ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಸಿಲಲಿ ನಲಿವ ಮುಳ್ಳುಮುತ್ತುಗ

Last Updated 16 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಮುತ್ತುಗದ ಹೂ ನಮಗೆಲ್ಲಾ ಚಿರಪರಿಚಿತ. ಅದರ ಎಲೆಗಳಿಂದ ತಯಾರಿಸಿದ ಊಟದ ತಟ್ಟೆಗಳು, ದೊನ್ನೆಗಳನ್ನು ಬಹುತೇಕರು ನೋಡಿಯೇ ಇರುತ್ತೇವೆ. ಅಲ್ಲದೆ ಮುತ್ತುಗ ಅದರ ಕೆಂಪಾದ ಹೂಗಳಿಂದಲೂ ಪ್ರಸಿದ್ಧ. ‘ಫ್ಲೇಮ್ ಆಫ್ ದಿ ಫಾರೆಸ್ಟ್‌’ ಎಂಬುದು ಅದರ ಹೂವಿನ ರಂಗಿನಿಂದಾಗಿಯೇ ಬಂದಿರುವ ಹೆಸರು.

ಆದರೆ ಮುತ್ತುಗದಷ್ಟೇ ಆಕರ್ಷಕ ಹೂ ಬಿಡುವ ಮುಳ್ಳುಮುತ್ತುಗ ಅಥವಾ ಮುರುಕನ ಮರದ ಬಗ್ಗೆ ಹೆಚ್ಚು ಜನರಿಗೆ ತಿಳಿದಿಲ್ಲ. ಗೂಗಲ್‌ನಲ್ಲಿ ತಡಕಾಡಿದರೂ ಹೆಚ್ಚೇನೂ ಮಾಹಿತಿ ಸಿಗದು. ಮುತ್ತುಗ ಫೆಬ್ರವರಿ-ಮಾರ್ಚ್ ತಿಂಗಳಲ್ಲಿ ಹೂ ಅರಳಿಸಿದರೆ, ಮುಳ್ಳುಮುತ್ತುಗ ಏಪ್ರಿಲ್-ಮೇನಲ್ಲಿ ಹೂಬಿರಿಸುತ್ತದೆ. ಮುತ್ತುಗದಷ್ಟು ವ್ಯಾಪಕವಾಗಿ ಕಂಡುಬರುವುದಿಲ್ಲವಾದರೂ ಹೆಗ್ಗಡದೇವನಕೋಟೆ, ಕನಕಪುರ, ತುಮಕೂರಿನ ದೇವರಾಯನದುರ್ಗದಿಂದ ಮೊದಲುಗೊಂಡು ಗುಲ್ಬರ್ಗದ ಕುರುಚಲು ಕಾಡುಗಳಲ್ಲಿಯೂ ಅಲ್ಲಲ್ಲಿ ಮುಳ್ಳುಮುತ್ತುಗವನ್ನು ಕಾಣಬಹುದು.

ಈ ಮರಕ್ಕೆ ಕನ್ನಡದಲ್ಲಿ ಹಲವಾರು ಹೆಸರುಗಳಿವೆ. ಎಮ್ಮರುಕು ಮರ, ಹೆಂಗಾರ, ಕಾಡು ಹಾಲುವಾಣ, ಕಾಡು ಪಾರಿವಾಳ, ಕೆಚ್ಚಿಗ, ಮುರುಕು ಮರ ಇತ್ಯಾದಿ. ಕನಕಪುರದ ಕಾಡು ಹಳ್ಳಿಗಳಲ್ಲಿ ಮುಳ್ಳುಮುತ್ತುಗ ಎಂದು ಕರೆಯುತ್ತಾರೆ. ಇದರ ವೈಜ್ಞಾನಿಕ ಹೆಸರು ‘ಎರಿಥ್ರಿನಾ ಸ್ಟ್ರಿಕ್ಟ’. ಸಾಧಾರಣ ಎತ್ತರ ಬೆಳೆಯುತ್ತದೆ. ಎಳೆ ಮರವಾಗಿರುವಾಗ ಕಾಂಡದ ಮೇಲೆ ಮುಳ್ಳುಗಳಿರುತ್ತವೆ. ವೇಗವಾಗಿ ಬೆಳೆಯಬಲ್ಲದು. ಗಟ್ಟಿ ಮರವಲ್ಲ, ಹಾಗಾಗಿ ನಾಟಾಗೆ ಬಳಸಲಾಗದು. ಮರಕ್ಕೆ ಯಾವುದೇ ಆಕರ್ಷಣೆ ಇಲ್ಲ. ಆದರೆ ಹೂ ಬಿಟ್ಟಾಗ ಮಾತ್ರ ಇದರ ಖದರ್ರೇ ಬದಲಾಗುತ್ತದೆ. ಹಸ್ತದ ನಾಲ್ಕು ಬೆರಳುಗಳನ್ನು ಅರಳಿಸಿದಂತೆ ಕಾಣುವ ಹೂಗೊಂಚಲು. ಸುವಾಸನೆ ಇಲ್ಲ, ಆದರೆ ಮರದ ತುಂಬಾ ಅರಳಿದ ಹೊಳೆಯುವ ಕೆಂಪು ಬಣ್ಣದ ಹೂಗಳು ಥಟ್ಟನೆ ಸೆಳೆಯುತ್ತದೆ. ಬೇಸಿಗೆಯಲ್ಲಿ ಅರಳುವ ಹೂಗಳು ಬಿರುಬಿಸಿಲನ್ನೇ ಹೀರಿಕೊಂಡು ಹೀಗೆ ಕೆಂಪಾನು ಕೆಂಪಗೆ ಹೊಳೆಯುತ್ತವೋ ಏನೋ.

ಕೆಲವು ಕಡೆ ಔಷಧಿಗಾಗಿ ಮುಳ್ಳು ಮುತ್ತುಗ ಬಳಕೆಯಲ್ಲಿದೆ. ಹಿಂದಿನ ಕಾಲದಲ್ಲಿ ಹೂಗಳನ್ನು ನೈಸರ್ಗಿಕ ಬಣ್ಣ ತಯಾರಿಕೆಗಾಗಿ ಉಪಯೋಗಿಸಲಾಗುತ್ತಿತ್ತು. ಹಕ್ಕಿಗಳು ಹಾಗೂ ಜೇನ್ನೊಣಗಳಿಗೆ ಈ ಹೂವು ಬಲುಪ್ರಿಯ. ಗಲಾಟೆ ಮಾಡುತ್ತಾ ಮಕರಂದ ಹೀರುತ್ತವೆ. ಇದರ ವೇಗವಾಗಿ ಬೆಳೆಯುವ ಗುಣದಿಂದಾಗಿ ಥೈಲ್ಯಾಂಡ್ ಸರ್ಕಾರವು ತನ್ನ ಅರಣ್ಯ ಪುನಶ್ಚೇತನ ಸಂದರ್ಭದಲ್ಲಿ ಈ ಮರವನ್ನು ವ್ಯಾಪಕವಾಗಿ ಬಳಸಿದೆ. ಭಾರತವಷ್ಟೇ ಅಲ್ಲದೆ ಏಷ್ಯಾದ ಚೀನಾ, ನೇಪಾಳ, ಭೂತಾನ್, ವಿಯಟ್ನಾಂ, ಕಾಂಬೋಡಿಯಾ ಇತ್ಯಾದಿ ದೇಶಗಳಲ್ಲಿ ಈ ಮರವನ್ನು ಕಾಣಬಹುದು.


ಹತ್ತು ವರ್ಷಗಳ ಹಿಂದೆ ನೋಡಿ ಫೋಟೊ ತೆಗೆದ ಮರಗಳು ಈಗ ಇಲ್ಲವಾಗಿವೆ. ಕಾಂಡದ ತುಂಬಾ ಮುಳ್ಳು ತುಂಬಿಕೊಂಡ ಕೆಲಸಕ್ಕೆ ಬಾರದ ಗಿಡವೆಂದು ಕತ್ತರಿಸಿ ಹಾಕಿದರೇನೋ. ತುಮಕೂರು ಬಳಿಯ ದೇವರಾಯನದುರ್ಗ ಕಾಡಿನಲ್ಲಿ ಮೂರ್ನಾಲ್ಕು ಮರಗಳಷ್ಟೇ ಉಳಿದಿವೆ. ಅರಣ್ಯ ಇಲಾಖೆಯಂತೂ ಇದನ್ನು ಅಭಿವೃದ್ಧಿಪಡಿಸಿದ ಉದಾಹರಣೆಗಳಿಲ್ಲ.

ಇದು ಮುಳ್ಳುಮುತ್ತುಗ ಹೂಬಿಡುವ ಕಾಲ. ನಿಮ್ಮ ಸುತ್ತ-ಮುತ್ತಲೇ ಮರಗಳು ಇರಬಹುದು, ಹುಡುಕಿ ನೋಡಿಕೊಂಡು ಬನ್ನಿ, ಮಕ್ಕಳಿಗೂ ತೋರಿಸಿ, ಹೇಗೂ ರಜೆ ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT