ಶುಕ್ರವಾರ, ಡಿಸೆಂಬರ್ 6, 2019
25 °C

ಹಿನ್ನೀರಲಿ ತೇಲುವ ಭವಿಷ್ಯದ ದೋಣಿ!

Published:
Updated:
ಹಿನ್ನೀರಲಿ ತೇಲುವ ಭವಿಷ್ಯದ ದೋಣಿ!

ಸೋಮಲಿಂಗಪ್ಪ ಬೆಣ್ಣಿ

ಸೂರ್ಯನನ್ನೇ ನೀರಿನಲ್ಲಿ ಅದ್ದಿ ತೆಗೆದಂತೆ ಕಾಣುವ ಬಂಗಾರ ಬಣ್ಣದ ನೀರು. ಅಬ್ಬರಿಸುತ್ತಾ ಬಂದು ಮೆಲ್ಲನೇ ಕಚಗುಳಿ ಇಟ್ಟು ಮರೆಯಾಗುವ ಅಲೆ. ಬಾನು-ಭುವಿಯ ಮಧ್ಯೆ ಬಿಳಿದಾರದ ಬೆಸುಗೆಯಂತೆ ಕಾಣುವ ಹಕ್ಕಿಗಳ ಹಿಂಡು. ಮೀನಿಗೆ ಗಾಳ ಹಾಕುವ ಧಾವಂತದಲ್ಲಿ ತೇಲುವ ಅಂಬಿಗರ ತೆಪ್ಪ. ಧಾನ್ಯದ ಚೀಲವನ್ನು ಬಗಲಲ್ಲಿಟ್ಟುಕೊಂಡು ಬಂದು ನದಿಯ ಖಾಲಿ ಒಡಲಿಗೆ ಬೀಜವ ತುಂಬುವ ಅನ್ನದಾತ ...

ತುಂಗಭದ್ರೆಯ ಹಿನ್ನೀರ ಮಡಿಲಿನಲ್ಲಿ ಆಶ್ರಯ ಪಡೆದ ಕೊಪ್ಪಳ ತಾಲ್ಲೂಕಿನ ಕೆಲ ಹಳ್ಳಿಗಳಿಗೆ ಜೊತೆಗಾರರಾದ ಭೋಜಪ್ಪ ಹಾಗೂ ಶರಣು ಅವರೊಂದಿಗೆ ಬೆಳಗಿನ ಜಾವ ಭೇಟಿ ನೀಡಿದಾಗ ಕಂಡ ನೋಟಗಳು ಅದೆಷ್ಟೊಂದು ಅಪ್ಯಾಯಮಾನ!

ಕೊಪ್ಪಳ ಮತ್ತು ಬಳ್ಳಾರಿ ಜಿಲ್ಲೆಗಳ ನಡುವಿನ ಗಡಿಯಲ್ಲಿ ನಿರ್ಮಾಣವಾದ ತುಂಗಭದ್ರೆಯ ಅಣೆಕಟ್ಟಿನ ಹಿನ್ನೀರಿನ ಆಶ್ರಯ ಪಡೆದ ಹಳ್ಳಿಗಳ ಜನರ ಬದುಕಿನ ಭಿನ್ನತೆಯನ್ನು ಪದಗಳಲ್ಲಿ ವರ್ಣಿಸುವುದು ತುಸು ಕಷ್ಟ. ಕೃಷಿ ಮತ್ತು ಮೀನುಗಾರಿಕೆಯಲ್ಲಿ ಸಮ್ಮಿಳಿತಗೊಂಡಿರುವ ಈ ಪ್ರದೇಶದ ಜನರದು ಪ್ರಕೃತಿಸ್ನೇಹಿ, ವರ್ಣರಂಜಿತ ಹಾಗೂ ಅಷ್ಟೇ ಸಾಹಸಮಯ ಬದುಕು.

ಅಣೆಕಟ್ಟಿನ ಹಿನ್ನೋಟ

ಸ್ವಾತಂತ್ರ್ಯ ಪೂರ್ವದಲ್ಲಿ ಬಳ್ಳಾರಿ, ಕೊಪ್ಪಳ, ರಾಯಚೂರು, ಕರ್ನೂಲು, ಅನಂತಪುರ ಭಾಗಗಳಲ್ಲಿ ಭೀಕರ ಬರಗಾಲ ಆವರಿಸಿತ್ತು. ಜನಜೀವನ ಮತ್ತಷ್ಟು ಬಿಗಡಾಯಿಸಿತ್ತು. ಆ ಕಾಲದ ನೀರಾವರಿ ತಜ್ಞ ಅರ್ಥರ್ ಕಾಟನ್ ತುಂಗಭದ್ರಾ ನದಿಗೆ ಒಂದು ಅಣೆಕಟ್ಟನ್ನು ಕಟ್ಟಿ ನೀರಾವರಿ ಒದಗಿಸಬೇಕೆಂದು ಬ್ರಿಟಿಷ್ ಸರ್ಕಾರಕ್ಕೆ ಒಂದು ವರದಿಯನ್ನೂ ಸಲ್ಲಿಸಿದ್ದರು. ಹಣಕಾಸಿನ ಕೊರತೆಯ ನೆಪವೊಡ್ಡಿ ಪ್ರಸ್ತಾವವನ್ನು ತಿರಸ್ಕರಿಸಲಾಗಿತ್ತು.

ಮದ್ರಾಸ್ ಸರ್ಕಾರದ ಎಂಜಿನಿಯರ್ ಕರ್ನಲ್ ಸ್ಮಾರ್ಟ್ ಅವರೂ ಆಣೆಕಟ್ಟಿನ ಅವಶ್ಯಕತೆಯ ಕುರಿತು ವರದಿ ಸಲ್ಲಿಸಿದ್ದರು. ತಿರುಮಲೆ ಅಯ್ಯಂಗಾರ್ ಅವರ ನೇತೃತ್ವದಲ್ಲಿ ಎಂಜಿನಿಯರ್‌ಗಳ ಒಂದು ತಂಡವನ್ನು ರಚಿಸಿದ ಸರ್ಕಾರ, ಅಣೆಕಟ್ಟೆಗಾಗಿ ಯೋಜನೆ ರೂಪಿಸಿತು. 1945ರ ಫೆಬ್ರುವರಿ 28ರಂದು ಹೈದರಾಬಾದ್ ನಿಜಾಮ ಮತ್ತು ಮದ್ರಾಸ್ ಗವರ್ನರ್ ಅರ್ಥರ್ ಹೋಪ್ ಅವರು ತುಂಗಭದ್ರಾ ಅಣೆಕಟ್ಟಿಗೆ ಅಡಿಗಲ್ಲು ಹಾಕಿದ್ದರು. 1949ರಲ್ಲಿ ಕಾಮಗಾರಿ ಆರಂಭವಾಗಿ 1953ರಲ್ಲಿ ಅಣೆಕಟ್ಟು ಉದ್ಘಾಟನೆಗೊಂಡಿತ್ತು. ಯೋಜನೆಯ ಅನುಷ್ಠಾನಕ್ಕಾಗಿ 90 ಗ್ರಾಮಗಳು ಮುಳುಗಡೆಯಾಗಿ ಸುಮಾರು 55 ಸಾವಿರ ಜನರ ಸ್ಥಳಾಂತರವಾಗಿತ್ತು. ಅಣೆಕಟ್ಟಿನ ನೆರವಿನಿಂದಾಗಿ ಈಗ ಸುಮಾರು 16 ಲಕ್ಷ ಎಕರೆ ಪ್ರದೇಶ ನೀರಾವರಿ ಕಾಣುತ್ತಿದೆ.

ಮೀನುಗಾರರ ಬದುಕು

ನದಿ ನೀರು ಸರಿದಂತೆ ಮೀನುಗಾರರ ಕುಟುಂಬಗಳು ದಂಡೆಯಲ್ಲಿ ತಾತ್ಕಾಲಿಕ ಶೆಡ್ಡುಗಳನ್ನು ಹೂಡಿಕೊಂಡು ಮೀನುಗಾರಿಕೆಯಲ್ಲಿ ತೊಡಗುತ್ತವೆ. ದಿನ ಬೆಳಗಾಗುವುದೇ ತಡ, ಬಲೆಯೊಂದಿಗೆ ತೆಪ್ಪ ಏರಿ, ನದಿ ನೀರಿನ ಒಡಲ ಮೇಲೆ ತೇಲುವ ಮೀನುಗಾರರು, ಬೆಳಿಗ್ಗೆ ಹತ್ತು ಗಂಟೆ ಸುಮಾರಿಗೆ ಮೀನುಗಳೊಂದಿಗೆ ದಡ ಸೇರುತ್ತಾರೆ. ಸುತ್ತಮುತ್ತಲ ಊರುಗಳ ಮಾರುಕಟ್ಟೆಗಳಲ್ಲಿ ಅವುಗಳನ್ನು ಮಾರುತ್ತಾರೆ.

ದಡದಲ್ಲೇ ಬಿಡಾರ ಹೂಡುವ ಕುಟುಂಬಗಳು

ಟೆಂಡರ್ ಮೂಲಕ ಮೀನುಗಾರಿಕೆ ಗುತ್ತಿಗೆ ನೀಡಲಾಗುತ್ತದೆ. ಗುತ್ತಿಗೆ ಪಡೆದವರಿಗೆ ಮೀನುಗಾರರ ಪ್ರತಿ ಕುಟುಂಬ ಒಂದು ವರ್ಷಕ್ಕೆ ಸುಮಾರು₹ 3-4 ಲಕ್ಷದಷ್ಟು ಹಣವನ್ನು ನೀಡಬೇಕು. ಸುಮಾರು 100 ಕುಟುಂಬಗಳು ಈ ವೃತ್ತಿಯಲ್ಲಿ ತೊಡಗಿಸಿಕೊಂಡಿವೆ. ಗುತ್ತಿಗೆ ಅವಧಿ ವರ್ಷದವರೆಗೆ ಇದ್ದರೂ ನದಿ ನೀರು ಖಾಲಿಯಾದಾಗ ಆ ಕುಟುಂಬಗಳು ಅಲ್ಲಿಂದ ಜಾಗ ಖಾಲಿ ಮಾಡುತ್ತವೆ. ನಿಯಮದ ಪ್ರಕಾರ, ಗುತ್ತಿಗೆದಾರ ಅಧಿಕ ಮೀನುಗಳ ಉತ್ಪತ್ತಿಗಾಗಿ ನದಿಗೆ ಮರಿ ಮೀನುಗಳನ್ನು ಬಿಡಬೇಕು. ಆದರೆ, ಅವುಗಳನ್ನು ನದಿಗೆ ಬಿಡದೇ ಬೇರೆಡೆ ಮಾರಿಕೊಳ್ಳುತ್ತಿರುವ ಕಾರಣ, ನಮಗೆ ಹೆಚ್ಚಿನ ಮೀನುಗಳು ಸಿಗುತ್ತಿಲ್ಲ ಎಂದು ಅಳಲು ತೋಡಿಕೊಳ್ಳುತ್ತಾರೆ ಇಲ್ಲಿನ ಮೀನುಗಾರರು.

ಅನ್ನದಾತನ ಒಡಲ ಪಾಡು

ಹಳ್ಳಿಗಳನ್ನು ಸ್ಥಳಾಂತರ ಮಾಡಿ ಅಣೆಕಟ್ಟನ್ನು ನಿರ್ಮಿಸಿದ ಮೇಲೆ ಆ ಅಣೆಕಟ್ಟಿನ ಹಿನ್ನೀರನ್ನೇ ಕೃಷಿಗೆ ಆಧಾರವನ್ನಾಗಿ ಅವಲಂಬಿಸಿ ಹಲವು ಹಳ್ಳಿಗಳು ನದಿ ತೀರದಲ್ಲಿ ಹುಟ್ಟಿಕೊಂಡವು. ಹಿನ್ನೀರಿನ ಅವಲಂಬಿತ ಹಳ್ಳಿಗಳಾದ ಕರ್ಕಿಹಳ್ಳಿ, ಲಾಚನಕೇರಿ, ಹ್ಯಾಟಿಮುಂಡರಗಿ, ಗೊಂಡಬಾಳ, ಐನಳ್ಳಿ, ಯಾಸನಕೇರಿ, ಲಡಕನಬಾವಿ, ನಕ್ರಾಳ, ಮುತಗೂರು, ಕಿತ್ನೂರು ಹಳ್ಳಿಗಳ ಜನರು ಈ ನದಿ ತೀರದ ಕೃಷಿಯನ್ನೇ ಅವಲಂಬಿಸಿದ್ದಾರೆ. ಇವರ ಕೃಷಿ ಪದ್ಧತಿ ಅತ್ಯಂತ ಮಿತವ್ಯಯಿ ಹಾಗೂ ಅಷ್ಟೇ ವಿಭಿನ್ನ.ಬೇಸಿಗೆ ಬರುತ್ತಿದ್ದಂತೆ ನದಿ ನೀರು ಇಳಿಯುತ್ತಾ ಹೋಗು ತ್ತದೆ. ಈ ಖಾಲಿ ಭೂಮಿ ಅತ್ಯಂತ ಫಲವತ್ತಾಗಿದ್ದು, ಯಥೇಚ್ಛ ನೀರನ್ನೂ ಹಿಡಿದಿಟ್ಟುಕೊಂಡಿದ್ದರಿಂದ ರೈತರು ಇಲ್ಲಿ ಉದ್ದು, ಅಲಸಂದಿ, ಶೇಂಗಾ, ಹೆಸರು ಸೇರಿದಂತೆ ವಿವಿಧ ದ್ವಿದಳ ಧಾನ್ಯಗಳ ಬೀಜವನ್ನು ಚೆಲ್ಲುತ್ತಾರೆ. ಇದಕ್ಕೆ ಯಾವುದೇ ಔಷಧಿ ಸಿಂಪಡಣೆ, ಗೊಬ್ಬರ ಪೂರೈಕೆಯಂತಹ ಉಪಚಾರದ ಗೋಜಿಲ್ಲ. ಒಮ್ಮೆ ಬಂದು ಬೀಜ ಚೆಲ್ಲಿ ಹೋದರೆ ಸಾಕು, ಪೈರು ಕೈಗೆ ಬಂದಂತೆ. ವರ್ಷಕ್ಕೆ ಒಂದು ಬಾರಿ ಮಾತ್ರ ಈ ರೀತಿಯ ಬೆಳೆ ಬೆಳೆಯಲು ಸಾಧ್ಯ. ಊರಿಂದ ಸುಮಾರು 10-12 ಕಿ.ಮೀ.ಗಳಷ್ಟು ದೂರದ ವ್ಯಾಪ್ತಿಯವರೆಗೂ ಈ ಕೃಷಿ ಚಟುವಟಿಕೆ ಕಾರ್ಯ ನಡೆಯುತ್ತದೆ ಎನ್ನುತ್ತಾರೆ ರೈತ ಮಾರ್ಕಂಡೆಪ್ಪ ವಾಲೀಕಾರ.

ಎಲ್ಲ ಹಳ್ಳಿಗಳಿಗೆ ಒಂದು ಬದಿ ಮಾತ್ರ ನದಿ ನೀರು ಲಭ್ಯವಿದೆ. ಆದರೆ ಈ ಭಾಗದ ಕರ್ಕಿಹಳ್ಳಿ ಗ್ರಾಮ ಮಾತ್ರ ಮೂರು ಕಡೆ ನೀರಿನಿಂದ ಸುತ್ತುವರಿದು ಒಂದು ಬದಿ ಮಾತ್ರ ಸಾಮಾನ್ಯ ಖುಷ್ಕಿ ಭೂಮಿ ಇದೆ. ಹಂತಹಂತವಾಗಿ ನದಿನೀರು ಸಂಗ್ರಹವಾಗಲು ಅಲ್ಲಲ್ಲಿ ಸಣ್ಣಸಣ್ಣ ಕೆರೆಗಳನ್ನೂ ನಿರ್ಮಿಸ ಲಾಗಿದೆ. ವಿಶೇಷವೆಂದರೆ ಇಲ್ಲಿನ ರೈತರಿಗೆ ಅಧಿಕೃತವಾಗಿ ನಿಗದಿಪಡಿಸಿದ ಯಾವುದೇ ಭೂಮಿ ಇರುವುದಿಲ್ಲ. ತಮ್ಮ ಗ್ರಾಮದ ವ್ಯಾಪ್ತಿಯಲ್ಲಿ ಬರುವ ನದಿ ಪ್ರದೇಶದ ಭೂಮಿಯನ್ನು ಊರಿನ ರೈತರೆಲ್ಲ ಪರಸ್ಪರ ಸಹಕಾರದೊಂದಿಗೆ ಮೌಖಿಕವಾಗಿ ಹಂಚಿಕೊಂಡು ಕೃಷಿ ಮಾಡುತ್ತಾರೆ. ಇದೇ ಇವರ ಜೀವನಾಧಾರ. ಆದರೆ, ಈ ರೀತಿಯ ಚಟುವಟಿಕೆಯಿಂದಾಗಿ ಅಲ್ಲಿನ ಪಕ್ಷಿ ಸಂಕುಲಕ್ಕೆ ತೊಂದರೆ ಉಂಟಾಗುತ್ತದೆ ಎಂಬುದು ಕೆಲ ಪಕ್ಷಿಪ್ರೇಮಿಗಳ ಕೊರಗು.

ಜಲಾಶಯದ ಹಿನ್ನೀರಿನ ಒಳಗೊಂದು ಕೆರೆ. ಜಲಾಶಯ ಬರಿದಾಗುತ್ತಾ ಹೋದಂತೆ ಕೆರೆಯ ನೀರೂ ಖಾಲಿ!

ನದಿ ನೀರು ಸಂಪೂರ್ಣ ಕಡಿಮೆಯಾದಂತೆಲ್ಲ ಕೃಷಿ ಚಟುವಟಿಕೆಗಳೂ ಕ್ರಮೇಣ ಕಡಿಮೆಯಾಗುತ್ತವೆ. ಆಗ ಕೆಲವರು ಹಳ್ಳಿಗಳಿಂದ ಸುಮಾರು ದೂರದಲ್ಲಿ ಈಗೀಗ ಹುಟ್ಟಿಕೊಂಡ ಕಾರ್ಖಾನೆಗಳಲ್ಲಿ ಕಾರ್ಮಿಕ ರಾಗಿ ದುಡಿದು ಜೀವನ ಸಾಗಿಸುತ್ತಾರೆ. ಇನ್ನೂ ಕೆಲವರು ಮುಂದಿನ ಅವಧಿಯ ಕೃಷಿ ಚಟುವಟಿಕೆ ಗಳ ಸಿದ್ಧತೆಯಲ್ಲಿ ಕಾಲ ಕಳೆಯುತ್ತಾರೆ. ಒಂದು ವೇಳೆ ಬೀಜ ಚೆಲ್ಲಿದ ಕೆಲವು ದಿನಗಳ ಬಳಿಕ ನದಿ ನೀರಿನ ಏರುಪೇರಿನಿಂದಾಗಿ ಆ ಪ್ರದೇಶ ಬಹುದಿನಗಳವರೆಗೆ ಜಲಾವೃತವಾದರೆ, ಆ ಬೆಳೆ ನಾಶವಾಗಿ ರೈತನಿಗೆ ಸಂಪೂರ್ಣ ನಷ್ಟವಾಗುತ್ತದೆ.

ಸುಮಾರು 50 ರಿಂದ 200 ಮನೆಗಳಷ್ಟು ಮಿತಿಗಳುಳ್ಳ ಈ ಹಳ್ಳಿಗಳಲ್ಲಿ ಎಲ್ಲ ಜಾತಿ, ಧರ್ಮದವರೂ ಇದ್ದಾರೆ. ಪರಸ್ಪರ ಸಹಕಾರ ತತ್ವದಡಿ ಇಲ್ಲಿನ ಜನಜೀವನ ಸಾಗುತ್ತಿದೆ. ಈ ಹಿಂದೆ ಬಹುತೇಕ ಅನಕ್ಷರಸ್ಥರೇ ತುಂಬಿದ್ದ ಈ ಹಳ್ಳಿಗಳಲ್ಲಿ ಈಗೀಗ ಶಿಕ್ಷಣ ಮಟ್ಟ ಸುಧಾರಿಸಿದ್ದು, ಕನಿಷ್ಠ ಪ್ರಾಥಮಿಕ ಶಿಕ್ಷಣ ಪಡೆದ ವಿದ್ಯಾವಂತರು ಸಿಗುತ್ತಾರೆ. ಕಾಲೇಜು ಮೆಟ್ಟಿಲು ಹತ್ತಿ ಪದವಿ ಪಡೆದವರೂ ಕೃಷಿಯಲ್ಲಿ ತೊಡಗಿ ತಮ್ಮ ಭವಿಷ್ಯವನ್ನು ಕಂಡುಕೊಂಡಿದ್ದು ಇಲ್ಲಿನ ವಿಶೇಷ. ಮಹಿಳೆಯರೂ ಕೃಷಿಯಲ್ಲಿ ತೊಡಗಿ ತಾವೂ ಯಾರಿಗೂ ಕಡಿಮೆ ಇಲ್ಲ ಎನ್ನುವಂತೆ ಎಲ್ಲ ಬಗೆಯ ಕೆಲಸಗಳನ್ನು ನಿಭಾಯಿಸುತ್ತಾರೆ. ಕುರಿ ಸಾಕಾಣಿಕೆ, ದನಗಳ ಸಾಕಾಣಿಕೆ ಇಲ್ಲಿನ ಕೃಷಿಕರ ಉಪಕಸುಬುಗಳಾಗಿವೆ.

ಇದು ಕೇವಲ ತುಂಗಭದ್ರೆಯ ಒಡಲ ಮಕ್ಕಳ ಕಥೆಯಲ್ಲ. ಇಂತಹ ನೂರಾರು ಅಣೆಕಟ್ಟಿನ ಹಿನ್ನೀರನ್ನು ಅವಲಂಬಿಸಿ ಬದುಕುವ ಜನರ ಜೀವನ ವಿಧಾನ. ಇದು ನಿಸರ್ಗಕ್ಕೆ ತೀರಾ ಸನಿಹವಾದ ಬದುಕು. ಯಾರೂ ಊಹಿಸದ ಸೋಜಿಗಗಳು ಇಲ್ಲಿ ಗೋಚರಿಸುತ್ತವೆ. ಅಪರೂಪಕ್ಕೆ ಈ ಸ್ಥಳಕ್ಕೆ ಭೇಟಿ ಕೊಡುವ ನಿಸರ್ಗಪ್ರಿಯರಿಗಂತೂ ಅಚ್ಚರಿಯ ಮೇಲೊಂದು ಅಚ್ಚರಿ.

ಪ್ರತಿಕ್ರಿಯಿಸಿ (+)