7
ಮಳಲಿ ಮಠದ ನಾಗಭೂಷಣ ಶಿವಾಚಾರ್ಯ ಸ್ವಾಮೀಜಿ

ಸಮಾಜ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ದೊಡ್ಡದು

Published:
Updated:

ಶಿವಮೊಗ್ಗ: ಶಿಕ್ಷಕ ವೃತ್ತಿಯಿಂದ ಗೌರವ ಸಂಪಾದಿಸಬಹುದೇ ಹೊರತು ಬೇರೆ ಸರ್ಕಾರಿ ನೌಕರರಂತೆ ಆದಾಯಕ್ಕಿಂತ ಹೆಚ್ಚು ಸಂಪಾದನೆ ಸಾಧ್ಯವಿಲ್ಲ ಎಂದು ಮಳಲಿ ಮಠದ ನಾಗಭೂಷಣ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಸಮೀಪದ ದುಮ್ಮಳ್ಳಿಯಲ್ಲಿ ರಾಜ್ಯ ಸರ್ಕಾರಿ ಮತ್ತು ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಗೃಹ ನಿರ್ಮಾಣ ಸಹಕಾರ ಸಂಘದಿಂದ ಭಾನುವಾರ ಹಮ್ಮಿಕೊಂಡಿದ್ದ 3ನೇ ಹಂತದ ಶಿಕ್ಷಕರ ವಸತಿ ಬಡಾವಣೆಯ ಭೂಮಿ ಪೂಜಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಶಾಲೆಯು ದೇವಮಂದಿರ, ಶಿಕ್ಷಕರು ಅಕ್ಷರ ಬ್ರಹ್ಮರು. ಶಿಕ್ಷಕರು ಮಕ್ಕಳಿಗೆ ಸಂಸ್ಕಾರವನ್ನು ಕಲಿಸಿ, ಒಳ್ಳೆಯ ವ್ಯಕ್ತಿತ್ವ ರೂಪಿಸಿ ಸಮಾಜದ ಆಸ್ತಿಯನ್ನಾಗಿ ಮಾಡುತ್ತಾರೆ. ಸಮಾಜ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದು. ಈ ಕಾರಣಕ್ಕಾಗಿಯೇ ಶಿಕ್ಷಕರಿಗೆ ಗೌರವ ಹೆಚ್ಚು ಎಂದರು.

ಪ್ರತಿಯೊಬ್ಬರಿಗೂ ಸ್ವಂತ ಮನೆ ಹೊಂದಬೇಕೆಂಬ ಅಭಿಲಾಷೆ ಸಾಮಾನ್ಯ. ಅಂತೆಯೇ ಶಿಕ್ಷಕರು ಕೂಡ ಮನೆಯನ್ನು ನಿರ್ಮಿಸಿಕೊಳ್ಳುವ ಹಂಬಲವನ್ನು ಹೊಂದಿರುತ್ತಾರೆ. ಇಂತಹ ಶಿಕ್ಷಕರಿಗೆ ಸುಲಭ ಕಂತಿನ ರೂಪದಲ್ಲಿ ಮನೆ ನಿರ್ಮಿಸಿಕೊಡಲು ಸಂಘವು ಮುಂದಾಗಿರುವುದು ಧಾರ್ಮಿಕ ಕಾರ್ಯಕ್ಕೆ ಸಮಾನ ಎಂದು ಶ್ಲಾಘಿಸಿದರು.

ಸಂಘದ ಅಧ್ಯಕ್ಷ ಮಹಾಬಲೇಶ್ವರ ಹೆಗಡೆ ಮಾತನಾಡಿ, ಮುಂಬರುವ ದಿನಗಳಲ್ಲಿ 6ರಿಂದ 8 ಅಂತಸ್ತಿನವರೆಗೆ ಅಪಾರ್ಟ್‌ಮೆಂಟ್‌ ನಿರ್ಮಿಸಿ ಶಿಕ್ಷಕರಿಗೆ ಸುಲಭ ಕಂತಿನಲ್ಲಿ ನೀಡಲು ಚಿಂತನೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಭಿನವ್ ಖರೆ, ಭದ್ರಾವತಿಯ ಬಿಇಒ ಎಂ.ಸಿ.ಆನಂದ್, ಗಂಗಾನಾಯ್ಕ, ಟಿ.ವಿ.ಸತೀಶ್, ಸುಮತಿ, ಸತೀಶ್ ಹೆಗಡೆ, ಎಚ್.ಸಿ ಪ್ರಭಾಕರ್. ಮಂಜುನಾಥ್ ಶೇಟ್, ಸಿದ್ದಲಿಂಗಯ್ಯ, ಅಣ್ಣಯ್ಯ, ಬಸವಂತದಾಳೆ, ಬಸವಯ್ಯ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry