ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾವ್ಯಕ್ಕೆ ಹುಟ್ಟು, ಸಾವು ಇಲ್ಲ: ಬಡಿಗೇರ

‘ನಮ್ಮೂರ ಸಂತೆ’ , ‘ನನ್ನ ಎದೆಯಾಳದಿ’ ಕವನ ಸಂಕಲನ ಬಿಡುಗಡೆ
Last Updated 16 ಏಪ್ರಿಲ್ 2018, 9:58 IST
ಅಕ್ಷರ ಗಾತ್ರ

ಕೊಪ್ಪಳ: ‘ಕಾವ್ಯಕ್ಕೆ ಹುಟ್ಟು ಮತ್ತು ಸಾವು ಇಲ್ಲ. ಕಾವ್ಯ ರಚನೆ ಶ್ರಮದಾಯಕ ಕೆಲಸ. ಇದಕ್ಕೆ ತಪಸ್ಸು ಮಾಡಬೇಕು’ ಎಂದು ಸಾಹಿತಿ ಶಿ.ಕಾ.ಬಡಿಗೇರ ಹೇಳಿದರು.

ನಗರದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ನೂತನ ಗ್ರಂಥಾಲಯದಲ್ಲಿ ಭಾನುವಾರ ತುಂಗಭದ್ರಾ ಪ್ರಕಾಶನ ಹಾಗೂ ಶಕ್ತಿ ಶಾರದೆಯ ಮೇಳದ ಆಶ್ರಯದಲ್ಲಿ ನಡೆದ ವಿರೂಪಾಕ್ಷಿ ಎಂ.ಯಲಿಗಾರ ಅವರ ಎರಡು ಕೃತಿಗಳ ಲೋಕಾರ್ಪಣೆ ಸಮಾರಂಭದಲ್ಲಿ ‘ನನ್ನ ಎದೆಯಾಳದಿ’ ಎಂಬ ಕವನ ಸಂಕಲನ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

‘ಸಾಹಿತ್ಯ ಸರಳವಾದ ಪದ. ಆದರೆ ಇದರ ಆಳದಲ್ಲಿ ಬಹಳಷ್ಟು ಕಷ್ಟ ಇದೆ. ಕಾವ್ಯ ಕೃಷಿ ಮಾಡದಿದ್ದರೂ, ಈ ಭಾಗದವರು ಕಾವ್ಯ ರಚಿಸಬಹುದು ಎಂದು ಹೇಳಲಾಗುತ್ತದೆ. ಸಾಹಿತ್ಯ ಪ್ರೀತಿಸುವವರು ಕವಿಗಳಾಗುತ್ತಾರೆ. ಕಾವ್ಯವನ್ನು ಕಟ್ಟುವುದಕ್ಕಿಂತ ಓದುವುದು ಉಪಯುಕ್ತ. ಚಿಂತನೆಗೆ ಈಡು ಮಾಡುವುದೇ ಕಾವ್ಯ. ಶಬ್ಧಕ್ಕೆ ದಕ್ಕದೆ ಇರುವ ಭಾವನೆಗಳು ಕವಿಗಳಲ್ಲಿ ಅಡಗಿರುತ್ತವೆ. ಒಳ್ಳೆಯ ಸಾಹಿತ್ಯಗಳು ಜನರ ಮನಸ್ಸಿನಲ್ಲಿ ಉಳಿಯುತ್ತವೆ. ಇವು ಯುವ ಕವಿಗಳಿಗೆ ಪ್ರೇರಣೆ ಆಗುತ್ತವೆ’ ಎಂದರು.

‘ಸಾಹಿತ್ಯಕ್ಕೆ ವಯಸ್ಸಿನ ಮಿತಿ ಇಲ್ಲ. ಕವಿಗಳು ಅಧಿಕೃತ ಶಾಸಕರು. ಕವಿಗಳ ಕಾವ್ಯ ಇನ್ನೊಬ್ಬರ ಬದುಕನ್ನು ಪರಿವರ್ತನೆ ಮಾಡಬೇಕು. ಬಡತನ, ಶೋಷಣೆಯನ್ನು ಹೋಗಲಾಡಿಸುವ ಶಕ್ತಿ ಕಾವ್ಯಕ್ಕೆ ಇದೆ. ಕವಿಗಳಿಗೆ ಕಾವ್ಯದಲ್ಲಿ ಶಬ್ಧ ಬಳಸುವ ಜಾಣತನ ಬೇಕು. ಈ ನಿಟ್ಟಿನಲ್ಲಿ ಕವಿಗೆ ಶಬ್ಧ ಸಂಗ್ರಹಿಸುವ ಶಕ್ತಿ ಇರಬೇಕು. ಸಾಂಕೇತಿಕ ಪದಗಳನ್ನು ಬಳಸುವುದರಿಂದ ಕಾವ್ಯಕ್ಕೆ ಮೆರುಗು ಬರುತ್ತದೆ’ ಎಂದರು.

ಶಿಕ್ಷಕ ಗೋಪಾಲಕೃಷ್ಣ ಕುಲಕರ್ಣಿ ಮಾತನಾಡಿ, ‘ಪ್ರತಿಯೊಬ್ಬ ವ್ಯಕ್ತಿಗೆ ಅಂತರಂಗದ ಘರ್ಷಣೆಗಳನ್ನು ಹೊರಹಾಕಲು ಯಾವುದಾದರೊಂದು ಮಾಧ್ಯಮ ಬೇಕು. ಕಲೆ, ಸಾಹಿತ್ಯವನ್ನು ಅಭಿವ್ಯಕ್ತಿಗೆ ಬಳಸಿಕೊಳ್ಳಲಾಗುತ್ತದೆ. ಶಿಶು ಸಾಹಿತ್ಯ ಭವ್ಯಪರಂಪರೆ ಹೊಂದಿದೆ. ಬಾಲ್ಯದ ನೋವು, ನಲಿವುಗಳು ಪ್ರತಿಯೊಬ್ಬರಿಗೂ ಮುದ ನೀಡುತ್ತವೆ. ಪ್ರಸ್ತುತ ಮಕ್ಕಳು ಮೊಬೈಲ್‌ಗಳ ಮೊರೆ ಹೋಗುತ್ತಿದ್ದಾರೆ. ಗ್ರಾಮೀಣ ಕ್ರೀಡೆಗಳನ್ನು ಮರೆಯುತ್ತಿದ್ದಾರೆ. ಮಕ್ಕಳು ಯಾವುದರ ಮೇಲೆ ಆಸಕ್ತಿ ವಹಿಸುತ್ತಾರೆಯೋ ಅದರಲ್ಲಿ ಕರಗತರಾಗುತ್ತಾರೆ. ಹಾಗಾಗಿ ಮಕ್ಕಳಿಗೆ ಒಳ್ಳೆಯ ಹವ್ಯಾಸ ಬೆಳೆಸಬೇಕು’ ಎಂದರು.

‘ನಮ್ಮೂರ ಸಂತೆ’ ಎಂಬ ಮಕ್ಕಳ ಕವಿತೆ ಹಾಗೂ ‘ನನ್ನ ಎದೆಯಾಳದಿ’ ಎಂಬ ಕವನ ಸಂಕಲನವನ್ನು ಬಿಡುಗಡೆಗೊಳಿಸಲಾಯಿತು. ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಪ್ರಾಚಾರ್ಯ ಡಾ.ಸಿ.ಬಿ.ಚಿಲ್ಕರಾಗಿ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ ಶಾಂತಾದೇವಿ ಹಿರೇಮಠ, ನಿವೃತ್ತ ಉಪನ್ಯಾಸಕರಾದ ಡಿ.ಎಂ.ಬಡಿಗೇರ, ಮಹಮೂದ್‌ ಮನಿಯಾರ, ಮುಖ್ಯಶಿಕ್ಷಕಿ ಮಾಲಾ ಬಡಿಗೇರ, ಕಲಾವಿದ ಶಶಿಧರ ಕುಷ್ಟಗಿ ಇದ್ದರು.

ಸಾಹಿತಿ ಅಕ್ಬರ್‌ ಸಿ.ಕಾಲಿಮಿರ್ಚಿ ಪ್ರಾಸ್ತಾವಿಕ ಮಾತನಾಡಿದರು. ಮುಖ್ಯಶಿಕ್ಷಕ ಮಂಜುನಾಥ ಚಿತ್ರಗಾರ ನಿರೂಪಿಸಿದರು.

**

ಕವಿಗಳು ಅಧಿಕೃತ ಶಾಸಕರು. ಕವಿಗಳ ಕಾವ್ಯ ಇನ್ನೊಬ್ಬರ ಬದುಕನ್ನು ಪರಿವರ್ತನೆ ಮಾಡಬೇಕು. ಬಡತನ, ಶೋಷಣೆಯನ್ನು ಹೋಗಲಾಡಿಸುವ ಶಕ್ತಿ ಕಾವ್ಯಕ್ಕೆ ಇದೆ – ಶಿ.ಕಾ.ಬಡಿಗೇರ, ಸಾಹಿತಿ. 

**

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT