ಶನಿವಾರ, ಡಿಸೆಂಬರ್ 14, 2019
20 °C

ಗಂಭೀರ ವಸ್ತುವಿನ ನೀರಸ ನಿರೂಪಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗಂಭೀರ ವಸ್ತುವಿನ ನೀರಸ ನಿರೂಪಣೆ

‘ದಯವಿಟ್ಟು ಹೆಣ್ಣುಮಕ್ಕಳನ್ನು ಅತ್ಯಾಚಾರ ಮಾಡಬೇಡಿ’ ಇದು ಪ್ರವೀಣ್‌ ಕುಮಾರ್‌ ಎಂ. ಅವರು ನಿರ್ದೇಶಿಸಿರುವ ‘ಹೇ ಡಾರ್ಲಿಂಗ್’ ಕಿರುಚಿತ್ರದ ಒಂದು ಸಾಲಿನ ಸಂದೇಶ. ಆದರೆ ಈ ಸಂದೇಶವನ್ನು ಹೇಳಲು ಅವರು ತೆಗೆದುಕೊಂಡಿರುವ ಸಮಯ ಮೂವತ್ತು ನಿಮಿಷ.

ಇತ್ತೀಚೆಗೆ ‘ಡಾರ್ಲಿಂಗ್‌’ ತಂಡ ಕಿರುಚಿತ್ರ ಪ್ರದರ್ಶನವನ್ನು ಇಟ್ಟುಕೊಂಡಿತ್ತು.

ವಸ್ತುವಿನ ನಿರ್ವಹಣೆ, ನಿರೂಪಣೆ, ಪಾತ್ರಗಳ ಪೋಷಣೆ, ಸಂಭಾಷಣೆ. ತಾಂತ್ರಿಕ ವಿಭಾಗ ಹೀಗೆ ಎಲ್ಲ ವಿಭಾಗಗಳಲ್ಲಿಯೂ ಈ ತಂಡ ಇನ್ನೂ ಅಂಬೆಗಾಲು ಇಡುತ್ತಿರುವುದೂ ಈ ಕಿರುಚಿತ್ರವನ್ನು ನೋಡಿದಾಗ ವೇದ್ಯವಾಗುತ್ತದೆ.

ಸದಾ ಕಂಪ್ಯೂಟರ್‌ ಜತೆಗೆ ಕೆಲಸ ಮಾಡುವ ನಾಯಕ ಸಂತಾನಶಕ್ತಿಯನ್ನು ಕಳೆದುಕೊಳ್ಳುತ್ತಾನೆ. ಇದೇ ಕಾರಣಕ್ಕೆ ಅವನ ಗೆಳತಿಯೂ ಬಿಟ್ಟುಹೋಗುತ್ತಾಳೆ. ಕೊನೆಗೆ ಅವನು ಒಂದು ಹೆಣ್ಣುಮಗುವನ್ನು ದತ್ತು ತೆಗೆದುಕೊಂಡು ಸಾಕುತ್ತಾನೆ. ಕಾಮುಕರು ಆ ಮಗುವಿನ ಮೇಲೆ ಅತ್ಯಾಚಾರ ಮಾಡಿ ಕೊಲ್ಲುತ್ತಾರೆ.

ಇದು ಈ ಕಿರುಚಿತ್ರದ ಸರಳ ಕಥಾಹಂದರ. ವಸ್ತುವಿನ ಆಯ್ಕೆಯಲ್ಲಿ ತೋರಿಸುವ ಸೂಕ್ಷ್ಮತೆಯನ್ನು ನಿರ್ದೇಶಕರು ಅದರ ನಿರ್ವಹಣೆಯಲ್ಲಿ ತೋರದೇ ಇರುವುದು ಈ ಚಿತ್ರದ ವೈಫಲ್ಯಕ್ಕೆ ಕಾರಣವಾಗಿದೆ. ಅಸ್ತವ್ಯಸ್ತ ಅನಿಸುವ ಛಾಯಾಗ್ರಹಣ, ಕಿರಿಕಿರಿ ಹುಟ್ಟಿಸುವ ಹಿನ್ನೆಲೆ ಸಂಗೀತವೂ ವೃತ್ತಿಪರತೆಯ ಕೊರತೆಯನ್ನು ಎದ್ದು ಕಾಣಿಸುತ್ತವೆ.

ಕೊನೆಯಲ್ಲಿ ನಾಯಕ ವೇಶ್ಯೆಯರ ಬಳಿಗೆ ಹೋಗಿ ‘ನೀವು ಇದ್ದಿದ್ದರಿಂದ ಅತ್ಯಾಚಾರಗಳು ಕಡಿಮೆ ನಡೆಯುತ್ತಿವೆ.

ನೀವು ಇಲ್ಲದೇ ಇದ್ದಿದ್ದರೆ ಇನ್ನೆಷ್ಟು ನಡೆಯುತ್ತಿತ್ತೇನೋ’ ಎಂದು ಹೇಳಿ ಅವರಿಗೆ ಸೀರೆ ಕೊಡುವ ದೃಶ್ಯ ನೀಡುವ ನಕಾರಾತ್ಮಕ ನೋಟದ ಕುರಿತೂ ನಿರ್ದೇಶಕರಿಗೆ ಅರಿವಿದ್ದಂತಿಲ್ಲ. ಇದರಿಂದ ಇಡೀ ಕಿರುಚಿತ್ರದ ಒಟ್ಟಾರೆ ಉದ್ದೇಶವೂ ಕಲುಷಿತಗೊಂಡಂತಾಗಿದೆ. ‘ಹೇ ಡಾರ್ಲಿಂಗ್’ ಎಂಬ ಶೀರ್ಷಿಕೆಯೂ ಚಿತ್ರದ ಒಟ್ಟಾರೆ ಆಶಯಕ್ಕೆ ಯಾವ ರೀತಿಯಲ್ಲೂ ಪೂರಕವಾಗಿಲ್ಲ.

ಪ್ರತಿಕ್ರಿಯಿಸಿ (+)