ಶನಿವಾರ, ಡಿಸೆಂಬರ್ 14, 2019
20 °C

ಮೊಗದ ಮುಗುಳ್ನಗು ಮಾಸುವಂತಿಲ್ಲ

ಅಭಿಲಾಷ ಬಿ.ಸಿ Updated:

ಅಕ್ಷರ ಗಾತ್ರ : | |

ಮೊಗದ ಮುಗುಳ್ನಗು ಮಾಸುವಂತಿಲ್ಲ

ನನ್ನ ದಿನಚರಿಯನ್ನು ಯಾವ ಸಮಯದಿಂದ ಆರಂಭಿಸಬೇಕು ಎನ್ನುವುದು ತಿಳಿಯುತ್ತಿಲ್ಲ. ನಮ್ಮ ದಿನಚರಿಯ ಆರಂಭಕ್ಕೆ ನಿರ್ದಿಷ್ಟ ಸಮಯ ಇಲ್ಲ. ಕೆಲವೊಮ್ಮೆ ನಸುಕಿನ 2 ಗಂಟೆಗೆ ದಿನಚರಿ ಆರಂಭವಾಗುತ್ತದೆ. ಕೆಲದಿನಗಳಲ್ಲಿ ಮಧ್ಯಾಹ್ನ 12, ಕೆಲದಿನಗಳಲ್ಲಿ ಮಧ್ಯರಾತ್ರಿ 12. ಒಟ್ಟಿನಲ್ಲಿ ವರ್ಷದ 365 ದಿನಗಳಲ್ಲಿಯೂ ಸತತ 24 ಗಂಟೆ ನಾವು ಕೆಲಸಮಾಡಲು ಸಿದ್ಧರಿರಬೇಕಷ್ಟೆ.

ಬೆಳಿಗ್ಗೆ 6 ಗಂಟೆಗೆ ವಿಮಾನ ನಿಲ್ದಾಣದಿಂದ ವಿಮಾನ ಹೊರಡುತ್ತದೆ ಎಂದರೆ, ಮುಂಜಾನೆ 2.30ಕ್ಕೆ ನಮ್ಮ ಮನೆ ಅಥವಾ ನಾವಿರುವ ಹೋಟೆಲ್‌ಗಳ ಮುಂದೆ ಮುಂದೆ ಕ್ಯಾಬ್‌ ಬರುತ್ತದೆ. ನಾನು 1 ಗಂಟೆಗೆ ಎದ್ದು ತಯಾರಾಗಬೇಕು. ನಮ್ಮ ಕಂಪೆನಿಯವರು ಸ್ಟಾರ್ ಹೋಟೆಲ್‌ಗಳಲ್ಲಿಯೇ ವಸತಿ ವ್ಯವಸ್ಥೆ ಕಲ್ಪಿಸುತ್ತಾರೆ ಅನ್ನಿ. ಎಲ್ಲ ಐಷಾರಾಮಿ ಸೌಲಭ್ಯಗಳನ್ನು ದೊರಕಿಸಿಕೊಡುತ್ತಾರೆ. ಆದರೆ, ಅಷ್ಟೇ ಚೆನ್ನಾಗಿ ದುಡಿಸಿಕೊಳ್ಳುತ್ತಾರೆ. ನಮ್ಮ ಸಂಸ್ಥೆಯಲ್ಲಿ ವಿಮಾನ ನಿಲ್ದಾಣದಿಂದ 65 ಕಿ.ಮೀ. ವ್ಯಾಪ್ತಿಯವರೆಗೂ ಕ್ಯಾಬ್‌ ನೀಡುವ ಸೌಲಭ್ಯ ಇದೆ.

ಡಿಜೆಸಿಎ (ಡೈರೆಕ್ಟರೇಟ್ ಜನರಲ್‌ ಆಫ್ ಸಿವಿಲ್ ಏವಿಯೇಷನ್‌) ನಿಯಮದ ಪ್ರಕಾರ ವಿಮಾನ ಹೊರಡುವ ಒಂದೂವರೆ ಗಂಟೆ ಮುನ್ನ ಗಗನಸಖಿಯರು ನಿಲ್ದಾಣದಲ್ಲಿರುವುದು ಕಡ್ಡಾಯ. ನಿಲ್ದಾಣ ತಲುಪಿದ ನಂತರ ಪ್ರಾಥಮಿಕ ಕೆಲಸ ವೈದ್ಯಕೀಯ ಪರೀಕ್ಷೆ ಬ್ರೆತ್ ಅನಾಲೈಸ್‌ಗೆ (ಬಿ.ಎ) ಒಳಪಡುವುದು. ದೇಹದಲ್ಲಿ ಮದ್ಯದ ಅಂಶಗಳಿವೆಯೇ ಎಂಬುದನ್ನು ತಿಳಿಯಲು ಈ ಪರೀಕ್ಷೆ. ತರುವಾಯ ಅಲ್ಲಿರುವ ದಾಖಲಾತಿ ಪುಸ್ತಕದಲ್ಲಿ ನಮ್ಮ ಹೆಸರು, ವಿಮಾನದ ಸಂಖ್ಯೆ, ಉದ್ಯೋಗಿಯ ಸಂಖ್ಯೆ ನಮೂದಿಸಬೇಕು ಬ್ರೆತ್ ಅನಾಲೈಸ್‌ ಪರೀಕ್ಷೆಯ ಫಲಿತಾಂಶ ಸಂಖ್ಯೆಯನ್ನೂ ಇಲ್ಲಿ ದಾಖಲಿಸಬೇಕು.

ನಂತರ ಈ ದಾಖಲಾತಿ ಪುಸ್ತಕದ ಸಂಖ್ಯೆಯನ್ನು ಮತ್ತೊಂದೆಡೆ ಬರೆಯಬೇಕು. ಈ ದಾಖಲೆ ಡಿಜೆಸಿಎಗೆ ಹೋಗುತ್ತವೆ. ದೇಶದ ಎಲ್ಲ ವಿಮಾನಯಾನ ಕಂಪನಿಗಳ ದಾಖಲೆಗಳು ಅಲ್ಲಿಗೆ ಹೋಗುತ್ತವೆ. ಡಿಜೆಸಿಎ ಹೇಳಿರುವ ಯಾವ ನಿಯಮಗಳನ್ನೂ ಯಾವುದೇ ವಿಮಾನಯಾನ ಕಂಪನಿ ನಿರ್ಲಕ್ಷಿಸುವಂತಿಲ್ಲ. ಆದರೆ, ಮತ್ತಷ್ಟು ಕಠಿಣಗೊಳಿಸಬಹುದು. ಬಿ.ಎ. ಪರೀಕ್ಷೆಗೆ ಒಳಪಡದೆ ವಿಮಾನಯಾನಕ್ಕೆ ಅಥವಾ ಅದರಲ್ಲಿ ದೇಹದಲ್ಲಿ ಮಧ್ಯದ ಪದಾರ್ಥ ಇದೆ ಎನ್ನುವುದು ಖಿಚಿತವಾದರೆ ಮೊದಲ ಬಾರಿ 3 ತಿಂಗಳು ನಮ್ಮ ಪರವಾನಿಗೆ ರದ್ದಾಗುತ್ತದೆ. ಎರಡನೇ ಬಾರಿಗೆ 5 ವರ್ಷ ಹಾಗೂ 3ನೇ ಬಾರಿಯಾದರೆ, ಜೀವಿತಾವಧಿಗೆ ಪರವಾನಿಗೆ ರದ್ದಾಗುತ್ತದೆ.

ಇದರ ನಂತರ ಕಂಪ್ಯೂಟರ್‌ನಲ್ಲಿ ಐಡಿ– ಪಾಸ್‌ವರ್ಡ್ ನಮೂದಿಸಿ ಲಾಗಿನ್ ಆಗಬೇಕು. ಕ್ರೂ ಲಾಗ್ ಬುಕ್‌ನಲ್ಲಿ ನನ್ನ ಜೊತೆಗಿರುವ ಸಹ ಗಗನಸಖಿಯರು, ಯಾವ ಮಾರ್ಗದಲ್ಲಿ ಪ್ರಯಾಣಿಸುತ್ತೇವೆ. ಎಷ್ಟು ಬಾರಿ ಹಾರಾಟ ನಡೆಸುತ್ತೇವೆ, ನಮ್ಮೊಂದಿಗಿರುವ ಕ್ಯಾಪ್ಟನ್‌ ಹೆಸರಿನೊಂದಿಗೆ ಸೈನ್‌ ಇನ್ ಸಮಯ, ಬಿ.ಎ. ಪರೀಕ್ಷೆ ಮಾಡಿಸಿದ ಸಂಖ್ಯೆಯನ್ನು ಲಗತ್ತಿಸಬೇಕು. ನಂತರ ಸಹ ಗಗನಸಖಿಯರೊಂದಿಗೆ ನಮ್ಮ ಕೆಲಸಗಳ ಹಂಚಿಕೆ ಕುರಿತು ಚರ್ಚೆ ನಡೆಯುತ್ತದೆ. ಯಾರು ಯಾವ ಕೆಲಸ ಮಾಡಬೇಕು. ಯಾವ ಬಾಗಿಲಿನ ಜವಾಬ್ದಾರಿ ಯಾರು ನಿರ್ವಹಿಸಬೇಕು ಎಂಬೆಲ್ಲ ಕೆಲಸಗಳು ನಿಗದಿಯಾಗುತ್ತವೆ.

ಇದಾದ ನಂತರ ಕ್ಯಾಪ್ಟನ್‌ನೊಂದಿಗೆ ಚರ್ಚೆ ನಡೆಯುತ್ತದೆ. ಅವರು ಇಂದಿನ ಹವಾಮಾನ ಹೇಗಿದೆ, ಅದಕ್ಕೆ ಪೂರಕವಾಗಿ ಯಾವೆಲ್ಲಾ ವ್ಯವಸ್ಥೆ ಮಾಡಿಕೊಳ್ಳಬೇಕೆಂದು ತಿಳಿಸುತ್ತಾರೆ. ವಿಮಾನ ಹತ್ತಿ ತುರ್ತು ನಿರ್ಗಮನ ಸಾಮಗ್ರಿಗಳನ್ನು ಪರಿಶೀಲಿಸುತ್ತೇವೆ. ಪ್ರಯಾಣಿಕರ ಸುರಕ್ಷಿತ ಪ್ರಯಾಣಕ್ಕೆ ಆದ್ಯತೆ ನೀಡುವುದೇ ನಮ್ಮ ಮುಖ್ಯ ಕೆಲಸ. ಇವುಗಳ ಜೊತೆಗೆ ಪ್ರಯಾಣಿಕರ ಸೇವೆಗೂ ಗಮನ ಕೊಡಬೇಕು. ನಾವು ವಿಮಾನ ಹತ್ತಿದ 2 ರಿಂದ 3 ನಿಮಿಷದೊಳಗೆ ಪ್ರಯಾಣಿಕರನ್ನು ವಿಮಾನದೊಳಗೆ ಬಿಡುತ್ತಾರೆ. ಅಂಗವಿಕಲರು, 2 ವರ್ಷದೊಳಗಿನ ಮಕ್ಕಳು, ಗರ್ಬಿಣಿಯರ ಸುರಕ್ಷೆಗೆ ವಿಶೇಷ ಗಮನಕೊಡುತ್ತೇವೆ.

ನೇಹಾ ಗೌಡ

ಜನರು ಗಗನಸಖಿಯರು ಎಂದರೆ, ಸೇವೆ ಅಷ್ಟೆ ಪ್ರಯಾಣಿಕರಿಗೆ ತಿನ್ನಲು ಏನು ಬೇಕು ಅದನ್ನು ನೀಡುವುದಷ್ಟೇ ಅವರ ಕೆಲಸ ಎಂದುಕೊಳ್ಳುತ್ತಾರೆ. ಆದರೆ, ನಾವೆಂದು ಅವರಿಗೆ ತಿನ್ನಲು ಏನು ಬೇಕು ಎಂದು ಕೇಳುವುದೇ ಇಲ್ಲ. ತುರ್ತು ನಿರ್ಗಮನ ಎಲ್ಲಿ, ಸೀಟ್ ಬೆಲ್ಟ್‌ ಹೇಗೆ ಧರಿಸಬೇಕು ಎಂಬೆಲ್ಲಾ ಸುರಕ್ಷತೆಗೆ ಸಂಬಂಧಿಸಿದ ಮಾಹಿತಿಯನ್ನಷ್ಟೇ ನೀಡುತ್ತೇವೆ. ಅದಾದನಂತರ ವಲ್‌ಕಮ್ ಅನೋನ್ಸ್‌ಮೆಂಟ್ ಎಂದರೆ, ಎಲ್ಲಿಗೆ ಹೋಗುತ್ತಿದ್ದೇವೆ, ವಿಮಾನದಲ್ಲಿ ಯಾವೆಲ್ಲ ಭಾಷೆಗಳನ್ನು ಮಾತನಾಡುವ ಎಷ್ಟು ಪ್ರಯಾಣಿಕರಿದ್ದಾರೆ ಯಾವ ವಯಸ್ಸಿನವರು ಎಂಬ ಮಾಹಿತಿ ಬಿತ್ತರವಾಗುತ್ತದೆ.

ತರುವಾಯ ಸುರಕ್ಷಿತ ಕುರಿತ ಪ್ರದರ್ಶನ (ಡೆಮಾನ್‌ಸ್ಟ್ರೇಷನ್) ನಡೆಯುತ್ತದೆ. ಇದು ಸಹ ಕಡ್ಡಾಯ ಪ್ರಕ್ರಿಯೆ ಇದಿಲ್ಲದೆ, ಯಾವುದೇ ವಿಮಾನ ಟೇಕ್ ಆಫ್ ಆಗುವಂತಿಲ್ಲ. ಹಾಗಾದಲ್ಲಿ ವಿಮಾನದ ಎಲ್ಲ ಸಿಬ್ಬಂದಿಗಳನ್ನು ಕೆಲಸದಿಂದ ತೆಗೆಯಲಾಗುತ್ತದೆ. ಇಡೀ ಕ್ಯಾಬಿನ್‌ನಲ್ಲಿ ಸುರಕ್ಷಿತ ನಿಯಮಗಳು ಪಾಲನೆಯಾಗಿದೆ ಎಂಬುದನ್ನು ಖಚಿತಪಡಿಸಿಕೊಂಡ ನಂತರವಷ್ಟೇ ನಾವು ಸೀಟ್‌ನಲ್ಲಿ ಕುಳಿತು ಸೀಟ್‌ ಬೆಲ್ಟ್‌ ಹಾಕಿಕೊಂಡು ಕ್ಯಾಪ್ಟ್‌ನ್‌ಗೆ ವಿಮಾನದ ಟೇಕ್‌ ಆಪ್‌ಗೆ ಸೂಚನೆ ನೀಡಬೇಕು.

ವಿಮಾನ ಟೇಕ್‌ ಆಪ್‌ ಆದ 5 ನಿಮಿಷಗಳಷ್ಟೇ ವಿಮಾನ ನಿಲ್ದಾಣ ಪ್ರವೇಶಿಸಿದ ನಂತರ ನಮಗೆ ಸಿಗುವ ಮುಖ್ಯ ವಿಶ್ರಾಂತಿಯ ಸಮಯ. ವಿಮಾನ 10,000 ಅಡಿ ಎತ್ತರಕ್ಕೆ ತಲುಪಿದ ನಂತರ ನಿಜವಾದ ಸೇವೆ ಆರಂಭವಾಗುತ್ತದೆ. ಪ್ರಯಾಣಿಕರಿಗೆ ಅಗತ್ಯವಾದ ಊಟ, ತಿಂಡಿಗಳನ್ನು ಪೂರೈಸುತ್ತೇವೆ. ವಿಮಾನ ಲ್ಯಾಂಡ್ ಆಗಲು 25 ನಿಮಿಷ ಇದೆ ಎನ್ನುವಾಗ ಕ್ಯಾಪ್ಟನ್‌ ತಿಳಿಸುತ್ತಾರೆ. ಆಗ ಪ್ರಯಾಣಿಕರಿಗೆ ಧನ್ಯವಾದ ತಿಳಿಸುತ್ತೇವೆ. ನಂತರ ಮತ್ತೆ ಕ್ಯಾಬಿನ್‌ನ ಸುರಕ್ಷತೆಗೆ ಸಂಬಂಧಿತ ಚಟುವಟಿಕೆಗಳಲ್ಲಿ ಮಗ್ನರಾಗುತ್ತೇವೆ.

ವಿಮಾನವೊಂದು ನಿಲ್ದಾಣದ ತಲುಪಿದ 25 ನಿಮಿಷದ ನಂತರ ಮತ್ತೆ ಹಾರಾಟ ಆರಂಭಿಸಬೇಕು. ಹಾಗಾಗಿ ಈ ಅವಧಿಯಲ್ಲಿ ನಾವು ರೋಬೊಗಳ ರೀತಿ ಕಾರ್ಯಪ್ರವರ್ತರಾಗಬೇಕು. ಈ ಅವಧಿಯನ್ನು ‘ಕ್ವಿಕ್‌ ಸ್ಟಾಪ್‌ ಡ್ಯೂಟಿ’ ಎನ್ನುತ್ತಾರೆ ವೇಗವಾಗಿ ಪ್ರಯಾಣಿಕರನ್ನು ಇಳಿಸಿ ಮತ್ತೆ ಹತ್ತಿಸಿಕೊಂಡು ಹೊರಡಬೇಕು. ಎಷ್ಟೋ ಬಾರಿ ನಾಲ್ಕು ಸೆಕ್ಟರ್‌ನಲ್ಲಿ ಕೆಲಸಮಾಡಿದ್ದರೂ ಒಂದು ಲೋಟ ನೀರು ಕಡಿಯಲು ಸಮಯ ಇರುವುದಿಲ್ಲ. ತಿನ್ನುವುದಕ್ಕೆ ಎಷ್ಟೇ ಖಾದ್ಯಗಳಿದ್ದರೂ ಸಮಯದ ಕೊರತೆ ಕಾಡುತ್ತದೆ. ಬಹುತೇಕ ದಿನಗಳಲ್ಲಿ 14 ಗಂಟೆ ಬಿಡುವಿಲ್ಲದೆ ಕಾರ್ಯ ನಿರ್ವಹಿಸಬೇಕಿರುವುದು ಅನಿವಾರ್ಯ.

ಈ ಎಲ್ಲ  ಒತ್ತಡಗಳ ನಡುವೆಯೂ ಮೇಕಪ್‌ ಹಾಳಾಗದಂತೆ, ತಲೆ ಕೆಡೆಸಿಕೊಂಡು ಕೆಲಸಮಾಡಿದರೂ ಕೂದಲು ಹರಡಿಕೊಳ್ಳದಂತೆ ಅಡಿಯಿಂದ ಮುಡಿಯವರೆಗೂ ಸದಾ ಅಲಂಕರಿಸಿಕೊಂಡೆ ಇರಬೇಕು. ಇನ್ನೂ ಕೃತಕ ನಗುವಂತು ಅನಿವಾರ್ಯ. ಕೆಲವೊಮ್ಮೆ ದಿನದಲ್ಲಿ 4, 5 ಸೆಕ್ಟರ್‌ನಲ್ಲಿ ಕಾರ್ಯನಿರ್ವಹಿಸುವಾಗ ಅಲ್ಲಿನ ಕೃತಕಗಾಳಿಯ ಒತ್ತಡಕ್ಕೆ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಆದಾಗ್ಯೂ ನಗುನಗುತ್ತಲೇ ಶಾಂತಚಿತ್ತದಿಂದಲೇ ಇರಬೇಕಾದುದ್ದು ಅನಿವಾರ್ಯ ಎನಿಸಿದಾಗ ನಮ್ಮದು ಕೃತಕ ಜೀವನ ಎನಿಸುವುದೂ ಉಂಟು.

ಇನ್ನೂ ನಿಲ್ದಾಣ ಪ್ರವೇಶಿಸಿ ಮನೆಗೆ ಮರಳುವಾಗ ಪ್ರಯಾಣಿಕರು ಒಳಗೊಳ್ಳುವ ಸುರಕ್ಷತೆಗೆ ಸಂಬಂಧಿಸಿದ ಎಲ್ಲ ಪರೀಕ್ಷೆಗಳು ನಮಗೂ ಇರುತ್ತವೆ. ಆದರೆ ನಮಗೆ ಪ್ರತ್ಯೇಕ ಬಾಗಿಲುಗಳಿರುತ್ತವೆಯಷ್ಟೆ. ಬರುವಾಗ ಮತ್ತೆ ಸೈನ್‌ ಔಟ್ ಚೆಕ್‌ ಔಟ್ ಆಗಿಯೇ ಬರಬೇಕು. ಒಮ್ಮೆ ಸೈನ್ಸ್ ಔಟ್‌ ಆಗಿ ಮನೆಗೆಂದು ಕ್ಯಾಬ್‌ನಲ್ಲಿ ಕುಳಿತ ನಂತರ ಮತ್ತಾವ ಕೆಲಸಕ್ಕೆ ಸಂಬಂಧಿತ ಕಿರಿಕಿರಿಗಳಿರುವುದಿಲ್ಲ ಎಂಬುದು ಮಾತ್ರ ಈ ಉದ್ಯೋಗದಲ್ಲಿರುವ ದೊಡ್ಡ ನೆಮ್ಮದಿ. ಫೋನ್ ಮಾಡಿ ಇವತ್ತು ಏನಾಯಿತು? ನಾಳೆ ಏನು ಮಾಡಬೇಕು? ಎಂದು ಯಾರು ಕೇಳುವುದಿಲ್ಲ.

ನಮ್ಮ ಉದ್ಯೋಗದಲ್ಲಿ ರಜೆ ತೆಗೆದುಕೊಳ್ಳುವುದು ಸಾಹಸದ ಕೆಲಸ. ಯಾವುದೇ ಕಾರಣ ನೀಡಿ ರಜೆ ಕೇಳುವಂತಿಲ್ಲ. ರಜೆ ಬೇಕೆಂದರೆ ಒಂದು ಅಥವಾ ಮೂರು ತಿಂಗಳು ಮುಂಚಿತವಾಗಿಯೇ ಅನುಮತಿ ಪಡೆದುಕೊಳ್ಳಬೇಕು.

ವಿಮಾನ ಹೈಜಾಕ್ ಮೊದಲಾದ ಸಂದರ್ಭದಲ್ಲಿ ಗಗನಸಖಿಯರೇ ಪ್ರಾಥಮಿಕ ಗುರಿಯಾದ ಕಾರಣ ಸುರಕ್ಷಿತ ಏರ್‌ಪೋರ್ಟ್‌ ಸೆಕ್ಯೂರಿಟಿ ಗಾರ್ಡ್‌ಗಳು ಯಾರನ್ನಾದರೂ ಪರೀಕ್ಷೆಗೆ ಒಳಪಡಿಸಬಹುದು. ಭಾರತೀಯ ಪ್ರಜೆಯಾಗಿ ಖಾಸಗಿತನಕ್ಕೆ ದಕ್ಕೆ ಎಂದು ಯಾವುದೇ ದೇಹ ಪರೀಕ್ಷೆಯನ್ನು ವಿರೋಧಿಸುವಂತಿಲ್ಲ. ಹೀಗೆ ಸುರಕ್ಷತೆ, ರಕ್ಷಣೆ ಎಂತಲೇ ಜಪಿಸುತ್ತಾ ದಿನವೊಂದಕ್ಕೆ ಗರಿಷ್ಟ  6 ಸೆಕ್ಟರ್‌ನಲ್ಲಿ ಕಾರ್ಯನಿರ್ವಹಿಸಬಹುದು.​

ಪ್ರತಿಕ್ರಿಯಿಸಿ (+)