ಮಂಗಳವಾರ, ಡಿಸೆಂಬರ್ 10, 2019
26 °C

ಯುದ್ಧದ ನೆರಳಲ್ಲಿ ಅರಳುವ ಪ್ರೀತಿ

Published:
Updated:
ಯುದ್ಧದ ನೆರಳಲ್ಲಿ ಅರಳುವ ಪ್ರೀತಿ

ಭಾರತ– ‍ಪಾಕಿಸ್ತಾನದ ನಡುವಿನ ಯುದ್ಧ, ಪ್ರೇಮಕತೆಗಳ ಕತೆಯುಳ್ಳ ಅನೇಕ ಸಿನಿಮಾಗಳು ಈಗಾಗಲೇ ಭಾರತೀಯ ಚಿತ್ರರಂಗದಲ್ಲಿ ಬಂದಿವೆ. ಇದಕ್ಕೆ ಹೊಸ ಸೇರ್ಪಡೆಯಂತಿದೆ ಪುರಿ ಜಗನ್ನಾಥ್‌ ಅವರ ಚಿತ್ರ ‘ಮೆಹಬೂಬಾ’.

‘ಸೈನಿಕನನ್ನು ಯಾರೂ ಪ್ರೀತಿ ಮಾಡುವುದಿಲ್ಲ, ಶತ್ರು ಬಾಗಿಲಿಗೆ ಬರುವ ತನಕ’ ಎನ್ನುವ ಮಾತಿನ ಮೂಲಕ ಟ್ರೇಲರ್‌ ಆರಂಭವಾಗುತ್ತದೆ. ಪರ್ವತಗಳ ಸಾಲಿನಲ್ಲಿ ರೈಫಲ್‌ಗಳಿಂದ ಗುಂಡಿನ ದಾಳಿ ನಡೆಸುತ್ತಿರುವ ಸೈನಿಕರು, ಯುದ್ಧ ವಿಮಾನಗಳ ಹಾರಾಟ ಆರಂಭದಲ್ಲಿ ಇದೊಂದು ಭಾರತ–ಪಾಕ್ ಯುದ್ಧದ ಸಿನಿಮಾ ಅನಿಸಿದರೂ, ಬಳಿಕ ಮೆಹಬೂಬಾ ಪಾತ್ರದ ಪ್ರವೇಶದೊಂದಿಗೆ ಚಿತ್ರಕ್ಕೆ ಟ್ವಿಸ್ಟ್ ಸಿಗುತ್ತದೆ.

1971ರಲ್ಲಿ ಭಾರತದ ಯುವತಿಯನ್ನು ಪಾಕ್ ಸೈನಿಕರು ಹೊತ್ತೊಯ್ಯುವ ಕತೆಯ ಎಳೆ ಈ ಚಿತ್ರದ್ದು. ಆಕೆಯನ್ನು ಬಿಡಿಸಿಕೊಂಡು ಬರಲು ಭಾರತೀಯ ಸೈನಿಕನೊಬ್ಬ ಪಾಕಿಸ್ತಾನಕ್ಕೆ ಪ್ರವೇಶಿಸುತ್ತಾನೆ. ಯುವತಿಯನ್ನು ಹೇಗೆ ಭಾರತಕ್ಕೆ ವಾಪಸ್ ಕರೆತರುತ್ತಾನೆ ಎನ್ನುವುದು ಚಿತ್ರದ ಹೂರಣ.

ನಿರ್ದೇಶಕ ಪುರಿ ಜಗನ್ನಾಥ್ ಅವರ ಮಗ ಆಕಾಶ್‌ ಪುರಿ ಸೈನಿಕನ ಪಾತ್ರದಲ್ಲಿ ಮಿಂಚಿದ್ದಾರೆ. ಇದು ಅವರ ಚೊಚ್ಚಿಲ ಚಿತ್ರ. ಮೆಹಬೂಬ ಪಾತ್ರಕ್ಕೆ ನೇಹಾ ಶೆಟ್ಟಿ ಜೀವ ತುಂಬಿದ್ದಾರೆ. 30 ಲಕ್ಷಕ್ಕೂ ಹೆಚ್ಚು ಮಂದಿ ಟ್ರೇಲರ್ ವೀಕ್ಷಿಸಿದ್ದಾರೆ.

‘ಮುಂಗಾರು ಮಳೆ-2’ ಸಿನಿಮಾದಲ್ಲಿ ಗಣೇಶ್‌ ಅವರ ಜೊತೆ ನಾಯಕಿಯಾಗಿ ನಟಿಸಿದ್ದ ನೇಹಾ ಶೆಟ್ಟಿಗೂ ಇದು ಮೊದಲ ತೆಲುಗು ಸಿನಿಮಾ. ನೇಹಾ ಶೆಟ್ಟಿಗೆ ಮೊದಲ ಚಿತ್ರದಲ್ಲಿ ಭಾರಿ ಪ್ರಶಂಸೆ, ಯಶಸ್ಸು ಸಿಕ್ಕರೂ, ಕನ್ನಡದಲ್ಲಿ ಆಮೇಲೆ ಯಾವ ಚಿತ್ರದಲ್ಲೂ ಕಾಣಿಸಿಕೊಂಡಿರಲಿಲ್ಲ. ಈಗ ಈ ಸಿನಿಮಾ ಅವರಿಗೆ ಬ್ರೇಕ್‌ ಕೊಡುವ ಸೂಚನೆ ನೀಡಿದೆ.

ಪ್ರತಿಕ್ರಿಯಿಸಿ (+)