ಪ್ರಾಣಿ, ಪಕ್ಷಿಗಳೇ ನನ್ನ ಬಳಗ

7
ಬಸವಶ್ರೀ ಪ್ರಶಸ್ತಿ ಪುರಸ್ಕೃತ ಪರಿಸರ ಸಂರಕ್ಷಕ ಕಾಮೇಗೌಡ

ಪ್ರಾಣಿ, ಪಕ್ಷಿಗಳೇ ನನ್ನ ಬಳಗ

Published:
Updated:

ಚಿತ್ರದುರ್ಗ: ‘ಹುಲಿ, ಆನೆ, ಕರಡಿ ಸೇರಿ ಪ್ರಾಣಿ – ಪಕ್ಷಿಗಳೇ ನನ್ನ ಬಳಗ. ನಾನೂ ಮನುಷ್ಯರೊಟ್ಟಿಗೆ ಬದುಕಲು ಇಷ್ಟ ಪಡುವುದಿಲ್ಲ. ಅದಕ್ಕಾಗಿ ಕಾಡಿನಲ್ಲಿಯೇ ಹೆಚ್ಚು ಸಮಯ ಕಳೆಯುತ್ತೇನೆ’ ಎಂದು ‘ಬಸವ ಶ್ರೀ’ ಪುರಸ್ಕೃತ, ಪರಿಸರ ಸಂರಕ್ಷಕ ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕು ದಾಸನದೊಡ್ಡಿಯ ಕಾಮೇಗೌಡ ಹೇಳಿದರು.

ಇಲ್ಲಿನ ಮುರುಘಾಮಠದ ಅನುಭವ ಮಂಟಪದಲ್ಲಿ ಭಾನುವಾರ ಶ್ರೀಮಠದಿಂದ ಹಮ್ಮಿಕೊಂಡಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಪ್ರತಿಷ್ಠಿತ ‘ಬಸವ ಶ್ರೀ’ ಪ್ರಶಸ್ತಿ ಪಡೆದ ನಂತರ ಅವರು ಮಾತನಾಡಿದರು.

ಸ್ವಾರ್ಥಕ್ಕಾಗಿ ನಿಮ್ಮೂರಿನ ಕೆರೆ–ಕಟ್ಟೆ ನಾಶ ಮಾಡಬೇಡಿ. ಅವುಗಳನ್ನು ಉಳಿಸಲು ಮುಂದಾಗಿ. ಇದರಿಂದ ಸಕಲ ಜೀವರಾಶಿಗಳಿಗೂ ಒಳಿತಾಗಲಿದೆ. ಪ್ರಾಣಿ – ಪಕ್ಷಿಗಳು ತಮ್ಮ ದಾಹವನ್ನು ನೀಗಿಸಿಕೊಳ್ಳಲು ಸಹಕಾರಿಯಾಗಲಿದೆ. ನಮ್ಮಂತೆ ಅವುಗಳಿಗೂ ಬದುಕಲು ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿದರು.

ಪ್ರಗತಿಪರ ರೈತ ಹುನಗುಂದದ ಡಾ.ಮಲ್ಲಣ್ಣ ಶಂಕ್ರಪ್ಪ ನಾಗರಾಳ ಶ್ರೀಮಠದಿಂದ ಸನ್ಮಾನ ಸ್ವೀಕರಿಸಿದ ನಂತರ ಮಾತನಾಡಿ, ಬಸವಣ್ಣ ಅವರ ಬಗ್ಗೆ ಈವರೆಗೂ ಹೇಳೋದೆ ಆಗಿದೆಯೇ ಹೊರತು ಅದು ಸಮರ್ಪಕವಾಗಿ ಅನುಷ್ಠಾನಗೊಂಡಿಲ್ಲ ಎಂದು ವಿಷಾದಿಸಿದರು.

ಮಕ್ಕಳಲ್ಲಿ ಉತ್ತಮ ಸಂಸ್ಕೃತಿ ಮೂಡಬೇಕಾದರೆ ಬಸವಣ್ಣ ಅವರ ವಚನಗಳನ್ನು ಕಲಿಸಬೇಕು. ಅದರಲ್ಲಿರುವ ಅರ್ಥವನ್ನು ತಿಳಿಸಬೇಕು. ಖಾಲಿ ಇರುವ ಬದಲು ಕೂಲಿ ಮಾಡಿಯಾದರೂ ಬದುಕು ರೂಪಿಸಿಕೊಳ್ಳಬೇಕು. ಅದಕ್ಕಾಗಿ ಪ್ರತಿಯೊಬ್ಬರೂ ಕಾಯಕ ಪ್ರಜ್ಞೆ ಮೈಗೂಡಿಸಿಕೊಂಡು ಜಯಂತಿಯನ್ನು ಅರ್ಥಪೂರ್ಣ ಗೊಳಿಸಲು ಸಹಕರಿಸಬೇಕು ಎಂದು ಮನವಿ ಮಾಡಿದರು.

ಮನುಷ್ಯನಲ್ಲಿ ಅರಿವು ಹೆಚ್ಚಾದಂತೆಲ್ಲ ಆಚಾರ – ವಿಚಾರಗಳ ಬಗ್ಗೆ ಆಸಕ್ತಿ ಮೂಡುತ್ತದೆ. ಇದರಿಂದ ಜೀವನದಲ್ಲಿ ಅನುಭವವೂ ಹೆಚ್ಚಾಗಿ ಸುಂದರ ಭವಿಷ್ಯ ರೂಪಿಸಿಕೊಳ್ಳಲು ಸಹಾಯವಾಗುತ್ತದೆ ಎಂದ ಅವರು, ‘ನಾವು ಎಲ್ಲಿಯವರೆಗೂ ದೇಹವನ್ನು ದಂಡಿಸುವುದಿಲ್ಲವೋ ಅಲ್ಲಿಯವರೆಗೆ ಆರೋಗ್ಯದ ಸ್ಥಿತಿಗತಿ ಉತ್ತಮವಾಗಿರುವುದಿಲ್ಲ’ ಎಂದು ಹೇಳಿದರು.

ದೇಶದಲ್ಲಿ 60ಕ್ಕೂ ಹೆಚ್ಚು ವೃತ್ತಿಗಳಿವೆ. ದುಡ್ಡಿನ ಹಿಂದೆ ಹೋಡಿದರೆ ಹೊಟ್ಟೆ ತುಂಬಲು ಸಾಧ್ಯವಿಲ್ಲ. ಪ್ರತಿಯೊಬ್ಬರು ಹಸಿವಾದಾಗ ಊಟ ಮಾಡಲೇಬೇಕು. ಬಾಯಾರಿದಾಗ ನೀರು ಕುಡಿಯಲೇಬೇಕು. ಆದ್ದರಿಂದ ಯುವಸಮೂಹ ಅನ್ನ, ನೀರಿನ ಮಹತ್ವ ಅರಿತು ಕೃಷಿಗೆ ಹೆಚ್ಚಿನ ಆದ್ಯತೆ ನೀಡಲು ಮುಂದಾಗಬೇಕು ಎಂದು ಕೋರಿದರು. 

ಮಣ್ಣು ಚಿನ್ನವಿದ್ದಂತೆ. ಅದನ್ನು ಉಳಿಸಿದರೆ ನಮಗೆ ಸಮಯಕ್ಕೆ ಸರಿಯಾಗಿ ಆಹಾರ ಸಿಗಲು ಸಾಧ್ಯವಿದೆ. ಅದನ್ನು ನಾಶಗೊಳಿಸಿದರೆ ಮುಂದಾಗುವ ಅನಾಹುತಗಳಿಗೆ ಮನುಷ್ಯರೇ ಕಾರಣರಾಗಲಿದ್ದಾರೆ. ಆದ್ದರಿಂದ ಮಣ್ಣಿನ ಸತ್ವ, ಅದರ ಮಹತ್ವದ ಕುರಿತು ಪ್ರಜ್ಞೆ ಪ್ರತಿಯೊಬ್ಬರಲ್ಲೂ ಇರಬೇಕು ಎಂದರು.

‘ಲೋಕದ ಹಿತ ಕಾಯುವವರು ಲೋಕಾಯತರು’

ಬಸವಾಯತ, ಲಿಂಗಾಯತ, ಲೋಕಾಯತ ಎಂಬ ಮೂರು ಶ್ರೇಷ್ಠ ಪದಗಳಿವೆ. ಇದರಲ್ಲಿ ಲೋಕದ ಹಿತಕ್ಕಾಗಿ ಯಾರು ಕೆಲಸ ಮಾಡುತ್ತಾರೋ ಅವರು ಲೋಕಾಯತರಾಗಿದ್ದಾರೆ ಎಂದು ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು ತಿಳಿಸಿದರು.

ಕೆಲವರು ಜಾತಿಯ ಬೇಲಿ ಭದ್ರಗೊಳಿಸುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ಒಗ್ಗೂಡಿಸಬೇಕು ಎಂಬ ಕಾಳಜಿಯೂ ಬಹುಮುಖ್ಯ. ಅದಕ್ಕಾಗಿ ಸರ್ವ ಧರ್ಮಗಳನ್ನು, ಜಾತಿಗಳನ್ನು ಗೌರವಿಸುವುದರ ಜತೆ ಎಲ್ಲರೊಂದಿಗೆ ಬೆರೆಯುವುದನ್ನು ಕಲಿಯಬೇಕು. ಆಗ ಜಾತಿರಹಿತ ಸಮಾಜ ನಿರ್ಮಾಣವಾಗಲಿದೆ ಎಂದು ಅಭಿಪ್ರಾಯಪಟ್ಟರು.

ಪರಿಸರ ಸಂರಕ್ಷಕ ಕಾಮೇಗೌಡ, ಪ್ರಗತಿಪರ ರೈತ ಡಾ.ಮಲ್ಲಣ್ಣ ಶಂಕ್ರಪ್ಪ ನಾಗರಾಳ ಅವರ ಮಾತುಗಳನ್ನು ಹಸನ್ಮುಖಿಯರಾಗಿ ಶರಣರು ಆಲಿಸಿದರು. ಕಾಮೇಗೌಡ ಅವರ ಸಾಧನೆ ಗುಪ್ತ, ಅನನ್ಯ, ಅದ್ಭುತ ಎಂದು ಬಣ್ಣಿಸಿದರಲ್ಲದೆ, ಕೆರೆಕಟ್ಟೆಗಳ ಉಳಿವಿಗೆ ಶ್ರಮಿಸಿ ಎಂದು ಅವರು ಸಲಹೆ ನೀಡಿದರು.

**

ಬಸವಣ್ಣ ಅವರ ವಚನ, ಕಾಯಕದ ಮಹತ್ವ, ಪ್ರಾಮಾಣಿಕತೆ ಮೈಗೂಡಿಸಿಕೊಂಡರೆ ಭಾರತ ಬಸವ ಕಲ್ಯಾಣ ಆಗುವುದರಲ್ಲಿ ಅನುಮಾನವಿಲ್ಲ –  ಡಾ.ಮಲ್ಲಣ್ಣ ಶಂಕ್ರಪ್ಪ ನಾಗರಾಳ, ಪ್ರಗತಿಪರ ರೈತ.

**

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry