ಕಠುವಾ ಅತ್ಯಾಚಾರ ಪ್ರಕರಣ ವಿಚಾರಣೆ ಏಪ್ರಿಲ್ 28ಕ್ಕೆ ಮುಂದೂಡಿಕೆ

ಸೋಮವಾರ, ಮಾರ್ಚ್ 25, 2019
31 °C

ಕಠುವಾ ಅತ್ಯಾಚಾರ ಪ್ರಕರಣ ವಿಚಾರಣೆ ಏಪ್ರಿಲ್ 28ಕ್ಕೆ ಮುಂದೂಡಿಕೆ

Published:
Updated:
ಕಠುವಾ ಅತ್ಯಾಚಾರ ಪ್ರಕರಣ ವಿಚಾರಣೆ ಏಪ್ರಿಲ್ 28ಕ್ಕೆ ಮುಂದೂಡಿಕೆ

ಜಮ್ಮು:  ಕಠುವಾ ಅತ್ಯಾಚಾರ ಪ್ರಕರಣದ ವಿಚಾರಣೆಯನ್ನು ಏಪ್ರಿಲ್ 28ಕ್ಕೆ ಮುಂದೂಡಲಾಗಿದೆ. ಪ್ರಸ್ತುತ ಪ್ರಕರಣದ ವಿಚಾರಣೆಯನ್ನು ಕಠುವಾದಿಂದ ಚಂಡೀಗಢಕ್ಕೆ ವರ್ಗಾಯಿಸಬೇಕು ಎಂದು ಅತ್ಯಾಚಾರ ಸಂತ್ರಸ್ತೆಯ ಅಪ್ಪ ಮನವಿ ಮಾಡಿದ್ದರಿಂದ ವಿಚಾರಣೆಯನ್ನು ಮುಂದೂಡಲಾಯಿತು.

ತಮ್ಮ ಕುಟುಂಬ ಹಾಗೂ ಕೇಸು ವಾದಿಸುತ್ತಿರುವ ವಕೀಲೆಗೆ ಪೊಲೀಸ್ ರಕ್ಷಣೆ ನೀಡಬೇಕೆಂದು ಅತ್ಯಾಚಾರ ಸಂತ್ರಸ್ಥೆಯ ಅಪ್ಪ ಮನವಿಯಲ್ಲಿ ಹೇಳಿದ್ದಾರೆ. ಈ ಮನವಿ ಬಗ್ಗೆ ಇಂದು ಮಧ್ಯಾಹ್ನ 2 ಗಂಟೆಗೆ ಸುಪ್ರೀಂಕೋರ್ಟ್ ನಲ್ಲಿ ವಿಚಾರಣೆ ನಡೆಯಲಿದೆ.

ಏತನ್ಮಧ್ಯೆ, ಕೇಸು ವಾದಿಸುತ್ತಿರುವ ತನಗೆ ಜೀವ ಬೆದರಿಕೆ ಇದೆ ಎಂದು ವಕೀಲೆ ದೀಪಿಕಾ ಸಿಂಗ್ ರಜಾವತ್ ಹೇಳಿದ್ದಾರೆ. ಜಮ್ಮುವಿನ ಕಠುವಾದಲ್ಲಿ ಎಂಟರ ಹರೆಯದ ಬಾಲಕಿಯನ್ನು ಅತ್ಯಾಚಾರ ಮಾಡಿ ಹತ್ಯೆಗೈದ ಪ್ರಕರಣದಲ್ಲಿ ಈವರೆಗೆ 8 ಮಂದಿಯನ್ನು ಬಂಧಿಸಲಾಗಿದೆ.

ಬಂಧಿತ ಆರೋಪಿಗಳಲ್ಲಿ ಒರ್ವ ಬಾಲಾಪರಾಧಿ ಇದ್ದು, ಆತನಿಗೆ ಪ್ರತ್ಯೇಕ ಆರೋಪ ಪಟ್ಟಿ ಸಲ್ಲಿಸಲಾಗಿದೆ. ಮಕ್ಕಳ ಹಕ್ಕುಗಳ ನಿಯಮ ಪ್ರಕಾರ  ಕಠುವಾ ಚೀಫ್ ಜ್ಯುಡಿಷಿಯಲ್  ಮೆಜಿಸ್ಟ್ರೇಟ್ ಈತನ ವಿಚಾರಣೆ ನಡೆಸಲಿದ್ದಾರೆ. ಇನ್ನುಳಿದ ಏಳು ಆರೋಪಿಗಳ ವಿಚಾರಣೆ ಸೆಷನ್ಸ್ ನ್ಯಾಯಾಲಯದಲ್ಲಿ ನಡೆಯಲಿದೆ.

ಈ ಪ್ರಕರಣದಲ್ಲಿ ಹಿಂದೂ-ಮುಸ್ಲಿಂ ದ್ವೇಷ ಭುಗಿಲೆದ್ದಿರುವ ಕಾರಣ, ತಟಸ್ಥ ನಿಲುವು ಸ್ವೀಕರಿಸುವುದಕ್ಕಾಗಿ ಜಮ್ಮು ಕಾಶ್ಮೀರ ಸರ್ಕಾರ ಈ ಎರಡೂ ಧರ್ಮಕ್ಕೆ ಸೇರದ ಇಬ್ಬರು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್‍‍ಗಳನ್ನು ನೇಮಕ ಮಾಡಿದೆ.

[related]

ಇದೇ ವರ್ಷದ ಜನವರಿಯಲ್ಲಿ ಎಂಟು ವರ್ಷದ ಬಾಲೆಯೊಬ್ಬಳನ್ನು ಅಪಹರಿಸಿ, ಅತ್ಯಾಚಾರ ಎಸಗಿ, ದೈಹಿಕವಾಗಿ ಹಿಂಸಿಸಿ, ಕೊಂದುಹಾಕಿದ ಘಟನೆ ಕಠುವಾ ಜಿಲ್ಲೆಯಲ್ಲಿ ನಡೆದಿತ್ತು. ಸಂತ್ರಸ್ಥೆಯು ಮುಸ್ಲಿಂ ಬುಡಕಟ್ಟು ಸಮುದಾಯಕ್ಕೆ ಸೇರಿದವಳು. ಬಾಲಕಿ ಕಾಣೆಯಾದ ಒಂದು ವಾರದ ಬಳಿಕ ಜನವರಿ 17ರಂದು ಆಕೆಯ ಶವ ಪತ್ತೆಯಾಗಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry