‘ಮೌಢ್ಯ ತೊರೆದರೆ ಮಾತ್ರ ಅಭಿವೃದ್ಧಿ ಸಾಧ್ಯ’

7
ಡಾ. ಅಂಬೇಡ್ಕರರ ತತ್ವ, ಸಿದ್ಧಾಂತಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ನಾಗರಿಕರಿಗೆ ಸಲಹೆ

‘ಮೌಢ್ಯ ತೊರೆದರೆ ಮಾತ್ರ ಅಭಿವೃದ್ಧಿ ಸಾಧ್ಯ’

Published:
Updated:

ನರೇಗಲ್: ಅಸ್ಪೃಶ್ಯತೆ, ಅಸಮಾನತೆಗಳ ವಿರುದ್ಧದ ಐತಿಹಾಸಿಕ ಹೋರಾಟವನ್ನು ಮಾಡಿ ಪುರುಷ ಹಾಗೂ ಮಹಿಳೆಯರು ಸೇರಿದಂತೆ ಸರ್ವರಿಗೂ ಸಮಾನತೆಯನ್ನು ಕಲ್ಪಿಸಿ ಕೊಟ್ಟಿರುವ ಸಂವಿಧಾನ ಶಿಲ್ಪಿ ಡಾ. ಬಿ.ಆರ್‌. ಅಂಬೇಡ್ಕರ್‌ ಅವರು ಸರ್ವ ಜನಾಂಗದ ನಾಯಕರಾಗಿದ್ದಾರೆ ಎಂದು ಮುತ್ತು ಕಡಗದ ಹೇಳಿದರು.

ಇಲ್ಲಿಗೆ ಸಮೀಪದ ಜಕ್ಕಲಿಯಲ್ಲಿ ಶನಿವಾರ ಆಚರಿಸಲಾದ ಡಾ. ಬಿ.ಆರ್‌. ಅಂಬೇಡ್ಕರ್‌ ಜಯಂತಿಯಲ್ಲಿ ಮಾತನಾಡಿದ ಅವರು, ಅಂಬೇಡ್ಕರ್‌ ಅಭಿಮಾನಿಗಳಾದ ನಾವು, ಇನ್ನೂ ಮೌಢ್ಯದ ಕೂಪದಲ್ಲಿ ನರಳುತಿದ್ದೇವೆ. ಮೌಢ್ಯದಿಂದ ಹೊರ ಬಂದು ಪ್ರತಿಯೊಬ್ಬರೂ ಅಂಬೇಡ್ಕರ್‌ ತತ್ವ, ಆದರ್ಶಗಳನ್ನು ಮೈಗೂಡಿಸಿಕೊಳ್ಳುವ ಮೂಲಕ ಅವರು ಹಾಕಿ ಕೊಟ್ಟ ದಾರಿಯಲ್ಲಿ ನಡೆಯಬೇಕು ಎಂದರು.

ಪ್ರಕಾಶ ವಾಲಿ ಮಾತನಾಡಿ, ಅಂಬೇಡ್ಕರ್‌ ದೇಶದ ಪ್ರಥಮ ಪ್ರಜೆಯಿಂದ ಹಿಡಿದು, ಸಮಾಜದ ಕಟ್ಟ ಕಡೆಯ ವ್ಯಕ್ತಿಯವರೆಗೂ ಒಂದೇ ಕಾನೂನನ್ನು ಸಂವಿಧಾನದಲ್ಲಿ ತಂದು ಸಮಾನತೆಯನ್ನು ಸಾರಿದ ಮಹಾ ನಾಯಕರು. ಇಂತಹ ಮಹಾ ನಾಯಕರ ಜನ್ಮ ದಿನವನ್ನು ಅವರು ಹುಟ್ಟಿದ ದಿನದಂದು ಮನೆಗಳಲ್ಲಿ ಹಬ್ಬ ಆಚರಿಸುವ ಮೂಲಕ ಗೌರವವನ್ನು ಸಲ್ಲಿಸಬೇಕಾಗಿದೆ ಎಂದರು.

ಸುರೇಶ್ ಜೋಗಿನ, ವಿದ್ಯಾಧರ ಶಿರಗುಂಪಿ, ಜಗದೀಶ ಪಲ್ಲೇದ, ಸಿ.ಬಿ.ಕೊಪ್ಪದ, ಮುತ್ತು ಅಕ್ಕಿಶೆಟ್ಟರ್, ಮಂಜು ದೊಡ್ಡಮೇಟಿ, ಬಸವಂತಪ್ಪ ಜಡಿ, ಸುಭಾಸ ಪಟ್ಟೇದ, ಮುತ್ತಪ್ಪ ಕಾಳಿ, ಶೇಖಪ್ಪ ವಾಲಿ ಇದ್ದರು.

ಸೋಮೇಶ್ವರ ಶಾಲೆಯಲ್ಲಿ: ಇಲ್ಲಿಗೆ ಸಮೀಪದ ಕೋಟುಮಚಗಿ ಗ್ರಾಮದ ಸೋಮೇಶ್ವರ ಪ್ರೌಢಶಾಲೆಯಲ್ಲಿ ಶನಿವಾರ ಆಚರಿಸಲಾದ ಅಂಬೇಡ್ಕರ್‌ರವರ 127ನೇ ಜಯಂತ್ಯುತ್ಸವದಲ್ಲಿ ಮಾತನಾಡಿದ ಶಿಕ್ಷಕಿ ವಿ.ಎಸ್.ಚಲವಾದಿ ನಮ್ಮ ಮಕ್ಕಳಿಗೆ ಹೆಚ್ಚಿನ ವಿದ್ಯಾಭ್ಯಾಸ ಮಾಡಿಸುವ ಮೂಲಕ ಸಮಾಜದ ಮುಖ್ಯ ವಾಹಿನಿಗೆ ತರಬೇಕು. ಅವರ ತತ್ವ ಸಿದ್ಧಾಂತಗಳನ್ನು ಅಳವಡಿಸಿಕೊಂಡು ಇತರರಿಗೆ ಮಾದರಿಯಾಗಬೇಕು ಎಂದರು.

ಮುಖ್ಯ ಶಿಕ್ಷಕ ಅರುಣ ಬಿ. ಕುಲಕರ್ಣಿ ಮಾತನಾಡಿದರು. ಶಿಕ್ಷಕ ಪಿ.ಎಚ್.ತಾಂಬೋಟಿ,ಸಿ.ಎಂ.ಗೋದಿ, ಎಸ್.ಸಿ.ಶ್ಯಾವಿ, ಟಿ.ಜಿ.ಕಂಬಾಳಿಮಠ, ಕೆ.ಆರ್.ಹಾಳಕೇರಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry