ಶುಕ್ರವಾರ, ಡಿಸೆಂಬರ್ 6, 2019
26 °C
ಬಳ್ಳಾರಿ: ರಣ ಬಿಸಿಲು, ಸುದೀರ್ಘ ಇರುಳು; ಪ್ರಚಾರಕ್ಕೆ ಮಾತ್ರ ಕಾವಿಲ್ಲ

ಎಲ್ಲರಿಗೂ ಬಿಸಿಲೇ ಪ್ರತಿಸ್ಪರ್ಧಿ!

ಕೆ.ನರಸಿಂಹಮೂರ್ತಿ Updated:

ಅಕ್ಷರ ಗಾತ್ರ : | |

ಎಲ್ಲರಿಗೂ ಬಿಸಿಲೇ ಪ್ರತಿಸ್ಪರ್ಧಿ!

ಬಳ್ಳಾರಿ: ಬೆಳಿಗ್ಗೆ ಎಂಟಕ್ಕೇ ನೆತ್ತಿ ಸುಡುವ ಬಿಸಿಲು, ಮಧ್ಯಾಹ್ನಕ್ಕೆ ಬಿಸಿಗಾಳಿ, ಸೆಕೆಯಿಂದ ನಿದ್ರೆ ಬಾರದೆ ಸುದೀರ್ಘವಾಗುವ ಇರುಳು... ಇದು ಬಳ್ಳಾರಿಯ

ಬೇಸಿಗೆ ಬಿಸಿಲಿನ ಪರಿಣಾಮ. ವಿಧಾನಸಭೆ ಚುನಾವಣೆಯ ಅಧಿಸೂಚನೆ ಹೊರಬೀಳುವ ದಿನ ಹತ್ತಿರ ಬಂದರೂ, ಜಿಲ್ಲೆಯಲ್ಲಿ ಪ್ರಚಾರ ಮಾತ್ರ ಇನ್ನೂ ಕಾವು ಪಡೆದಿಲ್ಲ!

ಬೇಸಿಗೆ ಯಾವಾಗ ಮುಗಿಯುತ್ತದೆ ಎಂಬ ಚಿಂತೆ ಜನರದಾದರೆ, ಇಂಥ ರಣಬಿಸಿಲಿನಲ್ಲಿ ಪ್ರಚಾರ ನಡೆಸುವುದು ಹೇಗೆ ಎಂಬ ಲೆಕ್ಕಾಚಾರ ಆಕಾಂಕ್ಷಿಗಳದು. ಸೋಲು– ಗೆಲುವಿಗಿಂತಲೂ ಬಿಸಿಲಲ್ಲಿ ಪ್ರಚಾರ ನಡೆಸುವುದೇ ಅವರನ್ನು ಭಯಬೀಳಿಸಿದೆ.

ಟಿಕೆಟ್‌ ಘೋಷಣೆಯಾಗಿಲ್ಲ ಎಂದು ಬಹುತೇಕ ಆಕಾಂಕ್ಷಿಗಳು ಸುಮ್ಮನಿದ್ದಾರೆ. ಆದರೆ ಎಲ್ಲರೊಳಗೂ ಬಿಸಿಲು ಅಳುಕು ಮೂಡಿಸಿದೆ. ಒಂದು ರೀತಿ, ಅದು ಅವರೆಲ್ಲರಿಗೂ ಪ್ರತಿಸ್ಪರ್ಧಿಯಂತೆ ಕಾಣುತ್ತಿದೆ. ‘ಟಿಕೆಟ್‌ ಖಚಿತ’ ಎಂಬ ಭರವಸೆ ಹೊತ್ತು ಪ್ರಚಾರಕ್ಕೆ ಹೊರಟವರು ಮಾತ್ರ ಬಿಸಿಲಿಗೆ ಮುಖ ತೋರಿಸುತ್ತಿಲ್ಲ.

ಬೆಳಿಗ್ಗೆ ಮತ್ತು ಸಂಜೆಯ ತಂಪಾದ ಹೊತ್ತಿನಲ್ಲಿ ಮಾತ್ರ ಪ್ರಚಾರ ನಡೆಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಬಿಸಿಲು ತೀವ್ರಗೊಳ್ಳುವುದರಿಂದ ಸ್ಪರ್ಧಿಗಳು ಬೆವರಿಳಿಸಲೇಬೇಕು. ಅವರೊಂದಿಗೆ ಸಂಚರಿಸಬೇಕಾದ ಕಾರ್ಯಕರ್ತರ ಪಾಡಂತೂ ಹೇಳತೀರದು.

40 ಡಿಗ್ರಿ ಸೆಲ್ಸಿಯಸ್: ಜಿಲ್ಲೆಯಲ್ಲಿ ಹದಿನೈದು ದಿನದ ಗರಿಷ್ಠ ಉಷ್ಣಾಂಶ ಸರಾಸರಿ 40 ಡಿಗ್ರಿ ಸೆಲ್ಸಿಯಸ್‌ ಇದೆ. ಏ. 2, 4, 15ರಂದು 40 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದ್ದರೆ, ಏ. 14ರಂದು 41 ಡಿಗ್ರಿ ಸೆಲ್ಸಿಯಸ್ ಇತ್ತು. ಇದರ ಜೊತೆಗೆ ಬಿಸಿ ಗಾಳಿಯೂ ಬೀಸುವುದರಿಂದ ಮನೆಯಿಂದ ಹೊರಗೆ ಬರುವವರು ಹತ್ತಾರು ಬಾರಿ ಯೋಚಿಸುತ್ತಿದ್ದಾರೆ.

‘ಬೆಳಿಗ್ಗೆ ಬಿಸಿಲು ಕಡಿಮೆ ಇರುವುದರಿಂದ ಓಡಾಟ ಸುಲಭ. ಹೀಗಾಗಿ ಬಿಸಿಲೇರುವ ಮುನ್ನವೇ ಕ್ಷೇತ್ರ ಸಂಚಾರ ಆರಂಭಿಸುತ್ತಿದ್ದೇನೆ. 11 ಗಂಟೆಯವರೆಗಷ್ಟೇ ಸಂಚರಿಸುತ್ತೇನೆ’ ಎಂದು ಬಳ್ಳಾರಿ ನಗರ ಕ್ಷೇತ್ರದ ಬಿಜೆಪಿ ಟಿಕೆಟ್‌ ಆಕಾಂಕ್ಷಿ ಜಿ. ಸೋಮಶೇಖರ ರೆಡ್ಡಿ ತಿಳಿಸಿದರು.

ಇದೇ ಕ್ಷೇತ್ರದ ಕಾಂಗ್ರೆಸ್‌ ಶಾಸಕ ಅನಿಲ್‌ ಲಾಡ್‌ ಕೂಡ ಸಂಜೆ ಹೊತ್ತನ್ನೇ ಆಯ್ಕೆ ಮಾಡಿಕೊಂಡಿದ್ದು, ರಾತ್ರಿ 8–9ರವರೆಗೂ ನಗರದ ವಿವಿಧೆಡೆ ಸಂಚರಿಸುತ್ತಿದ್ದಾರೆ. ನಗರದಲ್ಲಿ ಎರಡು ಬಾರಿ, ಸಂಜೆ ವೇಳೆ ತಮ್ಮ ಪತ್ನಿ ಅನಿತಾ ಅವರ ನೇತೃತ್ವದಲ್ಲಿ ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮವನ್ನು ಅವರು ಆಯೋಜಿಸಿದ್ದರು.

ಬೆಳಿಗ್ಗೆ ಏಳುವ ಮುನ್ನ: ‘ಬೆಳಿಗ್ಗೆ ನಾವು ಏಳುವ ಮುನ್ನವೇ ರೆಡ್ಡಿ ಅವರು ನಮ್ಮ ಮನೆ ಬಾಗಿಲಿಗೆ ಬಂದಿದ್ದರು. ನಮಗೆ ಇದೇನೂ ಹೊಸದಲ್ಲ. ಪ್ರತಿ ಚುನಾವಣೆಯಲ್ಲೂ ಪ್ರಚಾರ ಬಿರುಸಾಗುವುದು ಬೆಳಿಗ್ಗೆ ಮತ್ತು ಸಂಜೆ ಮಾತ್ರ’ ಎಂದು 35ನೇ ವಾರ್ಡ್‌ನ ಕುರಿಹಟ್ಟಿ ಪ್ರದೇಶದ ನಿವಾಸಿ ಆಂಜಿನಪ್ಪ ಹೇಳಿದರು.

**

ಬೆಳಿಗ್ಗೆ, ಸಂಜೆ ಮಾತ್ರ ಪ್ರಚಾರ ನಡೆಸಿ, ಉಳಿದ ಅವಧಿಯಲ್ಲಿ ಹೊರಕ್ಕೆ ಬಾರದೆ ಇತರ‌ ಕೆಲಸ ಮಾಡಬೇಕಾದ ಅನಿವಾರ್ಯ ಪರಿಸ್ಥಿತಿ ಇದೆ – ಪಿ.ಚನ್ನಬಸವನಗೌಡ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ.

**

ಪ್ರತಿಕ್ರಿಯಿಸಿ (+)