ಸೋಮವಾರ, ಆಗಸ್ಟ್ 10, 2020
26 °C
ನಗರಸಭೆ ಮುಂಭಾಗಕ್ಕೆ ಬಂದರೂ ಕಾಯಕಲ್ಪ ಒದಗಿಸದ ಅಧಿಕಾರಿಗಳು

ರಸ್ತೆ ಬದಿಯೇ ವ್ಯಾಪಾರ: ನೀರು, ನೆರಳಿಗೂ ಬರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಸ್ತೆ ಬದಿಯೇ ವ್ಯಾಪಾರ: ನೀರು, ನೆರಳಿಗೂ ಬರ

ಚಾಮರಾಜನಗರ: ಚಾಮರಾಜನಗರ ದಲ್ಲಿ ದಿನೇದಿನೇ ಉಷ್ಣಾಂಶ ಏರುತ್ತಿದೆ. ಭಾನುವಾರ 36 ಡಿಗ್ರಿ ಸೆಲ್ಸಿಯಸ್‌ನಷ್ಟು ಉಷ್ಣಾಂಶ ದಾಖಲಾಗಿತ್ತು. ಅಕ್ಷರಶಃ ಬೀದಿಪಾಲಾಗಿರುವ ತರಕಾರಿ ವ್ಯಾಪಾರಸ್ಥರು ನೆತ್ತಿ ಸುಡುವ ಬಿಸಿಲಿನಲ್ಲಿ ದಿನದೂಡುತ್ತಿದ್ದಾರೆ.

ಹೌದು, ನಗರದ ಹಲವು ಮಂದಿ ಬೀದಿಬದಿ ವ್ಯಾಪಾರವನ್ನೆ ನೆಚ್ಚಿಕೊಂಡಿದ್ದಾರೆ. ಆದರೆ, ಅಂಥವರಿಗೆ ಶಾಶ್ವತ ನೆಲೆ ಸಿಗದ ಕಾರಣ ಪ್ರತಿನಿತ್ಯ ಪರದಾಡುವಂತಾಗಿದೆ.

ಪಟ್ಟಣ ಪೊಲೀಸ್‌ ಠಾಣೆ ಮುಂಭಾಗದಲ್ಲಿರುವ ಮಾರುಕಟ್ಟೆಯಲ್ಲಿ ಬೀದಿ ವ್ಯಾಪಾರಿಗಳಿಗೆ ಸ್ಥಳವಾಕಾಶ ಒದಗಿಸಲಾಗಿದೆ. ಆದರೆ, ಅಲ್ಲಿ ಮೂಲಸೌಕರ್ಯದ ಕೊರತೆಯಿಂದ ಕೆಲವು ವ್ಯಾಪಾರಿಗಳು ಮಾರುಕಟ್ಟೆಯಿಂದ ಹೊರಬಂದು ದೊಡ್ಡಅಂಗಡಿ ಬೀದಿ, ವೀರಭದ್ರೇಶ್ವರಸ್ವಾಮಿ ದೇವಸ್ಥಾನ ಸಮೀಪ ವ್ಯಾಪಾರ ಮಾಡುತ್ತಿದ್ದರು. ಈಗ ನಡೆಯುತ್ತಿರುವ ಕಾಮಗಾರಿಗಳಿಂದ ನಗರಸಭೆ ಮುಂಭಾಗ ಬಂದು ಬಿಸಿಲು, ದೂಳಿನ ಮಧ್ಯೆ ವ್ಯಾಪಾರ ಮಾಡುತ್ತಿದ್ದರೂ ಅದ್ಯಾವುದೂ ಅಧಿಕಾರಿಗಳ ಕಣ್ಣು ತೆರೆದಿಲ್ಲ.

‘ಮಾರುಕಟ್ಟೆ ಕಟ್ಟಡದ ವಿನ್ಯಾಸ ಚೆನ್ನಾಗಿದೆಯೇ ಹೊರತು ಇನ್ನಾವ ಸೌಲಭ್ಯವನ್ನು ಕೇಳುವಂತಿಲ್ಲ. ಮಾರುಕಟ್ಟೆ ಒಳ ಭಾಗದಲ್ಲಿ ಪ್ರತಿದಿನ ಸ್ವಚ್ಛತೆ ನಡೆಯುವುದಿಲ್ಲ. ಇನ್ನು ಕಟ್ಟಡದ ಹಿಂಭಾಗದ ಪ್ರದೇಶ ದುರ್ನಾತದಿಂದ ಕೂಡಿದೆ. ಮಳೆ ಬಿದ್ದರೆ ನೀರು ಸಲೀಸಾಗಿ ಹೋಗುವಂಥ ವ್ಯವಸ್ಥೆ ಮಾಡಿಲ್ಲ. ಶೌಚಾಲಯ ಇಲ್ಲವಾದ್ದರಿಂದ ಹಿಂಬದಿ ಪ್ರದೇಶವೇ ಬಯಲು ಶೌಚಾಲಯವಾಗಿದೆ. ಹಾಗಾಗಿ ದುರ್ನಾತ, ಸೊಳ್ಳೆಗಳ ಕಾಟ ವಿಪರೀತವಾಗಿದೆ’ ಎಂದು ತರಕಾರಿ ವ್ಯಾಪಾರಿಯೊಬ್ಬರು ಸಮಸ್ಯೆ ತೆರೆದಿಟ್ಟರು.

‘ಪ್ರತಿದಿನ ಬಾಡಿಗೆ ವಸೂಲಿ ಮಾಡುವ ನಗರಸಭೆ ಆಡಳಿತ, ಮಾರುಕಟ್ಟೆ ಕಟ್ಟಡಕ್ಕೆ ಸೂಕ್ತ ಭದ್ರತೆ, ವ್ಯವಸ್ಥೆ ಕಲ್ಪಿಸಲು ನಿರ್ಲಕ್ಷ್ಯವಹಿಸಿದೆ. ಹೀಗಾದರೆ, ನಾವು ವ್ಯಾಪಾರ ಮಾಡುವುದಾದರೂ ಹೇಗೆ?’ ಎಂದು ಪ್ರಶ್ನಿಸುತ್ತಾರೆ ವ್ಯಾಪಾರಿಗಳು.

ಇಂತಹ ಕಲುಷಿತ ವಾತಾವರಣದಲ್ಲಿ ತರಕಾರಿ ಖರೀದಿಗೆ ಬಹುತೇಕ  ಗ್ರಾಹಕರು ಮುಂದಾಗುತ್ತಿರಲಿಲ್ಲ. ಅದರಿಂದಾಗಿ ತರಕಾರಿ ವ್ಯಾಪಾರಸ್ಥರು ತಳ್ಳುವ ಗಾಡಿಯ ಮೊರೆ ಹೋಗಿದ್ದಾರೆ.

ಸಂಚಾರಕ್ಕೆ ಅಡ್ಡಿ: ತರಕಾರಿ ವ್ಯಾಪಾರಿಗಳಿಗೆ ಸೂಕ್ತ ಸೂರು ದೊರೆಯದ ಕಾರಣ ಅವರು ದೊಡ್ಡಅಂಗಡಿ ಬೀದಿ, ನಗರಸಭೆ ಮುಂಭಾಗ ತಳ್ಳುಗಾಡಿಯಲ್ಲಿ ವ್ಯಾಪಾರ ಮಾಡುತ್ತಿದ್ದಾರೆ. ಜತೆಗೆ, ನಗರದ ಪ್ರಮುಖ ರಸ್ತೆಗಳ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದೆ. ಇದರಿಂದ ರಸ್ತೆಗಳಲ್ಲಿ ಜನದಟ್ಟಣೆ ಹೆಚ್ಚಾಗಿ ವಾಹನ ಸವಾರರು ಸಂಚರಿಸಲು ಪರದಾಡುವಂತಾಗಿದೆ.

ನಗರಸಭೆಯಿಂದ ನಗರದ ಸಂತೇಮರಹಳ್ಳಿವೃತ್ತ, ವೀರಭದ್ರೇಶ್ವರ ಸ್ವಾಮಿ ದೇವಸ್ಥಾನದ ಸಮೀಪ‍ ಹಾಗೂ ಪಟ್ಟಣ ಪೊಲೀಸ್‌ ಠಾಣೆಯ ಮುಂಭಾಗದ ಸ್ಥಳದಲ್ಲಿ ಹೈಟೆಕ್ ಮಾರುಕಟ್ಟೆ ನಿರ್ಮಾಣಕ್ಕೆ ಈಗಾಗಲೇ ಯೋಜನೆ ಸಿದ್ಧಪಡಿಸಲಾಗಿದೆ. ಆದರೆ, ತರಕಾರಿ ವ್ಯಾಪಾರಿಗಳನ್ನು ಎಲ್ಲಿಗೆ ಸ್ಥಳಾಂತರಿಸುವುದು ಎಂಬ ಜಿಜ್ಞಾಸೆಯಿಂದಾಗಿ ನಿರ್ಮಾಣ ಕಾಮಗಾರಿ ವಿಳಂಬವಾಗಿದೆ ಎಂದು ನಗರಸಭೆ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಸತ್ಯಮೂರ್ತಿ ತಿಳಿಸಿದರು.

2004ರಲ್ಲಿ ನಿರ್ಮಾಣವಾಗಿದ್ದ ಕಟ್ಟಡ

ಸಣ್ಣ, ಸಣ್ಣ 80 ಮಳಿಗೆಗಳನ್ನು ಒಳಗೊಂಡಿರುವ, ಮೊಟ್ಟೆ ಆಕಾರದಲ್ಲಿ ನಿರ್ಮಿಸಿರುವ ಈಗಿನ ಮಾರುಕಟ್ಟೆ ಕಾಮಗಾರಿ 2004ರಲ್ಲಿ ಪ್ರಾರಂಭವಾಯಿತು. ನಿಧಾನಗತಿಯಲ್ಲಿ ನಡೆದ ಕಾಮಗಾರಿಯು 2009ರಲ್ಲಿ ಉದ್ಘಾಟನೆಯಾಯಿತು. ಹಳೇ ಮಾರುಕಟ್ಟೆಯಿಂದ ಹೊಸ ಮಾರುಕಟ್ಟೆಗೆ ವ್ಯಾಪಾರಿಗಳನ್ನು ಸ್ಥಳಾಂತರಿಸಲು ಹಲವು ವರ್ಷಗಳೇ ಬೇಕಾಯಿತು. ನಗರಸಭೆಯವರ ಒತ್ತಡಕ್ಕೆ ಮಣಿದು ವ್ಯಾಪಾರಿಗಳೇನೋ ಈಗಿನ ಮಾರುಕಟ್ಟೆ ಮಳಿಗೆಗಳನ್ನು ಪ್ರವೇಶಿಸಿದರು. ಆದರೆ, ಅಂದಿನಿಂದ ಈವರೆಗೂ ಈ ವ್ಯಾಪಾರಿಗಳಿಗೆ ಸಮಸ್ಯೆಗಳಿಂದ ಹೊರ ಬರಲು ಸಾಧ್ಯವಾಗಿಲ್ಲ.

ಎಲ್ಲೆಲ್ಲಿ ಮಾರುಕಟ್ಟೆ ನಿರ್ಮಾಣ?

ಮುಖ್ಯಮಂತ್ರಿಯವರ ವಿಶೇಷ ಅನುದಾನದಲ್ಲಿ ನಗರದ ಮೂರು ಕಡೆ ದೊಡ್ಡ ವಾಣಿಜ್ಯ ಸಂಕಿರ್ಣಗಳನ್ನು ನಿರ್ಮಿಸಲಾಗುತ್ತದೆ. ವೀರಭದ್ರೇಶ್ವರ ಸ್ವಾಮಿ ದೇವಸ್ಥಾನದ ಸಮೀಪ‍ ಇದ್ದ ಹಳೇ ಮಾರುಕಟ್ಟೆ ಜಾಗ, ಸಂತೇಮರಹಳ್ಳಿ ವೃತ್ತದ ಬಳಿ ಸುಬೇದಾರ್‌ ಕೊಳವಿದ್ದ ಜಾಗ ಹಾಗೂ ಈಗಿನ ತರಕಾರಿ ಮಾರುಕಟ್ಟೆ ಬಳಿ ಒಂದು ವಾಣಿಜ್ಯ ಸಮುಚ್ಛಯ ನಿರ್ಮಾಣವಾಗಲಿದೆ.ಈಗಿನ ತರಕಾರಿ ಮಾರುಕಟ್ಟೆ ಬಳಿ ಮೂರು ಅಂತಸ್ತಿನ ಸಂಕೀರ್ಣದ ನಿರ್ಮಾಣ ₹ 4.50 ಕೋಟಿ ಅಂದಾಜು ವೆಚ್ಚದಲ್ಲಿ ನಿರ್ಮಿಸಲಾಗುವುದು. ಈಗಾಗಲೇ ಸಂತೇಮರಹಳ್ಳಿ ವೃತ್ತದ ಬಳಿ ಸುಬೇದಾರ್‌ ಕೊಳವಿದ್ದ ಜಾಗದಲ್ಲಿ ಮಾರುಕಟ್ಟೆ ನಿರ್ಮಾಣ ಕಾಮಗಾರಿ ಪ್ರಾರಂಭವಾಗಿದೆ.

**

ನಗರಸಭೆ ಮುಂಭಾಗ, ದೊಡ್ಡ ಅಂಗಡಿ ಬೀದಿಯಲ್ಲಿ ತಳ್ಳುಗಾಡಿ ಹಾಗೂ ಮಾರುಕಟ್ಟೆಯಲ್ಲಿ ವ್ಯಾಪಾರ ಮಾಡುವವರಿಗೆ ಸೂಕ್ತ ಸ್ಥಳ ಕಲ್ಪಿಸಲು ಕ್ರಮವಹಿಸಲಾಗುವುದು – ಸತ್ಯಮೂರ್ತಿ ಸಹಾಯಕ, ಕಾರ್ಯಪಾಲಕ ಎಂಜಿನಿಯರ್‌, ನಗರಸಭೆ‌. 

**

ಎಸ್.ಪ್ರತಾಪ್‌

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.