದಿಂದ ಕ್ಯಾನ್ಸರ್ ವಾಸಿಯಾಗುತ್ತದೆ ಎಂಬ ಹುಸಿ ಸುಳ್ಳುಗಳನ್ನು ಹೇಳುತ್ತಿದ್ದಾರೆ. ಶೇ 1.5ರಷ್ಟು ಜನಸಂಖ್ಯೆಯವರು, ಶೇ 98.5ರಷ್ಟಿರುವವರ ಮೇಲೆ ಮೌಢ್ಯಗಳನ್ನು ಹೇರುತ್ತಿದ್ದಾರೆ. ಅವುಗಳನ್ನು ನಾವು ಧಿಕ್ಕರಿಸಬೇಕು’ ಎಂದು ಸಲಹೆ ನೀಡಿದರು.

‘ಮಠಾಧೀಶರು ಪ್ರಾಮಾಣಿಕರಾಗಿದ್ದರೆ, ‘ರಾಜಕಾರಣಿಗಳಿಗೆ ಪ್ರವೇಶವಿಲ್ಲ’ ಎಂಬ ಬೋರ್ಡನ್ನು ಮೊದಲು ಮಠಗಳ ಎದುರು ಹಾಕಿ’ ಎಂದು ಕೋರಿದರು.

‘ಕತ್ತೆಗೊಂದು ಕಾಲ’ ಕುಂವೀ ಅವರ 18ನೇ ಕಾದಂಬರಿ. ಒಟ್ಟು 340 ಪುಟಗಳನ್ನು ಹೊಂದಿರುವ ಇದರ ಬೆಲೆ ₹300. ಸಪ್ನ ಬುಕ್‌ ಹೌಸ್‌ನಲ್ಲಿ ಪುಸ್ತಕ ಲಭ್ಯವಿದೆ.

ಪ್ರತಿಕ್ರಿಯಿಸಿ (+)