ಮಂಗಳವಾರ, ಜೂಲೈ 7, 2020
27 °C
ರಜೆಯ ಆನಂದ ಅನುಭವಿಸುತ್ತಿರುವ ಚಿಣ್ಣರು

ಬೇಸಿಗೆ ಶಿಬಿರಗಳ ಆರ್ಭಟ

ಎಂ.ಎನ್‌.ಯೋಗೇಶ್‌ Updated:

ಅಕ್ಷರ ಗಾತ್ರ : | |

ಬೇಸಿಗೆ ಶಿಬಿರಗಳ ಆರ್ಭಟ

ಮಂಡ್ಯ: ಈ ಬೇಸಿಗೆಯಲ್ಲಿ ರಜೆಯ ಮಜಾ ಅನುಭವಿಸಲು ಶಾಲಾ ಮಕ್ಕಳು ಅಜ್ಜಿ–ತಾತನ ಮನೆಗೆ ಹೋಗುವುದಿಲ್ಲ. ಕೆರೆ–ಕಟ್ಟೆಗಳಿಗೆ ತೆರಳಿ ಈಜಾಡಲು ಪೋಷಕರು ಬಿಡುವುದಿಲ್ಲ. ಇದು ಬೇಸಿಗೆ ಶಿಬಿರಗಳ ಕಾಲ. ಹೀಗಾಗಿ, ನಗರದ ಹಲವು ಸಂಘ- ಸಂಸ್ಥೆಗಳು ಬೇಸಿಗೆ ಶಿಬಿರ ಆಯೋಜನೆ ಮಾಡಿದ್ದು ಅಲ್ಲಿ ಮಕ್ಕಳು ರಜೆಯ ಮಜಾ ಅನುಭವಿಸುತ್ತಿದ್ದಾರೆ.

ನಗರದಲ್ಲಿ 10ಕ್ಕೂ ಹೆಚ್ಚು ಸಂಸ್ಥೆಗಳು ಬೇಸಿಗೆ ಶಿಬಿರ ಆಯೋಜನೆ ಮಾಡಿವೆ. ಅಲ್ಲದೆ, ಹಲವು ಕಂಪ್ಯೂಟರ್‌ ತರಬೇತಿ ಕೇಂದ್ರಗಳು ಮಕ್ಕಳಿಗಾಗಿ ವಿಶೇಷ ಕಂಪ್ಯೂಟರ್‌ ತರಬೇತಿ ಶಿಬಿರ ಏರ್ಪಡಿಸಿವೆ. ವಿಡಿಯೊ ಗೇಮ್‌ ಇಷ್ಟಪಡುವ ಮಕ್ಕಳಿಗಾಗಿ ತರಬೇತಿ ಆಯೋಜನೆ ಮಾಡಲಾಗಿದೆ. ನೃತ್ಯ ತರಬೇತಿ ಸಂಸ್ಥೆಗಳು ನೃತ್ಯ ತರಬೇತಿ ನೀಡುತ್ತವೆ. ಯೋಗ ಶಿಕ್ಷಣ ಸಂಸ್ಥೆಗಳೂ ಮಕ್ಕಳಿಗಾಗಿ ವಿಶೇಷ ತರಬೇತಿ ಶಿಬಿರ ಆಯೋಜನೆ ಮಾಡಿವೆ.

ನಗರದ ಜನತಾ ಶಿಕ್ಷಣ ಸಂಸ್ಥೆಯಿಂದ ಪಿಇಟಿ ಕ್ರೀಡಾ ಸಮುಚ್ಛಯದ ಆವರಣದಲ್ಲಿ ವೈವಿಧ್ಯಮಯ ಆಟೋಟ ಶಿಬಿರ ಆಯೋಜನೆ ಮಾಡಲಾಗಿದೆ. ಪಿಇಟಿ ಈಜುಕೊಳದಲ್ಲಿ ಮಕ್ಕಳಿಗೆ ಬೆಳಿಗ್ಗೆ ಹಾಗೂ ಸಂಜೆಯ ವೇಳೆಯಲ್ಲಿ ವಿವಿಧ ಬ್ಯಾಚ್‌ಗಳಲ್ಲಿ ತರಬೇತಿ ನಡೆಯುತ್ತಿವೆ. ಈಜು ಮಾತ್ರವಲ್ಲದೆ ಬಾಲ್‌ ಬ್ಯಾಡ್ಮಿಂಟನ್‌ ಶಿಬಿರ ತಿಂಗಳ ಪೂರ್ತಿ ನಡೆಯುತ್ತಿದೆ. ಜತೆಗೆ, ಷಟಲ್‌ ಬ್ಯಾಡ್ಮಿಂಟನ್‌, ಟೇಬಲ್‌ ಟೆನಿಸ್‌, ವಾಲಿಬಾಲ್‌, ಕೊಕ್ಕೊ ಶಿಬಿರಗಳು ನಡೆಯುತ್ತಿವೆ. ಎಲ್ಲಾ ವಿಭಾಗಗಳಿಗೂ ಪ್ರತ್ಯೇಕ ಕೋಚ್‌ ನೇಮಕ ಮಾಡಿದ್ದು ಮಕ್ಕಳಿಗೆ ತರಬೇತಿ ನೀಡಲಾಗುತ್ತಿದೆ. 7 ವರ್ಷದಿಂದ 14 ವರ್ಷ ವಯಸ್ಸಿನೊ ಳಗಿನ ಮಕ್ಕಳು ತರಬೇತಿ ಶಿಬಿರಗಳಲ್ಲಿ ಪಾಲ್ಗೊಂಡಿದ್ದಾರೆ.

‘ಜನತಾ ಶಿಕ್ಷಣ ಸಂಸ್ಥೆ ಪ್ರತಿ ವರ್ಷ ಮಕ್ಕಳಿಗಾಗಿ ಬೇಸಿಗೆ ಶಿಬಿರ ಆಯೋಜನೆ ಮಾಡುತ್ತಾ ಬಂದಿದೆ. ರಜೆ ಕಾಲವನ್ನು ಉತ್ತಮ ಹವ್ಯಾಸಗಳಿಂದ ಕಳೆಯಬೇಕು ಎಂಬ ಉದ್ದೇಶದಿಂದ ಶಿಬಿರ ಆಯೋಜನೆ ಮಾಡುತ್ತಿದ್ದೇವೆ. ಮೊದಲು ಮಕ್ಕಳು ಹಳ್ಳಿಗಳಿಗೆ ತೆರಳಿ ಮರಕೋತಿ, ಬುಗರಿ, ಚೌಕಾ ಬಾರ, ಗೋಲಿ, ಕುಂಟೆಬಿಲ್ಲೆ, ಚಿಣ್ಣಿದಾಂಡು, ಲಗೋರಿಯಂತಹ ಹಳ್ಳಿ ಆಟ ಆಡುತ್ತಾ ಆನಂದ ಅನುಭವಿಸುತ್ತಿದ್ದರು. ಆದರೆ, ಈಗ ಕಾಲ ಬದಲಾಗಿದೆ. ಎಲ್ಲರೂ ಬೇಸಿಗೆ ಶಿಬಿರದತ್ತ ಮುಖ ಮಾಡಿದ್ದಾರೆ. ಇದೂ ಒಳ್ಳೆಯದೇ. ಇಂತಹ ಶಿಬಿರ ದಿಂದ ಮಕ್ಕಳ ಸರ್ವಾಂಗೀಣ ಅಭಿವೃದ್ಧಿ ಯಾಗುತ್ತದೆ’ ಎಂದು ಪಿಇಟಿ ನಿರ್ದೇಶಕ ಡಾ.ರಾಮಲಿಂಗಯ್ಯ ಹೇಳಿದರು.

ಸರ್ಕಾರದಿಂದ ಬೇಸಿಗೆ ಶಿಬಿರ: ಎಲ್ಲಾ ವರ್ಗದ ಮಕ್ಕಳನ್ನು ಸೆಳೆಯಲು ಸರ್ಕಾರವೇ ಕಳೆದ ಎರಡು ವರ್ಷಗಳಿಂದ ಬೇಸಿಗೆ ಶಿಬಿರ ಆಯೋಜನೆ ಮಾಡುತ್ತಾ ಬಂದಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ನಗರದ ಬಾಲಭವನದಲ್ಲಿ ತಿಂಗಳ ಪೂರ್ತಿ ಬೇಸಿಗೆ ಶಿಬಿರ ಆಯೋಜನೆ ಮಾಡಲಾಗಿದೆ. ಶಿಬಿರಕ್ಕೆ 120 ಮಕ್ಕಳು ನೋಂದಣಿ ಮಾಡಿಕೊಂಡಿದ್ದಾರೆ.

ಪ್ರತಿದಿನ ಒಂದೊಂದು ವಿಷಯ ತಜ್ಞ ತಂಡ ಶಿಬಿರಕ್ಕೆ ಭೇಟಿ ನೀಡಿ ಮಕ್ಕಳಿಗೆ ವಿವಿಧ ವಿಷಯ ಕುರಿತು ತರಬೇತಿ ನೀಡುತ್ತಿದ್ದಾರೆ. ಅಗ್ನಿಶಾಮಕ ದಳದಿಂದ ಬೆಂಕಿ ನಂದಿಸುವ ಪ್ರಾತ್ಯಕ್ಷಿಕೆ, ಸಾಹಸ ಕಲಾ ತಂಡದಿಂದ ಸಾಹಸ, ಮುಖವಾಡ ತಯಾರಿಕೆ, ಮಾಟ–ಮಂತ್ರ ರಹಸ್ಯ ಬಯಲು ಕಾರ್ಯಕ್ರಮಗಳ ಮೂಲಕ ಮಕ್ಕಳಿಗೆ ಉಚಿತವಾಗಿ ತರಬೇತಿ ನೀಡಲಾಗುತ್ತಿದೆ.

‘ಮಕ್ಕಳಲ್ಲಿ ರಚನಾತ್ಮಕವಾಗಿ ಚಿಂತನೆ ಮಾಡುವ ಗುಣ ಬೆಳೆಸುವ ಉದ್ದೇಶದಿಂದ ಸರ್ಕಾರ ಬೇಸಿಗೆ ಶಿಬಿರ ಆಯೋಜನೆ ಮಾಡಿದೆ. ನಾವು ಈ ಬಾರಿ 80 ಮಕ್ಕಳು ನೋಂದಣಿಯಾಗುತ್ತಾರೆ ಎಂಬ ಗುರಿ ಹೊಂದಿದ್ದೆವು. ಆದರೆ, ನೋಂದಣಿ ನೂರು ದಾಟಿದೆ. ಅವರಿಗೆ ಬೇಕಾದ ಎಲ್ಲಾ ಕಲಿಕಾ ಉಪಕರಣ ಗಳನ್ನು ಸರ್ಕಾರವೇ ನೀಡಿದೆ. ವಿಷಯ ತಜ್ಞರು, ಕಲಾವಿದರು ಹಾಗೂ ಗಾಯಕರ ಮೂಲಕ ಮಕ್ಕಳಿಗೆ ತರಬೇತಿ ನೀಡಲಾಗುತ್ತಿದೆ’ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಡಾ.ಎಸ್‌.ದಿವಾಕರ್‌ ಹೇಳಿದರು.

ನೃತ್ಯ ತರಬೇತಿ: ರೆಬಲ್‌ ನೃತ್ಯ ತರಬೇತಿ ಸಂಸ್ಥೆಯಿಂದ ತಿಂಗಳ ಕಾಲ ನೃತ್ಯ ತರಬೇತಿ, ಕರಕುಶಲ ವಸ್ತುಗಳ ತಯಾರಿಕೆ, ಜೇಡಿಮಣ್ಣಿನ ಕಲಾಕೃತಿ ರಚನೆ, ಗಾಯನ ತರಬೇತಿ, ಇಂಗ್ಲಿಷ್‌– ಕನ್ನಡ ಕೈಬರಹ ತರಬೇತಿ ಶಿಬಿರ ಆಯೋಜನೆ ಮಾಡಲಾಗಿದೆ.

‘ಮಕ್ಕಳಿಗೆ ಶಾಸ್ತ್ರೀಯ, ಜನಪದ, ಸಮಾಕಾಲೀನ ನೃತ್ಯ ತರಬೇತಿ ನೀಡುವ ಜೊತೆಗೆ ಮುಖವಾಡ ತಯಾರಿಕೆಯಂತ ಕರಕುಶಲ ಕಲೆ ಹೇಳಿಕೊಡಲಾಗುತ್ತಿದೆ. ಜೊತೆಗೆ ಯೋಗ ತರಬೇತಿ ನೀಡಲಾ ಗುತ್ತಿದೆ’ ಎಂದು ನೃತ್ಯ ಶಾಲೆಯ ಸಿದ್ದು ಹೇಳಿದರು.

ಮಂಡ್ಯದಿಂದ ಮೈಸೂರಿಗೆ...

ಕೆಲ ಪೋಷಕರು ತಮ್ಮ ಮಕ್ಕಳನ್ನು ಮೈಸೂರಿನಲ್ಲಿ ನಡೆಯುತ್ತಿರುವ ಬೇಸಿಗೆ ಶಿಬಿರಗಳಿಗೂ ಸೇರಿಸಿದ್ದಾರೆ. ಮೈಸೂರಿನ ರಂಗಾಯಣದಲ್ಲಿ ನಡೆಯುವ ‘ಚಿಣ್ಣರ ಮೇಳ’ಕ್ಕೆ ಹಲವು ಮಕ್ಕಳು ಸೇರಿವೆ. ಮೈಸೂರಿನಲ್ಲಿರುವ ನೆಂಟರಿಷ್ಟರ ಮನೆಯಲ್ಲಿ ಇದ್ದುಕೊಂಡು ಮಕ್ಕಳು ಬೇಸಿಗೆ ಶಿಬಿರದಲ್ಲಿ ಪಾಲ್ಗೊಂಡಿದ್ದಾರೆ. ಚಿಣ್ಣರ ಮೇಳ ಮಾತ್ರವಲ್ಲದೆ. ನಟ, ನಿರ್ದೇಶಕ ಮಂಡ್ಯ ರಮೇಶ್‌ ಆಯೋಜನೆ ಮಾಡಿರುವ ‘ರಜಾ ಮಜಾ’ ಬೇಸಿಗೆ ಶಿಬಿರಕ್ಕೂ ಮಕ್ಕಳನ್ನು ಸೇರಿಸಿದ್ದಾರೆ.

‘ನನ್ನ ಮಗ ಶಾಲೆಯಲ್ಲಿ ಬಹಳ ಚೆನ್ನಾಗಿ ಏಕಪಾತ್ರಾಭಿನಯ ಮಾಡುತ್ತಾನೆ. ಹೀಗಾಗಿ ಆತನಿಗೆ ರಂಗ ತರಬೇತಿ ಕೊಡಿಸುವ ಉದ್ದೇಶದಿಂದ ರಂಗಾಯಣದ ಚಿಣ್ಣರ ಮೇಳಕ್ಕೆ ಸೇರಿಸಿದ್ದೇನೆ. ನಾಟಕದ ಜೊತೆಗೆ ಅಲ್ಲಿ ಸಂಗೀತವನ್ನೂ ಹೇಳಿಕೊಡುತ್ತಾರೆ. ನನ್ನ ತಂಗಿ ಮನೆ ಮೈಸೂರಿನಲ್ಲಿರುವ ಕಾರಣ ಅಲ್ಲೇ ಇರಿಸಿದ್ದೇನೆ’ ಎಂದು ಕಲ್ಲಹಳ್ಳಿಯ ಶಿವಕುಮರ್‌ ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.