7

ಮೇಯರ್‌, ಮಾಜಿ ಮೇಯರ್‌ಗೆ ಟಿಕೆಟ್‌

Published:
Updated:
ಮೇಯರ್‌, ಮಾಜಿ ಮೇಯರ್‌ಗೆ ಟಿಕೆಟ್‌

ಬೆಂಗಳೂರು: ನಗರದಲ್ಲಿ ಶಾಂತಿನಗರ ಬಿಟ್ಟು ಉಳಿದ 27 ಕ್ಷೇತ್ರಗಳಿಗೆ ಅಭ್ಯರ್ಥಿ ಹೆಸರನ್ನು ಕಾಂಗ್ರೆಸ್‌ ಅಂತಿಮಗೊಳಿಸಿದೆ. ಮೇಯರ್‌ ಆರ್‌.ಸಂಪತ್‌ ರಾಜ್‌ ಸಿ.ವಿ.ರಾಮನ್‌ನಗರದಿಂದ ಹಾಗೂ ಮಾಜಿ ಮೇಯರ್‌ ಜಿ.ಪದ್ಮಾವತಿ ರಾಜಾಜಿನಗರದಿಂದ ಟಿಕೆಟ್‌ ಗಿಟ್ಟಿಸಿದ್ದಾರೆ.

ಶಾಂತಿನಗರದ ಶಾಸಕ ಎನ್‌.ಎ.ಹ್ಯಾರಿಸ್‌ ಪುತ್ರ ಮೊಹಮ್ಮದ್‌ ನಲಪಾಡ್‌ ಪಬ್‌ನಲ್ಲಿ ವಿದ್ವತ್‌ ಎಂಬುವರ ಮೇಲೆ ನಡೆಸಿದ ಹಲ್ಲೆ ಪ್ರಕರಣದಿಂದ ಪಕ್ಷದ ವರ್ಚಸ್ಸಿಗೆ ಧಕ್ಕೆ ಉಂಟಾಗಿತ್ತು. ಹ್ಯಾರಿಸ್‌ ಅವರಿಗೆ ಮತ್ತೆ ಟಿಕೆಟ್‌ ನೀಡಿದರೆ, ವಿರೋಧ ಪಕ್ಷದವರು ಅದನ್ನೇ ಚುನಾವಣಾ ವಿಷಯವನ್ನಾಗಿಸುವ ಸಾಧ್ಯತೆ ಇರುವುದರಿಂದ ಪಕ್ಷದ ವರಿಷ್ಠರು ಎಚ್ಚರಿಕೆಯ ನಡೆ ಇಡಲು ತೀರ್ಮಾನಿಸಿದ್ದಾರೆ.

ಶಾಸಕರಾದ ಬೈರತಿ ಬಸವರಾಜು, ಎಸ್‌.ಟಿ.ಸೋಮಶೇಖರ, ಮುನಿರತ್ನ, ಕೆ.ಜೆ.ಜಾರ್ಜ್‌, ಆರ್‌.ರೋಷನ್‌ ಬೇಗ್, ದಿನೇಶ್‌ ಗುಂಡೂರಾವ್‌, ಎಂ.ಕೃಷ್ಣಪ್ಪ, ಪ್ರಿಯಕೃಷ್ಣ, ಆರ್‌.ವಿ.ದೇವರಾಜ್‌, ರಾಮಲಿಂಗಾರೆಡ್ಡಿ, ಬಿ.ಶಿವಣ್ಣ ಅವರಿಗೆ ಟಿಕೆಟ್‌ ನೀಡಲಾಗಿದೆ.

ಜೆಡಿಎಸ್‌ನಿಂದ ವಲಸೆ ಬಂದಿರುವ ಜಮೀರ್‌ ಅಹಮದ್‌ ಖಾನ್‌ ಹಾಗೂ ಅಖಂಡ ಶ್ರೀನಿವಾಸಮೂರ್ತಿ ಅವರಿಗೆ ಟಿಕೆಟ್‌ ಸಿಕ್ಕಿದೆ. ಪುಲಕೇಶಿನಗರದಲ್ಲಿ ಮತ್ತೆ ಟಿಕೆಟ್‌ ಪಡೆಯುವ ಮಾಜಿ ಶಾಸಕ ಬಿ.ಪ್ರಸನ್ನ ಕುಮಾರ್‌ ಪ್ರಯತ್ನ ಕೈಗೂಡಿಲ್ಲ. ಕಳೆದ ಚುನಾವಣೆಯಲ್ಲಿ ಅವರು ಅಖಂಡ ವಿರುದ್ಧ ಸೋತಿದ್ದರು.

ರಾಮಲಿಂಗಾ ರೆಡ್ಡಿ ತಮ್ಮ ಪುತ್ರಿ ಸೌಮ್ಯಾ ರೆಡ್ಡಿಗೆ ಜಯನಗರದಿಂದ ಟಿಕೆಟ್‌ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬೊಮ್ಮನಹಳ್ಳಿಯಲ್ಲಿ ಕೆಪಿಸಿಸಿ ಕಾರ್ಯದರ್ಶಿ ಸುಷ್ಮಾ ರಾಜಗೋಪಾಲ್‌ ಅವರನ್ನು ಪಕ್ಷವು ಅಭ್ಯರ್ಥಿಯನ್ನಾಗಿ ಘೋಷಿಸಿದೆ.

ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಹೇಳಿಕೊಂಡಿದ್ದ ಸಚಿವ ಎಂ.ಆರ್‌.ಸೀತಾರಾಂ ಅವರಿಗೂ ಟಿಕೆಟ್‌ ನೀಡಲಾಗಿದೆ. ವಿಧಾನ ಪರಿಷತ್‌ ಸದಸ್ಯರಾಗಿರುವ ಅವರು ಮಲ್ಲೇಶ್ವರದಲ್ಲಿ ಮತ್ತೆ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಇತ್ತೀಚೆಗಷ್ಟೇ ವಿಧಾನಪರಿಷತ್‌ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದ ಬೈರತಿ ಸುರೇಶ್‌ ಹೆಬ್ಬಾಳದಲ್ಲಿ ಪಕ್ಷದ ಅಭ್ಯರ್ಥಿಯಾಗುವಲ್ಲಿ ಸಫಲರಾಗಿದ್ದಾರೆ. ಇಲ್ಲಿ ಕೇಂದ್ರದ ಮಾಜಿ ಸಚಿವ ಜಾಫರ್‌ ಷರೀಫ್‌  ಮೊಮ್ಮಗ ಸಿ.ಕೆ.ಅಬ್ದುಲ್‌ ರೆಹಮಾನ್‌ ಷರೀಫ್‌ ಟಿಕೆಟ್‌ ಆಕಾಂಕ್ಷಿಯಾಗಿದ್ದರು.

ಮಹಾಲಕ್ಷ್ಮಿ ಲೇಔಟ್‌ನಲ್ಲಿ ಎನ್‌ಎಸ್‌ಯುಐ ಅಧ್ಯಕ್ಷ ಎಚ್‌.ಎಸ್‌.ಮಂಜುನಾಥ್ ಅಭ್ಯರ್ಥಿಯಾಗಿದ್ದಾರೆ. ಇಲ್ಲಿ ಟಿಕೆಟ್‌ ಆಕಾಂಕ್ಷಿಯಾಗಿದ್ದ ಡಾ.ಗಿರೀಶ್‌ ಕೆ.ನಾಶಿ ಎರಡು ವರ್ಷಗಳಿಂದ ಮತದಾರರ ಒಲವು ಗಳಿಸುವ ಪ್ರಯತ್ನ ನಡೆಸಿದ್ದರು.

ಬಿಜೆಪಿ ನಂಟು ಕಡಿದುಕೊಂಡಿರುವ ಮಾಜಿ ಮೇಯರ್‌ ಕೆ.ವೆಂಕಟೇಶಮೂರ್ತಿ ಪದ್ಮನಾಭನಗರದಲ್ಲಿ ಕಾಂಗ್ರೆಸ್‌ ಟಿಕೆಟ್‌ ಪಡೆಯಲು ಪ್ರಯತ್ನಿಸಿದ್ದರು. ರಾಯಣ್ಣ ಬ್ರಿಗೇಡ್‌ನ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಅವರ ಈ ಪ್ರಯತ್ನ ಕೈಗೂಡಿಲ್ಲ. ಮಾಜಿ ಶಾಸಕ ಎಂ.ಶ್ರೀನಿವಾಸ್‌ ಅವರೂ ಇಲ್ಲಿ ಟಿಕೆಟ್‌ಗೆ ಯತ್ನಿಸಿದ್ದರು. ಶ್ರೀನಿವಾಸ್‌ಗೆ ಟಿಕೆಟ್‌ ನೀಡಬಾರದು ಎಂದು ಆಗ್ರಹಿಸಿ ಪಕ್ಷದ ಸ್ಥಳೀಯ ಮುಖಂಡ ಗುರಪ್ಪ ನಾಯ್ಡು ಬೆಂಬಲಿಗರು ಕೆಪಿಸಿಸಿ ಕಚೇರಿ ಎದುರು ಶನಿವಾರ ಪ್ರತಿಭಟನೆ ನಡೆಸಿದ್ದರು. 2008ರ ಚುನಾವಣೆಯಲ್ಲಿ ಇಲ್ಲಿ ಸೋತಿದ್ದ ಗುರಪ್ಪ ನಾಯ್ಡು ಅವರಿಗೆ ಪಕ್ಷ ಮತ್ತೆ ಟಿಕೆಟ್‌ ನೀಡಿದೆ.

ಬೆಂಗಳೂರು ಸಹಕಾರಿ ಹಾಲು ಒಕ್ಕೂಟದ ಅಧ್ಯಕ್ಷ ಆರ್‌.ಕೆ.ರಮೇಶ್‌ ಬೆಂಗಳೂರು ದಕ್ಷಿಣದ ಟಿಕೆಟ್‌ ಪಡೆದಿದ್ದಾರೆ. ಕಳೆದ ಚುನಾವಣೆಯಲ್ಲಿ ದಾಸರಹಳ್ಳಿಯಲ್ಲಿ ಪಕ್ಷದ ಅಭ್ಯರ್ಥಿಯಾಗಿದ್ದ ಬಿ.ಎಲ್‌.ಶಂಕರ್‌ ಈ ಬಾರಿ ಚಿಕ್ಕಮಗಳೂರಿನಿಂದ ಕಣಕ್ಕಿಳಿಯಲಿದ್ದಾರೆ. ಇಲ್ಲಿ ಪಿ.ಎನ್‌.ಕೃಷ್ಣಸ್ವಾಮಿಗೆ ಅವಕಾಶ ಲಭಿಸಿದೆ. 2008ರ ಚುನಾವಣೆಯಲ್ಲಿ ರಾಜರಾಜೇಶ್ವರಿ ನಗರದಲ್ಲಿ ಬಿಜೆಪಿಯ ಎಂ.ಶ್ರೀನಿವಾಸ್‌ ವಿರುದ್ಧ ಸೋತಿದ್ದರು.

ಕೆ.ಚಂದ್ರಶೇಖರ್‌ ಹಾಗೂ ಬಿ.ಕೆ.ಚಂದ್ರಶೇಖರ್‌ ನಡುವಿನ ಜಗಳದಿಂದ ಬೇಸತ್ತ ವರಿಷ್ಠರು ಬಸವನಗುಡಿಯಲ್ಲಿ ಉದ್ಯಮಿ ಎಂ.ಬೋರೇಗೌಡ ಅವರನ್ನು ಕಣಕ್ಕಿಳಿಸಲು ನಿರ್ಧರಿಸಿದ್ದಾರೆ.

ಮಹದೇವಪುರದಲ್ಲಿ 2013ರಲ್ಲಿ ಬಿಜೆಪಿಯ ಅರವಿಂದ ಲಿಂಬಾವಳಿ ವಿರುದ್ಧ 6,149 ಮತಗಳಿಂದ ಸೋತಿದ್ದ ಎ.ಸಿ.ಶ್ರೀನಿವಾಸ್‌ ಅವರಿಗೆ ಮತ್ತೆ ಮಣೆ ಹಾಕಲಾಗಿದೆ.

ಸಂಸದ ಎಂ.ವೀರಪ್ಪ ಮೊಯಿಲಿ ತಮ್ಮ ಶಿಷ್ಯನಿಗೆ ಯಲಹಂಕದಲ್ಲಿ ಟಿಕೆಟ್‌ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ.ಬಿಜೆಪಿಯ ಎಸ್‌.ಆರ್.ವಿಶ್ವನಾಥ್ ವಿರುದ್ಧ ಸೋತಿದ್ದ ಎಂ.ಎನ್‌.ಗೋಪಾಲಕೃಷ್ಣ ಈ ಬಾರಿಯೂ ಅಭ್ಯರ್ಥಿಯಾಗಲಿದ್ದಾರೆ. ಕೆಪಿಸಿಸಿ ಕಾರ್ಯದರ್ಶಿ ಕೇಶವ ರಾಜಣ್ಣ  ಹಾಗೂ ವಿಧಾನ ಪರಿಷತ್‌ ಸದಸ್ಯ ನಾರಾಯಣಸ್ವಾಮಿ ಅವರೂ ಇಲ್ಲಿನ ಟಿಕೆಟ್‌ ಮೇಲೆ ಕಣ್ಣಿಟ್ಟಿದ್ದರು.

ಮುಖ್ಯಮಂತ್ರಿ ನಿವಾಸದಲ್ಲಿ ಸಭೆ

ಚುನಾವಣಾ ಪ್ರಚಾರ ಕಾರ್ಯತಂತ್ರದ ಬಗ್ಗೆ ಚರ್ಚಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕೃತ ನಿವಾಸ ಕಾವೇರಿಯಲ್ಲಿ ಭಾನುವಾರ ಸಂಜೆ ಸಭೆ ನಡೆಯಿತು.

ಪಕ್ಷದ ಅಭ್ಯರ್ಥಿಗಳ ಹೆಸರು ‌ಅಂತಿಮಗೊಳಿಸುವ ಸಲುವಾಗಿ ನವದೆಹಲಿಯಲ್ಲಿ ನಡೆದ ಸಭೆಯಲ್ಲಿ ಪಾಲ್ಗೊಂಡು ಸಂಜೆಯಷ್ಟೇ ನಗರಕ್ಕೆ ಮರಳಿದ ಮುಖ್ಯಮಂತ್ರಿಯವರು,  ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್‌, ಪ್ರಚಾರ ಸಮಿತಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹಾಗೂ ಕಾರ್ಯಾಧ್ಯಕ್ಷ ದಿನೇಶ್‌ ಗುಂಡೂರಾವ್‌ ಜೊತೆ ಸಮಾಲೋಚನೆ ನಡೆಸಿದರು.

ಮೊದಲ ಪಟ್ಟಿಯಲ್ಲಿ ತಮ್ಮ ಹೆಸರು ಕಾಣಿಸಿಕೊಳ್ಳದ ಕಾರಣ ಆತಂಕಿತರಾಗಿರುವ ಶಾಸಕ ಎನ್‌.ಎ.ಹ್ಯಾರಿಸ್‌ ಅವರು ಮುಖ್ಯಮಂತ್ರಿ ಅವರನ್ನು ಭೇಟಿಯಾದರು.

ಪಕ್ಷದ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ವಿರೋಧದ ನಡುವೆಯೂ ಟಿಕೆಟ್‌ ಪಡೆಯುವಲ್ಲಿ ಯಶಸ್ವಿಯಾಗಿರುವ ಅಶೋಕ್‌ ಖೇಣಿ ಅವರು ಮುಖ್ಯಮಂತ್ರಿಯನ್ನು ಭೇಟಿಯಾಗಿ ಕೃತಜ್ಞತೆ ಸಲ್ಲಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry