ಕುಲ್ಲೇಟಿರ ಹಾಕಿ ಉತ್ಸವಕ್ಕೆ ಚಾಲನೆ

7
ನಾಪೋಕ್ಲು: ಮೊದಲ ದಿನದ ಸಂಭ್ರಮಕ್ಕೆ ಮಳೆ ಅಡ್ಡಿ

ಕುಲ್ಲೇಟಿರ ಹಾಕಿ ಉತ್ಸವಕ್ಕೆ ಚಾಲನೆ

Published:
Updated:

ನಾಪೋಕ್ಲು: ಕುಲ್ಲೇಟಿರ ಹಾಕಿ ನಮ್ಮೆ – 2018ಕ್ಕೆ ಇಲ್ಲಿನ ಜನರಲ್ ಕೆ.ಎಸ್. ತಿಮ್ಮಯ್ಯ ಕ್ರೀಡಾಂಗಣದಲ್ಲಿ ಭಾನುವಾರ ಅದ್ಧೂರಿ ಚಾಲನೆ ದೊರೆಯಿತು.

ಕಾವೇರಿ ನದಿಯ ತಟದಲ್ಲಿ ಸತತ ಎರಡನೇ ವರ್ಷವೂ ಹಾಕಿ ಕಲರವ ಕೇಳಿ ಬರುತ್ತಿದ್ದು, ಮೊದಲ ದಿನವೇ ಹಾಕಿ ಪ್ರೇಮಿಗಳ ದಂಡೇ ಮೈದಾನದಲ್ಲಿ ನೆರೆದಿತ್ತು. ಕೊಡವ ಹಾಕಿ ಅಕಾಡೆಮಿ ಉಪಾಧ್ಯಕ್ಷ ಕಲಿಯಂಡ ನಾಣಯ್ಯ ಟೂರ್ನಿಗೆ ಚಾಲನೆ ನೀಡಿದರು.

ಭಾರತ ಹಾಕಿ ತಂಡದ ಮಾಜಿ ನಾಯಕ ಮೊಳ್ಳೇರ ಪಿ. ಗಣೇಶ್ ಹಾಗೂ ಹೆಚ್ಚುವರಿ ಅಡ್ವೋಕೇಟ್ ಜನರಲ್ ಅಜ್ಜಿಕುಟ್ಟೀರ ಪೊನ್ನಣ್ಣ ಜ್ಯೋತಿ ಬೆಳಗಿಸಿದರು. ಕೊಡವ ಸಂಪ್ರದಾಯಿಕ ನೃತ್ಯ ಸೊಬಗಿನ ನಡುವೆ 22ನೇ ಕೊಡವ ಕುಟುಂಬಗಳ ನಡುವಿನ ಹಾಕಿ ನಮ್ಮೆಗೆ ಚಾಲನೆ ದೊರೆಯಿತು.

ಇನ್ನು 33 ದಿನಗಳ ಕಾಲ ಕ್ರೀಡಾಂಗಣದಲ್ಲಿ ಹಾಕಿಯ ಸಂಭ್ರಮ ಮನೆ ಮಾಡಲಿದೆ. ಕಾರ್ಯಕ್ರಮದ ಉದ್ಘಾಟನೆಗೂ ಮುನ್ನ ಕೊಡವ ವಾದ್ಯಗೋಷ್ಠಿಯೊಂದಿಗೆ ಅತಿಥಿಗಳನ್ನು ಬರ ಮಾಡಿಕೊಳ್ಳಲಾಯಿತು.

ಹೆಚ್ಚುವರಿ ಅಡ್ವೋಕೇಟ್ ಜನರಲ್ ಅಜ್ಜಿಕುಟ್ಟೀರ ಎಸ್‌. ಪೊನ್ನಣ್ಣ ಮಾತನಾಡಿ, ಕೊಡವರ ಜನಸಂಖ್ಯೆ ಸುಮಾರು 1 ಲಕ್ಷ 18 ಸಾವಿರದಷ್ಟಿದೆ. ಕೊಡವ ಸಂಸ್ಕೃತಿ ವಿಶ್ವಮಾನ್ಯತೆ ಗಳಿಸಿದೆ. ಇಂತಹ ಸಂಸ್ಕೃತಿಯನ್ನು ರಕ್ಷಣೆ ಮಾಡುವ ಜವಾಬ್ದಾರಿ ಸಮಾಜದ ಮೇಲಿದೆ ಎಂದು ಎಚ್ಚರಿಸಿದರು.

ಜನಾಂಗದ ಪದ್ಧತಿ ಪರಂಪರೆಯನ್ನು ರಕ್ಷಿಸುವ ಜವಾಬ್ದಾರಿ ಜನಾಂಗದ್ದಾಗಿದೆ. ಸಂಸ್ಕೃತಿ ನಾಶವಾದರೆ ಕೊಡವ ಜನಾಂಗವು ನಶಿಸುವ ಅಪಾಯವೂ ಇದೆ ಎಂದರು.

ಭಾರತ ಹಾಕಿ ತಂಡದ ಮಾಜಿ ನಾಯಕ ಎಂ.ಪಿ. ಗಣೇಶ್ ಮಾತನಾಡಿ, ಕೊಡಗಿನಿಂದ ಸಾಕಷ್ಟು ಮಂದಿ ಅತ್ಯುತ್ತಮ ಕ್ರೀಡಾಪಟುಗಳಾಗಿ ಹೊರಹೊಮ್ಮಿದ್ದರೂ ಪ್ರಸ್ತುತ ಭಾರತ ಹಾಕಿ ತಂಡದಲ್ಲಿ ಒಬ್ಬ ಕೊಡವ ಕ್ರೀಡಾಪಟು ಇಲ್ಲದಿರುವುದು ಬೇಸರದ ಸಂಗತಿ ಎಂದರು.

ಹಾಕಿ ಉತ್ಸವಕ್ಕಾಗಿ ವಿವಿಧ ಮೂಲಗಳಿಂದ ಹಣ ಸಂಗ್ರಹಿಸಿದ್ದು ಹಣದ ಸದ್ಬಳಕೆಯಾಗಲಿ; ಸಮಾರಂಭದ ಆಯೋಜನೆಯ ನಡುವೆ ಕೊಡವ ಕುಟುಂಬಗಳ ನಡುವಿನ ಬಾಂಧವ್ಯಕ್ಕೆ ಚ್ಯುತಿ ಬಾರದಿರಲಿ ಎಂದರು.ಉದ್ಘಾಟನಾ ಸಮಾರಂಭದಲ್ಲಿ ಕುಲ್ಲೇಟಿರ ಕುಟುಂಬದ ವೀರಪುರುಷ ಪೊನ್ನಣ್ಣ ಕುರಿತ ಪಡೆಬೀರ ಕುಲ್ಲೇಟಿ ಪೊನ್ನಣ್ಣ ಕೃತಿಯನ್ನು ಬಿಡುಗಡೆ ಮಾಡಲಾಯಿತು.ಕೊಡವ ಅಕಾಡೆಮಿ ಸದಸ್ಯ ಐತಿಚಂಡ ರಮೇಶ್‌ಉತ್ತಪ್ಪ ಕೃತಿಯ ಕುರಿತು ಮಾತನಾಡಿದರು.

ಕುಲ್ಲೇಟಿರ ಕುಟುಂಬದ ಪಟ್ಟೇದಾರ ಕುಲ್ಲೇಟಿರ ಮಾದಪ್ಪ ಅಧ್ಯಕ್ಷತೆ ವಹಿಸಿದ್ದರು. ಉತ್ಸವ ಸಮಿತಿ ಅಧ್ಯಕ್ಷ ಶಂಭು ಮಂದಪ್ಪ, ಅಂತರರಾಷ್ಟ್ರೀಯ ಕ್ರೀಡಾಪಟು ಬಾಳೆಯಡ ಪೂಣಚ್ಚ ಕಾಫಿ ಮಂಡಳಿ ಉಪಾಧ್ಯಕ್ಷೆ ಪಟ್ಟಡ ರೀನಾ ಪ್ರಕಾಶ್ ಮತ್ತಿತರರು ಹಾಜರಿದ್ದರು.

ವೆಸ್ಟ್ ಕೊಳಕೇರಿಯ ಪೊವ್ವೋದಿ ಯುವತಿ ಮಂಡಳಿ ಸದಸ್ಯರಿಂದ ಉಮ್ಮತ್ತಾಟ್, ನಾಪೋಕ್ಲು ಭಗವತಿ ಯುವಕ ಸಂಘದ ವತಿಯಿಂದ ಬೊಳಕಾಟ್ ಹಾಗೂ ಗೋಣಿಕೊಪ್ಪದ ಕಾವೇರಿ ಕಾಲೇಜಿನ ವಿದ್ಯಾರ್ಥಿಗಳಿಂದ ಕೋಲಾಟ್ ಪ್ರದರ್ಶನವು ಅಭಿಮಾನಿಗಳನ್ನು ರಂಜಿಸಿತು.

**

ಒಡಿಕತ್ತಿ, ಪೀಚೆಕತ್ತಿ ಕೊಡವ ಸಂಸ್ಕೃತಿಯ ಭಾಗ. ಹಾಕಿ ಕ್ರೀಡೆಯೂ ಸಹ ಕೊಡವ ಸಂಸ್ಕೃತಿಯನ್ನು ರಕ್ಷಿಸುವಲ್ಲಿ ಮಹತ್ವದ ಪಾತ್ರ ವಹಿಸಿದೆ.

ಅಜ್ಜಿಕುಟ್ಟೀರ ಎಸ್‌. ಪೊನ್ನಣ್ಣ, ಹೆಚ್ಚುವರಿ ಅಡ್ವೋಕೇಟ್ ಜನರಲ್.

**

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry