ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯತೀಂದ್ರ, ರವಿಶಂಕರ್‌, ಅನಿಲ್‌ ಹೊಸಮುಖ

ಕಾಂಗ್ರೆಸ್‌ ಪಟ್ಟಿ ಪ್ರಕಟ; ಸುನಿಲ್‌ ಬೋಸ್‌ಗೆ ಕೈತಪ್ಪಿದ ಅವಕಾಶ, ಉಳಿದ ಎಲ್ಲ ಶಾಸಕರಿಗೆ ಟಿಕೆಟ್‌
Last Updated 16 ಏಪ್ರಿಲ್ 2018, 10:33 IST
ಅಕ್ಷರ ಗಾತ್ರ

ಮೈಸೂರು: ವಿಧಾನಸಭಾ ಚುನಾವಣೆಗೆ ಮೈಸೂರು ಜಿಲ್ಲಾ ವ್ಯಾಪ್ತಿಯ 11 ಕ್ಷೇತ್ರಗಳ ಕಾಂಗ್ರೆಸ್‌ ಟಿಕೆಟ್‌ ಪ್ರಕಟವಾಗಿದ್ದು, ಡಾ.ಯತೀಂದ್ರ ಸಿದ್ದರಾಮಯ್ಯ, ಡಿ.ರವಿಶಂಕರ್‌ ಹಾಗೂ ಅನಿಲ್‌ ಚಿಕ್ಕಮಾದು ಅವರು ಇದೇ ಮೊದಲ ಬಾರಿ ಸ್ಪರ್ಧಿಸಲಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ಅವರು ತಿ.ನರಸೀಪುರ ಕ್ಷೇತ್ರದಿಂದಲೇ ಸ್ಪರ್ಧಿಸಲಿದ್ದಾರೆ. ಅವರ ಪುತ್ರ ಸುನಿಲ್‌ ಬೋಸ್‌ಗೆ ಟಿಕೆಟ್‌ ಲಭಿಸಿಲ್ಲ.

ನಿರೀಕ್ಷೆಯಂತೆ ಡಾ.ಯತೀಂದ್ರ ವರುಣಾ ಕ್ಷೇತ್ರದಲ್ಲಿ ಕಣಕ್ಕಿಳಿಯಲಿದ್ದಾರೆ. ಈ ಹಿಂದೆ ಈ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಮುಂಡೇಶ್ವರಿಯಿಂದ ಸ್ಪರ್ಧಿಸಲಿದ್ದಾರೆ.

ಜಿಲ್ಲಾ ಪಂಚಾಯಿತಿ ಸದಸ್ಯ ಡಿ.ರವಿಶಂಕರ್‌ ಅವರು ಕೃಷ್ಣರಾಜನಗರ ಕ್ಷೇತ್ರದ ಅಭ್ಯರ್ಥಿಯಾಗಿದ್ದಾರೆ. ಈ ಕ್ಷೇತ್ರದಲ್ಲಿ 2013ರಲ್ಲಿ ಅವರ ತಂದೆ ದೊಡ್ಡಸ್ವಾಮೇಗೌಡ ಸ್ಪರ್ಧಿಸಿದ್ದರು. ಚಿಕ್ಕಮಾದು ಪುತ್ರ ಅನಿಲ್‌ ಅವರು ಎಚ್‌.ಡಿ.ಕೋಟೆ ಮೀಸಲು ಕ್ಷೇತ್ರದಲ್ಲಿ ಕಣಕ್ಕಿಳಿಯಲಿದ್ದಾರೆ. 2013ರಲ್ಲಿ ಚಿಕ್ಕಣ್ಣ ಅವರು ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದರು. ಅವರೀಗ ಜೆಡಿಎಸ್‌ ಸೇರಿದ್ದಾರೆ.

ಬೆಂಗಳೂರಿನ ಸಿ.ವಿ.ರಾಮನ್‌ ನಗರ ಅಥವಾ ನಂಜನಗೂಡಿನಲ್ಲಿ ಮಹದೇವಪ್ಪ, ತಿ.ನರಸೀಪುರ ಕ್ಷೇತ್ರದಲ್ಲಿ ಸುನಿಲ್‌ ಬೋಸ್‌ ಟಿಕೆಟ್‌ ಆಕಾಂಕ್ಷಿಯಾಗಿದ್ದರು. ಆದರೆ, ವರಿಷ್ಠರು ಆ ಬೇಡಿಕೆ ಪರಿಗಣಿಸಿಲ್ಲ.

ನಂಜನಗೂಡಿನಲ್ಲಿ ಕಳಲೆ ಕೇಶವಮೂರ್ತಿ ಅವರು ಕಣಕ್ಕಿಳಿಯಲಿದ್ದಾರೆ. 2013ರಲ್ಲಿ ಈ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ವಿ.ಶ್ರೀನಿವಾಸಪ್ರಸಾದ್‌ ಸ್ಪರ್ಧಿಸಿದ್ದರು. ಆದರೆ, ಅವರು ಬಿಜೆಪಿಗೆ ಹೋದ ಕಾರಣ 2017ರಲ್ಲಿ ಉ‍ಪಚುನಾವಣೆ ನಡೆದಿತ್ತು. ಆಗ ಕಳಲೆ ಕೇಶವಮೂರ್ತಿ ಕಣಕ್ಕಿಳಿದಿದ್ದರು. ಈ ಬಾರಿಯೂ ಟಿಕೆಟ್‌ ಉಳಿಸಿಕೊಳ್ಳುವಲ್ಲಿ ಅವರು ಯಶಸ್ವಿಯಾಗಿದ್ದಾರೆ.

ಇನ್ನುಳಿದಂತೆ ವಾಸು (ಚಾಮರಾಜ), ಎಂ.ಕೆ.ಸೋಮಶೇಖರ್‌ (ಕೃಷ್ಣರಾಜ), ತನ್ವೀರ್‌ ಸೇಠ್‌ (ನರಸಿಂಹರಾಜ), ಕೆ.ವೆಂಕಟೇಶ್‌ (ಪಿರಿಯಾಪಟ್ಟಣ), ಎಚ್‌.ಪಿ.ಮಂಜುನಾಥ್‌ (ಹುಣಸೂರು) ಅವರಿಗೆ ನಿರೀಕ್ಷೆಯಂತೆ ಆಯಾಯ ಕ್ಷೇತ್ರಗಳಲ್ಲಿ ಟಿಕೆಟ್‌ ಲಭಿಸಿದೆ.

ಸಿದ್ದರಾಮಯ್ಯಗೆ ಒಂದೇ ಕ್ಷೇತ್ರ

ಕಾಂಗ್ರೆಸ್‌ ಪಕ್ಷವು ಮೊದಲ ಪಟ್ಟಿಯಲ್ಲಿ 218 ಕ್ಷೇತ್ರದ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಚಾಮುಂಡೇಶ್ವರಿ ಕ್ಷೇತ್ರ ಟಿಕೆಟ್‌ ಮಾತ್ರ ನೀಡಲಾಗಿದೆ.ಚಾಮುಂಡೇಶ್ವರಿ ಕ್ಷೇತ್ರವಲ್ಲದೇ, ಬಾದಾಮಿಯಿಂದಲೂ ಅವರು ಟಿಕೆಟ್‌ ಕೇಳಿದ್ದರು. ಆದರೆ, ಒಬ್ಬರಿಗೆ ಒಂದೇ ಟಿಕೆಟ್‌ ನಿಲುವನ್ನು ಕಾಂಗ್ರೆಸ್‌ ಹೈಕಮಾಂಡ್‌ ಸಡಿಲಿಸಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT