ಶುಕ್ರವಾರ, ಡಿಸೆಂಬರ್ 6, 2019
25 °C

ಗಾರ್ಮೆಂಟ್ಸ್‌ ಕಾರ್ಮಿಕರಿಗೆ ಕನಿಷ್ಠ ವೇತನ ಕನ್ನಡಿಯೊಳಗಿನ ಗಂಟೇ?

Published:
Updated:

ಬೆಂಗಳೂರು: ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಬೆಳಿಗ್ಗೆ ಎಂಟೂವರೆಗೇ ಓಟ. ಕಾರ್ಖಾನೆ ತಲುಪುವುದು ಎರಡು ನಿಮಿಷ ತಡವಾದರೂ ಬೈಗುಳಗಳ ಸುರಿಮಳೆ. ಗಂಟೆಗಿಷ್ಟು ಟಾರ್ಗೆಟ್ ತಲುಪುವ ತನಕ ಮೈಮನವೆಲ್ಲಾ ಹೊಲಿಗೆ ಯಂತ್ರದತ್ತಲೇ ಕೇಂದ್ರೀಕೃತ. ದಾಹಕ್ಕೆ ನೀರು ಕುಡಿಯಬೇಕೆನ್ನಿಸಿದರೂ ಬಾತ್‌ರೂಂಗೆ ಹೋದರೆ ಮ್ಯಾನೇಜರ್ ಬೈಯ್ಯುತ್ತಾನೆಂಬ ಭಯ, ನಿಗದಿತ ಟಾರ್ಗೆಟ್‌ನಲ್ಲಿ ಬಟ್ಟೆ ಹೊಲಿಯುವ ಒತ್ತಡಕ್ಕೆ ಒಮ್ಮೊಮ್ಮೆ ಮಧ್ಯಾಹ್ನದ ಊಟಕ್ಕೂ ಕತ್ತರಿ. ಸಂಜೆಗತ್ತಲು ಆವರಿಸಿದಾಗಲೇ ದಿನದ ಕೆಲಸಕ್ಕೆ ವಿರಾಮ. ಮನೆಯತ್ತ ಹೆಜ್ಜೆ ಹಾಕುತ್ತಲೇ ಮನದೊಳಗೆ ರಾತ್ರಿಯ ಅಡುಗೆಗೆ ಲೆಕ್ಕಾಚಾರ...

–ಇದು ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ಸಿದ್ಧ ಉಡುಪು ತಯಾರಿಕಾ ಕಾರ್ಖಾನೆಗಳಲ್ಲಿರುವ (ಗಾರ್ಮೆಂಟ್ಸ್‌) ಮಹಿಳಾ ಕಾರ್ಮಿಕರ ನಿತ್ಯದ ದಿನಚರಿ. ಬೆಳಿಗ್ಗೆ 9.30ರಿಂದ ಸಂಜೆ 5.30 ಅಥವಾ ಕೆಲವೊಮ್ಮೆ ರಾತ್ರಿ 7 ಗಂಟೆಯವರೆಗೆ ದುಡಿಯುವ ಈ ಕಾರ್ಮಿಕರಿಗೆ ತಿಂಗಳ ಸಂಬಳ ಏಳು ಸಾವಿರ ರೂಪಾಯಿ ಮಾತ್ರ!

ರಾಜಧಾನಿ ಸೇರಿದಂತೆ ಮಂಡ್ಯ, ಮೈಸೂರು, ಚಾಮರಾಜನಗರ, ಶಿವಮೊಗ್ಗ, ರಾಮನಗರ, ದಾವಣಗೆರೆ, ತುಮಕೂರು, ಕೋಲಾರ, ಹಾಸನ, ಬಳ್ಳಾರಿ, ಬೆಳಗಾವಿ ಜಿಲ್ಲೆಗಳಲ್ಲಿ ಚದುರಿ ಹೋಗಿರುವ ಸುಮಾರು ಏಳು ಲಕ್ಷಕ್ಕೂ ಹೆಚ್ಚಿನ ಸಿದ್ಧ ಉಡುಪು ಕಾರ್ಖಾನೆಗಳ ಕಾರ್ಮಿಕರಿಗೆ ಕನಿಷ್ಠ ವೇತನ ಎಂಬುದು ಇಂದಿಗೂ ಕನ್ನಡಿಯೊಳಗಿನ ಗಂಟಾಗಿಯೇ ಉಳಿದಿದೆ.

ಎರಡು ವರ್ಷದ ಹಿಂದೆ ಕೇಂದ್ರ ಸರ್ಕಾರ ಈ ಕಾರ್ಮಿಕರ ಪಿ.ಎಫ್ ಹಣದ ಮೇಲೆ ಕಣ್ಣು ಹಾಕಿದಾಗ, ಇವರು ಬೀದಿಗಿಳಿದು ಪ್ರತಿಭಟಿಸಿದರು. ಅದುವರೆಗೂ, ಈ ಕಾರ್ಮಿಕರು ಹೊಲಿದ ರೆಡಿಮೇಡ್ ಉಡುಪುಗಳನ್ನು ತೊಟ್ಟು ಬೀಗುತ್ತಿದ್ದವರಿಗೆ ಅಂದು ಗಾರ್ಮೆಂಟ್ ಕಾರ್ಖಾನೆಗಳ ಕಾರ್ಮಿಕರ ನಿಜಜೀವನದ ದರ್ಶನವಾಯಿತು.

15 ವರ್ಷಗಳ ನಂತರ ಸರ್ಕಾರದ ವಿರುದ್ಧ ತಿರುಗಿ ಬಿದ್ದು ತಮ್ಮ ದುಡಿಮೆಯ ಹಣ ಉಳಿಸಿಕೊಳ್ಳಲು ಹೋರಾಡಿದ್ದರು ಈ ಕಾರ್ಮಿಕರು. ಇದೆಲ್ಲಾ ಆಗಿ ಎರಡು ವರ್ಷ ಕಳೆದಿದ್ದರೂ ಇವರ ಬದುಕಿನಲ್ಲಿ ಮಾತ್ರ ಯಾವ ಬದಲಾವಣೆಯ ಗಾಳಿಯೂ ಬೀಸಿಲ್ಲ. ಯಾವ ರಾಜಕೀಯ ಪಕ್ಷಗಳಿಗೂ, ಸರ್ಕಾರಗಳಿಗೂ ಇವರ ನೆನಪಿಲ್ಲ.

ಗಾರ್ಮೆಂಟ್ಸ್ ಮತ್ತು ಟೆಕ್ಸ್‌ಟೈಲ್ಸ್ ವರ್ಕರ್ಸ್‌ ಯೂನಿಯನ್ ಮುಖಂಡ ಜಯರಾಂ ಕೆ.ಆರ್. ಅವರು ಹೇಳುವ ಪ್ರಕಾರ, ‘70ರ ದಶಕದಲ್ಲಿ ಗಾರ್ಮೆಂಟ್ಸ್ ಉದ್ಯಮ ಪ್ರವರ್ಧಮಾನಕ್ಕೆ ಬಂತು. ಆಗ ಕಾರ್ಮಿಕರಿಗೆ ದಿನಕ್ಕೆ ಬರೀ ಏಳು ರೂಪಾಯಿ ಕನಿಷ್ಠ ವೇತನವಿತ್ತು. ಬೆರಳೆಣಿಕೆಯಷ್ಟಿರುವ ಕಾರ್ಮಿಕ ಸಂಘಟನೆಗಳ ಹೋರಾಟದ ಫಲವಾಗಿ ಇಂದು ದಿನಕ್ಕೆ ₹ 313 ಕನಿಷ್ಠ ವೇತನ ಜಾರಿಯಾಗಿದೆ’ (ಬಹುತೇಕ ಕಾರ್ಖಾನೆ ಗಳು ಇಷ್ಟು ವೇತನ ಪಾವತಿಸುವುದಿಲ್ಲ)

ಪ್ರತಿ ಐದು ವರ್ಷಕ್ಕೊಮ್ಮೆ ಸರ್ಕಾರ ಕಾರ್ಮಿಕರ ಕನಿಷ್ಠ ವೇತನವನ್ನು ಪರಿಷ್ಕರಣೆ ಮಾಡಬೇಕು. ವೇತನ ಪರಿಷ್ಕರಣೆಯ ಮಾತು ಬಂದಾಗಲೆಲ್ಲಾ ಸರ್ಕಾರ ಮತ್ತು ಗಾರ್ಮೆಂಟ್ಸ್ ಕಾರ್ಖಾನೆಗಳ ಮಾಲೀಕರ ಜಾಣತನದ ನಡೆಯಿಂದಾಗಿ ಕಾರ್ಮಿಕರಿಗೆ ಇಂದಿಗೂ ಸೂಕ್ತ ಕನಿಷ್ಠ ವೇತನ ಗಗನಕುಸುಮವಾಗಿದೆ. 1979ರಲ್ಲಿ ರಾಜ್ಯ ಸರ್ಕಾರ ಕನಿಷ್ಠ ವೇತನ ನಿಗದಿಗೊಳಿಸಿದಾಗ ಮಾಲೀಕರು ಕೋರ್ಟ್‌ ಮೊರೆ ಹೋದರು. ಆ ಕೇಸ್ 1986ರ ತನಕ ನಡೆಯಿತು. ಅಲ್ಲಿಯತನಕ ಮಾಲೀಕರು ಕಾರ್ಮಿಕರಿಗೆ ಪಾವತಿಸಬೇಕಾದ ಮೊತ್ತವನ್ನು ತಮ್ಮಲ್ಲೇ ಉಳಿಸಿಕೊಂಡು ಲಾಭ ಗಳಿಸಿಕೊಂಡರು. ಪುನಃ 2001ರಲ್ಲಿ ಕನಿಷ್ಠ ವೇತನ ನಿಗದಿಪಡಿಸಿದಾಗ, ಮಾಲೀಕರು ಕೋರ್ಟ್ ಮೊರೆ ಹೋಗದೆ ಸೀದಾ ರಾಜ್ಯ ಸರ್ಕಾರದ ಮೊರೆ ಹೋಗಿ ಲಾಬಿ ನಡೆಸತೊಡಗಿದರು ಎನ್ನುತ್ತಾರೆ ಅವರು.

ಯಾರಿಗೂ ಬೇಡವಾದವರು: ‘ದೊಡ್ಡ ಬ್ರ್ಯಾಂಡೆಡ್ ಕಂಪನಿಗಳ ಬಟ್ಟೆಗಳನ್ನು ಹೊಲಿಯುವವರು ನಾವು. ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಸೂಜಿ–ದಾರ ಪೋಣಿಸುತ್ತಾ, ತದೇಕಚಿತ್ತರಾಗಿ ಸೆಕೆಂಡುಗಳಲ್ಲಿ ಬಟ್ಟೆ ವಿನ್ಯಾಸ ಮಾಡುವ ಕುಶಲಕರ್ಮಿಗಳು. ಆದರೆ, ರಾಜಕೀಯ ಪಕ್ಷಗಳಾಗಲೀ, ಸರ್ಕಾರಗಳಾಗಲೀ ನಮ್ಮ ಬಗ್ಗೆ ಕಾಳಜಿ ವಹಿಸುವುದೇ ಇಲ್ಲ. ಬರುವ ಅಲ್ಪ ಸಂಬಳದಲ್ಲಿ ನಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣವಿರಲಿ, ಕನಿಷ್ಠ ಒಳ್ಳೆಯ ಊಟವನ್ನೂ ಕೊಡಲಾಗದು. ನಾವು ಹೊಲಿಯುವ ಬಟ್ಟೆ ಎಲ್ಲರಿಗೂ ಬೇಕು. ಆದರೆ, ನಾವು ಮಾತ್ರ ಯಾರಿಗೂ ಬೇಡವಾದವರು’ ಎನ್ನುತ್ತಾರೆ ಬೆಂಗಳೂರಿನ ಗಾರ್ಮೆಂಟ್ಸ್ ಉದ್ಯೋಗಿ ಸಾಕಮ್ಮ.

‘ನಿನ್ನೆ ಮೊನ್ನೆ ಬಂದವರಿಗೂ ಅಷ್ಟೇ ಸಂಬಳ, ಹತ್ತು ವರ್ಷದಿಂದ ಕೆಲಸ ಮಾಡುತ್ತಿರುವವರಿಗೂ ಅಷ್ಟೇ ಸಂಬಳ. ಇದ್ಯಾವ ನ್ಯಾಯ? ನಮಗೆ ಪ್ರಮೋಷನ್, ಬೋನಸ್ಸು ಎಲ್ಲಾ ಕನಸಿನ ಮಾತು. ಮಗುವಿಗೆ ಆರಾಮ ಇಲ್ಲ ಅಂತ ಒಂದು ದಿನ ಐದು ನಿಮಿಷ ತಡವಾಗಿ ಕೆಲಸಕ್ಕೆ ಹೋಗಿದ್ದಕ್ಕೆ ಪ್ರೊಡಕ್ಷನ್ ಮ್ಯಾನೇಜರ್ ಎಲ್ಲರ ಎದುರೇ ಹಿಗ್ಗಾಮುಗ್ಗಾ ಬೈದುಬಿಟ್ಟ. ನಿಮ್ಮಂಥವರಿಗೆ ಕೆಲಸ ಮಾಡಲು ಯೋಗ್ಯತೆ ಇಲ್ಲವೆಂದರೆ, ರಸ್ತೆಯಲ್ಲಿ ಹೋಗಿ ನಿಲ್ಲಿ ಅನ್ನುವ ತನಕ ಮಾತನಾಡಿಬಿಟ್ಟ. ಮಗುವಿನ ಭವಿಷ್ಯ ನೆನೆಸಿಕೊಂಡು, ಅವಮಾನ ಸಹಿಸಿಕೊಂಡೇ ಕಣ್ಣೀರಾದೆ. ಇಂಥ ಅವಮಾನ ಒಂದಲ್ಲ ನೂರಾರು’ ಎಂದು ನೋವಿನಿಂದ ನುಡಿಯುತ್ತಾರೆ ಹುಬ್ಬಳ್ಳಿಯ ಗಾರ್ಮೆಂಟ್ಸ್ ಉದ್ಯೋಗಿ ಶಾಂತಾ (ಹೆಸರು ಬದಲಿಸಲಾಗಿದೆ).

‘ಗಾರ್ಮೆಂಟ್ಸ್ ಉದ್ಯಮದಲ್ಲಿ ಮಹಿಳೆಯರ ಮೇಲೆ ನಿರಂತರವಾಗಿ ಶೋಷಣೆ ನಡೆಯುತ್ತಿದೆ. ಮಾನಸಿಕವಾಗಿಯಷ್ಟೇ ಅಲ್ಲ, ಕೆಲವೊಮ್ಮೆ ಲೈಂಗಿಕ ಕಿರುಕುಳದ ಘಟನೆಗಳೂ ಆಗಿವೆ. ಕೆಲ ಪ್ರೊಡಕ್ಷನ್ ಮ್ಯಾನೇಜರ್‌ಗಳು ಮಹಿಳೆಯರನ್ನು ಏಕವಚನದಲ್ಲೇ ಮಾತನಾಡಿಸುತ್ತಾರೆ. ಕನಿಷ್ಠ ಗೌರವವನ್ನೂ ಕೊಡುವುದಿಲ್ಲ. ಹೊಟ್ಟೆಪಾಡಿಗಾಗಿ ಕೆಲಸಕ್ಕೆ ಬರುವ ಈ ಮಹಿಳೆಯರಿಗೆ ಕಾನೂನಿನ ತಿಳಿವಳಿಕೆಯೂ ಇರೋದಿಲ್ಲ. ಇನ್ನು ಈ ಕಾರ್ಖಾನೆಗಳಲ್ಲಿ ಯೂನಿಯನ್ ಕಟ್ಟಿಕೊಳ್ಳಲೂ ಅವಕಾಶವಿಲ್ಲ. ಆದರೆ, ಕೆಲ ಕಾರ್ಖಾನೆಗಳಲ್ಲಿ ಲೈಂಗಿಕ ಕಿರುಕುಳ ತಡೆ ಸಮಿತಿಗಳಿವೆಯಾದರೂ ಅವೆಲ್ಲಾ ಕಾಗದದಲ್ಲಿ ಮಾತ್ರ ಕ್ರಿಯಾಶೀಲವಾಗಿವೆ. ಕಾರ್ಮಿಕರ ಹಿತರಕ್ಷಣೆ ಆಯಾ ರಾಜ್ಯ ಸರ್ಕಾರಗಳ ಜವಾಬ್ದಾರಿ. ಅಂತೆಯೇ ಕೆಲಸದ ಸ್ಥಳದಲ್ಲಿ ಮಹಿಳೆಯರಿಗೆ ಸುರಕ್ಷಿತ ವಾತಾವರಣ ನಿರ್ಮಿಸಬೇಕು’ ಎನ್ನುತ್ತಾರೆ ಕಾರ್ಮಿಕ ನಾಯಕಿ ಪ್ರತಿಭಾ ಆರ್‌.

ಇಲ್ಲಿನವರಿಗೇ ಹೆಚ್ಚು ಬೇಡಿಕೆ: ದೆಹಲಿ, ಬೆಂಗಳೂರು, ಕೋಲ್ಕತ್ತ, ತ್ರಿಪುರಾದಲ್ಲಿ ಮಾತ್ರ ನುರಿತ ಗಾರ್ಮೆಂಟ್ಸ್ ಕಾರ್ಮಿಕರಿದ್ದಾರೆ. ದಕ್ಷಿಣ ಭಾರತದಲ್ಲಿ ಬೆಂಗಳೂರಿನ ಕಾರ್ಮಿಕರಿಗೆ ಹೆಚ್ಚಿನ ಬೇಡಿಕೆ ಇದೆ. ಬೆಂಗಳೂರು ಮತ್ತು ಸುತ್ತಮುತ್ತಲಿನ ಗಾರ್ಮೆಂಟ್ಸ್ ಕಾರ್ಖಾನೆಗಳಲ್ಲಿ ಅಂತರರಾಷ್ಟ್ರೀಯ ಬ್ರ್ಯಾಂಡ್‌ಗಳಾದ ಪೀಟರ್ ಇಂಗ್ಲೆಂಡ್, ಜಾಕಿ, ಗ್ಯಾಪ್‌, ಎಚ್ ಅಂಡ್ ಎಂ, ಮಾರ್ಕ್ ಅಂಡ್ ಸೆನ್ಸರ್, ಅಡಿಡಾಸ್, ನೈಕಿ, ಅಮೆರಿಕನ್ ಈಗಲ್, ಟ್ಯಾಮಿ ಅಂಡ್ ಫಿಗರ್... ಹೀಗೆ ಅನೇಕ ಕಂಪನಿಗಳ ಉಡುಪುಗಳು ತಯಾರಾಗುತ್ತವೆ. ಸುಮಾರು 2 ಸಾವಿರ ಕೋಟಿಗೂ ಹೆಚ್ಚು ಮೊತ್ತದ ಸಿದ್ಧ ಉಡುಪುಗಳನ್ನು ಬೆಂಗಳೂರು ರಫ್ತು ಮಾಡುತ್ತದೆ.

ಬೆಂಗಳೂರಿನ ಗಾರ್ಮೆಂಟ್ಸ್ ಉದ್ಯೋಗಿಗಳು ಹೊಲಿಯುವ ಈ ಸಿದ್ಧ ಉಡುಪುಗಳು ಅಂತರರಾಷ್ಟ್ರೀಯ ಮಟ್ಟದಲ್ಲಿ ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿವೆ. ಒಳ್ಳೆಯ ಬ್ರ್ಯಾಂಡ್‌ನ ಒಂದು ಶರ್ಟ್ ಕನಿಷ್ಠ ಒಂದು ಸಾವಿರ ರೂಪಾಯಿಗೆ ಮಾರಾಟವಾಗುತ್ತದೆ. ಅದರ ತಯಾರಿಕಾ ವೆಚ್ಚ ₹ 300 ಮಾತ್ರ. ಮಾಲೀಕನಿಗೆ ಕನಿಷ್ಠ ₹ 500 ಆದರೂ ಲಾಭ ದೊರೆಯುತ್ತದೆ. ಆದರೆ, ಅದೇ ಶರ್ಟ್‌ನ ಬಿಡಿ ಭಾಗಗಳನ್ನು ಹೊಲಿಯುವ ಉದ್ಯೋಗಿಗಳಿಗೆ ಆ ಲಾಭದಲ್ಲಿ ಕನಿಷ್ಠ ಪಾಲೂ ಸಿಗುವುದಿಲ್ಲ.

‘ಕೆಲ ಕಾರ್ಖಾನೆಗಳಲ್ಲಿ ನಿಗದಿತ ಸಮಯಕ್ಕೆ ಇಂತಿಷ್ಟು ಉಡುಪುಗಳನ್ನು ಹೊಲಿಯದಿದ್ದರೆ ಕಾರ್ಮಿಕರ ಹೆಸರನ್ನು ಲೌಡ್ ಸ್ಪೀಕರ್‌ನಲ್ಲಿ ಹೇಳಿ ಹೀಯಾಳಿಸಲಾಗುತ್ತಿತ್ತು. ಕುಡಿಯಲು ಶುದ್ಧ ನೀರು, ಸ್ವಚ್ಛ ಶೌಚಾಲಯ ಸೌಲಭ್ಯವೂ ಇಲ್ಲ. ಕಾರ್ಮಿಕ ಸಂಘಟನೆಗಳ ಹೋರಾಟದ ಫಲವಾಗಿ ಕೆಲ ಕಾರ್ಖಾನೆಗಳು ಕಾರ್ಮಿಕರಿಗೆ ಉತ್ತಮ ಸೌಲಭ್ಯ ಕಲ್ಪಿಸಿವೆ. ಸುಪ್ರೀಂ ಕೋರ್ಟ್ ತೀರ್ಪಿದ್ದರೂ ಕನಿಷ್ಠ ವೇತನ ಮಾತ್ರ ಜಾರಿಯಾಗಿಲ್ಲ’ ಎಂದು ಬೇಸರಿಸುತ್ತಾರೆ ಎಂಜಿನಿಯರಿಂಗ್ ಅಂಡ್ ಜನರಲ್ ವರ್ಕರ್ಸ್ ಯೂನಿಯನ್‌ನ ಕಾರ್ಯದರ್ಶಿ ಸತ್ಯಾನಂದ.

ಮಹಿಳಾ ಸಶಕ್ತೀಕರಣವೇ ಗುರಿ

ಜನಪರ ಶಕ್ತಿ ಹೆಸರಿನಲ್ಲಿ ಬಿಜೆಪಿ ಪ್ರಣಾಳಿಕೆ ರೂಪಿಸಲಿದೆ. ಅಲ್ಲಿ ಮಹಿಳಾ ಕಾರ್ಮಿಕರ ಬಗ್ಗೆ ಖಂಡಿತವಾಗಿಯೂ ಗಮನ ಹರಿಸಲಾಗುವುದು. ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ‘ಭಾಗ್ಯಲಕ್ಷ್ಮಿ’ಯಂಥ ಯೋಜನೆ ಜಾರಿಗೆ ತಂದಿದ್ದರು. ಅಂತೆಯೇ ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಶೇ 50ರಷ್ಟು ಮೀಸಲಾತಿ ತಂದದ್ದು ಬಿಜೆಪಿಯೇ. ಒಟ್ಟಾರೆ ಮಹಿಳಾ ಸಶಕ್ತೀಕರಣಕ್ಕಾಗಿ ಬಿಜೆಪಿ ಖಂಡಿತವಾಗಿಯೂ ಗಮನ ಹರಿಸಲಿದೆ.

–ಮಾಳವಿಕಾ ಅವಿನಾಶ್, ಬಿಜೆಪಿ ಸಹ ವಕ್ತಾರೆ

ಮಾಲೀಕ–ಕಾರ್ಮಿಕ ಉಳಿಯಬೇಕು

ಗಾರ್ಮೆಂಟ್ಸ್ ಕಾರ್ಖಾನೆಯ ಮಾಲೀಕರು ಕನಿಷ್ಠ ವೇತನ ಪರಿಷ್ಕರಣೆ ವಿರೋಧಿಸಿ ಕಾರ್ಮಿಕ ಇಲಾಖೆ ಮತ್ತು ಕೈಗಾರಿಕಾ ಇಲಾಖೆಗೆ ಮನವಿ ಕೊಟ್ಟಿದ್ದರಿಂದ ವೇತನ ಪರಿಷ್ಕರಣೆ ಅಧಿಸೂಚನೆ ವಾಪಸ್ ಪಡೆಯಲಾಗಿದೆ.

ನಮ್ಮ ಸರ್ಕಾರ ಗಾರ್ಮೆಂಟ್ಸ್ ಕಾರ್ಮಿಕರಿಗೆ ಬಸ್ ಪಾಸ್, ‘ಇಂದಿರಾ ಸಾರಿಗೆ’ ಆರಂಭಿಸಬೇಕೆಂದು ಚಿಂತನೆ ನಡೆಸಿದೆ. ಗಾರ್ಮೆಂಟ್ಸ್ ಉದ್ಯಮ ಮತ್ತು ನೌಕರರು ಇಬ್ಬರ ಹಿತದೃಷ್ಟಿಯಿಂದ ಖಂಡಿತವಾಗಿಯೂ ನಮ್ಮ ಪಕ್ಷ ಕೆಲಸ ಮಾಡಲಿದೆ.

–ಸಂತೋಷ್ ಲಾಡ್, ಕಾರ್ಮಿಕ ಸಚಿವ (ಕಾಂಗ್ರೆಸ್)

ಸುರಕ್ಷತೆ, ಸಮಾನ ವೇತನಕ್ಕೆ ಬದ್ಧ

ಸಿದ್ಧ ಉಡುಪು ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಮಹಿಳೆಯರಿಗೆ ಕೆಲಸದ ಸ್ಥಳದಲ್ಲಿ ಸುರಕ್ಷತೆ, ಮೂಲಸೌಕರ್ಯ, ಸಮಾನ ಕೆಲಸಕ್ಕೆ ಸಮಾನ ವೇತನ ಸೌಲಭ್ಯ ಸಿಗುವಂತಾಗಬೇಕು ಎಂಬುದು ಜೆಡಿಎಸ್‌ನ ಆಶಯ. ಪಕ್ಷ ಅಧಿಕಾರಕ್ಕೆ ಬಂದರೆ ಗಾರ್ಮೆಂಟ್ಸ್ ಕಾರ್ಮಿಕರಿಗೆ ಹೆಚ್ಚಿನ ಸೌಲಭ್ಯ ಕಲ್ಪಿಸಲಿದೆ.

–ಡಾ. ಲಕ್ಷ್ಮಿ ಅಶ್ವಿನ್‌ಗೌಡ, ಜೆಡಿಎಸ್‌ ಯುವ ನಾಯಕಿ

ಪ್ರತಿಕ್ರಿಯಿಸಿ (+)