ಕಾಂಗ್ರೆಸ್‌ ಪಟ್ಟಿ ಪ್ರಕಟ: ಭುಗಿಲೆದ್ದ ಆಕ್ರೋಶ

7
ನಿರ್ಧಾರವಾಗದ ಕಿತ್ತೂರು ಶಾಸಕ ಡಿ.ಬಿ. ಇನಾಮದಾರ ಭವಿಷ್ಯ: ಅಭಿಮಾನಿಗಳಲ್ಲಿ ತಳಮಳ

ಕಾಂಗ್ರೆಸ್‌ ಪಟ್ಟಿ ಪ್ರಕಟ: ಭುಗಿಲೆದ್ದ ಆಕ್ರೋಶ

Published:
Updated:

ಬೆಳಗಾವಿ: ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್‌ ಪಕ್ಷ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಭಾನುವಾರ ರಾತ್ರಿ ಬಿಡುಗಡೆಗೊಳಿಸಿದ್ದು, ಜಿಲ್ಲೆಯ ಐವರು ಹಾಲಿ ಶಾಸಕರಿಗೆ ಮಾತ್ರ ಟಿಕೆಟ್‌ ಘೋಷಿಸಲಾಗಿದೆ. ಹಾಲಿ ಕಿತ್ತೂರು ಕ್ಷೇತ್ರ ಪ್ರತಿನಿಧಿಸುತ್ತಿರುವ ಡಿ.ಬಿ. ಇಮಾನದಾರ ಅವರ ಹೆಸರು ಪಟ್ಟಿಯಲ್ಲಿಲ್ಲದಿರುವುದು ಅಚ್ಚರಿ ಮೂಡಿಸಿದೆ.

ಹಾಲಿ ಶಾಸಕರಾದ ರಮೇಶ ಜಾರಕಿಹೊಳಿ (ಗೋಕಾಕ), ಸತೀಶ ಜಾರಕಿಹೊಳಿ (ಯಮಕನಮರಡಿ– ಪರಿಶಿಷ್ಟ ಪಂಗಡ ಮೀಸಲು), ರಾಮದುರ್ಗ (ಅಶೋಕ ಪಟ್ಟಣ), ಫಿರೋಜ್‌ ಸೇಠ್ (ಬೆಳಗಾವಿ ಉತ್ತರ) ಹಾಗೂ ಗಣೇಶ ಹುಕ್ಕೇರಿ (ಚಿಕ್ಕೋಡಿ–ಸದಲಗಾ) ಅವರಿಗೆ ಟಿಕೆಟ್‌ ಖಾತ್ರಿಯಾಗಿದೆ.

ಉಳಿದಂತೆ ನಿಪ್ಪಾಣಿ– ಮಾಜಿ ಶಾಸಕ ಕಾಕಾಸಾಹೇಬ ಪಾಟೀಲ, ಅಥಣಿ– ಉದ್ಯಮಿ ಮಹೇಶ ಕುಮಟಳ್ಳಿ, ಕಾಗವಾಡ– ಶ್ರೀಮಂತ ಪಾಟೀಲ, ಕುಡಚಿ (ಪರಿಶಿಷ್ಟ ಜಾತಿ ಮೀಸಲು)– ಮಾಜಿ ಶಾಸಕ ಎಸ್‌.ಬಿ. ಘಾಟಗೆ ಅವರ ಪುತ್ರ ಅಮಿತ್‌ ಎಸ್‌. ಘಾಟಗೆ, ರಾಯಬಾಗ (ಪರಿಶಿಷ್ಟ ಜಾತಿ ಮೀಸಲು) – ಹೋದ ಚುನಾವಣೆಯಲ್ಲಿ ಪಕ್ಷೇತರರಾಗಿ ಸೋತಿದ್ದ ಪ್ರದೀಪಕುಮಾರ ಮಾಳಗಿ, ಹುಕ್ಕೇರಿ– ಮಾಜಿ ಸಚಿವ ಎ.ಬಿ. ಪಾಟೀಲ, ಅರಬಾವಿ– ಅರವಿಂದ ದಳವಾಯಿ, ಬೆಳಗಾವಿ ದಕ್ಷಿಣ– ಕೈಮಗ್ಗ ನಿಗಮದ ಮಾಜಿ ಅಧ್ಯಕ್ಷ, ತುಮಕೂರಿನ ನೇಕಾರ ಸಮಾಜದ ಮುಖಂಡ ಎಂ.ಡಿ. ಲಕ್ಷ್ಮಿನಾರಾಯಣ, ಬೆಳಗಾವಿ ಗ್ರಾಮೀಣ– ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮಿ ಹೆಬ್ಬಾಳಕರ, ಖಾನಾಪುರ– ಬಾಲಭವನ ಅಧ್ಯಕ್ಷೆ ಡಾ.ಅಂಜಲಿ ನಿಂಬಾಳ್ಕರ್‌, ಬೈಲಹೊಂಗಲ– ಮಾಜಿ ಶಾಸಕ ಮಹಾಂತೇಶ ಕೌಜಲಗಿ, ಸವದತ್ತಿ ಯಲ್ಲಮ್ಮ– ಯುವ ಮುಖಂಡ ವಿಶ್ವಾಸ ವೈದ್ಯ, ರಾಮದುರ್ಗ– ಹಾಲಿ ವಿಧಾನಸಭೆ ಮುಖ್ಯಸಚೇತಕ ಅಶೋಕ ಪಟ್ಟಣ ಅವರಿಗೆ ಟಿಕೆಟ್‌ ನೀಡಲಾಗಿದೆ.

ಇನ್ನೂ ಇದೆ ಕುತೂಹಲ!

ಕಿತ್ತೂರು ಕ್ಷೇತ್ರದಲ್ಲಿ ಡಿ.ಬಿ. ಇನಾಮದಾರ ಅಳಿಯ ಬಾಬಾಸಾಹೇಬ ಪಾಟೀಲರಿಗೆ ಟಿಕೆಟ್ ನೀಡಬೇಕು ಎಂದು ಆಗ್ರಹಿಸಿ ಬೆಂಬಲಿಗರು ಆಗ್ರಹಿಸಿದ್ದಾರೆ. ಇಲ್ಲವಾದಲ್ಲಿ ಪಕ್ಷಕ್ಕೆ ಸಾಮೂಹಿಕ ರಾಜೀನಾಮೆ ನೀಡಲಾಗುವುದು ಅವರು ತಿಳಿಸಿದ್ದರು. ಶನಿವಾರವೇ ಸಂಭ್ರಮಾಚರಣೆಯನ್ನೂ ಮಾಡಿದ್ದರು! ಆದರೆ, ಅಧಿಕೃತ ಪಟ್ಟಿಯಲ್ಲಿ ಯಾರ ಹೆಸರೂ ಇಲ್ಲದಿರುವುದರಿಂದ ಯಾರಿಗೆ ಟಿಕೆಟ್ ಎನ್ನುವ ಕುತೂಹಲ ಮುಂದುವರಿದಿದೆ. ಡಿ.ಬಿ. ಇಮಾನದಾರ 5 ಬಾರಿ (ಜನತಾ ಪಕ್ಷದಿಂದ 3 ಹಾಗೂ ಕಾಂಗ್ರೆಸ್‌ನಿಂದ ಬಾರಿ) ಶಾಸಕರಾಗಿ ಆಯ್ಕೆಯಾದವರು.

ಪ್ರತಿಕ್ರಿಯೆಗೆ ಅವರು ಲಭ್ಯವಾಗಲಿಲ್ಲ.

ಕೆಂಪವಾಡ ಸಕ್ಕರೆ ಕಾರ್ಖಾನೆ ಅಧ್ಯಕ್ಷರೂ ಆಗಿರುವ ಶ್ರೀಮಂತ ಪಾಟೀಲ 2008 ಹಾಗೂ 2013ರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿ ಸೋಲನುಭವಿಸಿದ್ದರು. ಒಂದು ಬಾರಿ ಲೋಕಸಭಾ ಚುನಾವಣೆಯಲ್ಲೂ ಸ್ಪರ್ಧಿಸಿ, ಕಾಂಗ್ರೆಸ್‌ನ ಪ್ರಕಾಶ ಹುಕ್ಕೇರಿ ವಿರುದ್ಧ ಸೋತಿದ್ದರು. ಇತ್ತೀಚೆಗೆ ರಾಯಬಾಗಕ್ಕೆ ಆಗಮಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಸಮ್ಮುಖದಲ್ಲಿ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದರು. ಅವರಿಗೆ ಕಾಗವಾಡ ಕ್ಷೇತ್ರದಿಂದ ಟಿಕೆಟ್‌ ನೀಡಿರುವುದರಿಂದ, ಮತ್ತೊಬ್ಬ ಆಕಾಂಕ್ಷಿ ದಿಗ್ವಿಜಯ ಪವಾರ ದೇಸಾಯಿ ಬೇಸರಗೊಂಡಿದ್ದಾರೆ. ಅವರ ಬೆಂಬಲಿಗರು ಪ್ರತಿಭಟನೆ ನಡೆಸಿದ್ದಾರೆ. ಬೇರೆ ಪಕ್ಷದಿಂದ ಬಂದವರಿಗೆ ಮಣೆ ಹಾಕಿರುವ ಪಕ್ಷದ ನಿರ್ಧಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪಕ್ಷೇತರನಾಗಿ ಸ್ಪರ್ಧೆ: ಆನಂದ್‌

ಸವದತ್ತಿ– ಯಲ್ಲಮ್ಮ ಕ್ಷೇತ್ರದಲ್ಲಿ ರಾಷ್ಟ್ರೀಯ ಬಸವ ದಳದ ಅಧ್ಯಕ್ಷ ಆನಂದ ಚೋಪ್ರಾ ಹಾಗೂ ರೈತ ಮುಖಂಡ ಪಂಚನಗೌಡ ದ್ಯಾಮನಗೌಡರ ಅವರಿಗೆ ಟಿಕೆಟ್‌ ಕೈತಪ್ಪಿದೆ. ಅಲ್ಲಿ ಬ್ರಾಹ್ಮಣ ಸಮುದಾಯದ ಯುವ ಮುಖಂಡ ವಿಶ್ವಾಸ ವೈದ್ಯಗೆ ಟಿಕೆಟ್‌ ಕೊಡಲಾಗಿದೆ. ಇದು, ಚೋಪ್ರಾ ಹಾಗೂ ಪಂಚನಗೌಡ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ಶನಿವಾರ ರಾತ್ರಿಯೇ ಚೋಪ್ರಾ ಮನೆ ಬಳಿ ‌ಜಮಾಯಿಸಿದ್ದ ಬೆಂಬಲಿಗರು ಪಕ್ಷೇತರರಾಗಿಯೇ ಸ್ಪರ್ಧಿಸಬೇಕು ಎಂದು ಒತ್ತಾಯಿಸಿದ್ದರು. ಕಾಂಗ್ರೆಸ್‌ ವಿರುದ್ಧ ಪ್ರತಿಭಟನೆಯನ್ನೂ ನಡೆಸಿದ್ದರು. ಬೆಂಬಲಿಗರ ಒತ್ತಾಯಕ್ಕೆ ಮಣಿದ ಚೋಪ್ರಾ ಸ್ಪರ್ಧೆಗೆ ಸಜ್ಜಾಗಿದ್ದಾರೆ. ಇವರು ಕ್ಷೇತ್ರದಲ್ಲಿ ಹಿಂದಿನಿಂದಲೂ ವಿವಿಧ ಧಾರ್ಮಿಕ, ಸಾಮಾಜಿಕ ಹಾಗೂ ಸೇವಾ ಚಟುವಟಿಕೆಯಲ್ಲಿ ತೊಡಗಿದ್ದರು. ಇದರಿಂದಾಗಿ, ಟಿಕೆಟ್‌ ನಿರೀಕ್ಷಿಸಿದ್ದರು.

‘ಕಾಂಗ್ರೆಸ್‌ ಟಿಕೆಟ್‌ ಕೈ ತಪ್ಪಿದ್ದರಿಂದ ಬೇಸರವಾಗಿದೆ. ಸಾವಿರಾರು ಮಂದಿ ಬೆಂಬಲಿಗರು ಹಾಗೂ ಸಾರ್ವಜನಿಕರ ಒತ್ತಡಕ್ಕೆ ಮಣಿದು ಪಕ್ಷೇತರನಾಗಿ ಸ್ಪರ್ಧಿಸುವ ನಿರ್ಧಾರ ಮಾಡಿದ್ದೇನೆ. ಎಐಸಿಸಿ ಕಾರ್ಯದರ್ಶಿ ಸತೀಶ ಜಾರಕಿಹೊಳಿ ಮುನಿಸಿಕೊಳ್ಳಬಹುದು ಎಂದು ವಿಶ್ವಾಸ ವೈದ್ಯಗೆ ಟಿಕೆಟ್‌ ನೀಡಲಾಗಿದೆ ಎಂದು ಗೊತ್ತಾಗಿದೆ. ಬೇರಾವುದೇ ಪಕ್ಷಕ್ಕೆ ಹೋಗುವುದಿಲ್ಲ. ಸ್ವತಂತ್ರವಾಗಿ ಕಣಕ್ಕಿಳಿಯುತ್ತೇನೆ’ ಎಂದು ಆನಂದ ಚೋಪ್ರಾ ‘ಪ್ರಜಾವಾಣಿ’ಗೆ ತಿಳಿಸಿದರು.

‘ಮಹದಾಯಿ ಹೋರಾಟಕ್ಕೋಸ್ಕರ ಕಾಂಗ್ರೆಸ್‌ ಬಿಟ್ಟಿದ್ದೇನೆ’ ಎಂದು ಹೇಳಿ ಕಾಂಗ್ರೆಸ್‌ ತ್ಯಜಿಸಿ ಸವದತ್ತಿ ತಾಲ್ಲೂಕಿನಲ್ಲಿ ಪಾದಯಾತ್ರೆ ನಡೆಸಿದ್ದ ಪಂಚನಗೌಡ, ಪ್ರತಿಕ್ರಿಯೆಗೆ ಲಭ್ಯವಾಗಲಿಲ್ಲ. ಈ ಇಬ್ಬರೂ ನಾಯಕರ ಬೆಂಬಲಿಗರು ಏ. 16ರಂದು ಕಾಂಗ್ರೆಸ್‌ ವಿರುದ್ಧ ಪ್ರತಿಭಟನೆಗೆ ಸಜ್ಜಾಗಿದ್ದರೆಂದು ಹೇಳಲಾಗುತ್ತಿದೆ.

ಅಥಣಿ ಕ್ಷೇತ್ರದಲ್ಲಿ ಬಿಜೆಪಿಯ ಲಕ್ಷ್ಮಣ ಸವದಿ ವಿರುದ್ಧ ಪ್ರಭಾವಿ ಲಿಂಗಾಯತ ಸಮುದಾಯದ ಶ್ರೀಕ್ಷೇತ್ರ ಮೋಟಗಿ ಮಠದ ಪ್ರಭು ಚನ್ನಬಸವ ಸ್ವಾಮೀಜಿ ಅವರನ್ನು ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಲಾಗುತ್ತಿದೆ ಎಂದು ಹೇಳಲಾಗಿತ್ತು. ಆದರೆ, ಮಹೇಶ ಕುಮಟಳ್ಳಿ ಅವರಿಗೆ ಅವಕಾಶ ಸಿಕ್ಕಿದೆ. ಉಳಿದಂತೆ ಎಸ್.ಕೆ. ಬುಟಾಳಿ, ಎಸ್.ಎಂ. ನಾಯಿಕ, ಗಜಾನನ ಮಂಗಸೂಳಿ ಕೂಡ ಟಿಕೆಟ್‌ ಆಕಾಂಕ್ಷಿಯಾಗಿದ್ದರು.

‘ಟಿಕೆಟ್‌ ಪ್ರಕಟವಾದಾಗ ಬೇಸರ, ಮುನಿಸು, ಅಸಮಾಧಾನ ಮತ್ತು ಭಿನ್ನಮತ ಸಹಜ. ಅದನ್ನು ಸರಿಪಡಿಸಿಕೊಂಡು ಚುನಾವಣೆ ಎದುರಿಸಲಾಗುವುದು. ಕೋಮುವಾದಿ ಬಿಜೆಪಿಯಿಂದ ರಕ್ಷಿಸಲು ಹಾಗೂ ಪ್ರಜಾಪ್ರಭುತ್ವ ಉಳಿಸಲು ಹೋರಾಡಲಾಗುವುದು’ ಎಂದು ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ವಿನಯ ನಾವಲಗಟ್ಟಿ ತಿಳಿಸಿದರು.

**

ವಯಸ್ಸಾದವರು ಹಾಗೂ ಅನಾರೋಗ್ಯದ ಕಾರಣದಿಂದ ಕೆಲಹಾಲಿ ಶಾಸಕರಿಗೆ ಟಿಕೆಟ್‌ ನೀಡಿಲ್ಲ. ಆ ಪಟ್ಟಿಯಲ್ಲಿ ಡಿ.ಬಿ. ಇನಾಮದಾರ ಅವರ ಹೆಸರಿರಬಹುದು. ಹೀಗಾಗಿ ಯಾರ ಹೆಸರೂ ಪ್ರಕಟಿಸಿಲ್ಲ ಎನಿಸುತ್ತದೆ - ವಿನಯ ನಾವಲಗಟ್ಟಿ, ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ. 

**

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry