ಮಂಗಳವಾರ, ಆಗಸ್ಟ್ 4, 2020
26 °C

ಸಿಗದ ಕೈ ಟಿಕೆಟ್; ಬೆಂಬಲಿಗರ ಆಕ್ರೋಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಿಗದ ಕೈ ಟಿಕೆಟ್; ಬೆಂಬಲಿಗರ ಆಕ್ರೋಶ

ಬೆಂಗಳೂರು: ಮಹಾಲಕ್ಷ್ಮಿ ಲೇಔಟ್ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಗಿರೀಶ್ ಕೆ ನಾಶಿ ಬೆಂಬಲಿಗರು ಕೆಪಿಸಿಸಿ ಕಚೇರಿ ಎದುರು ಜಮಾಯಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ತಲೆಹಿಡುಕ ನಾಯಕರಿಗೆ ಧಿಕ್ಕಾರ ಎಂದು ಘೋಷಣೆ ಕೂಗಿದರು. ಇಲ್ಲಿ ಎನ್‌ಎಸ್‌ಯುಐ ರಾಜ್ಯ ಘಟಕದ ಅಧ್ಯಕ್ಷ ಎಚ್. ಎಸ್. ಮಂಜುನಾಥ್‌ಗೆ ಕಾಂಗ್ರೆಸ್ ಟಿಕೆಟ್ ನೀಡಿದೆ.

ರಾಜಾಜಿನಗರ ಕ್ಷೇತ್ರದ ಟಿಕೆಟ್ ಕೈ ತಪ್ಪಿದ ಕಾರಣ ಟಿಕೆಟ್ ಆಕಾಂಕ್ಷಿ ಮಂಜುಳಾ ನಾಯ್ಡು ಕಾರ್ಯಕರ್ತರ ಜೊತೆ ಕೆಪಿಸಿಸಿ ಕಚೇರಿ ಮುಂದೆ ಧರಣಿ ನಡೆಸಿದರು. ಇಲ್ಲಿ ಮಾಜಿ ಮೇಯರ್ ಜಿ. ಪದ್ಮಾವತಿಯವರಿಗೆ ಟಿಕೆಟ್ ನೀಡಲಾಗಿದೆ.

ಪುಲಕೇಶಿ ನಗರದಲ್ಲಿ ಕಾಂಗ್ರೆಸ್ ಟಿಕೆಟ್ ವಂಚಿತ ಪ್ರಸನ್ನ ಕುಮಾರ್ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಲು ನಿರ್ಧರಿಸಿದ್ದಾರೆ.

ಟಿಕೆಟ್ ಕೈ ತಪ್ಪಿತು ಎಂದು ನಾನು ಸುಮ್ಮನಿರಲು ಸಾಧ್ಯವಿಲ್ಲ. ಹಲವು ವರ್ಷಗಳಿಂದ ಈ ಭಾಗದಲ್ಲಿ ಕೆಲಸ ಮಾಡಿಕೊಂಡು ಬಂದಿದ್ದೆ. ಟಿಕೆಟ್ ಕೈ ತಪ್ಪಿದ್ದಕ್ಕೆ ನನಗೆ ತುಂಬಾ ನೋವಾಗಿದೆ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.

ಟಿಕೆಟ್ ಕೈ ತಪ್ಪಲು ಸಿದ್ದರಾಮಯ್ಯ ಅವರೇ ಕಾರಣ. ಕಾಂಗ್ರೆಸ್ ಕಟ್ಟಿದವರು ಮೂಲೆ ಗುಂಪಾಗಿದ್ದಾರೆ. ಕಾಂಗ್ರೆಸ್ ಈಗ ಕಾಂಗ್ರೆಸ್ ಆಗಿ ಉಳಿದಿಲ್ಲ. ಕಾಂಗ್ರೆಸ್ (ಸಿದ್ದರಾಮಯ್ಯ) ಎನ್ನುವ ಮಟ್ಟಕ್ಕೆ ಬಂದು ತಲುಪಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರಸನ್ನ ಕುಮಾರ್ ಅವರನ್ನು ಸೆಳೆಯಲು ಬಿಜೆಪಿ ಮುಂದಾಗಿದೆ. ಆದರೆ, ಬಿಜೆಪಿ ಆಹ್ವಾನ ಒಪ್ಪಿಲ್ಲ ಎಂದು ಪ್ರಸನ್ನ ಕುಮಾರ್ ಸ್ಪಷ್ಟಪಡಿಸಿದರು.

ಜೆಡಿಎಸ್ ನಿಂದ ಪುಲಕೇಶಿ ನಗರದಲ್ಲಿ ಸ್ಪರ್ಧಿಸಲು ಅವಕಾಶವಿದೆ. ಆದರೆ ನಾನು ಇನ್ನೂ ತೀರ್ಮಾನ ಮಾಡಿಲ್ಲ. ನನ್ನ ಕಾರ್ಯಕರ್ತರು ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಅಂದರೆ ಸ್ಪರ್ಧಿಸುತ್ತೇನೆ. ಇಲ್ಲವಾದರೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತೇನೆ ಎಂದರು.

ಸಕಲೇಶಪುರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ,  ಮಾಜಿ ಐಎಎಸ್ ಅಧಿಕಾರಿ ಸಿದ್ದಯ್ಯ ಕೆಪಿಸಿಸಿ ಕಚೇರಿಗೆ ಭೇಟಿ ನೀಡಿದರು.

ನಾನು ಅಧಿಕಾರಿಯಾಗಿ ಉತ್ಯಮ ಕೆಲಸ ಮಾಡಿದ್ದೇನೆ. ರಾಜಕಾರಣದ ಎಲ್ಲಾ ಅಯಾಮಗಳು ನನಗೆ ತಿಳಿದಿವೆ. ಅನಿರೀಕ್ಷಿತವಾಗಿ ನನಗೆ ಕಾಂಗ್ರೆಸ್ ಟಿಕೆಟ್ ಸಿಕ್ಕಿದೆ. ಸಕಲೇಶಪುರದ ಜನ ನನ್ನನ್ನ ಕೈಹಿಡಿಯುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಎಲ್ಲವೂ ಕೂಡ ಹೈಕಮಾಂಡ್ ತೀರ್ಮಾನದಂದೆ:

ಅಭ್ಯರ್ಥಿಗಳ ಪಟ್ಟಿಯನ್ನು ಹೈಕಮಾಂಡ್ ಅಧಿಕೃತವಾಗಿ ಬಿಡುಗಡೆ ಮಾಡಿದೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ಎಲ್ಲವೂ ಕೂಡ ಹೈಕಮಾಂಡ್ ತೀರ್ಮಾನದಂದೆ ಆಗಿದೆ‌. ಟಿಕೆಟ್ ತಪ್ಪಿದೆ ಎಂದು ಅಸಮಾಧಾನಪಡುವುದು ಬೇಡ. ಬಿಜೆಪಿಯನ್ನು ಅಧಿಕಾರದಿಂದ ದೂರ ಇಡುವುದು ನಮ್ಮ ಗುರಿ.

ಎಲ್ಲರೂ ಒಗ್ಗಟ್ಟಾಗಿ ಹೋರಾಡೋಣ ಎಂದು ಪಕ್ಷದ ಕಾರ್ಯಕರ್ತರಿಗೆ ಅವರು ಮನವಿ ಮಾಡಿದರು.

ಟಿಕೆಟ್ ವಂಚಿತರಗೆ‌ ಮತ್ತೆ ಟಿಕೆಟ್ ಕೊಡೋದು ಬಿಡೋದು ಹೈ ಕಮಾಂಡ್‌ಗೆ ಬಿಟ್ಡಿದ್ದು ಎಂದರು.

ಸದಾಶಿವನಗರದ ಖರ್ಗೆ ಅವರ ನಿವಾಸಕ್ಕೆ ಭೇಟಿ ನೀಡಿದ ಟಿಕೆಟ್ ವಂಚಿತ ಮಾಯಕೊಂಡ ಕ್ಷೇತ್ರದ ಶಾಸಕ ಶಿವಮೂರ್ತಿ ನಾಯಕ್, ಖರ್ಗೆ ಕಾಲಿಗೆ ಬಿದ್ದು ಟಿಕೆಟ್ ಕೇಳಿದರು.

ಭಾನುವಾರ ಪರಮೇಶ್ವರ ಕಾಲಿಗೆ ಬಿದ್ದು ನನಗೆ ಟಿಕೆಟ್ ಕೊಡಿ ಎಂದು ಶಿವಮೂರ್ತಿ ನಾಯಕ್ ಆಗ್ರಹಿಸಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.