ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳ್ಳಿಗೆ ಕೊರಳೊಡ್ಡಿದ ದೀಪಿಕಾ–ಜೋಷ್ನಾ

ಸ್ಕ್ವಾಷ್‌: ಫೈನಲ್‌ನಲ್ಲಿ ನಿರಾಸೆ ಕಂಡ ಭಾರತದ ಆಟಗಾರ್ತಿಯರು; ಜೊಯೆಲ್ಲೆ–ಅಮಂಡಾ ಮಿಂಚು
Last Updated 15 ಏಪ್ರಿಲ್ 2018, 19:32 IST
ಅಕ್ಷರ ಗಾತ್ರ

ಗೋಲ್ಡ್‌ ಕೋಸ್ಟ್‌: ಭಾರತದ ದೀಪಿಕಾ ಪಳ್ಳಿಕಲ್‌ ಮತ್ತು ಜೋಷ್ನಾ ಚಿಣ್ಣಪ್ಪ ಅವರು ಕಾಮನ್‌ವೆಲ್ತ್‌ ಕ್ರೀಡಾಕೂಟದ ಸ್ಕ್ವಾಷ್‌ನಲ್ಲಿ ಬೆಳ್ಳಿಯ ಪದಕಕ್ಕೆ ಕೊರಳೊಡ್ಡಿದರು.

ಮಹಿಳೆಯರ ಡಬಲ್ಸ್‌ ವಿಭಾಗದ ಫೈನಲ್‌ನಲ್ಲಿ ಜೋಷ್ನಾ ಮತ್ತು ದೀಪಿಕಾ 9–11, 8–11ರ ನೇರ ಗೇಮ್‌ಗಳಿಂದ ನ್ಯೂಜಿಲೆಂಡ್‌ನ ಜೊಯೆಲ್ಲೆ ಕಿಂಗ್‌ ಮತ್ತು ಅಮಂಡಾ ಲ್ಯಾಂಡರ್ಸ್‌ ಮರ್ಫಿ ವಿರುದ್ಧ ಸೋತರು.

2014ರ ಗ್ಲಾಸ್ಗೊ ಕೂಟದಲ್ಲಿ ಚಿನ್ನ ಗೆದ್ದು ಚಾರಿತ್ರಿಕ ಸಾಧನೆ ಮಾಡಿದ್ದ ಭಾರತದ ಜೋಡಿ ಈ ಬಾರಿಯೂ ಚಿನ್ನಕ್ಕೆ ಮುತ್ತಿಕ್ಕಲಿದೆ ಎಂದು ಭಾವಿಸಲಾಗಿತ್ತು.

ಮೊದಲ ಗೇಮ್‌ನಲ್ಲಿ ದೀಪಿಕಾ ಮತ್ತು ಜೋಷ್ನಾ ಎದುರಾಳಿಗಳಿಗೆ ಪ್ರಬಲ ಪೈಪೋಟಿ ಒಡ್ಡಿದರು. ಚುರುಕಿನ ಸರ್ವ್‌ಗಳನ್ನು ಮಾಡಿದ ಭಾರತದ ಜೋಡಿ ಮನಮೋಹಕ ಡ್ರಾಪ್‌ಗಳ ಮೂಲಕ ಪಾಯಿಂಟ್ಸ್‌ ಕಲೆಹಾಕಿತು. ಹೀಗಾಗಿ 9–9ರಲ್ಲಿ ಸಮಬಲ ಕಂಡುಬಂತು. ಈ ಹಂತದಲ್ಲಿ ದಿಟ್ಟ ಆಟ ಆಡಿದ ಜೊಯೆಲ್ಲೆ ಮತ್ತು ಅಮಂಡಾ ಎರಡು ಪಾಯಿಂಟ್ಸ್‌ ಗಳಿಸಿ ಗೇಮ್‌ ತಮ್ಮದಾಗಿಸಿಕೊಂಡರು.

ಎರಡನೆ ಗೇಮ್‌ನಲ್ಲೂ ಜೋಷ್ನಾ ಮತ್ತು ದೀಪಿಕಾ ಛಲದಿಂದ ಹೋರಾಡಿದರು. ಹೀಗಿದ್ದರೂ ಭಾರತದ ಜೋಡಿಗೆ ಎದುರಾಳಿಗಳ ಸವಾಲು ಮೀರಿ ನಿಲ್ಲಲು ಆಗಲಿಲ್ಲ.

‘ಕೂಟದ ಎಲ್ಲಾ ಪಂದ್ಯಗಳಲ್ಲೂ ದಿಟ್ಟ ಆಟ ಆಡಿ ಫೈನಲ್‌ ಪ್ರವೇಶಿಸಿದ್ದೆವು. ನಮಗೆ ಚಿನ್ನ ಜಯಿಸುವ ಉತ್ತಮ ಅವಕಾಶ ಇತ್ತು. ಹೊಂದಾಣಿಕೆಯ ಕೊರತೆಯಿಂದಾಗಿ ಎದುರಾಳಿಗಳಿಗೆ ಪಾಯಿಂಟ್ಸ್‌ ಬಿಟ್ಟುಕೊಟ್ಟೆವು. ನಾಲ್ಕು ವರ್ಷಗಳ ನಂತರ ಬೆಳ್ಳಿ ಜಯಿಸಿದ್ದು ಖುಷಿ ನೀಡಿದೆ’ ಎಂದು ಜೋಷ್ನಾ ಚಿಣ್ಣಪ್ಪ ಹೇಳಿದ್ದಾರೆ.

‘ಪಂದ್ಯದ ಅಧಿಕಾರಿಗಳ ಕೆಲ ನಿರ್ಣಯಗಳು ತಪ್ಪಾಗಿದ್ದವು. ಹೀಗಾಗಿ ನಮಗೆ ಹಿನ್ನಡೆ ಎದುರಾಯಿತು. ಇದರಿಂದ ತುಂಬಾ ನಿರಾಸೆಯಾಗಿದೆ’ ಎಂದು ದೀಪಿಕಾ ಪಳ್ಳಿಕಲ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT