ಸರ್ಕಾರಿ ಶಾಲೆಯಲ್ಲಿ ಸೌರವಿದ್ಯುತ್‌ ಬಳಕೆ

7
ಶನಿವಾರಸಂತೆ ಸಮೀಪದ ಮುಳ್ಳೂರು ಗ್ರಾಮದ ಶಿಕ್ಷಕನ ಸಾಧನೆ

ಸರ್ಕಾರಿ ಶಾಲೆಯಲ್ಲಿ ಸೌರವಿದ್ಯುತ್‌ ಬಳಕೆ

Published:
Updated:
ಸರ್ಕಾರಿ ಶಾಲೆಯಲ್ಲಿ ಸೌರವಿದ್ಯುತ್‌ ಬಳಕೆ

ಶನಿವಾರಸಂತೆ: ವಿಶಿಷ್ಟ ಕಲಿಕಾ ವಿಧಾನದಿಂದ ಹೆಸರುವಾಸಿಯಾಗಿರುವ ಮುಳ್ಳೂರು ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲೀಗ ಸೋಲಾರ್ ಪಾರ್ಕ್ ಗಮನ ಸೆಳೆಯುತ್ತಿದೆ.

ಶಾಲೆಯಲ್ಲಿ ನಡೆಯುತ್ತಿರುವ ಬೇಸಿಗೆ ಶಿಬಿರದ ಅಂಗವಾಗಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಸೇರಿ ಸೋಲಾರ್ ಪಾರ್ಕ್ ನಿರ್ಮಿಸಿದ್ದಾರೆ. ಕ್ರಿಯಾಶೀಲ ಶಿಕ್ಷಕ ಸಿ.ಎಸ್.ಸತೀಶ್ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಶಾಲೆಯಲ್ಲಿ ಸೋಲಾರ್ ಪಾರ್ಕ್ ನಿರ್ಮಿಸಿದ್ದಾರೆ. ಭವಿಷ್ಯದಲ್ಲಿ ಉದ್ಭವಿಸಬಹುದಾದ ಇಂಧನ ಸಮಸ್ಯೆಗಳಿಗೆ ಪರ್ಯಾಯ ಇಂಧನದ ಅರಿವು ಮೂಡಿಸಲು ವಿದ್ಯಾರ್ಥಿಗಳು ಮುಂದಾಗಿದ್ದಾರೆ.

ಏನಿದು ಸೋಲಾರ್ ಪಾರ್ಕ್?: ಶಾಲೆ ಆವರಣದಲ್ಲಿ ಸೋಲಾರ್ ಪ್ಯಾನಲ್‌ಗಳನ್ನು ಅಳವಡಿಸಲಾಗಿದ್ದು, ಅವುಗಳಿಂದ ಸಂಗ್ರಹಿಸಿದ

ವಿದ್ಯುತ್‌ಅನ್ನು ವಾಹನಗಳ ಹಳೆಯ ಬ್ಯಾಟರಿಗಳನ್ನು ಚಾರ್ಜ್ ಮಾಡಲಾಗುತ್ತಿದೆ. ಈ ಬ್ಯಾಟರಿಗಳನ್ನು ಮತ್ತು ಹಳೆಯ ಯುಪಿಎಸ್‌ ಭಾಗಗಳನ್ನು ಬಳಸಿ ಶಾಲೆಯ ಕಂಪ್ಯೂಟರ್‌ಗಳು ಕಾರ್ಯ ನಿರ್ವಹಿಸುವಂತೆ ಮಾಡಲಾಗಿದೆ. ಶಾಲೆಯಲ್ಲಿ ಕಂಪ್ಯೂಟರ್‌ಗಳು ಸಂಪೂರ್ಣವಾಗಿ ಸೌರಶಕ್ತಿಯಿಂದಲೇ ಕಾರ್ಯ ನಿರ್ವಹಿಸುತ್ತಿವೆ. ಜತೆಗೆ 3 ವಿದ್ಯುತ್ ದೀಪಗಳಿಗೂ ಬಳಕೆ ಮಾಡಿಕೊಳ್ಳಲಾಗುತ್ತಿದೆ.

ಸೋಲಾರ್ ಪಾರ್ಕ್‌ನಲ್ಲಿ ಬಳಸಿರುವ ಪ್ಯಾನಲ್‌ಗಳು, ಕೆಟ್ಟು ಹೋದ ಚಾರ್ಜರ್‌ ಲೈಟ್‌ಗಳು ಹಾಗೂ ಹಳೆಯ ಯುಪಿಎಸ್‌ನ ಭಾಗಗಳನ್ನು ಇನ್‌ವರ್ಟರ್‌ಗಳಾಗಿ ಬಳಕೆ ಮಾಡಲಾಗಿದೆ. ಈ ಕಾರ್ಯಕ್ಕೆ ಕೊಡಗರಳ್ಳಿಯ ಮೆಕ್ಯಾನಿಕ್ ಬಿ.ಆರ್.ಮಿಲನ್ ಮಾರ್ಗದರ್ಶನ ನೀಡುತ್ತಿದ್ದಾರೆ. ಚಿಕ್ಕಕೊಳತ್ತೂರು ಗ್ರಾಮದ ಗುಜರಿ ಅಂಗಡಿ ಮಾಲೀಕ ಸೈಯದ್ ಅನ್ಸಾರ್ ಕಡಿಮೆ ದರದಲ್ಲಿ ಸೋಲಾರ್ ಪ್ಯಾನಲ್‌ಗಳನ್ನು ಒದಗಿಸಿದ್ದಾರೆ.

ಪರ್ಯಾಯ ಇಂಧನವನ್ನು ಬಳಸಿಕೊಂಡು ನವೀಕರಿಸಲಾಗದ ಶಕ್ತಿ ಸಂಪನ್ಮೂಲಗಳನ್ನು ಉಳಿಸಿಕೊಳ್ಳುವ ಬಗೆಯನ್ನು ಶಿಕ್ಷಕ ಸತೀಶ್ ವಿದ್ಯಾರ್ಥಿಗಳಿಗೆ ತೋರಿಸಿಕೊಡುತ್ತಿದ್ದಾರೆ. ಭವಿಷ್ಯದ ವಿಜ್ಞಾನಿಗಳನ್ನು ರೂಪಿಸುವ ಶಾಲೆ ಎಂದೇ ಬಿಂಬಿತವಾಗಿದೆ.

ಶಿಕ್ಷಕ ಸಿ.ಎಸ್.ಸತೀಶ್ ಅವರಿಂದಾಗಿ ಮುಳ್ಳೂರಿನ ಸರ್ಕಾರಿ ಶಾಲೆ ಜಿಲ್ಲೆಯಲ್ಲಿ ಮಾತ್ರವಲ್ಲ; ರಾಜ್ಯದಲ್ಲೂ ಗುರುತಿಸಿಕೊಂಡಿದೆ. ಪರಿಸರ ಮಿತ್ರ ಶಾಲೆ ಯೋಜನೆಯಡಿ ನೀಡುವ ಉತ್ತಮ ಹಳದಿ ಶಾಲೆ ಪ್ರಶಸ್ತಿ ಕೂಡ ಈ ಶಾಲೆಗೆ ಲಭಿಸಿದೆ.

‘ಸೋಲಾರ್ ಪಾರ್ಕ್ ಆವಿಷ್ಕಾರ ಜಿಲ್ಲೆಯ ಇತರೆ ಶಾಲೆಗಳಿಗೆ ಮಾದರಿಯಾಗಿದೆ. ವಿದ್ಯಾರ್ಥಿಗಳಲ್ಲಿ ಪರ್ಯಾಯ ಇಂಧನದ ಬಗ್ಗೆ ಅರಿವು ಮೂಡಿಸುತ್ತಿರುವ ಶಿಕ್ಷಕ ಸತೀಶ್ ಅವರ ಸಾಧನೆ ಶ್ಲಾಘನೀಯ’ ಎಂದರು ಸಮೂಹ ಸಂಪನ್ಮೂಲ ವ್ಯಕ್ತಿ ಡಿ.ಎಸ್.ಮಧುಕುಮಾರ್.

ಶ.ಗ.ನಯನತಾರಾ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry