ಬೆಲ್ಲದ ವಿರುದ್ಧ ಇಸ್ಮಾಯಿಲ್ ಕಣಕ್ಕೆ

7

ಬೆಲ್ಲದ ವಿರುದ್ಧ ಇಸ್ಮಾಯಿಲ್ ಕಣಕ್ಕೆ

Published:
Updated:

ಧಾರವಾಡ: ತೀವ್ರ ಕುತೂಹಲ ಕೆರಳಿಸಿದ್ದ ಹುಬ್ಬಳ್ಳಿ–ಧಾರವಾಡ ಪಶ್ಚಿಮ ಕ್ಷೇತ್ರದಲ್ಲಿ (74) ಅಂಜುಮನ್ ಇಸ್ಲಾಂ ಸಂಸ್ಥೆ ಅಧ್ಯಕ್ಷ ಇಸ್ಮಾಯಿಲ್ ತಮಟಗಾರ ಅವರಿಗೆ ಕಾಂಗ್ರೆಸ್ ಪಕ್ಷದ ಟಿಕೆಟ್ ಲಭಿಸಿದೆ.

ಮಾಜಿ ಸಚಿವ ಎಸ್‌.ಆರ್.ಮೋರೆ ಹಾಗೂ ಪಾಲಿಕೆ ಸದಸ್ಯ ದೀಪಕ ಚಿಂಚೋರೆ ಸೇರಿದಂತೆ ಈ ಕ್ಷೇತ್ರಕ್ಕೆ 13 ಜನ ಟಿಕೆಟ್ ಆಕಾಂಕ್ಷಿಗಳಿದ್ದರು. ಅಂತಿಮವಾಗಿ ಟಿಕೆಟ್‌ ಗಿಟ್ಟಿಸಿಕೊಳುವಲ್ಲಿ ತಮಟಗಾರ ಯಶಸ್ಸು ಸಾಧಿಸಿದ್ದಾರೆ.

40 ವರ್ಷದ ಇಸ್ಮಾಯಿಲ್ ಈ ಹಿಂದೆ ಜೆಡಿಎಸ್ ಪಕ್ಷದಿಂದ ಇದೇ ಕ್ಷೇತ್ರಕ್ಕೆ ಎರಡು ಬಾರಿ ಸ್ಪರ್ಧಿಸಿದ್ದರು. 2008ರಲ್ಲಿ ಸ್ಪರ್ಧಿಸಿದ್ದ ಇವರು ಚಂದ್ರಕಾಂತ ಬೆಲ್ಲದ ವಿರುದ್ಧ 14,200 ಮತಗಳನ್ನು ಪಡೆದಿದ್ದರು. 2013 ಮರಳಿ ಜೆಡಿಎಸ್‌ನಿಂದಲೇ ಅರವಿಂದ ಬೆಲ್ಲದ ವಿರುದ್ಧ ಸ್ಪರ್ಧಿಸಿದ್ದ ಇವರು 30,312 ಮತಗಳನ್ನು ಪಡೆದಿದ್ದರು. ಹೀಗಾಗಿ ಬೆಲ್ಲದ ಕುಟುಂಬದ ವಿರುದ್ಧ ಇವರದ್ದು ಇದು ಮೂರನೇ ಸ್ಪರ್ಧೆ.

ಇದೇ ಅವಧಿಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಎಸ್.ಆರ್.ಮೋರೆ ಕೂಡ ಈ ಬಾರಿ ಟಿಕೆಟ್‌ಗೆ ತೀವ್ರ ಲಾಬಿ ನಡೆಸಿದ್ದರು. ಮುಖ್ಯಮಂತ್ರಿ ಅವರ ಪಟ್ಟಿಯಲ್ಲಿ ತನ್ನ ಹೆಸರು ಇದೆ ಎಂದು ಕೊನೆ ಕ್ಷಣದವರೆಗೂ ಅವರು ಪ್ರಯತ್ನ ಮುಂದುವರಿಸಿದ್ದರು.

ಟಿಕೆಟ್ ಲಭಿಸಿದ ಕುರಿತು ಮಾತನಾಡಿದ ಇಸ್ಮಾಯಿಲ್ ತಮಟಗಾರ, ‘ತುಂಬಾ ಖುಷಿಯಾಗಿದೆ. ಈ ಬಾರಿ ಗೆಲ್ಲುವ ವಿಶ್ವಾಸವಿದೆ. ದೀಪಕ ಚಿಂಚೋರೆ, ಎಸ್‌.ಆರ್.ಮೋರೆ ಸೇರಿದಂತೆ ಪಕ್ಷದ ಹಿರಿಯರು ಮತ್ತು ಕಿರಿಯರೆಲ್ಲರೂ ಒಗ್ಗಟ್ಟಿನಿಂದ ಚುನಾವಣೆ ಎದುರಿಸಲಿದ್ದೇವೆ’ ಎಂದರು.

ಆದರೆ ಟಿಕೆಟ್ ದೊರೆಯದ ಕುರಿತು ಪ್ರತಿಕ್ರಿಯಿಸಿದ ಮೋರೆ, ‘ಪಕ್ಷ ನನಗೆ ಹಲವು ಬಾರಿ ಶಾಸಕನಾಗಲು ಹಾಗೂ ಸಚಿವನಾಗಿ ಕಾರ್ಯ ನಿರ್ವಹಿಸಲು ಅವಕಾಶ ನೀಡಿದೆ. ಪಕ್ಷದ ನಿರ್ಧಾರಕ್ಕೆ ನಾನು ಬದ್ಧ. ಕಾಂಗ್ರೆಸ್ ಅಭ್ಯರ್ಥಿ ಪರ ನನ್ನ ಕೈಲಾದಷ್ಟು ಪ್ರಚಾರ ಮಾಡಿ ಗೆಲುವಿಗೆ ಸ್ಪರ್ಧಿಸಲಿದ್ದೇವೆ. ಟಿಕೆಟ್ ಸಿಗಲಿಲ್ಲವೆಂದು ಬಂಡಾಯ ಏಳುವುದು ನನ್ನ ಜಾಯಮಾನವೇ ಅಲ್ಲ’ ಎಂದರು.

ಮತ್ತೊಮ್ಮ ಪ್ರಬಲ ಆಕಾಂಕ್ಷಿ ದೀಪಕ ಚಿಂಚೋರೆ ಈ ಹಿಂದೆಯೇ ತಮ್ಮ ಹಾಗೂ ಇಸ್ಮಾಯಿಲ್ ನಡುವೆ ಟಿಕೆಟ್‌ ಯಾರಿಗೇ ದೊರೆತರೂ ಇಬ್ಬರೂ ಜತೆಯಾಗಿಯೇ ಚುನಾವಣೆ ಸ್ಪರ್ಧಿಸಲಿದ್ದೇವೆ ಎಂದಿದ್ದರು.

‘ಟಿಕೆಟ್‌ ಸಿಗದೇ ಇರುವುದಕ್ಕೆ ನನಗೆ ಬೇಸರವಿಲ್ಲ. 74ನೇ ಮತ ಕ್ಷೇತ್ರದಲ್ಲಿ ನಾನು ಅಂದು ಆಡಿದ ಮಾತಿಗೆ ಈಗಲೂ ಬದ್ಧ. ನಾನು ಧಾರವಾಡ (71) ಕ್ಷೇತ್ರಕ್ಕೆ ಒಳಪಡುವ ಪಾಲಿಕೆ ಸದಸ್ಯ. ಆ ಕ್ಷೇತ್ರದ ಜನರ ಅಭಿಪ್ರಾಯ ಪಡೆದು ಮುಂದಿನ ನಡೆ ತಿಳಿಸುತ್ತೇನೆ’ ಎಂದು ದೀಪಕ ಚಿಂಚೋರೆ ತಿಳಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry