ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಹಾರ: ಜೆಟ್‌ ಏರ್‌ವೇಸ್‌ಗೆ ಆದೇಶ

ವಿಮಾನ ಇಳಿದಾಗ ಬ್ಯಾಗ್ ಕಳೆದುಕೊಂಡ ಕಥೆ ವ್ಯಥೆ...!
Last Updated 15 ಏಪ್ರಿಲ್ 2018, 19:42 IST
ಅಕ್ಷರ ಗಾತ್ರ

ಬೆಂಗಳೂರು: ವಿಮಾನದಿಂದ ಇಳಿದಾಗ ತಮ್ಮ ಲಗೇಜ್‌ ಬ್ಯಾಗ್‌ ಕಳೆದುಕೊಂಡ ಗ್ರಾಹಕರೊಬ್ಬರಿಗೆ ಜೆಟ್‌ ಏರ್‌ವೇಸ್‌ ಇಂಡಿಯಾ ಕಂಪನಿ ₹‌26,415 ಮೊತ್ತ ಪರಿಹಾರ ರೂಪದಲ್ಲಿ ಪಾವತಿಸಬೇಕು ಎಂದು ಬೆಂಗಳೂರು ನಗರ ಎರಡನೇ ಹೆಚ್ಚುವರಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ಆದೇಶಿಸಿದೆ.

ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ಅಧ್ಯಕ್ಷೆ ಟಿ.ಶೋಭಾದೇವಿ, ಸದಸ್ಯರಾದ ಬಾಲಕೃಷ್ಣ ವಿ ಮಸಳಿ ಹಾಗೂ ವಿ.ಅನುರಾಧಾ ಈ ಕುರಿತಂತೆ ಆದೇಶಿಸಿದ್ದಾರೆ.

ಪ್ರಕರಣವೇನು?: ನಗರದಲ್ಲಿ ಸ್ಟೇಟ್‌ ಬ್ಯಾಂಕ್‌ ಆಫ್ ಇಂಡಿಯಾದಲ್ಲಿ ಡೆಪ್ಯುಟಿ ಜನರಲ್ ಮ್ಯಾನೇಜರ್ ಆಗಿ ಕೆಲಸ ನಿರ್ವಹಿಸುತ್ತಿರುವ ಆರ್.ಶಂಕರನಾರಾಯಣನ್‌ ಎಂಬುವರು 2016ರ ಜುಲೈ 7ರಂದು ತಮ್ಮ ಬಡ್ತಿ ಸಂದರ್ಶನ ಎದುರಿಸಲು ಜೆಟ್‌ ಏರ್‌ವೇಸ್‌ ವಿಮಾನದಲ್ಲಿ ಬೆಂಗಳೂರಿನಿಂದ ಜುಲೈ 6ರಂದು ಮುಂಬೈಗೆ ತೆರಳಿದ್ದರು. ವಿಮಾನ ನಿಲ್ದಾಣದಲ್ಲಿ ಇಳಿದಾಗ ಅವರ ಲಗೇಜ್‌ ಬ್ಯಾಗ್‌ ಅದಲು ಬದಲಾಗಿತ್ತು. ಇದನ್ನು ಜೆಟ್‌ ವಿಮಾನ ಅಧಿಕಾರಿಗಳ ಗಮನಕ್ಕೆ ತಂದರು. ನಂತರ ಹೊಸಬಟ್ಟೆ, ಶೂ ಖರೀದಿಸಿ, ಸಂದರ್ಶನ ಎದುರಿಸಿದ್ದರು. ಮುಂಗಡ ಬುಕ್ಕಿಂಗ್‌ನಂತೆ ಅದೇ ವಿಮಾನದಲ್ಲಿ  8ರಂದು ವಾಪಸು ಬೆಂಗಳೂರಿಗೆ ಬಂದಿದ್ದರು.

ಬ್ಯಾಗ್ ಪತ್ತೆ ಮಾಡಲು ಅಧಿಕಾರಿಗಳಿಗೆ ಸಾಧ್ಯವಾಗಿರಲಿಲ್ಲ. ಒಂದು ವಾರದ ನಂತರ, ‘ನಿಮ್ಮ ಬ್ಯಾಗ್‌ ಸಿಕ್ಕಿಲ್ಲ’ ಎಂದು ಕೈಚೆಲ್ಲಿದ್ದರು.

ಶಂಕರನಾರಾಯಣನ್‌ ವಿಮಾನ ಅಧಿಕಾರಿಗಳ ಜೊತೆ ಇ ಮೇಲ್ ಮುಖಾಂತರ ಪರಿಹಾರ ಕೇಳಿದ್ದರು. ಅಧಿಕಾರಿಗಳು ₹ 3,150 ನೀಡುವುದಾಗಿ ತಿಳಿಸಿದ್ದರು. ಆದರೆ, ಇದಕ್ಕೊಪ್ಪದ ಶಂಕರನಾರಾಯಣನ್‌ ಗ್ರಾಹಕರ ವೇದಿಕೆಗೆ ದೂರು ನೀಡಿದ್ದರು.

‘ಉತ್ತಮ ಸೇವೆ ಗ್ರಾಹಕನ ಹಕ್ಕು’
ಪ್ರಕರಣದ ವಿಚಾರಣೆ ನಡೆಸಿದ ವೇದಿಕೆ 2018ರ ಏಪ್ರಿಲ್ 6ರಂದು ಆದೇಶ ನೀಡಿದೆ. ‘ಗ್ರಾಹಕರ ರಕ್ಷಣಾ ಕಾಯ್ದೆ–1986ರ ಅನುಸಾರ ಪ್ರತಿಯೊಬ್ಬ ಗ್ರಾಹಕ ಉತ್ತಮ ಸೇವೆ ಪಡೆಯುವುದು ಅವನ ಹಕ್ಕು. ಈ ಕುರಿತಂತೆ ಈಗಾಗಲೇ ಸುಪ್ರೀಂ ಕೋರ್ಟ್‌ 2013ರಂದು ಎನ್‌ಸಿಡಿಆರ್‌ಸಿ–346ರ ಪ್ರಕರಣದಲ್ಲಿ ಸ್ಪಷ್ಟವಾಗಿ ತೀರ್ಪು ನೀಡಿದೆ’ ಎಂದು ತಿಳಿಸಲಾಗಿದೆ.

‘ವಿಮಾನ ಕಂಪನಿ ಲೋಪ ಎಸಗಿದೆ. ಶಂಕರನಾರಾಯಣನ್‌ ಮಾನಸಿಕ ಕಿರುಕುಳ, ಒತ್ತಡ ಎದುರಿಸಿದ್ದಾರೆ ಎಂಬುದು ವೇದ್ಯವಾಗುತ್ತದೆ. ಅವರು ಕಳೆದುಕೊಂಡಿರುವ ವಸ್ತುಗಳ ಮೌಲ್ಯ ಭರಿಸಿಕೊಡಬೇಕು’ ಎಂದು ಆದೇಶಿಸಲಾಗಿದೆ. ‘ಹೊಸ ಬಟ್ಟೆ, ಶೂ ಖರೀದಿಗೆ ವ್ಯಯಿಸಿದ ₹ 16,415 ಮತ್ತು ವ್ಯಾಜ್ಯದ ಖರ್ಚು ರೂಪದಲ್ಲಿ ₹ 10 ಸಾವಿರವನ್ನು ದೂರುದಾರರಿಗೆ ಮೂವತ್ತು ದಿನದಲ್ಲಿ ನೀಡಬೇಕು’ ಎಂದು ವಿವರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT