‘ಆತ್ಮಕಥೆಗಳ ಮೌಲಿಕ ಪ್ರಮಾಣ ದೊಡ್ಡದು’

7
ಡಾ. ಸಿದ್ಧಲಿಂಗ ಪಟ್ಟಣಶೆಟ್ಟಿ ಅವರ ಆತ್ಮಕಥೆ ‘ಗಿರಿಜವ್ವನ ಮಗ’ ಕೃತಿ ಲೋಕಾರ್ಪಣೆ

‘ಆತ್ಮಕಥೆಗಳ ಮೌಲಿಕ ಪ್ರಮಾಣ ದೊಡ್ಡದು’

Published:
Updated:

ಧಾರವಾಡ: ’ಭಾರತೀಯ ಸಾಹಿತ್ಯ ಪರಂಪರೆಯಲ್ಲಿ ಆತ್ಮಕಥೆಗಳು ದೊಡ್ಡ ಪ್ರಮಾಣದಲ್ಲಿ ಸೃಷ್ಟಿಯಾಗದಿದ್ದರೂ, ಅವುಗಳ ಮೌಲಿಕ ಪ್ರಮಾಣ ದೊಡ್ಡದು. ನಮ್ಮನ್ನು ನಾವು ನಮ್ಮ ನೆನಪುಗಳೊಂದಿಗೆ ಮುಖಾಮುಖಿಯಾಗಿಸುತ್ತಲೇ ಒಂದು ಕಾಲಘಟ್ಟದ ಸಂಗತಿಗಳನ್ನು ದಾಖಲಿಸುವ ಪ್ರಯತ್ನ ಆತ್ಮಕಥೆಗಳು’ ಎಂದು ಲೇಖಕ ಪ್ರೊ. ರಾಜಶೇಖರ ಮಠಪತಿ ಅಭಿಪ್ರಾಯಪಟ್ಟರು.

ಇಲ್ಲಿನ ರಂಗಾಯಣ ಆವರಣದಲ್ಲಿನ ಸಾಂಸ್ಕೃತಿಕ ಸಮುಚ್ಚಯದಲ್ಲಿ ಗದಗಿನ ಜಗದ್ಗುರು ತೋಂಟದಾರ್ಯ ಸಂಸ್ಥಾನ ಮಠದ ಡಾ.ಎಂ.ಎಂ.ಕಲಬುರ್ಗಿ ಅಧ್ಯಯನ ಸಂಸ್ಥೆ ಆಯೋಜಿಸಿದ್ದ ಕವಿ, ನಾಟಕಕಾರ ಡಾ.ಸಿದ್ಧಲಿಂಗ ಪಟ್ಟಣಶೆಟ್ಟಿ ಅವರ ‘ಗಿರಿಜವ್ವನ ಮಗ’ ಆತ್ಮಕಥೆ ಕೃತಿ ಪರಿಚಯಿಸಿ ಅವರು ಮಾತನಾಡಿದರು.

’ಡಾ.ಪಟ್ಟಣಶೆಟ್ಟಿ ಅವರ ಪ್ರತಿ ಕವನ, ಲೇಖನ ಮತ್ತು ಕೃತಿಗಳ ಹಿಂದಿನ ಪ್ರೇರಣೆ ಅವರ ತಾಯಿ. ಅವರ ಪ್ರತಿ ಸಾಲಿನಲ್ಲಿ ತಾಯ್ತನದ ಲಕ್ಷಣಗಳು ಧಾರಾಳವಾಗಿ ಕಾಣುತ್ತವೆ. ಬಾಲ್ಯದ ಅನುಭವಗಳನ್ನು ಈ ಕೃತಿಯಲ್ಲಿ ದಾಖಲಿಸಿರುವ ಅವರು, ಅದರೊಂದಿಗೆ ತಾವು ಕಂಡುಂಡ ಬದುಕಿನ ಸತ್ಯಗಳು, ಗ್ರಾಮೀಣ ಪರಿಸರ, ಅಲ್ಲಿನ ಮೌಢ್ಯಗಳು, ಸಂಕುಚಿತತೆ ಒಂದು ಕಡೆಯಾದರೆ ಇನ್ನೊಂದು ಕಡೆ ಸೌಹಾರ್ದತೆ, ಸಮನ್ವಯದ ಬದುಕು, ಸಣ್ಣತನಗಳನ್ನು ಮೀರಿದ ವಿಶಾಲ ಮನೋಭಾವ, ಸಂಬಂಧಗಳ ಗಾಢತೆ ಮತ್ತು ಸಂಕೀರ್ಣತೆಯಂಥ ಸಂಗತಿಗಳನ್ನು ಮನಮುಟ್ಟುವಂತೆ ಚಿತ್ರಿಸುತ್ತಾರೆ. ಅದು ಅವರ ಬರಹದ ಶಕ್ತಿ' ಎಂದರು.

‘ಚಿಕ್ಕ ವಯಸ್ಸಿನಲ್ಲಿಯೇ ತಂದೆಯನ್ನು ಕಳೆದುಕೊಂಡು, ತಾಯಿಯ ಆಶ್ರಯದಲ್ಲಿಯೇ ಬೆಳೆದು, ದೊಡ್ಡದೊಂದು ಬದುಕು ಕಟ್ಟಿಕೊಂಡ ನಂತರವೂ ಅವಳು ಕೊಟ್ಟ ಶಕ್ತಿ, ಬದುಕು ರೂಪಿಸಲು ಪಟ್ಟ ಕಷ್ಟಗಳನ್ನು ನೆನೆದು ಕೃತಜ್ಞತಾಪೂರ್ವಕವಾಗಿ ನೆನಪಿಸಿಕೊಳ್ಳುವ ಗುಣಕ್ಕೆ ತಾಯಿ ಗಿರಿಜವ್ವ ನೀಡಿದ ಸಂಸ್ಕಾರ ಕಾರಣ. ಅಂದಿನ ಎಲ್ಲ ಅನುಭವ, ಸಂಗತಿಗಳು ಈ ಆತ್ಮಕಥೆಯಲ್ಲಿ ದಾಖಲಾಗಿವೆ. ಇದೊಂದು ವಿಭಿನ್ನ ಅನುಭವಗಳ ಅಭಿವ್ಯಕ್ತಿ' ಪ್ರೊ. ಮಠಪತಿ ಹೇಳಿದರು.

ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ.ಮಲ್ಲಿಕಾ ಘಂಟಿ ಮಾತನಾಡಿ, ‘ಒಂದು ಕೃತಿಯ ಓದು ನಮ್ಮ ಅನುಭವ ಆಗುವುದು ಆ ಕೃತಿಯ ಶಕ್ತಿ. ನಮ್ಮ ಸಾಹಿತ್ಯದಲ್ಲಿ ತಾಯಿಯನ್ನು ಕುರಿತು ಬರೆದ ಹಲವಾರು ಕೃತಿಗಳು ಬಂದಿವೆ. ಆದರೆ ತಂದೆಯನ್ನು ಕುರಿತು ಬರೆದ ಕೃತಿಗಳು ಕಡಿಮೆ. ಇದು ಏಕೆ ಎಂದು ಯೋಚಿಸಿದರೆ ಪ್ರತಿ ಮನುಷ್ಯ ಒಂದು ಹಂತದ ನಂತರ ಮತ್ತೆ ಮಗುವಾಗುತ್ತಾನೆ. ತನ್ನ ಹುಟ್ಟಿನ ಸಾರ್ಥಕತೆಯನ್ನು ಅನ್ವೇಷಣೆ ಮಾಡುವ ಹಂಬಲ ಆತನಲ್ಲಿ ಮೂಡುತ್ತದೆ. ಈ ಹಂಬಲವೇ ಮತ್ತೆ ಮತ್ತೆ ತಾಯಿಯನ್ನು ನೆನೆಪಿಸಿಕೊಳ್ಳುವಂತೆ ಮಾಡುತ್ತದೆ’ ಎಂದರು.

‘ಆಧುನಿಕ ಸಂದರ್ಭದಲ್ಲಿ ಮರೆಯಾಗುತ್ತಿರುವ ಸಂಬಂಧಗಳು, ವಿಘಟಿತಗೊಳ್ಳುತ್ತಿರುವ ಕುಟುಂಬಗಳು, ಬದಲಾಗುತ್ತಿರುವ ಗ್ರಾಮೀಣ ಪರಿಸರ ಇಂಥ ಹಲವು ಸಂಗತಿಗಳ ಮೇಲೆ ಬೆಳಕು ಚೆಲ್ಲುವ ಇಂಥ ಕೃತಿಗಳನ್ನು ಸಮಾಜ ಶಾಸ್ತ್ರಜ್ಞರು ಓದುವ ಅಗತ್ಯವಿದೆ. ಪ್ರತಿಯೊಂದು ಕೃತಿ ಕೇವಲ ಭಾವನೆ, ಅನುಭವಗಳ ಅಭಿವ್ಯಕ್ತಿಯಾಗಿರುವುದಿಲ್ಲ. ಸಾಮಾಜಿಕ ಪರಿವರ್ತನೆ ಅದರ ಉದ್ದೇಶವಾಗಿರುತ್ತದೆ. ಅಂಥ ಬದ್ಧತೆಯೊಂದಿಗೆ ರಚಿತವಾಗುವ ಆತ್ಮಕತೆಗಳು ಪರಿವರ್ತನೆ ತರಲು ಸಾಧ್ಯವಾದರೆ ಬರವಣಿಗೆಗೂ ಸಾರ್ಥಕತೆ’ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಡಾ.ಶಶಿಧರ ತೋಡ್ಕರ, ಡಾ.ರಾಘವೇಂದ್ರ ಪಾಟೀಲ, ಡಾ.ಗಿರಡ್ಡಿ ಗೋವಿಂದರಾಜ ಸೇರಿದಂತೆ ಅನೇಕ ಸಾಹಿತ್ಯಾಸಕ್ತರು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry