ಶುಕ್ರವಾರ, ಡಿಸೆಂಬರ್ 13, 2019
19 °C
ತಾಲ್ಲೂಕಿನಲ್ಲಿ ಉಂಟಾದ ಕುಡಿಯುವ ನೀರಿನ ಸಮಸ್ಯೆ, ಫ್ಲೋರೈಡ್‌ ಯುಕ್ತ ನೀರು ಕುಡಿದು ಬಳಲಬೇಕಾದ ದುಸ್ಥಿತಿ

ಟ್ಯಾಂಕರ್ ನೀರಿಗೆ ಮೊರೆ ಹೋದ ಜನರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಟ್ಯಾಂಕರ್ ನೀರಿಗೆ ಮೊರೆ ಹೋದ ಜನರು

ಮಾಲೂರು: ಬೇಸಿಗೆಯ ಬಿಸಿಲ ಧಗೆಗೆ ಬರಿದಾದ ಇಳೆ.. ಸಾವಿರಾರು ಅಡಿ ಬಾವಿ ಕೊರೆಸಿದರೂ ಸಿಗದ ನೀರು.. ಫ್ಲೋರೈಡ್ ಪೂರಿತ ನೀರು ಕುಡಿದು ಅನಾರೋಗ್ಯಪೀಡಿತ ಜನರು– ಮಾಲೂರು ಪಟ್ಟಣ ಸೇರಿದಂತೆ ತಾಲ್ಲೂಕಿನ ಕೆಲವು ಭಾಗಗಳಲ್ಲಿನ ಜನರ ಸ್ಥಿತಿ ಇದು.

ನೀರಿನ ಸಮಸ್ಯೆ ದಶಕಗಳಿಂದಲೂ ಪ್ರಚಾರದ ಅಸ್ತ್ರವಾಗಿ ಬಳಸಿಕೊಳ್ಳಲಾಗುತ್ತಿದೆ. ಆದರೆ ಜನರು ಆಶ್ವಾಸನೆ ಕೇಳಿ ರೋಸಿ ಹೋಗಿದ್ದಾರೆ. ಕುಡಿಯುವ ನೀರಿನ ಸಮಸ್ಯೆ ತಾಲ್ಲೂಕಿನ ಎಲ್ಲೆಡೆ ಇದ್ದು, ಫ್ಲೋರೈಡ್‌ ಯುಕ್ತ ನೀರು ಕುಡಿದು ಬಳಲ ಬೇಕಾದ ಸ್ಥಿತಿ ಇಂದಿಗೂ ಮುಂದುವರೆದಿದೆ.

ತಾಲ್ಲೂಕಿನ 28 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ 347 ಗ್ರಾಮಗಳ ಪೈಕಿ 9 ಗ್ರಾಮಗಳಲ್ಲಿ ನೀರಿನ ಮೂಲಗಳು ಇಲ್ಲದೆ ಕೊಳವೆ ಬಾವಿ ಕೊರೆಯಿಸಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ.   ಅಂತರ್ಜಲ ಮಟ್ಟ ಕುಸಿದಿದ್ದು, ಕೊಳವೆ ಬಾವಿಗಳಲ್ಲಿನ ನೀರು ಬತ್ತಿ ಹೋಗುತ್ತಿದೆ. ತಾಲ್ಲೂಕಿನ ಕೆಲವು ಗ್ರಾಮಗಳು  ಟ್ಯಾಂಕರ್ ನೀರಿನ ಮೇಲೆ ಅವಲಂಬಿತವಾಗಿವೆ.

ತಾಲ್ಲೂಕಿನ ಶಿವಾರಪಟ್ಟಣ ಗ್ರಾ.ಪಂನ ಅಗ್ರಹಾರ ಹೊಸಹಳ್ಳಿ, ಸೀತಪ್ಪನಹಳ್ಳಿ ಮಡಿವಾಳ ಗ್ರಾ.ಪಂನ ಮಡಿವಾಳ, ಟೇಕಲ್ ಗ್ರಾ.ಪಂನ ಬಂಡೂರು ಅಗ್ರಹಾರ, ಕುಡಿಯನೂರು ಗ್ರಾ.ಪಂ ವ್ಯಾಪ್ತಿಯ ಮಣಿಶೆಟ್ಟಹಳ್ಳಿ, ಯರಪ್ಪಶೆಟ್ಟಹಳ್ಳಿ, ಲಕ್ಕೂರು ಗ್ರಾ.ಪಂನ ಚೂಡಗೊಂಡನಹಳ್ಳಿ, ಅಸಂಡಹಳ್ಳಿ ಗ್ರಾ.ಪಂನ ತೋಳಸನದೊಡ್ಡಿ ಸೇರಿದಂತೆ ಕೆ.ಜಿ.ಹಳ್ಳಿ ಗ್ರಾ.ಪಂನ ಅಣಿಗಾನಹಳ್ಳಿ ಗ್ರಾಮದಲ್ಲಿ ಪಂಚಾಯಿತಿಯಿಂದ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ.

ತಾಲ್ಲೂಕಿನ ಅರಳೇರಿ ಗ್ರಾಮ ಪಂಚಾಯತಿಯ ನೀಲಕಂಠ ಅಗ್ರಹಾರ, ಚಿಕ್ಕ ಕುಂತೂರು ಗ್ರಾ.ಪಂನಚಿಕ್ಕ ಕುಂತೂರು, ಚಿಕ್ಕತಿರುಪತಿ ಗ್ರಾ.ಪಂ ವ್ಯಾಪ್ತಿಯ ಯಟ್ಟಕೋಡಿ ಗ್ರಾಮ, ಡಿ.ಎನ್.ದೊಡ್ಡಿ ಗ್ರಾ.ಪಂ ವ್ಯಾಪ್ತಿಯ ಡಿ.ಎನ್.ದೊಡ್ಡಿ, ಕೆ.ಜಿ.ಹಳ್ಳಿ ಗ್ರಾ.ಪಂ ವ್ಯಾಪ್ತಿಯ ಕರಡುಗುರ್ಕಿ, ಕುಗಟಗಾನಹಳ್ಳಿ, ಮಾಸ್ತಿ ಗ್ರಾ.ಪಂನ ಅಪ್ಪಯ್ಯನ ಅಗ್ರಹಾರ, ರಾಜೇನಹಳ್ಳಿ ಗ್ರಾ.ಪಂನ ನಲ್ಲಂಡಹಳ್ಳಿ, ರಾಜೇನಹಳ್ಳಿ, ಸಂತೇಹಳ್ಳಿ ಗ್ರಾ.ಪಂನ ಸಂತೇನಹಳ್ಳಿ, ಶಿವಾರಪಟ್ಟಣ ಗ್ರಾ.ಪಂನ ಕರಿನಾಯಕನಹಳ್ಳಿ ಹಾಗೂ ಟೇಕಲ್ ಗ್ರಾ.ಪಂ ವ್ಯಾಪ್ತಿಯ ಸೋಮಸಂದ್ರ ಗ್ರಾಮಗಳಲ್ಲಿನ ಕೊಳವೆ ಬಾವಿಗಳಲ್ಲಿ ಫ್ಲೋರೈಡ್‌ ಅಂಶ ಹೆಚ್ಚಾಗಿದುದ್ದರಿಂದ ಇಲ್ಲಿನ ಜನರ ಅನಾರೋಗ್ಯಕ್ಕೆ ಒಳಗಾಗಿದ್ದರು.

‘ಗ್ರಾಮ ನೈರ್ಮಲ್ಯ ಮತ್ತು ಕುಡಿಯುವ ನೀರು ಸರಬರಾಜು ಇಲಾಖೆಯಿಂದ 10 ಗ್ರಾಮಗಳಲ್ಲಿ ಶುದ್ಧ ನೀರಿನ ಘಟಕ ನಿರ್ಮಾಣ ಮಾಡಲಾಗಿದೆ. ಉಳಿದಂತೆ ಟೇಕಲ್ ಗ್ರಾ.ಪಂ ವ್ಯಾಪ್ತಿಯ ಸೋಮಸಂದ್ರ ಮತ್ತು ಕೆ.ಜಿ.ಹಳ್ಳಿ ಪಂಚಾಯಿತಿಯ ಕುಗಟಗಾನಹಳ್ಳಿ ಗ್ರಾಮಗಳಿಗೆ ಶುದ್ಧ ನೀರಿನ ಘಟಕ ಅಳವಡಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ’ ಎಂದುನ  ಎಂಜಿನಿಯರ್ ನಾರಾಯಣಸ್ವಾಮಿ ಹೇಳುತ್ತಾರೆ.

ಪಟ್ಟಣದ 23 ವಾರ್ಡ್‌ಗಳ ಪೈಕಿ ಹಳೆಯ ಮಾಲೂರು ಮತ್ತು ಹೊಸ ಮಾಲೂರು ಎಂದು ಕುಡಿಯುವ ನೀರು ಸರಬಾರಜು ವಿಚಾರದಲ್ಲಿ ವಿಂಗಡಿಸಲಾಗಿದೆ. ಕೆರೆಯ ಅಂಗಳದಲ್ಲಿ ಕೊರೆಯಿಸಿರುವ ಕೊಳವೆ ಬಾವಿಗಳಿಂದ ಪುರಸಭೆಯಿಂದ ನೀರು ಸರಬರಾಜಾಗುತ್ತಿದೆ. ಹೊಸ ಮಾಲೂರು ಪಟ್ಟಣಕ್ಕೆ ಸೇರಿರುವ 3, 5, 8, 9, 16 ಮತ್ತು 20, 22, 23ನೇ ವಾರ್ಡ್‌ಗಳಲ್ಲಿ   ಸಮಸ್ಯೆ ನಿವಾರಿಸಿಕೊಳ್ಳಲು ಜನರು ನೀರಿನ ಟ್ಯಾಂಕರ್‌ಗಳ ಮೇಲೆ ಅವಲಂಬಿತರಾಗಿದ್ದಾರೆ.

‘ಬೇಸಿಗೆ ಆರಂಭಕ್ಕೂ ಮುನ್ನ ನಗರೋತ್ಥಾನ ಯೋಜನೆಯಡಿ ₹ 3 ಕೋಟಿ ವೆಚ್ಚದಲ್ಲಿ ಮಾಲೂರು ಪಟ್ಟಣದ ದೊಡ್ಡ ಕೆರೆ, ಹಾರೋಹಳ್ಳಿಕೆರೆ ಅಂಗಳದಲ್ಲಿ ಕೊಳವೆ ಬಾವಿ ಕೊರೆಯಿಸಿ ಪೈಪ್ ಲೈನ್ ಅಳವಡಿಸಿ ನೀರು ಸರಬರಾಜು ಮಾಡಲಾಗುತ್ತಿದೆ. ಆದರೆ 22 ಮತ್ತು 23ನೇ ವಾರ್ಡಿನ ಜನರಿಗಾಗಿ ಕೊಳವೆ ಬಾವಿ ಕೊರೆಯಿಸಲಾಗಿದೆ’  ಎಂದು ಮುಖ್ಯ ಅಧಿಕಾರಿ ಗೀತಾ ತಿಳಿಸಿದ್ದಾರೆ.

9 ಗ್ರಾಮಗಳಲ್ಲಿ ನೀರಿನ ಸಮಸ್ಯೆ

ತಾಲ್ಲೂಕಿನ 347 ಗ್ರಾಮಗಳ ಪೈಕಿ ಕೇವಲ 9 ಗ್ರಾಮಗಳಲ್ಲಿ ಮಾತ್ರ ನೀರಿನ ಸಮಸ್ಯೆ ಇದ್ದು, ಕೊಳವೆ ಬಾವಿ ಕೊರೆಯಿಸಿದರೂ ಪ್ರಯೋಜನವಾಗದ ಕಾರಣ ಆಯಾ ಗ್ರಾಮ ಪಂಚಾಯತಿಯಿಂದ ಟ್ಯಾಂಕರ್ ಮೂಲಕ ನೀರು ಸರಬಾರಜು ಮಾಡಲಾಗುತ್ತಿದೆ. ಫ್ಲೋರೈಡ್‌ ನೀರಿನ ಅಂಶವಿರುವ 12 ಗ್ರಾಮಗಳ ಪೈಕಿ 10 ಗ್ರಾಮಗಳಲ್ಲಿ ಶುದ್ಧ ನೀರಿನ ಘಟಕಗಳನ್ನು ಸ್ಥಾಪಿಸಲಾಗಿದೆ. ಉಳಿದ 2 ಗ್ರಾಮಗಳಿಗೆ ಅದಷ್ಟು ಬೇಗ ಶುದ್ಧ ನಿರಿನ ಘಟಕ ನಿರ್ಮಾಣ ಮಾಡಲಾಗುವುದು – ಜಮೀರ್ ಪಾಷಾ, ಗ್ರಾಮ ನೈರ್ಮಲ್ಯ ಮತ್ತು ಕುಡಿಯುವ ನೀರು ಸರಬರಾಜು ಇಲಾಖೆಯ ಎಇಇ.

ವಿಶೇಷ ಯೋಜನೆ

ನಗರೋತ್ಥಾನ ಯೋಜನೆಯಡಿ ₹ 3ಕೋಟಿ ವೆಚ್ಚದಲ್ಲಿ ಕೊಳವೆ ಬಾವಿ ಕೊರೆಯಿಸಿ ಪೈಪ್ ಲೈನ್‌ ಮೂಲಕ ಪಟ್ಟಣದಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಇರುವ ವಾರ್ಡ್‌ಗಳಿಗೆ ನೀರು ಹರಿಸಲಾಗುತ್ತಿದೆ – ಎಂ.ರಾಮಮೂರ್ತಿ, ಪುರಸಭಾಧ್ಯಕ್ಷ.

ಸಮಸ್ಯೆ ಇಲ್ಲ

ಕಾಂಗ್ರೆಸ್ ಸರ್ಕಾರ ನೀರಿನ ಸಮಸ್ಯೆ ನಿವಾರಿಸಲು ಬೇಕಾದಷ್ಟು ಅನುದಾನ ಬಿಡುಗಡೆ ಮಾಡಿದೆ. ತಾಲ್ಲೂಕಿನಾದ್ಯಂತ ಕೊಳವೆ ಬಾವಿಗಳನ್ನು ಅಗತ್ಯಕ್ಕೆ ತಕ್ಕಂತೆ ಪೈಪ್ ಮತ್ತು ಮೋಟರ್ ಪಂಪು ಬಿಡುಗಡೆ ನೀಡಲಾಗಿತ್ತು. ಜತೆಗೆ ಇತ್ತೀಚೆಗೆ ಸುರಿದ ಮಳೆಯಿಂದ ತಾಲ್ಲೂಕಿನಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಉಂಟಾಗಿಲ್ಲ – ಕೆ.ವೈ.ನಂಜೇಗೌಡ, ಕೋಚಿಮುಲ್ ನಿರ್ದೇಶಕ.

160 ಶುದ್ಧ ನೀರಿನ ಘಟಕ ಸ್ಥಾಪನೆ

ಪಟ್ಟಣ ಸೇರಿದಂತೆ ತಾಲ್ಲೂಕಿನ 367 ಗ್ರಾಮಗಳ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ನಿವಾರಿಸಲು ಸರ್ಕಾರದ ಅನುದಾನದಡಿಯಲ್ಲಿ 540 ಕೊಳವೆ ಬಾವಿ ಕೊರೆಯಿಸಲಾಗಿದೆ. ಸರ್ಕಾರದ ಅನುದಾನಗಳ ಜತೆಗೆ ಉದ್ಯಮಿಗಳ ಸಹಕಾರದಿಂದ ತಾಲ್ಲೂಕಿನಾದ್ಯಂತ 160 ಶುದ್ಧ ನೀರಿನ ಘಟಕ ಸ್ಥಾಪಿಸಲಾಗಿದೆ. ಇತ್ತೀಚೇಗೆ ಸುರಿದ ಮಳೆಯಿಂದ ಕೆರೆ ಕುಂಟೆಗಳಿಗೆ ನೀರು ಶೇಖರಣೆಯಾಗಿದ್ದರಿಂದ ತಾಲ್ಲೂಕಿನಲ್ಲಿ ಬಹತೇಕ ಕುಡಿಯುವ ನೀರಿನ ಸಮಸ್ಯೆ ನಿವಾರಣೆಯಾಗಿದೆ – ಕೆ.ಎಸ್.ಮಂಜುನಾಥಗೌಡ, ಶಾಸಕ. 

**

ಕುಡಿಯುವ ನೀರು ಸೇರಿಂದಂತೆ ನೈರ್ಮಲ್ಯದ ಕೊರತೆಯಿಂದ ಮಡಿವಾಳ ಗ್ರಾಮದ ಜನರು ತುಂಬಾ ತೊಂದರೆಗೆ ಒಳಗಾಗಿದ್ದಾರೆ. ಹದಿನೈದು ದಿನಗಳಿಗೊಮ್ಮೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುವುದರಿಂದ ಬದುಕು ನಿರ್ವಹಣೆ ಬಹಳ ಕಷ್ಟವಾಗಿದೆ – ರವಿಂದ್ರಕುಮಾರ್, ಮಡಿವಾಳ ಗ್ರಾಮದ ನಿವಾಸಿ. 

**

ಪ್ರತಿಕ್ರಿಯಿಸಿ (+)