ಭಾನುವಾರ, ಡಿಸೆಂಬರ್ 8, 2019
21 °C
ರಂಗೇನಹಳ್ಳಿಯ ಹೊಲದಲ್ಲಿ ರಸಗೊಬ್ಬರ ಬಳಸದೆ ಪಚ್ಚಬಾಳೆ ತೋಟ

ಸಾವಯವ ಕೃಷಿಯಲ್ಲಿ ಸಮೃದ್ಧ ಬಾಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಾವಯವ ಕೃಷಿಯಲ್ಲಿ ಸಮೃದ್ಧ ಬಾಳೆ

ಮಾಗಡಿ: ‘ಇಂದು ನಮ್ಮ ಸುತ್ತಲಿನ ಮಣ್ಣು, ನೀರು ಮತ್ತು ಗಾಳಿ ಕಲುಷಿತಗೊಳ್ಳುತ್ತಿರುವಾಗ ಮಣ್ಣಿನ ವಾಸನೆ ರೈತರನ್ನು ಮತ್ತೆ ಸಾವಯವ ಬದುಕಿನತ್ತ ಕರೆ ತರುವಂತಾಗಲಿ, ರೈತರು ನೆಲೆಸಿರುವ ಪರಿಸರದಲ್ಲೇ ಒಂದಷ್ಟು ಹಸಿರು ಸಹಜವಾಗಿ ಉಸಿರಾಡಲಿ’ ಎಂದು ಪ್ರಗತಿಪರ ಸಾವಯವ ಕೃಷಿಕ ಜಯಣ್ಣ ಅಲಿಯಾಸ್‌ ಮೃತ್ಯುಂಜಯ ತಿಳಿಸಿದರು.

ರಂಗೇನಹಳ್ಳಿಯ ತಮ್ಮ ಹೊಲದಲ್ಲಿ ಸಾವಯವ ಕೃಷಿ ಪದ್ಧತಿಯಲ್ಲಿ ಸಮೃದ್ಧವಾಗಿ ಬೆಳೆದು ನಿಂತಿರುವ ಪಚ್ಚ ಬಾಳೆ ತೋಟಕ್ಕೆ ಭೇಟಿ ನೀಡಿದ್ದ ಸುದ್ದಿ

ಗಾರರೊಂದಿಗೆ ಅವರು ಮಾತನಾಡಿದರು.

ಪ್ರಕೃತಿ ನೀಡಿರುವ ಸಮೃದ್ಧ ನೀರು, ಗಾಳಿ, ಬೆಳಕನ್ನು ಸರಿಯಾಗಿ ಬಳಸಿ, ಮಣ್ಣಿನ ಶಕ್ತಿಯನ್ನು ಮರಳಿ ಮಣ್ಣಿಗೆ ನೀಡಿ, ಮಳೆಯ ನೀರು ಹರಿದು ಹೋಗದಂತೆ ತಡೆದು ಭೂಮಿಯಲ್ಲಿ ಇಂಗಿಸಬೇಕಿದೆ ಎಂದರು.

‘ಹೊಲದಲ್ಲಿ ಬೆಳೆಯುವ ಕಳೆ ಹಸಿರು ಹುಲ್ಲು, ಸೊಪ್ಪನ್ನು ಕತ್ತರಿಸಿ, ಗುಂಡಿ ತೆಗೆದು ಅದರಲ್ಲಿ ಮುಚ್ಚುವುದು. ನಮ್ಮ ತೋಟದಲ್ಲಿ ಬೆಳೆದಿರುವ ಬಾಳೆಯ ಗಿಡಗಳಿಗೆ ಒಂದಿನಿತು ರಸಗೊಬ್ಬರ ಬಳಸಿಲ್ಲ. ಬದಲಾಗಿ ಹಸಿರೆಲೆ ಗೊಬ್ಬರ, ಕೊಟ್ಟಿಗೆ ಗೊಬ್ಬರ, ದನಗಳ ಗಂಜಳ ಬಳಸಿದ್ದೇನೆ’ ಎಂದು ಅವರು ಹೇಳಿತ್ತಾರೆ.

‘ಸಾವಯವ ಕೃಷಿ ಪದ್ಧತಿ ನಮ್ಮ ಬದುಕಿಗೆ ಹೊಸ ಆಯಾಮ ತಂದು ಕೊಟ್ಟಿದೆ. ಒಂದು ಎಕರೆ ವಿಸ್ತೀರ್ಣದ ಭೂಮಿಯಲ್ಲಿ 1,200 ಗುಣಿ ತೆಗೆಸಿದ್ದೇನೆ. ಅದರಲ್ಲಿ ಜಿ.9 ಪಚ್ಚೆಬಾಳೆ ಕಂದುನೆಟ್ಟು 10 ತಿಂಗಳಾಗಿದೆ. ಇನ್ನು ಒಂದೂವರೆ ತಿಂಗಳಲ್ಲಿ ಬಾಳೆಯ ಗೊನೆಗಳು ಕಟಾವಿಗೆ ಬರಲಿದೆ’ ಎಂದರು.

ಈಗಾಗಲೆ ₹ 1.50 ಲಕ್ಷ ಖರ್ಚಾಗಿದೆ. ಪ್ರತಿಯೊಂದು ಬಾಳೆಯ ಗೊನೆಯಲ್ಲಿ ಸರಾಸರಿ 350ರಿಂದ 400 ಹಣ್ಣುಗಳಿವೆ. ಬಾಳೆಯ ಒಂದು ಗೊನೆ 50 ಕೆಜಿ ತೂಕವಿದೆ. ಇರುವ ಏಕೈಕ ಕೊಳವೆಬಾವಿಯ ನೀರನ್ನು ಡ್ರಿಪ್‌ ಮೂಲಕ ಬಾಳೆಯ ಗಿಡದ ಬುಡಕ್ಕೆ ಹರಿಸುತ್ತಿದ್ದೇವೆ ಎಂದು ಸೌಭಾಗ್ಯ ಜಯಣ್ಣ ವಿವರಿಸಿದರು.

ಜಯಣ್ಣ ಅವರ ಬಾಳೆಯ ತೋಟದಲ್ಲಿ ಸೂರ್ಯನ ಕಿರಣಗಳು ನೆಲಕ್ಕೆ ಬೀಳುವುದು ಅಪರೂಪವಾಗಿದೆ. ಸುಡುಬಿಸಿಲಿನಲ್ಲೂ ತೋಟದಲ್ಲಿ ನೆಲದಿಂದ ತಂಪು ಗಾಳಿ ಹೊರಸೂಸಿ ಅಲ್ಲೇ ಇರುವಂತೆ ಪ್ರೇರೇಪಿಸುತ್ತಿದೆ. ಬಾಳೆಯ ಸಮೃದ್ಧ ಬೆಳೆಯ ಜೊತೆಗೆ ಅವರ ತೋಟದಲ್ಲಿ ಸಿಹಿಕುಂಬಳ, ತೆಂಗು, ಹೊಲದ ಬದುವಿನಲ್ಲಿ ಅರಣ್ಯ ಕೃಷಿ ಪದ್ಧತಿ ಅನ್ವಯ ವಿವಿಧ ಜಾತಿಯ ಬೆಲೆಬಾಳುವ ಮರಗಿಡಗಳನ್ನು ಬೆಳೆಸಿದ್ದಾರೆ.

ನೂರಾರು ವಿಧದ ಪಕ್ಷಿಗಳು, ಚಿಟ್ಟೆ, ಕೀಟಗಳು ಅವರ ಬಾಳೆಯ ತೋಟದಲ್ಲಿ ಮನೆ ಮಾಡಿದ್ದು ನಿಸರ್ಗದ ತವರು ಮನೆಯಂತಿದೆ.ನಿತ್ಯ ವಿವಿಧೆಡೆಗಳಿಂದ ರೈತರು ಜಯಣ್ಣ ಅವರ ಸಾವಯವ ಕೃಷಿ ಪದ್ಧತಿ ವೀಕ್ಷಿಸಲು ತೋಟಕ್ಕೆ ಭೇಟಿ ನೀಡುತ್ತಿದ್ದಾರೆ.ಬಾಳೆ ಬೆಳೆದು ಭಾಗ್ಯದ ಬಾಗಿಲು ತೆರೆಯಲು ಜಯಣ್ಣ ಕುಟುಂಬದವರು ಅಹರ್ನಿಶಿ ಹೊಲದಲ್ಲಿಯೇ ನೆಲೆನಿಂತಿದ್ದಾರೆ.

ಪ್ರತಿಕ್ರಿಯಿಸಿ (+)