ಸೋಮವಾರ, ಡಿಸೆಂಬರ್ 9, 2019
19 °C
ಅರಸೀಕೆರೆ ಕ್ಷೇತ್ರದಲ್ಲಿ: ಎಲ್ಲ ಪಕ್ಷಗಳ ಅಭ್ಯರ್ಥಿಗಳಿಗೂ ಆದ್ಯತೆ

ಪುರುಷರ ಪಾರಮ್ಯ, ಮಹಿಳೆಗಿಲ್ಲ ಮಣೆ

ಕೆ.ಎಸ್‌.ಸುನಿಲ್‌ Updated:

ಅಕ್ಷರ ಗಾತ್ರ : | |

ಪುರುಷರ ಪಾರಮ್ಯ, ಮಹಿಳೆಗಿಲ್ಲ ಮಣೆ

ಹಾಸನ: ‘ಬರದ ನಾಡು’ ಎಂಬ ಹಣೆಪಟ್ಟಿ ಹೊಂದಿರುವ ಅರಸೀಕೆರೆ ತಾಲ್ಲೂಕು 1952ರ ಪ್ರಥಮ ಚುನಾವಣೆಯಿಂದಲೂ ಎರಡು ವಿಧಾನ ಸಭಾ ಕ್ಷೇತ್ರ ಹೊಂದಿತ್ತು. ಮತದಾರರು ಎಲ್ಲಾ ಪಕ್ಷಕ್ಕೂ ಮಣೆ ಹಾಕಿದ್ದಾರೆ. ಯಾವುದೇ ಪಕ್ಷವೂ ಮಹಿಳೆಗೆ ಅವಕಾಶ ನೀಡಿಲ್ಲ.

1952ರ ಚುನಾವಣೆಯಲ್ಲಿ ಅರಸೀಕೆರೆ ಮತ್ತು ಜಾವಗಲ್‌ ಕ್ಷೇತ್ರಗಳು ಅಸ್ತಿತ್ವಕ್ಕೆ ಬಂದಿದ್ದವು. ನಂತರದ ಚುನಾವಣೆಯಲ್ಲಿ ಜಾವಗಲ್‌ ಕ್ಷೇತ್ರ ಗಂಡಸಿ ಕ್ಷೇತ್ರವಾಗಿ ಬದಲಾಯಿತು. 2008ರಲ್ಲಿ ನಡೆದ ಕ್ಷೇತ್ರಗಳ ಮರು ವಿಂಗಡಣೆಯಲ್ಲಿ ಗಂಡಸಿ ಕ್ಷೇತ್ರದ ವ್ಯಾಪ್ತಿಯಲ್ಲಿದ್ದ ಗ್ರಾಮಗಳು ಹಾಸನ, ಹೊಳೆನರಸೀಪುರ, ಬೇಲೂರು ಹಾಗೂ ಅರಸೀಕೆರೆ ವಿಧಾನಸಭಾ ಕ್ಷೇತ್ರಗಳಿಗೆ ಹಂಚಿಕೆಯಾಗಿ ಗಂಡಸಿ ಕ್ಷೇತ್ರ ನೇಪಥ್ಯಕ್ಕೆ ಸರಿಯಿತು.

1952ರ ಚುನಾವಣೆಯಲ್ಲಿ ಕಾಂಗ್ರೆಸ್‌ನ ಪಂಚಾಕ್ಷರಯ್ಯ ಪ್ರಥಮ ಶಾಸಕರಾಗಿ ಆಯ್ಕೆಯಾದರು. ಕಿಸಾನ್‌ ಮಜ್ದೂರ್‌ ಪಾರ್ಟಿಯ ಪಿ.ಬಿ.ಬೊಮ್ಮಣ್ಣ ಎರಡನೇ ಸ್ಥಾನ ಪಡೆದರೆ, ಪಕ್ಷೇತರ ಅಭ್ಯರ್ಥಿ ಕೆ.ಎಂ.ಬಸವರಾಜ್ ಮೂರನೇ ಸ್ಥಾನ ಪಡೆದರು.

1957ರಲ್ಲಿ ನಡೆದ ಎರಡನೇ ಚುನಾವಣೆಯಲ್ಲಿ ಕಾಂಗ್ರೆಸ್‌ನ ಎ.ಆರ್.ಕರಿಸಿದ್ದಪ್ಪ ಕ್ಷೇತ್ರದಲ್ಲಿ ಖಾತೆ ತೆರೆಯುವ ಮೂಲಕ ವಿಧಾನ ಸಭೆ ಪ್ರವೇಶಿಸಿದರು. ಕಣದಲ್ಲಿದ್ದ ಮೂವರು ಅಭ್ಯರ್ಥಿಗಳ ಪೈಕಿ ವೈ.ಧರ್ಮಪ್ಪ ಹಾಗೂ ಕೆ.ಎಂ.ಬಸವರಾಜ್‌ ಕ್ರಮವಾಗಿ ಪಕ್ಷೇತರ ಮತ್ತು ಪಿಎಸ್‌ಪಿಯಿಂದ ಸ್ಪರ್ಧಿಸಿದ್ದರು.

ಮೂರನೇ ಚುನಾವಣೆವರೆಗೂ ಕ್ಷೇತ್ರವನ್ನು ತೆಕ್ಕೆಯಲ್ಲಿ ಇರಿಸಿಕೊಂಡಿದ್ದ ಕಾಂಗ್ರೆಸ್‌ 1962ರಲ್ಲಿ ಮೊದಲ ಬಾರಿಗೆ ಕೈ ಚೆಲ್ಲಿತ್ತು. ಪ್ರಜಾ ಸೋಷಲಿಸ್ಟ್‌ ಪಾರ್ಟಿಯಿಂದ ಸ್ಪರ್ಧಿಸಿದ್ದ ಪಿ.ಬಿ.ಬೊಮ್ಮಣ್ಣ 14,639 ಮತ ಪಡೆದು ಆಯ್ಕೆಯಾದರು. ಪ್ರತಿಸ್ಪರ್ಧಿ ಕಾಂಗ್ರೆಸ್‌ನ ಕರಿಸಿದ್ದಪ್ಪ 11,655 ಮತ ಪಡೆದರು.

ನಂತರದ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷದ ಜಿ.ಚನ್ನಬಸಪ್ಪ ಜಯ ಸಾಧಿಸುವ ಮೂಲಕ ಕ್ಷೇತ್ರವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗಿತ್ತು.

1972ರ ಚುನಾವಣೆಯಲ್ಲಿ ಸಂಸ್ಥಾ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಎಚ್‌.ಸಿದ್ದಪ್ಪ 23,026 ಮತಗಳಿಂದ ಕಾಂಗ್ರೆಸ್‌ನ ಗಂಗಾಧರಪ್ಪ ಅವರನ್ನು ಮಣಿಸಿದ್ದರು. ಸಿದ್ದಪ್ಪ ಅವರ ಅವಧಿ ಪೂರ್ಣಗೊಳ್ಳುವ ಮೊದಲೇ ನಿಧನ ಹೊಂದಿದ್ದರಿಂದ ತೆರವಾದ ಸ್ಥಾನಕ್ಕೆ 1974ರಲ್ಲಿ ಪ್ರಥಮ ಉಪ ಚುನಾವಣೆ ನಡೆದಿತ್ತು. ಆಗ ಸಂಸ್ಥಾ ಕಾಂಗ್ರೆಸ್‌ನಿಂದ ಹುರಿಯಾಳಾಗಿದ್ದ  ಅನಿವಾಲದ  ಮಂಜಪ್ಪ  ಶಾಸಕರಾಗಿ  ಆಯ್ಕೆಯಾದರು.

1983ರಲ್ಲಿ ಕಣದಲ್ಲಿದ್ದ ಮೂವರು ಅಭ್ಯರ್ಥಿಗಳ ಪೈಕಿ ಕಾಂಗ್ರೆಸ್‌ನ ಜಿ.ಎಸ್‌.ಬಸವರಾಜು 32,877 ಮತ ಪಡೆದು ಗೆಲುವು ಸಾಧಿಸಿದರು. ಕಾಂಗ್ರೆಸ್‌ ಟಿಕೆಟ್‌ ದೊರೆಯದ ಕಾರಣ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಡಿ.ಬಿ.ಗಂಗಾಧರಪ್ಪ 19095 ಮತ ಪಡೆದು ಸೋತರು.

ಬಸವರಾಜು ಅವರು ಶಾಸಕರಾಗಿ ಅವಧಿ ಪೂರ್ಣಗೊಳಿಸಲು ರಾಜ್ಯ ರಾಜಕೀಯದ ಸನ್ನಿವೇಶ ಅವಕಾಶ ನೀಡಲಿಲ್ಲ. 1983ರ ಕರ್ನಾಟಕ ವಿಧಾನ ಸಭೆ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ದೊರೆಯಲಿಲ್ಲ. ಹಾಗಾಗಿ 95 ಸ್ಥಾನಗಳಲ್ಲಿ ಜಯಶಾಲಿಯಾಗಿದ್ದ ಜನತಾ ಪಕ್ಷ, ಬಿಜೆಪಿ ಹಾಗೂ ಇತರೆ ಪಕ್ಷಗಳ ಬಾಹ್ಯ ಬೆಂಬಲ ಪಡೆದು ಕರ್ನಾಟಕದ ಮೊದಲ ಕಾಂಗ್ರೆಸ್ಸೇತರ ಸರ್ಕಾರ ರಚಿಸಿತ್ತು. ರಾಮಕೃಷ್ಣ ಹೆಗೆಡೆ ಮುಖ್ಯಮಂತ್ರಿಯಾದರು. ಆದರೆ 1984ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ 28 ಕ್ಷೇತ್ರಗಳಲ್ಲಿ ಜನತಾ ಪಕ್ಷ ಕೇವಲ 4 ಸ್ಥಾನ ಗೆದ್ದು ಹಿನ್ನಡೆ ಅನುಭವಿಸಿತು. ಈ ಬೆಳವಣಿಗೆಯಿಂದ ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ, ವಿಧಾನಸಭೆ ವಿಸರ್ಜಿಸಿದರು. ಇದರಿಂದ ಶಾಸಕರು ಮರಳಿ ಚುನಾವಣೆ ಎದುರಿಸುವುದು ಅನಿವಾರ್ಯವಾಯಿತು.

1994ರ ಚುನಾವಣೆಯಲ್ಲಿ ಕ್ಷೇತ್ರ ಅಚ್ಚರಿಯ ಫಲಿತಾಂಶಕ್ಕೆ ಸಾಕ್ಷಿಯಾಯಿತು. ಹಿರಿಯ ರಾಜಕಾರಣಿ ಕಾಂಗ್ರೆಸ್‌ ಅಭ್ಯರ್ಥಿ ಹಾರನಹಳ್ಳಿ ರಾಮಸ್ವಾಮಿ ಅವರು ಜನತಾ ದಳ ಅಭ್ಯರ್ಥಿ ಜಿ.ಎಸ್‌.ಪರಮೇಶ್ವರಪ್ಪ ಎದುರು ಪರಾಭವಗೊಂಡರು. ರಾಜ್ಯದಲ್ಲಿ ಬೀಸುತ್ತಿದ್ದ ಜನತಾ ದಳ ಪರವಾದ ಅಲೆಯಲ್ಲಿ ಮತದಾರರು ರಾಮಸ್ವಾಮಿಗೆ ಸೋಲಿನ ರುಚಿ ತೋರಿಸಿದರು.

1999ರಲ್ಲಿ ಕಾಂಗ್ರೆಸ್‌ನ ಜಿ.ವಿ.ಸಿದ್ದಪ್ಪ ಅವರು 43,224 ಮತ ಪಡೆದು ಪ್ರತಿಸ್ಪರ್ಧಿ ಬಿಜೆಪಿಯ ಎ.ಎಸ್.ಬಸವರಾಜು (32,235) ಅವರನ್ನು ಸೋಲಿಸಿದರು.

2004 ರ ಚುನಾವಣೆಯಲ್ಲಿ ಮೊದಲ ಬಾರಿಗೆ ಕ್ಷೇತ್ರದಲ್ಲಿ ಬಿಜೆಪಿ ಖಾತೆ ತೆರೆಯಿತು. ಸತತ ನಾಲ್ಕು ಬಾರಿ ಸ್ಪರ್ಧಿಸಿ ಸೋಲು ಕಂಡಿದ್ದ ಎ.ಎಸ್.ಬಸವರಾಜು ಅವರು ತಮ್ಮ ಐದನೇ ಪ್ರಯತ್ನದಲ್ಲಿ 36,867 ಮತ ಪಡೆದು ವಿಜಯ ಪತಾಕೆ ಹಾರಿಸಿದರು. ಕಾಂಗ್ರೆಸ್‌ನ ಜಿ.ವಿ.ಸಿದ್ದಪ್ಪ 30,418, ಜೆಡಿಎಸ್‌ನ ಕೆ.ಪಿ.ಪ್ರಭುಕುಮಾರ್‌ 20,381 ಮತ ಪಡೆದರು.

ವೀರಶೈವ ಲಿಂಗಾಯತರ ಪ್ರಾಬಲ್ಯದ ಕ್ಷೇತ್ರದಲ್ಲಿ ವಿವಿಧ ಪಕ್ಷಗಳಲ್ಲಿಯೂ ಆ ಸಮುದಾಯದವರಿಗೆ ಟಿಕೆಟ್‌ ನೀಡಲಾಗುತ್ತಿತ್ತು. 2008ರಲ್ಲಿ ಕ್ಷೇತ್ರ ಮರುವಿಂಗಡಣೆ ಕಾರ್ಯ ನಡೆಯಿತು. ಅರಸೀಕೆರೆ ತಾಲ್ಲೂಕಿನ ಗಂಡಸಿ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿದ್ದ ಗ್ರಾಮಗಳು ನಾಲ್ಕು ಕ್ಷೇತ್ರಗಳಿಗೆ ಹಂಚಿಕೆ ಮಾಡಿದ್ದರಿಂದ ಗಂಡಸಿ ಕ್ಷೇತ್ರ ಅಸ್ತಿತ್ವ ಕಳೆದುಕೊಂಡಿತು.

ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಕೆ.ಎಂ.ಶಿವಲಿಂಗೇಗೌಡ 74,025 ಮತಗಳನ್ನು ಪಡೆದು ಗೆಲುವಿನ ನಗೆ ಬೀರುವ ಮೂಲಕ ಕ್ಷೇತ್ರದಿಂದ ಆಯ್ಕೆಯಾದ ಒಕ್ಕಲಿಗ ಸಮುದಾಯದ ಪ್ರಥಮ ಶಾಸಕರಾದರು. 2004ರಲ್ಲಿ ಗಂಡಸಿ ಕ್ಷೇತ್ರದಿಂದ ಜೆಡಿಎಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಶಿವಲಿಂಗೇಗೌಡರು ಕೇವಲ 18 ಮತಗಳ ಅಂತರದಿಂದ ಸೋಲುಕಂಡಿದ್ದರು.

2013ರಲ್ಲಿ ಚುನಾವಣಾ ಕಣ ರಂಗೇರಿತು. 2004ರಲ್ಲಿ ಗಂಡಸಿ ಕ್ಷೇತ್ರದಲ್ಲಿ ಎದುರಾಳಿಗಳಾಗಿದ್ದ ಮಾಜಿ ಶಿವರಾಂ ಮತ್ತು ಶಿವಲಿಂಗೇಗೌಡ ಮತ್ತೆ ಮುಖಾಮುಖಿಯಾದರು. ಸತತ ನಾಲ್ಕು ಚುನಾವಣೆಗಳಲ್ಲಿ ಗೆದ್ದಿದ್ದ ಶಿವರಾಂ ಅವರು ಸೋಲಿಲ್ಲದ ಸರದಾರ ಎನ್ನಿಸಿಕೊಂಡಿದ್ದರು. ಸ್ವಂತ ಕ್ಷೇತ್ರ ಕಳೆದುಕೊಂಡ ನಂತರ ತೆಗೆದುಕೊಂಡ ತಪ್ಪು ನಿರ್ಧಾರದಿಂದ ರಾಜಕೀಯದಲ್ಲಿ ಹಿನ್ನಡೆ ಅನುಭವಿಸಿದರು.

2008ರಲ್ಲಿ ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿ ಮೊದಲ ಬಾರಿಗೆ ಸೋತರು. ಹಾಗಾಗಿ ಕ್ಷೇತ್ರ ಬದಲಿಸಿ 2013ರಲ್ಲಿ ಅರಸೀಕೆರೆಯಿಂದ ಸ್ಪರ್ಧಿಸಿ, ಮತ್ತೆ ಸೋಲಿನ ಕಹಿ ಅನುಭವಿಸಬೇಕಾಯಿತು.

ಕ್ಷೇತ್ರದಲ್ಲಿ ಜನ ಬೆಂಬಲ ಗಳಿಸಿದ್ದ ಶಿವಲಿಂಗೇಗೌಡ 76,579 ಮತಗಳೊಂದಿಗೆ ಜಯ ದಾಖಲಿಸಿದರು. ಕಾಂಗ್ರೆಸ್‌ನ ಬಿ.ಶಿವರಾಂ (46,948) ಮತ್ತು ಕೆಜೆಪಿಯ ಡಿ.ಜಿ.ಲೋಕೇಶ್‌ ಅವರು (26,312) ಮತ ಪಡೆದು ಸೋಲು ಕಂಡರು. ಬಿಜೆಪಿ ಸೇರಿದಂತೆ ಉಳಿದ ಅಭ್ಯರ್ಥಿಗಳು ಠೇವಣಿ ಕಳೆದುಕೊಂಡರು. ಬಹು ಸಂಖ್ಯಾತ ವೀರಶೈವ ಲಿಂಗಾಯತ ಸಮುದಾಯ ವನ್ನು ಜಾತಿಯ ಗೋಡೆ ದಾಟಿಸಿ ತಮ್ಮಡೆಗೆ ಸೆಳೆದುಕೊಂಡಿರುವುದನ್ನು ಶಿವಲಿಂಗೇಗೌಡರು ಸಾಬೀತು ಪಡಿಸಿದರು.

ಕಣದಲ್ಲಿ 19 ಅಭ್ಯರ್ಥಿಗಳು

1989ರ ಚುನಾವಣೆ ಕ್ಷೇತ್ರದ ಮಟ್ಟಿಗೆ ವಿಶೇಷ. ದಾಖಲೆ ಪ್ರಮಾಣದ ಅಭ್ಯರ್ಥಿಗಳು ಕಣಕ್ಕಿಳಿದಿದ್ದರು. ವಿವಿಧ ಪಕ್ಷಗಳ ಅಭ್ಯರ್ಥಿಗಳೊಂದಿಗೆ ಪಕ್ಷೇತರರು ಸೇರಿ 19 ಜನರು ಉಮೇದುವಾರಿಕೆ ಸಲ್ಲಿಸಿದ್ದರು. ಕಾಂಗ್ರೆಸ್‌ನ ಕೆ.ಪಿ.ಪ್ರಭುಕುಮಾರ್‌ ಅವರು 30,533 ಮತ ಪಡೆದು ಜಯಶಾಲಿಯಾದರು. ಜನತಾದಳದ ಜಿ.ಎಸ್‌.ಪರಮೇಶ್ವರಪ್ಪ 19,591 ಮತ ಪಡೆದು ಸೋತರು. ಪಕ್ಷೇತರ ಅಭ್ಯರ್ಥಿ ಉರಲಿಂಗಪ್ಪ (2,278) ಅವರನ್ನು ಹೊರತು ಪಡಿಸಿ ಉಳಿದವರು ಮೂರಂಕಿ ಮತ ದಾಟಿರಲಿಲ್ಲ.

 

ಪ್ರತಿಕ್ರಿಯಿಸಿ (+)