ಗುರುವಾರ , ಡಿಸೆಂಬರ್ 12, 2019
20 °C
‘ಐಕ್ಯತಾ’ ಬಿಸು ಸ್ನೇಹ ಮಿಲನದಲ್ಲಿ ಬಾಲಕೃಷ್ಣ ಶೆಟ್ಟಿ ಸಲಹೆ

‘ಬಂಟರು ಗಡಿ ಮೀರಿ ಸಂಘಟಿತರಾಗಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಬಂಟರು ಗಡಿ ಮೀರಿ ಸಂಘಟಿತರಾಗಿ’

ಬೆಂಗಳೂರು: ‘ಬಂಟರು ಎಲ್ಲ ಗಡಿರೇಖೆಗಳನ್ನು ಮೀರಿ ಸಂಘಟಿತರಾಗಬೇಕು. ಸಮಾಜದವರ ನೋವು, ದುಃಖಗಳಿಗೆ ಸ್ಪಂದಿಸಬೇಕು’ ಎಂದು ಶಾಹಿ ಎಕ್ಸ್‌ಪೋರ್ಟ್‌ನ ನಿರ್ದೇಶಕ ಬಾಲಕೃಷ್ಣ ಶೆಟ್ಟಿ ಸಲಹೆ ನೀಡಿದರು.

‘ಬಂಟ್‌ ಸಮ್ಮಿಲನ’ ವತಿಯಿಂದ ನಗರದಲ್ಲಿ ಭಾನುವಾರ ಆಯೋಜಿಸಿದ್ದ ‘ಐಕ್ಯತಾ’ ಬಿಸು ಸ್ನೇಹ ಮಿಲನ ಕೂಟದಲ್ಲಿ ಮಾತನಾಡಿದರು.

ಬಂಟರು ದೈಹಿಕವಾಗಿ ಏಕತೆಯಿಂದ ಇದ್ದರೂ ಮಾನಸಿಕ ಏಕತೆಯ ಕೊರತೆ ಕಾಡುತ್ತಿದೆ. ಸಮಾಜದವರ ನಡುವೆ ಸುಖ–ದುಃಖಗಳನ್ನು ಹಂಚಿಕೊಳ್ಳುವಂತಹ ವಾತಾವರಣ ಸೃಷ್ಟಿಯಾಗಬೇಕು ಎಂದರು.

‘ರಾಜಕೀಯ ಪ್ರಾತಿನಿಧ್ಯ ನೀಡಬೇಕು ಎಂದು ಸಣ್ಣ ಸಮುದಾಯಗಳು ಬೇಡಿಕೆ ಮಂಡಿಸುತ್ತಿವೆ. ರಾಜ್ಯದಲ್ಲಿ ಬಂಟರು ಸುಮಾರು 5 ಲಕ್ಷ ಮಂದಿ ಇದ್ದಾರೆ. ಆದರೆ, ಸಮುದಾಯದ ಐವರಿಗೆ ಟಿಕೆಟ್‌ ನೀಡಬೇಕು ಎಂದು ನಾವು ಆಗ್ರಹಿಸುವುದಿಲ್ಲ. ಅಷ್ಟರ ಮಟ್ಟಿಗೆ ನಿರ್ಲಕ್ಷ್ಯ ಧೋರಣೆ ಹೊಂದಿದ್ದೇವೆ’ ಎಂದು ಬೇಸರ ವ್ಯಕ್ತಪಡಿಸಿದರು.

ದೇಶದಲ್ಲಿ ಶೇ 50ರಷ್ಟು 25 ವರ್ಷಕ್ಕಿಂತ ಕೆಳಗಿನವರು ಇದ್ದಾರೆ. ಟೆಕ್ಸ್‌ಟೈಲ್ಸ್‌, ಆಟೋಮೊಬೈಲ್‌, ಎಲೆಕ್ಟ್ರಾನಿಕ್ಸ್‌, ಕಂಪ್ಯೂಟರ್‌ಗಳು ಮೇಡ್‌ ಇನ್‌ ಇಂಡಿಯಾ ಆಗುತ್ತಿವೆ. ದೇಶದಲ್ಲಿ ಭ್ರಷ್ಟಾಚಾರ, ಜಾತೀಯತೆ, ಕೊಳಚೆ ಪ್ರದೇಶದಂತಹ ಅನೇಕ ಸಮಸ್ಯೆಗಳಿದ್ದರೂ ಯುವಶಕ್ತಿಯಿಂದಾಗಿ ಇದು ಸಾಧ್ಯವಾಗಿದೆ ಎಂದರು.

ರೇವಾ ವಿಶ್ವವಿದ್ಯಾಲಯದ ನಿರ್ದೇಶಕಿ ವಿದ್ಯಾ ಶೆಟ್ಟಿ, ‘ತುಳು ನಮ್ಮ ಮಾತೃಭಾಷೆ. ನಮ್ಮ ಸಂಸ್ಕೃತಿಯ ಪ್ರತೀಕ. ಆದರೆ, ಇತ್ತೀಚಿನ ದಿನಗಳಲ್ಲಿ ಬಂಟ ಯುವಕರು ತುಳು ಮಾತನಾಡುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ಕೃಷಿಕರಾದ ಬಂಟರು ಪ್ರಕೃತಿ ಮಾತೆಯನ್ನು ಪೂಜಿಸಲು ಬಿಸು ಹಬ್ಬವನ್ನು ಆಚರಿಸುತ್ತಾರೆ. ಪರಿಸರದ ಜತೆ ಗಾಢ ಸಂಬಂಧ ಹೊಂದಿದ್ದಾರೆ’ ಎಂದರು.

‘ಬಂಟ್‌ ಸಮ್ಮಿಲನ’ದ ಅಧ್ಯಕ್ಷ ಪ್ರೇಮ್‌ ಪ್ರಸಾದ್‌ ಶೆಟ್ಟಿ, ‘ಬೆಂಗಳೂರಿನಲ್ಲಿ ನೆಲೆಸಿರುವ ಸಮುದಾಯದ ಯುವಕರಿಗೆ ನಮ್ಮ ಸಂಸ್ಕೃತಿ, ಆಚಾರ, ಪದ್ಧತಿಗಳ ಬಗ್ಗೆ ಪರಿಚಯ ಮಾಡಿಕೊಡುವ ಉದ್ದೇಶದಿಂದ ಬಿಸು ಹಬ್ಬವನ್ನು ಆಚರಿಸಲಾಗುತ್ತಿದೆ. ಆ ಮೂಲಕ ಸಮಾಜವನ್ನು ಸಂಘಟಿಸುವ ಉದ್ದೇಶ ಹೊಂದಲಾಗಿದೆ’ ಎಂದು ಹೇಳಿದರು.

ನಾಲ್ವರಿಗೆ ‘ಐಕ್ಯತಾ ಯುವ ಪುರಸ್ಕಾರ’

ನಟಿ ನಿರೀಕ್ಷಾ ಶೆಟ್ಟಿ, ತುಳು ಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸುವ ಕುರಿತು ಜಾಗೃತಿ ಮೂಡಿಸುತ್ತಿರುವ ಪ್ರಸಾದ್‌ ವಿಜಯ್‌ ಶೆಟ್ಟಿ, ಯಕ್ಷಗಾನ ಕಲಾವಿದ ಕಡಬ ದಿನೇಶ್‌ ರೈ, ಕ್ರೀಡಾಪಟು ಜಯಪ್ರಕಾಶ್‌ ಶೆಟ್ಟಿ ಅವರಿಗೆ ‘ಐಕ್ಯತಾ ಯುವ ಪುರಸ್ಕಾರ’ ನೀಡಿ ಗೌರವಿಸಲಾಯಿತು.

ಪ್ರತಿಕ್ರಿಯಿಸಿ (+)