7

ಮಿಠಾಯಿ ಬಿಟ್ಟು; ಕರಬೂಜ ಹಿಡಿದು

Published:
Updated:
ಮಿಠಾಯಿ ಬಿಟ್ಟು; ಕರಬೂಜ ಹಿಡಿದು

ಕರಬೂಜ ಬೇಸಾಯ ನಮ್ಮ ಭೂಮಿಗೆ ದಕ್ಕುವುದಲ್ಲ ಎಂಬ ಮಾತನ್ನಾಡುವ ಅನೇಕ ರೈತರ ಮಾತಿಗೆ ಕಿವಿಗೊಡದೇ, ಊರೂರಿನಲ್ಲಿ ಮಿಠಾಯಿ ಮಾರುತ್ತಿದ್ದ ಸೋಲಬಣ್ಣ ಕರಬೂಜ ಕೃಷಿಗೆ ಮುಂದಾಗಿಯೇಬಿಟ್ಟರು.

ನಾನೂ ಏಕೆ ಕರಬೂಜ ಕೃಷಿ ಮಾಡಬಾರದು ಎಂದು ಯೋಚಿಸಿದ ಇವರು, ಇಂದು ಎರಡು ಎಕರೆ ಭೂಮಿಯಲ್ಲಿ ಹಣ್ಣು ಕೃಷಿ ಮಾಡುವುದರ ಮೂಲಕ ಆದಾಯದ ಬಾಗಿಲನ್ನು ತೆರೆದುಕೊಂಡಿದ್ದಾರೆ. ಕರಬೂಜ ದಿಂದ ತುಂಬಿ ತುಳುಕು ತ್ತಿರುವ ಇವರ ತೋಟ ನೂರಾರು ರೈತರ ಆಕರ್ಷಣೆಯ ಕೇಂದ್ರವಾಗಿದೆ.

ಹತ್ತನೇ ತರಗತಿಯವರೆಗೆ ಓದಿದ ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲ್ಲೂಕಿನ ಮನಗೂಳಿ ಗ್ರಾಮದ ಸೋಲಬಣ್ಣ ಕಾಡಪ್ಪ ಕೊರ್ತಿ ಕಳೆದ ಜನವರಿ ತಿಂಗಳಲ್ಲಿ ಎರಡು ಎಕರೆಯಲ್ಲಿ ಬಾವಿ ತಳಿಯ ಹಳದಿ ಬಣ್ಣದ ಕರಬೂಜ ಬೆಳೆಯಲು ಮುಂದಾದರು.

ಟ್ರ್ಯಾಕ್ಟರ್ ಮೂಲಕ ಭೂಮಿಯನ್ನು ಉಳುಮೆ ಮಾಡಿದ ಇವರು ತಿಪ್ಪೆಗೊಬ್ಬರ ಹಾಕಿ ಸಾಲಿನಿಂದ ಸಾಲಿಗೆ ಆರು ಅಡಿಯಲ್ಲಿ 12,000 ಕರಬೂಜ ಸಸಿಗಳನ್ನು ಪ್ಲಾಸ್ಟಿಕ್ ಮಂಚಿಂಗ್ ಪೇಪರ್ ಹಾಕಿ ನಾಟಿ ಮಾಡಿದ್ದಾರೆ. ಅವುಗಳಿಗೆ ಕೊಳವೆ ಬಾವಿಗಳ ಮೂಲಕ ನಿತ್ಯ ಹನಿನೀರಾವರಿ ಪದ್ಧತಿಯಲ್ಲಿ ಎರಡು ಗಂಟೆ ನೀರು ಹಾಯಿಸುತ್ತಾರೆ. ಕೊಟ್ಟಿಗೆ ಗೊಬ್ಬರ, ಎರೆಹುಳು ಗೊಬ್ಬರ, ಜಿಂಕ್ಸ್, ಬೋರಾನ್, ಮ್ಯಾಂಗನೀಸ್ ಸಲ್ಫರ್ ಗೊಬ್ಬರಗಳನ್ನು ಒಂದು ಗಿಡಕ್ಕೆ 50 ಗ್ರಾಂನಂತೆ ಹಾಕಿ, ಜಮೀನು ಹದ ಮಾಡಿ, ಅಗತ್ಯಕ್ಕೆ ತಕ್ಕಂತೆ ಗೊಬ್ಬರ, ಪೋಷಕಾಂಶ ನೀಡಿ, ಗಿಡ ಗಳಿಗೆ ಯಾವುದೇ ರೋಗ ಅಂಟಿಕೊಳ್ಳದಂತೆ ನೋಡಿ ಕೊಂಡಿದ್ದಾರೆ. ಜೊತೆಗೆ ಕೃಷಿ ಹೊಂಡವೂ ಇದೆ.

ಮಾರುಕಟ್ಟೆಗೆ ಕರಬೂಜ ಅಣಿಗೊಳಿಸುತ್ತಿರುವ ಸೋಲಬಣ್ಣ

2 ಎಕರೆಗೆ 12,000 ಗಿಡಗಳನ್ನು ಲೆಕ್ಕ ಹಾಕಿ ದರೆ, ಒಂದು ಗಿಡದಿಂದ 50 ಕಾಯಿಯಂತೆ, ಒಂದು ಕರಬೂಜ ಅರ್ಧ ಕೆ.ಜಿ ತೂಗುತ್ತಿದೆ. ಈಗಾಗಲೇ 5 ಟನ್ ಇಳುವರಿಯಿಂದ ನಿವ್ವಳ ಆದಾಯ ಬಂದಿದೆ. ಸದ್ಯದ ಬೆಲೆ ಕೆ.ಜಿ.ಗೆ ₹20 ಇದೆ. ಇನ್ನೂ 10 ಟನ್ ಫಸಲಿನಿಂದ ಆದಾಯ ಕಾದಿದೆ ಎನ್ನುತ್ತಾರೆ ಅವರು.

ತೋಟದಲ್ಲಿ 30/60 ಅಳತೆಯ ಎರೆಹುಳು ಘಟಕವನ್ನು ನಿರ್ಮಿಸಿಕೊಂಡಿದ್ದು, ಅದರಲ್ಲಿ ತೋಟದಲ್ಲಿನ ಎಲ್ಲ ತರಹದ ತ್ಯಾಜ್ಯವನ್ನು ಹಾಕಿ ಪ್ರತಿ ಮೂರು ತಿಂಗಳಿಗೊಮ್ಮೆ 50 ಕೆ.ಜಿ.ಯ 50 ಬ್ಯಾಗ್‌ಗಳನ್ನು ಎಲ್ಲ ಬೆಳೆಗಳಿಗೆ ನೀಡುತ್ತಾರೆ. ಇದರಿಂದ ಇಳುವರಿ ಪ್ರಮಾಣ ಜಾಸ್ತಿಯಾಗುತ್ತದೆ ಎನ್ನುವುದು ಅವರ ಅನುಭವದ ಮಾತು. ತೋಟದಲ್ಲಿ 6 ಜವಾರಿ ಆಕಳುಗಳನ್ನು ಸಾಕಿದ್ದು, ಅದರಿಂದ ಬರುವ ಗೊಬ್ಬರವನ್ನು ತೋಟಕ್ಕೆ ಹಾಕುತ್ತಾರೆ.

ಇವರ ಕೃಷಿಯನ್ನು ಕಂಡು ವಿಜಯಪುರ ಹಿಟ್ನಳ್ಳಿ ಕೃಷಿ ಮಹಾವಿದ್ಯಾಲಯದ ಅಧಿಕಾರಿಗಳು ಇವರಿಗೆ ಕಾಲಕಾಲಕ್ಕೆ ಸಲಹೆ, ಮಾಹಿತಿ ನೀಡುತ್ತಾ ಪ್ರತಿ ತಿಂಗಳು ಎರಡು ಬಾರಿ ನೂರಾರು ರೈತರನ್ನು ಸೇರಿಸಿ ಕೃಷಿ ವಿಚಾರಗಳನ್ನು ವಿನಿಮಯ ಮಾಡಿಕೊಳ್ಳುವ ರೂಢಿಯೂ ಇದೆ.

ಸಂಪರ್ಕಕ್ಕೆ: 9379615856.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry