ಬಾಗವಾನ ‘ಕೈ’ ತಪ್ಪಿದ ಟಿಕೆಟ್‌; ಮುಶ್ರೀಫ್‌ ಕಾಂಗ್ರೆಸ್‌ ಕಲಿ

7
ಘೋಷಣೆಗೂ ಮುನ್ನವೇ ವಿಜಯಪುರದಲ್ಲಿ ಪಟಾಕಿಗಳ ಅಬ್ಬರ; ಹಮೀದ್ ಬೆಂಬಲಿಗರ ವಿಜಯೋತ್ಸವ

ಬಾಗವಾನ ‘ಕೈ’ ತಪ್ಪಿದ ಟಿಕೆಟ್‌; ಮುಶ್ರೀಫ್‌ ಕಾಂಗ್ರೆಸ್‌ ಕಲಿ

Published:
Updated:

ವಿಜಯಪುರ: ‘ಜಿಲ್ಲೆಯ ಪ್ರಭಾವಿ ಶಾಸಕರ ತೀವ್ರ ಪ್ರತಿರೋಧ, ಮುಖ್ಯಮಂತ್ರಿ ಅಪಸ್ವರದ ನಡುವೆಯೂ ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ ತಮ್ಮ ಪ್ರಭಾವ ಬಳಸಿ; ವಿಜಯಪುರ ನಗರ ವಿಧಾನಸಭಾ ಕ್ಷೇತ್ರದಿಂದ ಹೊಸ ಮುಖ ಅಬ್ದುಲ್‌ ಹಮೀದ್ ಮುಶ್ರೀಫ್‌ ಕಣಕ್ಕಿಳಿಸುವಲ್ಲಿ ಯಶಸ್ವಿಯಾಗಿದ್ದಾರೆ’ ಎಂಬ ಮಾತುಗಳು ಜಿಲ್ಲಾ ಕಾಂಗ್ರೆಸ್‌ ವಲಯದಲ್ಲಿ ಕೇಳಿ ಬರುತ್ತಿವೆ.

‘ಕೆಪಿಸಿಸಿ ಮಟ್ಟದಲ್ಲಿ ಹಾಲಿ ಶಾಸಕ ಡಾ.ಮಕ್ಬೂಲ್ ಎಸ್‌.ಬಾಗವಾನ ಅವರಿಗೆ ಟಿಕೆಟ್‌ ನೀಡಬೇಕು. ಯಾವುದೇ ಕಾರಣಕ್ಕೂ ಬೇರೊಬ್ಬರನ್ನೂ ಕಣಕ್ಕಿಳಿಸಬಾರದು ಎಂಬ ಒತ್ತಡ ಹೆಚ್ಚುತ್ತಿದ್ದಂತೆ, ಸಚಿವ ಎಂ.ಬಿ.ಪಾಟೀಲ ತಮ್ಮ ತಂತ್ರಗಾರಿಕೆ ಬದಲಾಯಿಸಿದರು.

ವಿಜಯಪುರದ ಪ್ರಮುಖ ದರ್ಗಾವೊಂದರ ಧರ್ಮಗುರು, ಮೌಲಾನಾ ಅವರನ್ನು ನವದೆಹಲಿಗೆ ಕರೆಸಿಕೊಂಡು, ಎಐಸಿಸಿ ವರಿಷ್ಠರ ಅಂಗಳದಲ್ಲಿ ಬಾಗವಾನ ವಿರುದ್ಧ ಲಾಬಿ ನಡೆಸಿದರು. ಇದರ ಪರಿಣಾಮ ಹಾಲಿ ಶಾಸಕನಿಗೆ ಟಿಕೆಟ್‌ ‘ಕೈ’ ಜಾರಿತು’ ಎಂದು ನವದೆಹಲಿಯಲ್ಲಿ ಮಕ್ಬೂಲ್‌ ಪರ ಟಿಕೆಟ್‌ಗೆ ಯತ್ನಿಸಿದ ಮಧ್ಯ ಕರ್ನಾಟಕದ ಅಲ್ಪಸಂಖ್ಯಾತ ಸಮುದಾಯದ ವಿಧಾನ ಪರಿಷತ್‌ ಸದಸ್ಯರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಪಟಾಕಿ ಸಿಡಿತ: ಎಐಸಿಸಿ ಶನಿವಾರ ರಾತ್ರಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುವುದಕ್ಕೂ ಮುನ್ನವೇ, ಅಬ್ದುಲ್‌ ಹಮೀದ್‌ ಮುಶ್ರೀಫ್‌ ಬೆಂಬಲಿಗರು ವಿಜಯಪುರದ ಓಣಿ ಓಣಿ, ಗಲ್ಲಿ ಗಲ್ಲಿ, ಪ್ರಮುಖ ಬಜಾರ್‌ಗಳಲ್ಲಿ ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು. ಮಧ್ಯಾಹ್ನ 3 ಗಂಟೆ ವೇಳೆಗೆ ಆರಂಭಗೊಂಡ ಪಟಾಕಿ ಸ್ಫೋಟ ಮಳೆಯ ನಡುವೆ ರಾತ್ರಿಯಿಡಿ ಮುಂದುವರೆಯಿತು. ಬೆಂಬಲಿಗರು ವಿಜಯೋತ್ಸವ ಆಚರಿಸಿದರು. ಸಚಿವ ಎಂ.ಬಿ.ಪಾಟೀಲ ಪರ ಜೈಕಾರ ಮೊಳಗಿಸಿದರು.

ಅಸಮಾಧಾನ: ಹಾಲಿ ಶಾಸಕ ಡಾ.ಮಕ್ಬೂಲ್‌ ಎಸ್.ಬಾಗವಾನ ಅವರಿಗೆ ಟಿಕೆಟ್‌ ತಪ್ಪಿದ್ದಕ್ಕೆ ಬಾಗವಾನ ಸಮಾಜ ಸಚಿವ ಎಂ.ಬಿ.ಪಾಟೀಲ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ‘ಸಚಿವರು ತಮ್ಮ ಸಾಮರ್ಥ್ಯವನ್ನು ನವದೆಹಲಿಯಲ್ಲಿ ಪ್ರದರ್ಶಿಸಿದ್ದಾರೆ. ನಾವು ಬಡ ಬಾಗವಾನರು. ನಮ್ಮ ಸಾಮರ್ಥ್ಯವನ್ನು ಬಬಲೇಶ್ವರದಲ್ಲಿ ತೋರಿಸುತ್ತೇವೆ’ ಎಂದು ವಿಜಯಪುರದ ಬಾಗವಾನ ಸಮಾಜದ ಹಿರಿಯ ಮುಖಂಡರೊಬ್ಬರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

‘ಸಚಿವ ಎಂ.ಬಿ.ಪಾಟೀಲ ತಮ್ಮ ಅಂತರಂಗದ ಆಪ್ತ ಮಿತ್ರ, ಬಿಜೆಪಿ ಘೋಷಿತ ಅಭ್ಯರ್ಥಿ ಬಸನಗೌಡ ಪಾಟೀಲ ಯತ್ನಾಳರಿಗೆ ಅನುಕೂಲ ಮಾಡಿಕೊಡಲಿಕ್ಕಾಗಿಯೇ ನಮ್ಮ ಬಾಗವಾನರಿಗೆ ಟಿಕೆಟ್‌ ತಪ್ಪಿಸಿ, ಹಮೀದ್‌ಗೆ ಕೊಡಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಬಸನಗೌಡ ಬಬಲೇಶ್ವರದಲ್ಲಿ ಸಚಿವರಿಗೆ ಸಾತ್ ನೀಡಲಿದ್ದಾರೆ. ಈ ಹಕ್ಕಿಕತ್ ಮುಂಚೆಯೇ ನಮಗೂ ಗೊತ್ತಿತ್ತು. ಬಲಾಢ್ಯರ ಆಟ ನಡೆಯಲಿ. ನಾವು ನೋಡ್ತೀವಷ್ಟೇ’ ಎಂದು ಹೆಸರು ಬಹಿರಂಗ ಪಡಿಸಲಿಚ್ಚಿಸದ ತಿಕೋಟಾದ ಬಾಗವಾನ ಸಮಾಜದ ಮುಖಂಡರೊಬ್ಬರು ದೂರವಾಣಿ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

6 ಕ್ಷೇತ್ರಗಳಿಗೆ ಘೋಷಣೆ

ಎಐಸಿಸಿ ಬಿಡುಗಡೆ ಮಾಡಿರುವ ಕಾಂಗ್ರೆಸ್‌ ಹುರಿಯಾಳುಗಳ ಪಟ್ಟಿಯಲ್ಲಿ, ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಗಳ ಹೆಸರಿದೆ. ಇದರಲ್ಲಿ ನಾಲ್ವರು ಹಾಲಿ ಶಾಸಕರಿದ್ದರೆ, ಇಬ್ಬರು ಹೊಸ ಮುಖ.

ಮುದ್ದೇಬಿಹಾಳದಿಂದ ಸಿ.ಎಸ್‌.ನಾಡಗೌಡ, ದೇವರಹಿಪ್ಪರಗಿ–ಬಾಪುಗೌಡ ಎಸ್‌ ಪಾಟೀಲ, ಬಸವನಬಾಗೇವಾಡಿ–ಶಿವಾನಂದ ಪಾಟೀಲ, ಬಬಲೇಶ್ವರ–ಎಂ.ಬಿ.ಪಾಟೀಲ, ಬಿಜಾಪುರ–ಅಬ್ದುಲ್ ಹಮೀದ್ ಮುಶ್ರೀಫ್, ಇಂಡಿ–ಯಶವಂತರಾಯಗೌಡ ಪಾಟೀಲ ಕಾಂಗ್ರೆಸ್‌ ಹುರಿಯಾಳುಗಳಾಗಿದ್ದಾರೆ.

ವಿಜಯಪುರ ನಗರ ವಿಧಾನಸಭಾ ಕ್ಷೇತ್ರದ ಟಿಕೆಟ್‌ ಹಾಲಿ ಶಾಸಕರಿಗೆ ಕೈ ತಪ್ಪುವ ಕುರಿತಂತೆ ಹಾಗೂ ದೇವರಹಿಪ್ಪರಗಿ ವಿಧಾನಸಭಾ ಕ್ಷೇತ್ರದಿಂದ ಟಿಕೆಟ್‌ಗೆ ತೀವ್ರ ಪೈಪೋಟಿಯನ್ನೇ ನಡೆಸದ, ವಿಜಯಪುರ ಜಿಲ್ಲಾ ಸಹಕಾರ ಬ್ಯಾಂಕ್‌ನ ಉಪಾಧ್ಯಕ್ಷ ಬಿ.ಎಸ್‌.ಪಾಟೀಲ ಯಾಳಗಿ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ ಎಂದು ‘ಪ್ರಜಾವಾಣಿ’ ಏ 13ರ ಸಂಚಿಕೆಯಲ್ಲಿ ‘ಅಭ್ಯರ್ಥಿ ಬದಲಾವಣೆ; ಕಾಂಗ್ರೆಸ್‌ನಲ್ಲಿ ಶೀತಲ ಸಮರ’ ಶೀರ್ಷಿಕೆಯಡಿ ವಿಶೇಷ ವರದಿ ಪ್ರಕಟಿಸಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry