ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈಭವ್‌ಲಕ್ಷ್ಮಿ ಪಾರ್ಕ್‌: ಜನ ಜೀವನ ದುಸ್ತರ

ಹದಿನೈದು ವರ್ಷಗಳಿಂದ ಮೂಲ ಸೌಕರ್ಯ ವಂಚಿತ ಪ್ರದೇಶ: ಜನರ ಆಕ್ರೋಶ
Last Updated 16 ಏಪ್ರಿಲ್ 2018, 8:57 IST
ಅಕ್ಷರ ಗಾತ್ರ

ಹಾವೇರಿ: ನಗರದಲ್ಲಿ ಈಚೆಗೆ ಸುರಿದ ಧಾರಾಕಾರ ಮಳೆಗೆ ಹಾನಗಲ್‌ ರಸ್ತೆಯ ವೈಭವ್‌ ಲಕ್ಷ್ಮಿ ಪಾರ್ಕ್‌ ಹಿಂಭಾಗದ ಸರ್ಕಾರಿ ಉರ್ದು ಪ್ರೌಢ ಶಾಲೆಯ ಸುತ್ತಲಿನ ಮನೆಗಳಿಗೆ ನೀರು ನುಗ್ಗಿ, ಜನಜೀವನ ಅಸ್ತವ್ಯಸ್ತವಾಗಿತ್ತು.

ಸುಮಾರು 15 ವರ್ಷಗಳಿಂದ ಇಲ್ಲಿ ಜನ ವಾಸಿಸುತ್ತಿದ್ದರೂ, ಈ ವರೆಗೂ ಯಾವುದೇ ಮೂಲಭೂತ ಸೌಲಭ್ಯ ಕಲ್ಪಿಸಿಲ್ಲ. ಮಳೆಗಾಲ ಬಂದರೆ ಇಲ್ಲಿನ ನಿವಾಸಿಗಳಿಗೆ ಎಲ್ಲಿಲ್ಲದ ಸಂಕಷ್ಟಗಳು ಎದುರಾಗುತ್ತವೆ. ಮಳೆ ನೀರು ಮಾತ್ರವಲ್ಲ, ಚರಂಡಿಯ ಕೊಳಚೆಯ ಜೊತೆಗೆ ಹಾವು, ಚೇಳು, ಝರಿಗಳಂತಹ ವಿಷಕಾರಿ ಜಂತುಗಳು ಕೂಡಾ ಮನೆಗೆ ನುಗ್ಗುತ್ತವೆ ಎಂದು ಸ್ಥಳೀಯ ನಿವಾಸಿ ಲಿಂಗರಾಜನಗೌಡ ಪಾಟೀಲ ತಿಳಿಸಿದರು.

ಈ ಪ್ರದೇಶ ತಗ್ಗಾಗಿದ್ದು ಸೂಕ್ತ ಚರಂಡಿ, ರಸ್ತೆ ಸೌಲಭ್ಯವಿಲ್ಲ. ಹೀಗಾಗಿ, ಮೇಲಿನರಸ್ತೆಗಳ ಚರಂಡಿ ನೀರು, ಮಳೆ ನೀರು ಇಲ್ಲಿ ಬಂದು ನಿಲ್ಲುತ್ತದೆ. ಇಲ್ಲಿಂದ ಮುಂದೆ ಹೋಗಲು ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದೇ ಇರುವ ಕಾರಣ, ನಮ್ಮ ಮನೆಗಳಿಗೆ ನುಗ್ಗುತ್ತಿದೆ ಎಂದು ಸ್ಥಳೀಯ ನಿವಾಸಿ ಷಣ್ಮುಖಪ್ಪ ರೇವಣ್ಣನವರ ತಿಳಿಸಿದರು.

ಸುತ್ತಮುತ್ತಲಿನ ಮನೆಗಳ ಚರಂಡಿ ನೀರು ಹರಿದು ಹೋಗಲು ಯಾವುದೇ ಚರಂಡಿ ಅಥವಾ ಕಾಲುವೆಗಳು ಇಲ್ಲ. ಇದ್ದ ಚರಂಡಿಗಳು ಸಂಪೂರ್ಣ ಮುಚ್ಚಿಕೊಂಡಿದ್ದು, ಮನೆಗಳ ಪಕ್ಕದಲ್ಲಿರುವ ಖಾಲಿ ನಿವೇಶನಗಳಲ್ಲಿ ನಿಲ್ಲುತ್ತದೆ.

ಈ ಸಮಸ್ಯೆಗಳನ್ನು ಸಹಿಸಿಕೊಳ್ಳಲಾಗದ ಸ್ಥಳೀಯ ನಿವಾಸಿಗಳೇ ಸ್ವಂತ ಹಣ ಖರ್ಚು ಮಾಡಿ, ಪೈಪ್‌ಲೈನ್‌ ಹಾಕಿಸಿದ್ದೆವು. ಆದರೆ, ಈಗ ಅದು ಕೂಡಾ ಸಂಪೂರ್ಣವಾಗಿ ಕಟ್ಟಿ ಕೊಂಡಿದೆ. ಕಳೆದ ಕೆಲವು ದಿನಗಳ ಹಿಂದೆ ಪ್ರಾರಂಭವಾದ ಒಳಚರಂಡಿ ಕಾಮಗಾರಿಯೂ ನಿಂತು ಹೋಗಿದೆ ಎಂದು ಅವರು ತಿಳಿಸಿದರು.

ಸೂಕ್ತ ರಸ್ತೆ ವ್ಯವಸ್ಥೆ ಇಲ್ಲ: ನಾವು ಇಲ್ಲಿ ಕಳೆದ 12 ವರ್ಷಗಳಿಂದ ನೆಲೆಸಿದ್ದೇವೆ. ಆದರೆ, ಈ ವರೆಗೂ ಡಾಂಬರು ಅಥವಾ ಕಾಂಕ್ರೀಟ್‌ ರಸ್ತೆಯ ವ್ಯವಸ್ಥೆ ಇಲ್ಲ. ಹೀಗಾಗಿ, ಮಳೆಗಾಲದಲ್ಲಿ ಈ ರಸ್ತೆಯಲ್ಲಿ ವಾಹನಗಳು ತರುವುದಕ್ಕೆ ಅಸಾಧ್ಯ ಎಂದು ಸ್ಥಳೀಯ ನಿವಾಸಿ ಶಿವಪ್ಪ ಎನ್‌.ಸಂಕಣ್ಣನವರ ತಿಳಿಸಿದರು.

ಸೊಳ್ಳೆಗಳ ಹಾವಳಿ: ಇಲ್ಲಿ ಕೊಳಚೆ ಪ್ರದೇಶ ಹೆಚ್ಚಾಗಿರುವುದರಿಂದ ಸೊಳ್ಳೆ ಕಾಟವೂ ವಿಪರೀತವಾಗಿದೆ. ಹೀಗಾಗಿ, ಸಂಜೆಯಾಗುತ್ತಿದಂತೆಯೇ ಎಲ್ಲರು ತಮ್ಮತಮ್ಮ ಮನೆಗಳ ಬಾಗಿಲು ಹಾಗೂ ಕಿಟಕಿಗಳನ್ನು ಹಾಕಿಕೊಳ್ಳಬೇಕು. ಇಲ್ಲವಾದರೆ, ಇಡೀ ರಾತ್ರಿ ಸೊಳ್ಳೆ ಕಡಿತದಿಂದ ಜಾಗರಣೆ ಮಾಡಬೇಕಾ
ಗುತ್ತದೆ ಎಂದು ಸ್ಥಳೀಯರು ದೂರಿದರು.

**

ವೈಭವ್‌ಲಕ್ಷ್ಮಿ ಪಾರ್ಕ್‌ ಹಿಂಭಾಗ ಈಗಾಗಲೇ ಒಳಚರಂಡಿ ಕಾಮಗಾರಿ ಪ್ರಾರಂಭಿಸಿದ್ದು, ವಾರದೊಳಗೆ ಸಮಸ್ಯೆ ಪೂರ್ಣಗೊಳಿಸಲಾಗುವುದು – ಸಚಿನ ಡಂಬಳ, ನಗರಸಭೆ ಸದಸ್ಯೆ.

**

ಪ್ರವೀಣ ಸಿ. ಪೂಜಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT