ಮಂಗಳವಾರ, ಜೂಲೈ 7, 2020
27 °C
ಪಕ್ಷದ ಜೊತೆ ಗುರುತಿಸಿಕೊಂಡವರೇ ಎಸ್‌ಡಿಪಿಐ ಬೆಂಬಲಿಸುವ ಆತಂಕ

ಬಂಟ್ವಾಳದಲ್ಲಿ ಕಾಂಗ್ರೆಸ್‌ಗೆ ‘ಕಪ್ಪು ಕುರಿ’ಗಳ ಕಾಟ!

ವಿ.ಎಸ್. ಸುಬ್ರಹ್ಮಣ್ಯ Updated:

ಅಕ್ಷರ ಗಾತ್ರ : | |

ಬಂಟ್ವಾಳದಲ್ಲಿ ಕಾಂಗ್ರೆಸ್‌ಗೆ ‘ಕಪ್ಪು ಕುರಿ’ಗಳ ಕಾಟ!

ಮಂಗಳೂರು: ದೀರ್ಘ ಕಾಲದಿಂದ ಮತೀಯ ಸಂಘರ್ಷಕ್ಕೆ ಅಖಾಡವಾಗಿ ರುವ ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಸ್ಥಳೀಯ ಶಾಸಕ ಬಿ.ರಮಾನಾಥ ರೈ ಈಗ ಬಿಜೆಪಿಯ ಜೊತೆಯಲ್ಲೇ ಎಸ್‌ಡಿಪಿಐ ಕಡೆಯಿಂದಲೂ ತೀವ್ರವಾದ ಸ್ಪರ್ಧೆ ಎದುರಿಸಬೇಕಿದೆ. ಕಾಂಗ್ರೆಸ್‌ನ ಭದ್ರ ಕೋಟೆ ಎಂದೇ ಹೆಸರಾಗಿರುವ ಬಂಟ್ವಾಳದಲ್ಲಿ ಈ ಬಾರಿ ಪಕ್ಷದೊಳಗೇ ಇದ್ದು ಎಸ್‌ಡಿಪಿಐ ಬಗ್ಗೆ ಒಲವು ಹೊಂದಿರುವ ‘ಕಪ್ಪು ಕುರಿ’ಗಳು (ಪಿತೂರಿಗಾರರು) ‘ಕೈ’ ಕೊಡುತ್ತಾರೆಯೇ ಎಂಬ ಭಯ ಪಕ್ಷದ ನಾಯಕರನ್ನು ಆವರಿಸಿಕೊಂಡಿದೆ.

ಬಂಟ್ವಾಳ ಕ್ಷೇತ್ರದಲ್ಲಿ ಈವರೆಗೆ ಏಳು ಬಾರಿ ಸ್ಪರ್ಧಿಸಿರುವ ರಮಾನಾಥ ರೈ, ಆರು ಬಾರಿ ಶಾಸಕರಾಗಿ ಆಯ್ಕೆ ಯಾಗಿದ್ದಾರೆ. ಎಂಟನೇ ಬಾರಿ ಚುನಾ ವಣಾ ಅಖಾಡಕ್ಕಿಳಿಯಲು ಭರದ ಸಿದ್ಧತೆ ಯನ್ನೂ ಮಾಡಿಕೊಂಡಿದ್ದಾರೆ. ಇದೇ 21ರಂದು ನಾಮಪತ್ರ ಸಲ್ಲಿಸುವುದಾಗಿ ಘೋಷಣೆಯನ್ನೂ ಮಾಡಿದ್ದಾರೆ. ಹಿಂದಿನ ಬಹುತೇಕ ಚುನಾವಣೆಗಳಲ್ಲಿ ಅವರು ಒಬ್ಬ ಪ್ರಬಲ ಪ್ರತಿಸ್ಪರ್ಧಿಯ ವಿರುದ್ಧವೇ ಹೋರಾಟವನ್ನು ಕೇಂದ್ರೀ ಕರಿಸಿದ್ದರು. ಬಹುತೇಕ ಸಂದರ್ಭಗಳಲ್ಲಿ ಮುಸ್ಲಿಂ ಮತದಾರರು ಅವರ ಗೆಲುವನ್ನು ಸುಲಭವಾಗಿಸಿದ್ದರು. ಆದರೆ, ಈ ಬಾರಿ ಒಂದಷ್ಟು ಮಂದಿ ಮುಸ್ಲಿಂ ಮತದಾರರು ಎಸ್‌ಡಿಪಿಐ ಕಡೆಗೆ ವಾಲುತ್ತಿರುವುದು ಬಂಟ್ವಾಳದಲ್ಲಿ ಕಾಂಗ್ರೆಸ್‌ಗೆ ತಲೆನೋವು ತಂದಿದೆ.

‘ಕಾಂಗ್ರೆಸ್‌ನೊಳಗೆ ಇರುವ ಅನೇಕ ಮಂದಿ ಮುಸ್ಲಿಮರು ವಾಸ್ತವವಾಗಿ ಎಸ್‌ಡಿಪಿಐ ಪರವಾಗಿ ಇದ್ದಾರೆ. ಅದೇ ನಮಗಿರುವ ಸವಾಲು’ ಎಂದು ಮಾಜಿ ಮೇಯರ್‌ ಕವಿತಾ ಸನಿಲ್‌ ಪಕ್ಷದ ಮುಖಂಡರ ಜೊತೆಗಿನ ವೈಯಕ್ತಿಕ ಚರ್ಚೆಯ ವೇಳೆ ಹೇಳಿರುವ ವಿಡಿಯೊ ತುಣುಕೊಂದು ಇತ್ತೀಚೆಗೆ ವೈರಲ್‌ ಆಗಿತ್ತು. ಈಗ ಬಂಟ್ವಾಳ ಕಾಂಗ್ರೆಸ್‌ ವಲಯದಲ್ಲಿ ಇದೇ ಅಭಿಪ್ರಾಯ ವ್ಯಾಪಕವಾಗಿ ಹಬ್ಬಿದೆ. ಸಾವಿರಾರು ಮಂದಿ ಕಾಂಗ್ರೆಸ್‌ ಕಾರ್ಯಕರ್ತರು ಎಂದೇ ಗುರುತಿಸಿಕೊಂಡು ಎಸ್‌ಡಿಪಿಐ ಪರ ಕೆಲಸ ಮಾಡುತ್ತಿದ್ದಾರೆ ಎಂಬ ಅನುಮಾನ ಪಕ್ಷದ ನಾಯಕರನ್ನು ಕಾಡುತ್ತಿದೆ.

‘ಪಕ್ಷದಲ್ಲಿ ಇರುವ ಸುಮಾರು ಐದರಿಂದ ಆರು ಸಾವಿರ ಮಂದಿ ಎಸ್‌ಡಿಪಿಐ ಜೊತೆ ನಿರಂತರ ಸಂಪ ರ್ಕದಲ್ಲಿದ್ದಾರೆ ಎಂಬ ಮಾಹಿತಿ ಇದೆ. ಇದು ಬಂಟ್ವಾಳದಲ್ಲಿ ನಮಗೆ ಇರುವ ದೊಡ್ಡ ಸವಾಲು. ಪಕ್ಷದ ಸಾಂಪ್ರ ದಾಯಿಕ ಮತಗಳು ಎಸ್‌ಡಿಪಿಐ ಕಡೆಗೆ ಹೋಗದಂತೆ ತಡೆಯುವುದೇ ಈ ಚುನಾವಣೆಯಲ್ಲಿ ನಾವು ಮಾಡ ಬೇಕಿರುವ ಕೆಲಸ’ ಎಂದು ಪಕ್ಷದ ಮುಖಂಡರೊಬ್ಬರು ಹೇಳುತ್ತಾರೆ.

2013ರ ಚುನಾವಣೆಯಲ್ಲಿ  ರಮಾ ನಾಥ ರೈ 81,665 ಗಳಿಸಿದ್ದರು. ಬಿಜೆ ಪಿಯ ಅಭ್ಯರ್ಥಿಯಾಗಿದ್ದ ರಾಜೇಶ್‌ ನಾಯಕ್‌ ಉಳಿಪಾಡಿ 63,815 ಮತ ಪಡೆದಿದ್ದರು. 17,850 ಮತಗಳ ಅಂತರದಿಂದ ರೈ ಗೆಲುವು ಸಾಧಿಸಿದ್ದರು. ಈ ಚುನಾವಣೆಯಲ್ಲಿ ಮೊದಲ ಬಾರಿಗೆ ಎಸ್‌ಡಿಪಿಐ ಬಂಟ್ವಾಳದಲ್ಲಿ ಅಭ್ಯರ್ಥಿಯನ್ನು ಕಣಕ್ಕಿಳಿಸಿತ್ತು. ಆಗ ಎಸ್‌ಡಿಪಿಐ ಅಭ್ಯರ್ಥಿ ಅಡ್ವೊಕೇಟ್‌ ಅಬ್ದುಲ್ ಮಜೀದ್‌ 6,112 ಮತಗಳನ್ನು ಗಳಿಸಿದ್ದರು. ಈ ಬಾರಿ ಇನ್ನಷ್ಟು ಪ್ರಬಲ ಸ್ಪರ್ಧೆ ಒಡ್ಡಲು ಎಸ್‌ಡಿಪಿಐ ತಯಾರಿ ನಡೆಸುತ್ತಿದೆ.

ನಂತರದ ಐದು ವರ್ಷಗಳ ಅವಧಿ ಯಲ್ಲಿ ಬಂಟ್ವಾಳ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಹಿಂದೂ ಮತ್ತು ಮುಸ್ಲಿಂ ಮತೀಯವಾದಿ ಗುಂಪುಗಳ ನಡುವೆ ಹಲವು ಬಾರಿ ಘರ್ಷಣೆಗಳು ನಡೆದಿವೆ. ಪರಸ್ಪರರ ಮತೀಯ ದ್ವೇಷಕ್ಕೆ ಹಲವು ಕೊಲೆಗಳು, ಕೊಲೆಯತ್ನ ಪ್ರಕರಣಗಳು ನಡೆದಿವೆ. ಈ ಎಲ್ಲ ಸಮಯದಲ್ಲಿ ಎರಡೂ ಕಡೆಯ ಅಪರಾಧಿಗಳಿಂದ ಸಚಿವ ರಮಾನಾಥ ರೈ ಅಂತರ ಕಾಯ್ದುಕೊಂಡಿದ್ದರು. ‘ನಾನು ಎಲ್ಲ ಬಗೆಯ ಮತೀಯವಾದದ ವಿರುದ್ಧ ಇದ್ದೇನೆ’ ಎಂದು ಬಹಿರಂಗವಾಗಿಯೇ ಹೇಳಿಕೊಂಡಿದ್ದರು.

ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಕಾಂಗ್ರೆಸ್‌ನ ಸಾಂಪ್ರ ದಾಯಿಕ ಎದುರಾಳಿಯಾಗಿದೆ. ಅದರ ಜೊತೆಯಲ್ಲೇ ಎಸ್‌ಡಿಪಿಐ ಕೂಡ ರಮಾನಾಥ ರೈ ಅವರನ್ನೇ ಗುರಿಯಾಗಿಸಿಕೊಂಡು ದೀರ್ಘ ಕಾಲದಿಂದ ಚುನಾವಣಾ ತಯಾರಿ ನಡೆಸಿಕೊಂಡು ಬಂದಿದೆ. ಮುಸ್ಲಿಂ ಮತದಾರರ ಬಾಹುಳ್ಯವಿರುವ ಕ್ಷೇತ್ರ ದಲ್ಲಿ ಎಸ್‌ಡಿಪಿಐ ಹಿಂದಿಗಿಂತಲೂ ಈಗ ತುಸು ಹೆಚ್ಚು ಬಲವಾಗಿದೆ. ಅದರ ಜೊತೆಯಲ್ಲೇ ಕಾಂಗ್ರೆಸ್‌ ಜೊತೆಗೆ ಗುರುತಿಸಿಕೊಂಡಿರುವ ಮತ್ತು ತಲೆಮಾರುಗಳಿಂದ ಕಾಂಗ್ರೆಸ್‌ ಪರವಾ ಗಿಯೇ ಮತ ಚಲಾಯಿಸಿಕೊಂಡು ಬಂದಿರುವ ಮುಸ್ಲಿಂ ಕುಟುಂಬಗಳನ್ನು ಪ್ರಭಾವಿಸುವ ತಂತ್ರಗಾರಿಕೆಯನ್ನೂ ಮಾಡುತ್ತಿದೆ. ಈ ಹೊಸ ಸವಾಲು ಎದುರಿಸಲು ಕಾಂಗ್ರೆಸ್‌ ಪ್ರಚಾರ ಕಾರ್ಯ ತಂತ್ರದಲ್ಲಿ ಬದಲಾವಣೆ ಮಾಡುವ ಕುರಿತು ಯೋಚಿಸುತ್ತಿದೆ.

‘ಕಪ್ಪು ಕುರಿ’ಗಳಿಗೆ ಶೋಧ: ಕಾಂಗ್ರೆಸ್‌ ಕಾರ್ಯಕರ್ತರ ನಡುವೆಯೇ ಇರುವ ಎಸ್‌ಡಿಪಿಐ ಬೆಂಬಲಿಗರನ್ನು ಪತ್ತೆ ಹಚ್ಚಲು ಬಂಟ್ವಾಳ ಕಾಂಗ್ರೆಸ್‌ ಸಮಿತಿ ಕಾರ್ಯಾಚರಣೆ ಆರಂಭಿಸಿದೆ. ರಮಾ ನಾಥ ರೈ ಖುದ್ದಾಗಿ ಈ ಕುರಿತು ಪಕ್ಷದ ಮುಖಂಡರಿಗೆ ಮಾರ್ಗದರ್ಶನ ನೀಡು ತ್ತಿದ್ದಾರೆ. ಬಿಜೆಪಿಯ ‘ಪೇಜ್‌ ಪ್ರಮುಖ್‌’ಗೆ ಪ್ರತಿಯಾಗಿ ‘ಸತ್ಯವಾದಿ’ ಎಂಬ ಹೆಸರಿನಲ್ಲಿ ಮತದಾರರ ಜೊತೆ ಸಂಪರ್ಕ ಸಾಧಿಸಲು ಕಾಂಗ್ರೆಸ್ ಕಾರ್ಯಕರ್ತರನ್ನು ನಿಯೋಜಿಸಲಾಗುತ್ತಿದೆ. ಅವರಿಗೆ ‘ಕಪ್ಪು ಕುರಿ’ಗಳನ್ನು ಹುಡುಕುವ ಹೊಣೆಯನ್ನೂ ವಹಿಸಲಾಗುತ್ತಿದೆ.

ರೈ ಬೆಂಬಲಕ್ಕೆ ಬೇಬಿ ಕುಂದರ್‌

ಕಾಂಗ್ರೆಸ್‌ ಜೊತೆ ಗುರುತಿಸಿಕೊಂಡಿದ್ದ ಬಿಲ್ಲವ ಮುಖಂಡ ಹರಿಕೃಷ್ಣ ಬಂಟ್ವಾಳ್‌ ಇತ್ತೀಚೆಗೆ ಬಿಜೆಪಿ ಸೇರಿದ್ದರು. ಅವರು ರಮಾನಾಥ ರೈ ವಿರುದ್ಧ ಮತ ಚಲಾಯಿಸುವಂತೆ ಬಿಲ್ಲವರನ್ನು ಮನವೊಲಿಸುವ ಕೆಲಸ ಮಾಡುತ್ತಿದ್ದಾರೆ. ಅದಕ್ಕೆ ಪ್ರತಿಯಾಗಿ ತಂತ್ರಗಾರಿಕೆ ರೂಪಿಸಿರುವ ರೈ, ವಿಜಯಾ ಬ್ಯಾಂಕ್‌ನಲ್ಲಿ ಶಾಖಾ ಪ್ರಬಂಧಕರಾಗಿದ್ದ ಬೇಬಿ ಕುಂದರ್‌ ಅವರನ್ನು ಕಾಂಗ್ರೆಸ್‌ಗೆ ಕರೆತಂದಿದ್ದಾರೆ.

ಬೇಬಿ ಕುಂದರ್‌ ಕಬಡ್ಡಿಯಲ್ಲಿ ರಾಷ್ಟ್ರೀಯ ಮಟ್ಟದ ಆಟಗಾರರಾಗಿದ್ದರು. ಕ್ರೀಡಾ ಕೋಟಾದಡಿ ವಿಜಯಾ ಬ್ಯಾಂಕ್‌ನಲ್ಲಿ ಉದ್ಯೋಗ ಪಡೆದಿದ್ದು, 34 ವರ್ಷಗಳಿಂದ ಸೇವೆಯಲ್ಲಿದ್ದರು. ಸ್ವಯಂ ನಿವೃತ್ತಿ ಪಡೆದಿರುವ ಅವರು ಶನಿವಾರ ಅಧಿಕೃತವಾಗಿ ಕಾಂಗ್ರೆಸ್‌ ಸೇರಿದ್ದರು. ಬಂಟ್ವಾಳದಲ್ಲಿ ಸಾಕಷ್ಟು ಪ್ರಭಾವಿಯಾಗಿರುವ ಬೇಬಿ ಕುಂದರ್‌ ಈವರೆಗೆ ತೆರೆಯ ಮರೆಯಲ್ಲಿ ರಮಾನಾಥ ರೈ ಪರ ಕೆಲಸ ಮಾಡುತ್ತಿದ್ದರು. ಈಗ ನೇರವಾಗಿಯೇ ಅಖಾಡಕ್ಕೆ ಇಳಿದಿದ್ದಾರೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.